13 ತಾಲೂಕಿನ ನೀರಿನ ಸಮಸ್ಯೆಗೆ ಪರಿಹಾರ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಅ. 7
ಕಳಸಾ-ಬಂಡೂರಿ ಯೋಜನೆ ಅನುಷ್ಠಾನಗೊಂಡಲ್ಲಿ ಹುಬ್ಬಳ್ಳಿ-ಧಾರವಾಡ ಸೇರಿದಂತೆ 13 ತಾಲೂಕುಗಳ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಲಿದೆ. ಸರ್ಕಾರ ಈ ವಿಷಯದಲ್ಲಿ ಮೈಮರೆಯದೆ ಮಲಪ್ರಭಾ ನದಿಗೆ ಕಳಸಾ-ಬಂಡೂರಿ ನಾಲಾ ಜೋಡಣೆ ಸಂಬಂಧಿಸಿದಂತೆ ಮಹಾದಾಯಿ ನ್ಯಾಯಾಧೀಕರಣ ಮಧ್ಯಂತರ ಆದೇಶ ಹೊರಡಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಆಗ್ರಹಿಸಿದರು.
ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಸೋಮವಾರ ಕರೆ ನೀಡಿದ್ದ ಹುಬ್ಬಳ್ಳಿ-ಧಾರವಾಡ ಬಂದ್ ಹೋರಾಟದ ನೇತೃತ್ವದ ವಹಿಸಿದ್ದ ಅವರು ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ನೆರೆದ ಬೃಹತ್ ರೈತ ಸಮುದಾಯವನ್ನುದ್ದೇಶಿಸಿ ಮಾತನಾಡಿದರು.
ನ್ಯಾಯಾಧೀಕರಣದಲ್ಲಿ ಅ. 22ರಂದು ವಿಚಾರಣೆ ನಡೆಯಲಿದ್ದು, ರಾಜ್ಯ ಸರ್ಕಾರ ವಿಚಾರಣೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಅದರಲ್ಲೂ ಹುಬ್ಬಳ್ಳಿ-ಧಾರವಾಡ ಬಂದ್ ಕರೆಯನ್ನು ನ್ಯಾಯಾಧೀಕರಣದ ಎದುರು ಪರಿಣಾಮಕಾರಿಯಾಗಿ ಮಂಡಿಸಬೇಕು. ಇದರಿಂದಾಗಿ ಮೊದಲ ಹಂತದಲ್ಲಿ ಮಧ್ಯಂತರ ತೀರ್ಪು ಹೊರಬೀಳುವ ಸಾಧ್ಯತೆ ಇದೆ ಎಂದು ಆಶಯ ವ್ಯಕ್ತಪಡಿಸಿದರು.
ಕಳಸಾ-ಬಂಡೂರಿ ನಾಲಾ ಜೋಡಣೆಯನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ. ಯೋಜನೆ ಅನುಷ್ಠಾನಗೊಂಡಲ್ಲಿ ಈ ಭಾಗದ ಜನರ ಬದುಕು ಹಸನಾಗಲಿದೆ. ಯೋಜನೆಯ ಬಗ್ಗೆ ಒಮ್ಮತದ ಅಭಿಪ್ರಾಯ ವ್ಯಕ್ತವಾಗದೇ ಇರುವುದರಿಂದ ಕರ್ನಾಟಕ ಮತ್ತು ಗೋವಾ ರಾಜ್ಯಗಳ ಸಂಘರ್ಷಕ್ಕೆ ಕಾರಣವಾಗಿದೆ. ಕೇಂದ್ರ ಸರ್ಕಾರ ಮಧ್ಯಸ್ಥಿತಿಕೆ ವಹಿಸಿ ಗೋವಾ ಹಾಗೂ ಕರ್ನಾಟಕದ ಮುಖ್ಯಮಂತ್ರಿಗಳನ್ನು ಕರೆದು ಮಾತುಕತೆ ನಡೆಸಬೇಕು. ತನ್ಮೂಲಕ ಸರಳ ಪರಿಹಾರೋಪಾಯಕ್ಕೆ ಪ್ರಯತ್ನಿಸಬೇಕು ಎಂದ ಚಂದ್ರಶೇಖರ, ಸರ್ಕಾರ ವಿಚಾರಣೆಯನ್ನು ಸಮರ್ಥವಾಗಿ ಮಂಡಿಸದೇ ನಿರ್ಲಕ್ಷ್ಯ ತೋರಿದ್ದೇ ಆದಲ್ಲಿ ಅ. 22ರ ಬಳಿಕ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದರು.
ಮಾಜಿ ಸಚಿವ ಬಸವರಾಜ ಹೊರಟ್ಟಿ ಮಾತನಾಡಿ, ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೆ ಯಾವ ಸರ್ಕಾರವೂ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ. ಯೋಜನೆ ಹೆಸರಲ್ಲಿ ಹೋರಾಡಿಕೊಂಡು ಬಂದ ಅನೇಕರು ಶಾಸಕರಾದರೆ ವಿನಃ ಯಾರೂ ಯೋಜನೆ ಬಗ್ಗೆ ನೈಜ ಕಾಳಜಿ ತೋರಲಿಲ್ಲ. ಸರ್ಕಾರ ಯುದ್ಧೋಪಾದಿಯಲ್ಲಿ ಯೋಜನೆ ಅನುಷ್ಠಾನಕ್ಕೆ ಮುಂದಾಗಬೇಕು. ಈ ವಿಷಯದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ಅ. 10, 11ರಂದು ನಿಯೋಗ ಕೊಂಡೊಯ್ದು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಯೋಜನೆಯ ಅಗತ್ಯದ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು.
ಕಳಸಾ-ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ, ರಾಜ್ಯದಲ್ಲಿ 60ಕ್ಕೂ ಹೆಚ್ಚು ನದಿಗಳಿವೆ. ಈ ನದಿಗಳನ್ನು ಸಮರ್ಪಕವಾಗಿ ಬಳಸಿಕೊಂಡು ಯೋಜನೆ ರೂಪಿಸಿದ್ದೇ ಆದಲ್ಲಿ ರಾಜ್ಯದಲ್ಲಿ ಯಾವ ಕಾಲಕ್ಕೂ ಕುಡಿಯುವ ನೀರಿನ ಸಮಸ್ಯೆ ಎದುರಾಗದು. ಆದರೆ, ಯಾವುದೇ ಸರ್ಕಾರ ಈ ಬಗ್ಗೆ ಚಿಂತಿಸದಿರುವುದು ರಾಜ್ಯದ ಜನತೆಯ ದೌರ್ಭಾಗ್ಯ. ಕಳಸಾ-ಬಂಡೂರಿ ಯೋಜನೆಯನ್ನು ಸರ್ಕಾರ ವಿಶೇಷವಾಗಿ ಪರಿಗಣಿಸಿ ಅನುಷ್ಠಾನಗೊಳಿಸಲಿ ಎಂದರು.
ರಂಗಾ ಬದ್ಧಿ, ಪಾಂಡುರಂಗ ಪಾಟೀಲ, ಲಿಂಗರಾಜ ಪಾಟೀಲ, ರಾಜಣ್ಣ ಕೊರವಿ, ಅಂದಾನಪ್ಪ ಸಜ್ಜನರ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಉತ್ತಮ ಪ್ರತಿಕ್ರಿಯೆ
ಬಂದ್ ಕರೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿಯಿತು. ಮುಂಜಾನೆಯಿಂದಲೇ ಅವಳಿ ನಗರದ ನಡುವಿನ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಪರಿಣಾಮ ಕಚೇರಿ ಕಾರ್ಯಕ್ಕೆ ಹೋಗುವವರು ಪರದಾಡಿದರು. ಆಟೋ ಸಂಚಾರ ಎಂದಿನಂತೆ ಇದ್ದ ಪರಿಣಾಮ ಆಟೋವನ್ನು ಆಶ್ರಯಿಸಿದರು. ಬೆಳಗ್ಗೆ ಕೆಲ ಹೊಟೇಲ್ಗಳು ತೆರೆದಿದ್ದವಾದರೂ ಆ ಬಳಿಕ ಬಂದ್ ಮಾಡಿ ಪ್ರತಿಭಟನಾಕಾರರಿಗೆ ಸಹಕಾರ ನೀಡಿದರು. ಕಚೇರಿ, ಕೋರ್ಟ್, ಬಸ್ ನಿಲ್ದಾಣದಲ್ಲಿ ಜನದಟ್ಟಣೆ ಕಡಿಮೆಯಾಗಿತ್ತು. ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿಲ್ಲವಾಗಿದ್ದರೂ ಸ್ವಯಂ ಪ್ರೇರಣೆಯಿಂದ ಬಂದ್ ಮಾಡಲಾಗಿತ್ತು. ಚನ್ನಮ್ಮ ವೃತ್ತದಲ್ಲಿ ಪ್ರತಿಭಟನಾ ಸಭೆ ನಡೆಸಿದ ಪ್ರತಿಭಟನಾಕಾರರು, ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ತಹಸೀಲ್ದಾರ್ ಕಚೇರಿಗೆ ತೆರಳಿ ತಹಸೀಲ್ದಾರ್ ಮುಖಾಂತರ ಪ್ರಧಾನ ಮಂತ್ರಿ, ಮುಖ್ಯಮಂತ್ರಿಗೆ ಮನವಿ ಅರ್ಪಿಸಿದರು. ಬಳಿಕ ರೇಲ್ವೆ ನಿಲ್ದಾಣಕ್ಕೆ ತೆರಳಿದ ಪ್ರತಿಭಟನಾಕಾರರು ಅಮರಾವತಿ ಎಕ್ಸ್ಪ್ರೆಸ್ ರೈಲು ತಡೆದು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ರೈಲು ಸುಮಾರು ಅರ್ಧ ಗಂಟೆ ಕಾಲ ತಡವಾಗಿ ಸಂಚರಿಸಿತು. ಒಟ್ಟಾರೆ ಬಂದ್ ಶಾಂತಿಯುತವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

