ರಘೋತ್ತಮ ಕುಲಕರ್ಣಿ ಬ್ಲಾಕ್ಮೇಲರ್
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ನ. 27
ಹುಬ್ಬಳ್ಳಿ ವಿಮಾನ ನಿಲ್ದಾಣ ವಿಷಯದಲ್ಲಿ ರಘೋತ್ತಮ ಕುಲಕರ್ಣಿ ಬ್ಲಾಕ್ಮೇಲ್ ರಾಜಕಾರಣ ಮಾಡುತ್ತಿದ್ದಾರೆಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಲಿಂಗರಾಜ ಪಾಟೀಲ ಆರೋಪಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿಮಾನ ನಿಲ್ದಾಣ ಅಂತಾರಾಷ್ಟ್ರೀಯ ಮಟ್ಟಕ್ಕೇರಿಸುವಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ್ ಹಾಗೂ ಪ್ರಹ್ಲಾದ ಜೋಶಿ ನಿರಂತರ ಶ್ರಮವಿದೆ. ಅನೇಕ ಹೋರಾಟ ನಡೆಸಿ ನಿಲ್ದಾಣಕ್ಕೆ ಬೇಕಾಗುವ 650 ಎಕರೆ ಭೂಸ್ವಾಧೀನವನ್ನು ನಿಯಮಾನುಸಾರ ಹಾಗೂ ಕ್ರಮಬದ್ಧವಾಗಿ ಮಾಡಿದ್ದಾರೆ. ಅಲ್ಲದೇ ಭೂಸ್ವಾದೀನದಿಂದ ಜಮೀನು ಹಾಗೂ ನಿವೇಶನ ಕಳೆದುಕೊಂಡವರಿಗೆ ಸೂಕ್ತ ಪರಿಹಾರವನ್ನೂ ಕೊಡಿಸಿದ್ದಾರೆ.
ಜತೆಗೆ ಪರಿಹಾರ ಹಂಚಿಕೆಯಲ್ಲಿ ಮಧ್ಯವರ್ತಿಗಳಿಗೆ ಅವಕಾಶ ನೀಡದೇ ನೇರವಾಗಿ ಸಂತ್ರಸ್ತರಿಗೆ ಸಿಗುವಲ್ಲಿ ಪಾರದರ್ಶಕತೆ ಕಾಯ್ದುಕೊಂಡಿದ್ದಾರೆ.
ಸಂತ್ರಸ್ತರ ಪೈಕಿ 70 ಜನರಿಗೆ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಮೂಲಕ ಸಂತ್ರಸ್ತರಿಗೆ ನಿವೇಶನ ಕೊಡುವುದಾಗಿ ಭರವಸೆ ಕೊಡಲಾಗಿತ್ತು. ತಾವು ಹು-ಡಾ ಅಧ್ಯಕ್ಷರಾದಾಗ ಸಭೆಯ ಮೂಲಕ ಹಾಗೂ ಕಾನೂನಿನ ಪ್ರಕಾರ ಲಾಟರಿ ಎತ್ತಿ ನಿವೇಶನ ನೀಡಲು ಮುಂದಾದಾಗ, ಇದೇ ರಘೋತ್ತಮ ಕುಲಕರ್ಣಿ, ತಾವೇ ತಯಾರಿಸಿದ ಹಾಗೂ ತಮಗೆ ಬೇಕಾದವರಿಗೆ ಮಾತ್ರ ನಿವೇಶನ ನೀಡುವಂತೆ ಪಟ್ಟಿ ತಯಾರಿಸಿಕೊಟ್ಟು ಒತ್ತಡ ಹೇರಿದ್ದರು. ಇದರಿಂದ 70 ಸಂತ್ರಸ್ತರಿಗೆ ನಿವೇಶನ ನೀಡಲು ಅಡ್ಡಿಯುಂಟಾಯಿತು. ಇದರಿಂದ ಬೇಸತ್ತ ಕೆಲ ಸಂತ್ರಸ್ತರು ಕೋರ್ಟ್ ಮೆಟ್ಟಿಲೇರಿದರು. ಹೀಗಾಗಿ ಎರಡನೇ ಸಭೆಯಲ್ಲಿಯೂ ಸಂತ್ರಸ್ತರಿಗೆ ನಿವೇಶನ ನೀಡಲಾಗಲಿಲ್ಲ. ಈ ವಿಷಯದಲ್ಲಿ ರಘೋತ್ತಮ ಕುಲಕರ್ಣಿ ಸಂತ್ರಸ್ತರಿಂದ ಹಣ ಲಪಟಾಯಿಸಿ ಅವರಿಗೆ ಪಂಗನಾಮ ಹಾಕುತ್ತಿದ್ದಾರೆಂದು ಪಾಟೀಲ ದೂರಿದ್ದಾರೆ.
ಸಂತ್ರಸ್ತರಿಗೆ ಈಗಲೂ ನಿವೇಶನ ನೀಡಲು ಜಗದೀಶ ಶೆಟ್ಟರ್, ಸಂಸದ ಪ್ರಹ್ಲಾದ ಜೋಶಿ ಹಾಗೂ ಪಕ್ಷ ಬದ್ಧವಾಗಿದೆ. ಆದರೆ ವಿನಾಕಾರಣ ದ್ವೇಷ ರಾಜಕಾರಣ, ಬ್ಲಾಕ್ಮೇಲ್ ಮಾಡುತ್ತಿರುವ ರಘೋತ್ತಮ ಕುಲಕರ್ಣಿ, ಕಳೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಇದನ್ನು ಬಂಡವಾಳವಾಗಿಸಿಕೊಂಡು ವಿಮಾನ ನಿಲ್ದಾಣ ಸಂತ್ರಸ್ತರ ಮೂಲಕ ಹಗೆ ತೀರಿಸಿಕೊಳ್ಳುತ್ತಿದ್ದಾರೆ. ಸಂತ್ರಸ್ತರು ಇವರ ಮಾತಿಗೆ ಬೆಲೆ ಕೊಡಬಾರದು ಎಂದಿರುವ ಲಿಂಗರಾಜ ಪಾಟೀಲ, ಮತ್ತೆ ಇಲ್ಲ ಸಲ್ಲದ ಆರೋಪ ಮಾಡುತ್ತಿರುವ ಕುಲಕರ್ಣಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದ್ದಾರೆ.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

