ಧಾರವಾಡ

ಇಂದು ಉಚಿತ ಅರ್ಹತಾ ಪರೀಕ್ಷೆ ಕಾರ್ಯಾಗಾರ

Published On :

ಧಾರವಾಡ: ಮೈಸೂರು ವಿಶ್ವವಿದ್ಯಾಲಯ ವತಿಯಿಂದ ರಾಜ್ಯ ಉಪನ್ಯಾಸಕ ಅರ್ಹತಾ ಪರೀಕ್ಷೆಯನ್ನು ಡಿಸೆಂಬರ್ 8ರಂದು ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದಿ ಕ್ಲಾಸಿಕ್ ಕೆಎಎಸ್ ಮತ್ತು ಐಎಎಸ್ ಸ್ಟಡಿ ಸರ್ಕಲ್ ವತಿಯಿಂದ ಅ. 10ರಂದು ಬೆಳಗ್ಗೆ 10.30ಕ್ಕೆ ಉಚಿತ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಕಾರ್ಯಾಗಾರದಲ್ಲಿ ನುರಿತ ಉಪನ್ಯಾಸಕರಿಂದ ಪರೀಕ್ಷಾರ್ಥಿಗಳಿಗೆ ಸಮಗ್ರ ಮಾರ್ಗದರ್ಶನ ನೀಡಲಾಗುತ್ತದೆ. ಕಾರ್ಯಾಗಾರದಲ್ಲಿ ಕೇವಲ 100 ಪರೀಕ್ಷಾರ್ಥಿಗಳಿಗೆ ಅವಕಾಶ ನೀಡಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ 99805 52080ಗೆ ಸಂಪರ್ಕಿಸಬಹುದೆಂದು ಸಂಸ್ಥೆ ನಿರ್ದೇಶಕ ಲಕ್ಷ್ಮಣ ಉಪ್ಪಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಧಾರವಾಡ: ಉಚಿತ ಆರೋಗ್ಯ ಶಿಬಿರ ಇಂದು
ಧಾರವಾಡ: ನವನಗರದ ಹತ್ತಿರ ಬೀಡು ಬಿಟ್ಟಿರುವ ಅಲೆಮಾರಿ ಜನರ ಉಚಿತ ಆರೋಗ್ಯ ಶಿಬಿರ ಅ. 10ರಂದು ಬೆಳಗ್ಗೆ 10ಕ್ಕೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಜೆಎಸ್ಸೆಸ್ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಯುಥ್ ರೆಡ್‌ಕ್ರಾಸ್ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಬಾಲನಂದನ ಟ್ರಸ್ಟ್ ಸಹಯೋಗದಲ್ಲಿ ಅ. 10ರಂದು ಬೆಳಗ್ಗೆ 10ಕ್ಕೆ ನಿವೃತ್ತ ಜಿಲ್ಲಾ ವೈದ್ಯಾಧಿಕಾರಿ ಡಾ. ವಿ.ಡಿ. ಕರ್ಪೂರಮಠ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಬಬ್ರವಾಡ ನೇತೃತ್ವದಲ್ಲಿ ಶಿಬಿರ ನಡೆಯಲಿದೆ.ಚಿಕ್ಕ ಮಕ್ಕಳನ್ನೊಳಗೊಂಡಂತೆ ಸ್ತ್ರೀ, ಪುರುಷರ ಆರೋಗ್ಯ ತಪಾಸಣೆ ಜರುಗಲಿದ್ದು, ಜೆಎಸ್ಸೆಸ್ ವಿತ್ತಾಧಿಕಾರಿ ಡಾ. ಅಜಿತ ಪ್ರಸಾದ, ಮಕ್ಕಳ ರಕ್ಷಣಾ ಘಟಕದ ಉಷಾ ಹಾಗೂ ಬಾಲನಂದನ ಟ್ರಸ್ಟ್‌ನ ಪ್ರೀತಿ. ಎನ್.ಕೆ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಇಂದು ಎಸ್.ಆರ್. ಬೊಮ್ಮಾಯಿ ಪುಣ್ಯತಿಥಿ
ಕುಂದಗೋಳ: ಪಟ್ಟಣದ ಸವಾಯಿ ಗಂಧರ್ವ ಸ್ಮಾರಕ ಭವನದಲ್ಲಿ ಎಸ್.ಆರ್. ಬೊಮ್ಮಾಯಿಯವರ 6ನೇ ಪುಣ್ಯತಿಥಿ ಅ. 10ರಂದು ಬೆಳಗ್ಗೆ 12ಕ್ಕೆ ಜರುಗಲಿದೆ. ಬೊಮ್ಮಾಯಿಯರ ಪುತ್ಥಳಿಗೆ ಗಣ್ಯರು ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮ ಚಾಲನೆ ಸಿಗಲಿದೆ. ಹಿರೇಮಠದ ಶ್ರೀ.ಷ. ಬ. ಶಿಥಿಕಂಠೇಶ್ವರ ಶಿವಾಚಾರ್ಯರು, ಕಲ್ಯಾಣಪುರದ ಶ್ರೀ ಬಸಯ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ಶಾಸಕರಾದ ಸಿ.ಎಸ್. ಶಿವಳ್ಳಿ, ಬಸವರಾಜ ಬೊಮ್ಮಾಯಿ, ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡ್ರ, ಎಂ.ಎಸ್. ಅಕ್ಕಿ, ಹಾಗೂ ಜಿಪಂ, ತಾಪಂ ಹಾಗೂ ಪಟ್ಟಣ ಪಂಚಾಯಿತಿ ಸದಸ್ಯರು ಭಾಗವಹಿಸಲಿದ್ದಾರೆ ಎಂದು ಈಶ್ವರಪ್ಪ ಗಂಗಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೂತನ ವೆಬ್‌ಸೈಟ್‌ಗೆ ಚಾಲನೆ
ಧಾರವಾಡ: ಇಲ್ಲಿನ ಶಾಂತಿನಿಕೇತನ ನಗರದಲ್ಲಿನ ಕರಿಯಮ್ಮದೇವಿ ದೇವಸ್ಥಾನದಲ್ಲಿ ನೂತನವಾಗಿ ಆರಂಭಿಸಲಾದ ವೆಬ್‌ಸೈಟ್‌ಗೆ ಇತ್ತೀಚಿಗೆ ಚಾಲನೆ ನೀಡಲಾಯಿತು. ಕರಿಯಮ್ಮದೇವಿ ದೇವಸ್ಥಾನ ಟ್ರಸ್ಟ್ ಕಮಿಟಿ ವತಿಯಿಂದ ಸಾರ್ವಜನಿಕರ ಅನುಕೂಲ ಮತ್ತು ಭಕ್ತರಿಗೆ ಅಗತ್ಯ ಮಾಹಿತಿ ಒದಗಿಸುವ ಉದ್ದೇಶದಿಂದ ಆರಂಭಿಸಲಾದ ವೆಬ್‌ಸೈಟ್‌ನ್ನು ಟ್ರಸ್ಟ್ ಕಮಿಟಿ ಅಧ್ಯಕ್ಷ ಹಾಗೂ ಶಾಸಕ ಎನ್.ಎಚ್. ಕೋನರೆಡ್ಡಿ ಉದ್ಘಾಟಿಸಿದರು. ನಂತರ ಮಾತನಾಡಿದ ಕೋನರೆಡ್ಡಿ, ದೇವಸ್ಥಾನದಲ್ಲಿನ ಪ್ರತಿಯೊಂದು ಕಾರ್ಯಕ್ರಮ ಮತ್ತು ಸೇವೆಗಳನ್ನು ದೂರದ ಭಕ್ತರು ಸಹ ವೀಕ್ಷಿಸಲು ವೆಬ್‌ಸೈಟ್ ಆರಂಭಿಸಲಾಗಿದೆ. ಭಕ್ತರು ಢಿಢಿಢಿ.್ಞಛ್ಠ್ಝಣಛಟಟಛಜಜಢ್ಝಜಢಿಜ.್ಛ್ಟಟ ಸಂಪರ್ಕಿಸಿ ವೀಕ್ಷಿಸಬಹುದು ಎಂದರು. ಕಮಿಟಿ ಸದಸ್ಯರಾದ ಸಿ.ಜಿ. ಸಾಣಿಕೊಪ್ಪ, ಕೆ.ಎನ್. ಕುರಕುರಿ, ವಿಶ್ವನಾಥ ಯಲಿಗಾರ, ಬಿ.ಸಿ. ಪೂಜಾರ, ಶ್ರೀಶೈಲ ಸಾಣಿಕೊಪ್ಪ, ಶಿವಪುತ್ರಪ್ಪ ಶಿವರುದ್ರನವರ, ಶಂಕರ ಸಾಣಿಕೊಪ್ಪ, ರವಿ ಪವಾರ, ರಮೇಶ ಬಡಿಗೇರ ಇದ್ದರು.
ಖೋಟಾ ನೋಟು ಪತ್ತೆ
ಧಾರವಾಡ: ನಗರದ ಮಾರುಕಟ್ಟೆಯಲ್ಲಿ ಸಾವಿರ ರುಪಾಯಿ ಮುಖಬೆಲೆಯ ಖೋಟಾ ನೋಟು ಪತ್ತೆಯಾಗಿದ್ದು, ಈ ಕುರಿತು ಪಶ್ಚಿಮ ಬಂಗಾಳದ ವ್ಯಕ್ತಿಯೋರ್ವನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಮೂಲತಃ ಪಶ್ಚಿಮ ಬಂಗಾಳ ಖಾಸಿಮನಗರದ ನಿವಾಸಿ ಯಾಮಾವುದ್ದೀನ ರಜುಲ್ಲಾಕ ಎಂಬಾತ ಮಾರುಕಟ್ಟೆಯಲ್ಲಿ ಸಂಜೆ ವಸ್ತುಗಳನ್ನು ಖರೀದಿಸಿ ಅಂಗಡಿಯ ಮಾಲೀಕರಿಗೆ ಸಾವಿರ ರುಪಾಯಿ ಮುಖಬೆಲೆಯ ಖೋಟಾ ನೋಟನ್ನು ನೀಡಿದ್ದಾನೆ. ಇದನ್ನು ಗಮನಿಸಿದ ಅಂಗಡಿಯ ಮಾಲೀಕ ತಕ್ಷಣ ಶಹರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರನ್ವಯ ಆ ವ್ಯಕ್ತಿಯನ್ನು ಬಂಧಿಸಿದ್ದು ವಿಚಾರಣೆ ನಡೆಸಲಾಗುತ್ತಿದೆ.
ತಾಯಿ-ಮಗಳು ನಾಪತ್ತೆ
ಧಾರವಾಡ: ಮನೆಯಿಂದ ಆಚೆ ಹೋಗಿ ಬರುತ್ತೇನೆಂದು ಹೇಳಿ ಹೋದ ಇಲ್ಲಿನ ಟೋಲನಾಕಾ ಬಳಿಯ ನಗರಕರ ಕಾಲೋನಿಯ ಓರ್ವ ತಾಯಿ ಹಾಗೂ ಮಗಳು ನಾಪತ್ತೆಯಾದ ಘಟನೆ ಇತ್ತೀಚೆಗೆ ನಡೆದಿದೆ. ಇಲ್ಲಿನ ನಿವಾಸಿ ಬೀಬಿಖತೀಜಾ ಲಮಾಣಿ (38) ಹಾಗೂ ಮಗಳು ತ್ರಿವೇಣಿ(6) ಎಂಬುವರೇ ನಾಪತ್ತೆಯಾಗಿದ್ದು, ಅವರ ಅತ್ತೆ ವಿದ್ಯಾಗಿರಿ ಠಾಣೆಯಲ್ಲಿ ಸೊಸೆ ಹಾಗೂ ಮೊಮ್ಮಗಳನ್ನು ಹುಡುಕಿಕೊಡಿ ಎಂದು ದೂರು ಸಲ್ಲಿಸಿದ್ದಾರೆ. ಈ ಇಬ್ಬರ ಬಗ್ಗೆ ಸುಳಿವು ಸಿಕ್ಕರೆ ದೂ: 0836 2233513 ಸಂಪರ್ಕಿಸಬಹುದು.
ಯುವಕ ಆತ್ಮಹತ್ಯೆ
ಧಾರವಾಡ: ಕುಡಿತದ ಅಮಲಿನಲ್ಲಿ ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಯಾದವಾಡ ಗ್ರಾಮದಲ್ಲಿ ಬುಧವಾರ ನಡೆದಿದೆ. ಗ್ರಾಮದ ಮಾರುತಿ ಯಲ್ಲಪ್ಪ ಬಂಡೆಪ್ಪನವರ (26)ಎಂಬಾತನೆ ಮೃತಪಟ್ಟಿದ್ದು, ಮಂಗಳವಾರ ತಡ ರಾತ್ರಿ ಕುಡಿತದ ಅಮಲಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದ ಕಾರಣ ಬುಧವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡ ಗರಗ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಗೋಡೆ ಕುಸಿದು ಮಹಿಳೆ ಸಾವು
ಹುಬ್ಬಳ್ಳಿ: ನಗರದ ಮಂಗಳ ಓಣಿಯಲ್ಲಿ ಶತಮಾನಗಳಷ್ಟು ಹಳೆಯದಾದ ಮಣ್ಣಿನ ಮನೆ ಕುಸಿದು ಬಿದ್ದು ಮಹಿಳೆಯೋರ್ವಳು ಮೃತಪಟ್ಟ ಘಟನೆ ಬುಧವಾರ ಬೆಳಗ್ಗೆ ಸಂಭವಿಸಿದೆ. ಮುಕ್ತಾ ಸಿದ್ಧಪ್ಪ ಮಳಲಿ(39) ಮೃತಪಟ್ಟ ಮಹಿಳೆ. ಮನೆ ಶಿಥಿಲಗೊಂಡಿದ್ದರಿಂದ ಮಳಲಿ ದಂಪತಿಗಳು ಬೇರೆಡೆ ವಾಸವಾಗಿದ್ದರು. ಆದರೆ, ಮನೆಯ ಸಾಮಗ್ರಿಯೆಲ್ಲ ಹಳೆಯ ಮನೆಯಲ್ಲಿಯೇ ಇತ್ತು. ಇದನ್ನು ತೆಗೆದುಕೊಂಡು ಹೋಗಲೆಂದು ಮುಕ್ತಾ ಹಳೆ ಮನೆಗೆ ಬಂದಾಗ ದುರಾದೃಷ್ಟವಶಾತ್ ಮನೆಯ ಗೋಡೆ ಕುಸಿದು ಅದರಡಿಗೆ ಸಿಲುಕಿ ಮೃತಪಟ್ಟಿದ್ದಾಳೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಮುಕ್ತಾಳ ಮೃತ ಶವವನ್ನು ಗೋಡೆಯಡಿಯಿಂದ ಹೊರ ತೆಗೆದಿದ್ದಾರೆ. ಡಿಸಿಪಿ ಸುಭಾಷ ಗುಡಿಮನಿ, ಶ್ರೀನಾಥ ಜೋಶಿ, ಯಶೋದಾ ಒಂಟಗೋಡಿ ಸೇರಿದಂತೆ ಮತ್ತಿತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.