16ರಿಂದ ಬಸವ ಕಲ್ಯಾಣದಲ್ಲಿ 12ನೇ ಕಲ್ಯಾಣ ಪರ್ವ
ಧಾರವಾಡ: ಬೀದರ್ ಜಿಲ್ಲೆಯ ಬಸವ ಕಲ್ಯಾಣದಲ್ಲಿ ಅ.16ರಿಂದ 18ರವರೆಗೆ 12ನೇ ಕಲ್ಯಾಣ ಪರ್ವ ವಾರ್ಷಿಕ ಧಾರ್ಮಿಕ ಸಮಾವೇಶ ಜರುಗಲಿದೆ ಎಂದು ಬಸವಧರ್ಮ ಪೀಠದ ಪೀಠಾಧ್ಯಕ್ಷರಾದ ಮಾತೆ ಮಹಾದೇವಿ ಹೇಳಿದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಬಸವ ಕಲ್ಯಾಣವನ್ನು ಲಿಂಗಾಯತ ಧರ್ಮೀಯರ ಧರ್ಮಕ್ಷೇತ್ರ ಎಂದು ಘೋಷಿಸಿದಾಗಿನಿಂದ ಕಲ್ಯಾಣ ಪರ್ವ ವಾರ್ಷಿಕ ಧಾರ್ಮಿಕ ಸಮಾವೇಶ ಆಯೋಜಿಸಲಾಗುತ್ತಿದೆ ಎಂದರು. 16ರಂದು ಬೆಳಗ್ಗೆ 10.30ಕ್ಕೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಕಾರ್ಯಾಧ್ಯಕ್ಷ ಚಂದ್ರಕಾಂತ ಬೆಲ್ಲದ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಂಜೆ 4ರಿಂದ 6ರವರೆಗೆ ರಾಷ್ಟ್ರೀಯ ಬಸವದಳದ ಅಧಿವೇಶನ ನಡೆಯಲಿದೆ. ಅ.17ರಂದು 12ನೇ ಶತಮಾನದ ಶರಣರನ್ನು ಸ್ಮರಿಸುವ ಶರಣ ವಂದನೆ, ಧರ್ಮ ಚಿಂತನಗೋಷ್ಠಿ ನಡೆಯಲಿದ್ದು, ಇದನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಉದ್ಘಾಟಿಸುವರು. ಅ.18ರಂದು ಬೆಳಗ್ಗೆ ಸಾಮೂಹಿಕ ಇಷ್ಟಲಿಂಗಾರ್ಚನೆ ನಡೆಯಲಿದೆ ಎಂದು ಹೇಳಿದರು.
ಚಿಮೂ ಹೇಳಿಕೆಗೆ ವಿರೋಧ: ಡಾ. ಎಂ. ಚಿದಾನಂದಮೂರ್ತಿ ಅವರು ವೀರಶೈವ, ಲಿಂಗಾಯತ ಈ ಎರಡನ್ನೂ ಸಮಾನಾರ್ಥದಲ್ಲಿ ಬಳಸಿ ಇವು ಹಿಂದೂ ಧರ್ಮದ ಅಂಗ, ಉಪ ಧರ್ಮ ಎಂದು ಹೇಳಿದ್ದಾರೆ. ಅಲ್ಲದೇ, ವೀರಶೈವವು ಗ್ರಂಥಸ್ಥ ಪದ, ಲಿಂಗಾಯತವು ದಿನಬಳಕೆಯಲ್ಲಿ ಇರುವ ಪದ ಎಂದೂ ಹೇಳಿದ್ದಾರೆ. ವೀರಶೈವವೆಂದರೆ ವೀರತಮವಾಗಿ ಶಿವನನ್ನು ಪೂಜಿಸುವ ಶೈವರು. ಲಿಂಗಾಯತ ಹಾಗೂ ವೀರಶೈವ ಬೇರೆ ಬೇರೆ. ಲಿಂಗಾಯತ ಧರ್ಮದ ಸಂವಿಧಾನ ಕತೃ ವಿಶ್ವಗುರು ಬಸವಣ್ಣ. ಆದ್ದರಿಂದ ವೀರಶೈವ ಪದವನ್ನು ಸೇರಿಸಿ ಲಿಂಗಾಯತ ಧರ್ಮವನ್ನು ಕಲುಷಿತಗೊಳಿಸುವ ಷಡ್ಯಂತ್ರವನ್ನು ಡಾ. ಮೂರ್ತಿ ಹಾಗೂ ವೀರಶೈವ ಮಹಾಸಭೆ ಕೈ ಬಿಡಬೇಕೆಂದು ಮಾತೆ ಮಹಾದೇವಿ ಅಗ್ರಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

