ಜಯಂತಿಯಂದೂ 'ಗಾಂಧಿ ಚಿತಾಭಸ್ಮ ಸ್ಮಾರಕ' ಅನಾಥ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಅ. 2
ಹುಬ್ಬಳ್ಳಿ ಅಯೋಧ್ಯಾನಗರ ದಲಿತಕೇರಿಯಲ್ಲಿರುವ 'ಗಾಂಧಿ ಚಿತಾಭಸ್ಮ ಸ್ಮಾರಕ' ಗಾಂಧಿ ಜಯಂತಿಯಂದೂ ಅಕ್ಷರಶಃ ಅನಾಥವಾಗಿ ನಿಂತಿತ್ತು! ಇದು ದೇಶದಲ್ಲಿಯೇ ದಲಿತ ಕೇರಿಯಲ್ಲಿರುವ ಏಕೈಕ ಚಿತಾಭಸ್ಮ ಸ್ಮಾರಕ.
ಗಾಂಧೀಜಿ ಪುತ್ಥಳಿ ಸಹಿತ ಸ್ಮಾರಕಕ್ಕೆ ಮಾಲೆ ಹಾಕಿದ್ದು ಬಿಟ್ಟರೆ, ಅಲ್ಲಿ ಭಜನೆಯ ನಿನಾದವಾಗಲಿ, ಖಾದಿಧಾರಿಗಳ ದೌಡಾಗಲಿ, ಹುಟ್ಟು ಹಬ್ಬದ ಸಂಭ್ರಮವಾಗಲಿ ಇರಲಿಲ್ಲ. ಮಧ್ಯಾಹ್ನದ ಹೊತ್ತಿಗಾಗಲೇ ಸ್ಮಾರಕ ಕೋಣೆಗೂ ಬೀಗ ಬಿದ್ದಿತ್ತು.
ಗಾಂಧೀಜಿಯವರ ಚಿತಾಭಸ್ಮದಿಂದ ಸ್ಥಾಪಿತವಾದ ಗಾಂಧಿ ಸ್ಮಾರಕಗಳು ದೇಶದ 15 ಕಡೆಗಳಲ್ಲಿವೆ. ಈ ಪೈಕಿ ಕರ್ನಾಟಕದ ಹುಬ್ಬಳ್ಳಿಯ ಅಯೋಧ್ಯಾನಗರ, ಹುಬ್ಬಳ್ಳಿಯ ಮಹಿಳಾ ವಿದ್ಯಾಪೀಠ, ಧಾರವಾಡದ ಆಝಾದ್ ಉಪವನ, ಬೆಳಗಾವಿಯ ಮುಗಟಖಾನ ಹುಬ್ಬಳ್ಳಿ, ರಾಮದುರ್ಗ ತಾಲೂಕಿನ ಸುರೇಬಾನ, ಬಳ್ಳಾರಿಯ ಕೌಲಪೇಟ, ಕೂಡ್ಲಗಿ, ಹಾಸನದ ಅರಸಿಕೇರಿ, ಗದಗನ ಬೆಟಗೇರಿ, ಹಾವೇರಿಯ ಸಂಗೂರ, ಕರ್ಜಗಿ ಹಾಗೂ ಮಡಿಕೇರಿ ಸೇರಿದಂತೆ 12 ಸ್ಥಳಗಳಲ್ಲಿಯೇ ಚಿತಾಭಸ್ಮ ಸ್ಮಾರಕವಿರುವುದು ವಿಶೇಷ. ಅದರಲ್ಲಿಯೂ ಗಾಂಧೀಜಿಯವರಿಗೆ ಪ್ರಿಯವಾದ ದಲಿತಕೇರಿಯಲ್ಲಿ ಸ್ಥಾಪಿತವಾದ ಗಾಂಧಿ ಸ್ಮಾರಕ ಎಂಬ ಹೆಗ್ಗಳಿಕೆ ಹುಬ್ಬಳ್ಳಿ ಅಯೋಧ್ಯಾನಗರ ಸ್ಮಾರಕಕ್ಕಿದೆ.
ಸ್ಥಳಕ್ಕೆ ಭೇಟಿ ನೀಡದ ನಾಯಕರು: ವಿಪರ್ಯಾಸವೋ ಎನ್ನುವಂತೆ ಗಾಂಧೀಜಿ ತತ್ವ, ಆದರ್ಶಗಳ ಬಗ್ಗೆ ಗಂಟೆಗಟ್ಟಲೆ ಭಾಷಣ ಬಿಗಿಯುವ ನಾಯಕರಿಗೆ ಕೊನೆ ಪಕ್ಷ ಗಾಂಧಿ ಜಯಂತಿಯಂದಾದರೂ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಲು ಸಮಯವಿರುವುದಿಲ್ಲ. ಈ ದಿನದಂದೇ ಹೊಸ ರೈಲುಗಳ ಸಂಚಾರಕ್ಕೆ ಚಾಲನೆ ನೀಡಲು ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹುಬ್ಬಳ್ಳಿಗೆ ಆಗಮಿಸಿದ್ದರು. ಇವರೊಂದಿಗೆ ಸಚಿವ, ಸಂಸದ, ಶಾಸಕರ ದಂಡೇ ನೆರೆದಿತ್ತಾದರೂ, ಗಾಂಧಿ ಚಿತಾಭಸ್ಮ ಸ್ಮಾರಕದ ಬಳಿ ಬಂದು ಗೌರವ ಸಲ್ಲಿಸಲು ಯಾರೂ ಮನಸ್ಸು ಮಾಡಲಿಲ್ಲ. ಕನಿಷ್ಠ ಪಕ್ಷ ಜಿಲ್ಲಾಡಳಿತವಾಗಲಿ, ಸ್ಥಳೀಯ ಪಾಲಿಕೆ ಅಧಿಕಾರಿಗಳೂ ಇತ್ತ ಹಾಯಲಿಲ್ಲ. ಇದು ಜನಪ್ರತಿನಿಧಿಗಳ 'ಗಾಂಧಿ ಪ್ರೇಮಕ್ಕೆ' ಹಿಡಿದ ಕೈಗನ್ನಡಿಯಾಗಿತ್ತು.
ದೇಶದ ಆಸ್ತಿಯಾಗಿರುವ ಗಾಂಧಿ ಜೀವಂತಿಕೆಯ ತಾಣಗಳೆನಿಸಿಕೊಂಡಿರುವ ಇಂಥ ಸ್ಮಾರಕಗಳಿಗೆ ಗಾಂಧಿ ಜಯಂತಿಯಂದಾದರೂ ಗೌರವ ಸಲ್ಲಿಸುವ ಹೃದಯ ವೈಶಾಲ್ಯತೆ ಇಲ್ಲದಿರುವ ಸರ್ಕಾರ, ಜನಪ್ರತಿನಿಧಿಗಳಿರುವಾಗ, ಈ ಸ್ಮಾರಕಗಳು ಇತಿಹಾಸದ ಪುಟ ಸೇರುವುದರಲ್ಲಿ ಸಂದೇಹವೇ ಇಲ್ಲ ಎಂಬುದು ಗಾಂಧಿವಾದಿಗಳ ಅಭಿಪ್ರಾಯ.
ನಿರ್ಲಕ್ಷಿತ ಸ್ಮಾರಕ
ಗಾಂಧಿ ಚಿತಾಭಸ್ಮ ಸ್ಮಾರಕ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಸಂಸದ ಪ್ರಹ್ಲಾದ ಜೋಶಿ ಸ್ಮಾರಕ ಭವನ ನಿರ್ಮಾಣಕ್ಕೆ ಸಂಸದರ ಅನುದಾನ ಒದಗಿಸಿದ್ದು ಬಿಟ್ಟರೇ ಮತ್ತಾವ ಜನಪ್ರತಿನಿಧಿಯಾಗಲಿ, ಅಧಿಕಾರಿಗಳಾಗಲಿ ಸ್ಮಾರಕ ಅಭಿವೃದ್ಧಿಯ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಓಣಿಯ ಮಹಾತ್ಮ ಗಾಂಧಿ ಹರಿಜನ ಸೇವಾ ಯುವಕ ಸಂಘ ಸ್ಮಾರಕವನ್ನು ನಿರ್ವಹಿಸುತ್ತಿದೆ. ಗಾಂಧಿ ಜಯಂತಿ ಇನ್ನಿತರೆ ಪ್ರಮುಖ ದಿನಗಳಂದು ಸ್ಮಾರಕಕ್ಕೆ ಗೌರವ ಸಲ್ಲಿಸುತ್ತಾ ಬಂದಿದೆ. ಆದರೆ ಸರ್ಕಾರ ಈ ಸಂಘಕ್ಕೆ ಕನಿಷ್ಠ ನೆರವನ್ನೂ ನೀಡುತ್ತಿಲ್ಲ.
ಅಯೋಧ್ಯಾನಗರದ ಗಾಂಧಿ ಚಿತಾಭಸ್ಮ ಸ್ಮಾರಕ ಸೇರಿದಂತೆ ದೇಶದ ಎಲ್ಲ ಗಾಂಧಿ ಸ್ಮಾರಕಗಳನ್ನು ಗಾಂಧೀಜಿಯವರ ಚಿರನೂತನ ಚಿಂತನೆಗಳನ್ನು ಪ್ರಚುರ ಪಡಿಸುವ ಕೇಂದ್ರಗಳಾಗಿ ಮಾಡಬೇಕೆಂದು ದಶಕದಿಂದ ಹೋರಾಡುತ್ತಿದ್ದೇವೆ. ಕೇಂದ್ರ ಸಂಸ್ಕೃತಿ ಸಚಿವಾಲಯ ಗಾಂಧಿ ಪಾರಂಪರಿಕ ಸ್ಥಳಗಳ ಪ್ರಚಾರ ಯೋಜನೆಯಡಿ ಗಾಂಧಿ ಚಿತಾಭಸ್ಮ ಸ್ಮಾರಕ ಸೇರಿದಂತೆ ದೇಶಾದ್ಯಂತ ಅವರು ಭೇಟಿ ನೀಡಿದ 2 ಸಾವಿರಕ್ಕೂ ಹೆಚ್ಚು ಸ್ಥಳಗಳನ್ನು ರಕ್ಷಿಸುವುದಾಗಿ ಹೇಳಿದೆ. ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.
ಟಿ ಬಾಬುರಾಜೇಂದ್ರ ಭದ್ರಾಪೂರ, ಅಧ್ಯಕ್ಷ, ರಾಷ್ಟ್ರೀಯ ರಚನಾತ್ಮಕ ಕ್ರಿಯಾರಂಗ, ಹುಬ್ಬಳ್ಳಿ
ಪ್ರಕಾಶ ಎಸ್. ಶೇಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

