ಧಾರವಾಡ

ಭ್ರಷ್ಟಾಚಾರಿಗಳನ್ನು ಬಹಿಷ್ಕರಿಸಿ

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ನ. 27
ಭ್ರಷ್ಟಾಚಾರಿಗಳನ್ನು ಬಹಿಷ್ಕರಿಸುವ ಸಂಪ್ರದಾಯವನ್ನು ಸಮಾಜ ರೂಢಿಸಿಕೊಳ್ಳಬೇಕು ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಸಲಹೆ ನೀಡಿದ್ದಾರೆ.
ನಗರದ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಮಾಲಿಕೆ ಉದ್ಘಾಟಿಸಿ ಮಾತನಾಡಿದ ಅವರು, ಭ್ರಷ್ಟಾಚಾರದ ವಿರುದ್ಧ ತಿರುಗಿ ಬೀಳುವ ಮನೋಭಾವನೆ ಜನರು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಮಾಜದಲ್ಲಿ ಕುಸಿಯುತ್ತಿರುವ ಮೌಲ್ಯಗಳ ವಿರುದ್ಧ ಧ್ವನಿ ಎತ್ತುವುದು ಪ್ರತಿಯೊಬ್ಬನ ಜವಾಬ್ದಾರಿ. ಹಣ ಗಳಿಕೆ ಉದ್ದೇಶದಿಂದ ಹೆಚ್ಚುತ್ತಿರುವ ಭ್ರಷ್ಟಾಚಾರತನದಿಂದಾಗಿ ಪ್ರಾಮಾಣಿಕತೆಗೆ ಬೆಲೆ ಇಲ್ಲದಂತಾಗಿದೆ. ಪ್ರಾಮಾಣಿಕವಾಗಿ ಗಳಿಸುವ ಹಣದಿಂದ ಮಾತ್ರ ನೆಮ್ಮದಿ ಲಭಿಸುತ್ತದೆಂಬ ಸತ್ಯವನ್ನು ಅರಿಯಬೇಕು.
ಭ್ರಷ್ಟಾಚಾರದಿಂದಾಗಿ ಸರ್ಕಾರದ ನೀತಿಗಳು ತಪು ್ಪ ದಾರಿ ಹಿಡಿಯುತ್ತಿವೆ. ಇದನ್ನು ತಪ್ಪಿಸಲು ಸುಶಿಕ್ಷಿತ ಹಾಗೂ ಪ್ರಾಮಾಣಿಕ ವ್ಯಕ್ತಿಗಳು ರಾಜಕೀಯಕ್ಕೆ ಬರಬೇಕು. ರಾಜಕಾರಣಿಗಳಿಗೆ ನಿರ್ದಿಷ್ಟ ಮಟ್ಟದ ಶಿಕ್ಷಣ ಕಡ್ಡಾಯಗೊಳಿಸಬೇಕು. ಈಗಿನ ರಾಜಕಾರಣಿಗಳಲ್ಲಿ ಹೆಚ್ಚಿನವರು ನೌಕರರ ಬಡ್ತಿ, ವರ್ಗಾಯಣೆಯಂಥವುಗಳನ್ನೇ ತಮ್ಮ ವೃತ್ತಿಯನ್ನಾಗಿಸಿಕೊಂಡಿದ್ದಾರೆ.
ಇಂಥ ಭ್ರಷ್ಟ ವ್ಯವಸ್ಥೆ ಬದಲಾವಣೆ ಮಾಡುವ ಜವಾಬ್ದಾರಿ ಹಾಗೂ ಶಕ್ತಿ ಯುವಜನತೆ ಮೇಲಿದೆ. ಚುನಾವಣೆ ಸಂದರ್ಭದಲ್ಲಿ ಯೋಗ್ಯ ಅಭ್ಯರ್ಥಿಯನ್ನು ಗೆಲ್ಲಿಸಬೇಕು. ಚುನಾಯಿತ ಪ್ರತಿನಿಧಿಗಳು ಜನರ ಸೇವಕರು ಎಂಬುದನ್ನು ಮರೆಯಬಾರದು. ಈ ಸಂಗತಿ ಪ್ರಧಾನಿಗೂ ಅನ್ವಯವಾಗುತ್ತದೆ. ಶಾಸಕಾಂಗ, ನ್ಯಾಯಾಂಗ ಹಾಗೂ ಕಾರ್ಯಾಂಗ ವ್ಯವಸ್ಥೆಯಲ್ಲಿ ಕಾರ್ಯಮಾಡುವ ಪ್ರತಿಯೊಬ್ಬರೂ ಜನರ ಸೇವಕರೇ ಎಂದು ಹೇಳಿದರು.
ಸರ್ಕಾರದ ತಪ್ಪು ಹೆಜ್ಜೆಗಳನ್ನು ಪ್ರಶ್ನಿಸುವ ಜವಾಬ್ದಾರಿಯಿಂದ ಎಲ್ಲರೂ ನುಣುಚಿಕೊಳ್ಳುತ್ತ ಸಾಗಿದರೆ, ಸರ್ಕಾರಕ್ಕೆ ಮೂಗುದಾರ ಹಾಕುವವರು ಯಾರು? ಎಂದು ಪ್ರಶ್ನಿಸಿದ ಹೆಗ್ಡೆ, ಆಡಳಿತದಲ್ಲಿ ಕುಸಿಯುತ್ತಿರುವ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸವಾಗಬೇಕಿದೆ. ಇಲ್ಲದಿದ್ದರೆ ಭವಿಷ್ಯದಲ್ಲಿ ಪ್ರಾಮಾಣಿಕತೆಗೆ ಸ್ಥಳವೇ ಇಲ್ಲದಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಜನರ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಮಾಣ ಮಾಡಿ ಚುನಾಯಿತಗೊಳ್ಳುವ ಜನಪ್ರತಿನಿಧಿಗಳು, ಸಂಸತ್ ಹಾಗೂ ವಿಧಾನಸೌಧದಲ್ಲಿ ಚಕಾರ ಎತ್ತುವುದಿಲ್ಲ. ಇಂಥವರನ್ನು ಚುನಾಯಿಸಿಯೂ ಯಾವುದೇ ಪ್ರಯೋಜನ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಅಶೋಕ ಶೆಟ್ಟರ, ವಿಶ್ರಾಂತ ಕುಲಪತಿ ಪ್ರೊ. ಎಂ.ಐ. ಸವದತ್ತಿ, ಡಾ. ಡಿ.ಎಲ್. ದೇಸಾಯಿ ಮತ್ತಿತರರು ಉಪಸ್ಥಿತರಿದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.