ಭದ್ರತೆ ಲೋಪ: ಆಟಗಾರರಿಗೆ ಕಿರಿಕಿರಿ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಅ. 9
ಇಲ್ಲಿಯ ರಾಜನಗರದ ಕೆಎಸ್ಸಿಎ ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ವೆಸ್ಟ್ಇಂಡೀಸ್ ಎ ತಂಡಗಳ ನಡುವಿನ ಪಂದ್ಯಕ್ಕೆ ಭದ್ರತಾ ವೈಫಲ್ಯ ಎದ್ದು ಕಾಣುತ್ತಿದೆ. ಭಾರತೀಯ ತಂಡದ ಆಟಗಾರ ವೀರೇಂದ್ರ ಸೆಹ್ವಾಗ್ ಬುಧವಾರ ಸ್ವತಃ ಈ ಕುರಿತು ಸ್ಥಳೀಯ ಪೊಲೀಸರಿಗೆ ದೂರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪೆವಿಲಿಯನ್ನಲ್ಲಿ ಸಂಬಂಧ ಪಡದ ವ್ಯಕ್ತಿಗಳೆಲ್ಲ ಅನಾವಶ್ಯಕವಾಗಿ ನುಸುಳುತ್ತಿದ್ದಾರೆ. ಆಟಗಾರರೊಂದಿಗೆ ಫೋಟೋ ತೆಗೆಸಿಕೊಳ್ಳಲು, ಆಟೋಗ್ರಾಫ್ ಪಡೆಯಲು ಜನ ನುಗ್ಗುತ್ತಿದ್ದಾರೆ. ಇವರನ್ನು ತಡೆಯುವಲ್ಲಿ ಪೊಲೀಸರೂ ವಿಫಲರಾಗಿದ್ದಾರೆಂದು ಸೆಹ್ವಾಗ್ ಕಿಡಿಕಾರಿದ್ದಾರೆ. ಅದರಲ್ಲೂ ಮಧ್ಯಾಹ್ನದ ಲಂಚ್ಬ್ರೇಕ್ ವೇಳೆಯಲ್ಲಿ ವ್ಯಕ್ತಿಯೋರ್ವ ಭಾರತೀಯ ಆಟಗಾರರಿರುವ ಕೋಣೆಗೆ ನುಗ್ಗಿ ಫೋಟೋ ತೆಗೆಸಿಕೊಳ್ಳಲು ಮುಂದಾಗಿದ್ದು ಸೆಹ್ವಾಗ್ ಆಕ್ರೋಶಕ್ಕೆ ಮುಖ್ಯ ಕಾರಣವಾಯಿತು. ಸೆಹ್ವಾಗ್ ಪೊಲೀಸರಿಗೆ ದೂರಿದ ಹಿನ್ನೆಲೆಯಲ್ಲಿ ಆ ವ್ಯಕ್ತಿಯನ್ನು ಕೋಣೆಯಿಂದ ಹೊರ ಹಾಕಲಾಯಿತು.
ಅ. 6ರಂದು ಹುಬ್ಬಳ್ಳಿಗೆ ಬಂದಿಳಿದ ಎರಡೂ ತಂಡಗಳ ಆಟಗಾರರು ಅ. 7 ಹಾಗೂ 8ರಂದು ಎರಡು ದಿನಗಳ ಕಾಲ ರಾಜನಗರ ಮೈದಾನದಲ್ಲಿ ನೆಟ್ಪ್ರಾಕ್ಟಿಸ್ ಮಾಡಿದ್ದಾರೆ. ಆ ವೇಳೆಯಲ್ಲಿಯೇ ಕ್ರಿಕೆಟ್ ಪ್ರೇಮಿಗಳು ಕ್ರೀಡಾಂಗಣದತ್ತ ನುಸುಳಿ ಕ್ರಿಕೆಟಿಗರ ಆಟೋಗ್ರಾಫ್ ಪಡೆಯಲು ಯತ್ನಿಸಿದ್ದರು. ಕ್ರಿಕೆಟಿಗರು ತಮಗಾಗುತ್ತಿರುವ ತೊಂದರೆ ತಪ್ಪಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ನಿಗಾವಹಿಸಿದ್ದರು.
ಏತನ್ಮಧ್ಯೆ ಅ. 9ರಿಂದ ಹುಬ್ಬಳ್ಳಿಯಲ್ಲಿ ಪಂದ್ಯ ಆರಂಭಗೊಂಡಿದೆ. ಮೊದಲ ದಿನವೇ ಸೆಹ್ವಾಗ್ ಸೇರಿದಂತೆ ಮತ್ತಿತರರು ಪೊಲೀಸ್ ಭದ್ರತಾ ವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ಪೊಲೀಸ್ ಭದ್ರತೆ ನೀಡುವ ಮೂಲಕ ಆಟಗಾರರಿಗಾಗುತ್ತಿರುವ ಕಿರಿಕಿರಿ ತಪ್ಪಿಸಬೇಕೆಂದು ಅವರು ಪೊಲೀಸ್ ಹಿರಿಯ ಅಧಿಕಾರಿಗಳಿಗೆ ಕೋರಿದ್ದಾರೆ.
ಆಟಗಾರರು ಕ್ರೀಡಾಂಗಣಕ್ಕೆ ತೆರಳುತ್ತಿರುವ ಸಮಯದಲ್ಲಿ ಹಾಗೂ ಪೆವಿಲಿಯನತ್ತ ಬರುತ್ತಿರುವಾಗ ಅಭಿಮಾನಿಗಳು ಫೋಟೋಗಾಗಿ ಸುತ್ತುವರಿಯುವುದು, ಆಟೋಗ್ರಾಫ್ ಪಡೆಯಲು ನುಸುಳುವುದು ಮಾಡುವ ಮೂಲಕ ತೊಂದರೆ ಮಾಡುತ್ತಿದ್ದಾರೆ. ಭದ್ರತಾ ಕಾರ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯೋರ್ವರಿಗೆ ಆಗುತ್ತಿರುವ ಸಮಸ್ಯೆಯ ಬಗ್ಗೆ ವೀರೇಂದ್ರ ಸೆಹ್ವಾಗ್ ತುಸು ಖಾರವಾಗಿಯೇ ಹೇಳಿದ ಘಟನೆಯೂ ಬುಧವಾರ ಮಧ್ಯಾಹ್ನ ನಡೆಯಿತು.
ಪೊಲೀಸ್ರಿಗೂ ಫೋಟೋ ಕ್ರೇಜ್: ಕ್ರೀಡಾಭಿಮಾನಿಗಳಿಂದ ಆಟಗಾರರಿಗೆ ಸಮಸ್ಯೆಯಾಗುವುದು ಬೇರೆ ಮಾತು, ಭದ್ರತಾ ಕಾರ್ಯದಲ್ಲಿ ನಿರತರಾಗಿರುವ ಪೊಲೀಸರೇ ಆಟಗಾರರಿಗೆ ಕಿರಿಕಿರಿಯುಂಟು ಮಾಡುತ್ತಿದ್ದಾರೆ. ಆಟಗಾರರು ಪಕ್ಕಕ್ಕೆ ಹೋಗಿ ನಿಂತು ಫೋಟೋ ತೆಗೆಯಿಸಿಕೊಳ್ಳುವುದು ಮಾಡುತ್ತಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ.
ಸಭೆಯಲ್ಲಿಯೂ ಚರ್ಚೆ: ಕೆಎಸ್ಸಿಎ ಧಾರವಾಡ ವಲಯ ಮೈದಾನದಲ್ಲಿ ಬುಧವಾರ ಸಂಜೆ ನಡೆಸಿದ ಸಭೆಯಲ್ಲಿಯೂ ಆಟಗಾರರಿಗಾಗುತ್ತಿರುವ ತೊಂದರೆಯ ಬಗ್ಗೆ ಚರ್ಚೆಯಾಗಿದೆ. ಆಟಗಾರರಿಗೆ ಸರಿಯಾಗಿ ಭದ್ರತೆ ನೀಡುವಲ್ಲಿ ಪೊಲೀಸರು ನಿಗಾವಹಿಸುತ್ತಿಲ್ಲ. ಇದೇ ವೇಳೆ ಕೆಎಸ್ಸಿಎ ಪದಾಧಿಕಾರಿಗಳೂ ಸಹ ಭದ್ರತಾ ವ್ಯವಸ್ಥೆಯ ಬಗ್ಗೆ ಪೊಲೀಸರೊಂದಿಗೆ ಸಮಾಲೋಚಿಸಿ ಲೋಪ ಸರಿಪಡಿಸಿಕೊಳ್ಳಬೇಕು. ಆಟಗಾರರಿಗೆ ತೊಂದರೆಯಾದಲ್ಲಿ ಧಾರವಾಡ ವಲಯಕ್ಕೆ ಕೆಟ್ಟ ಹೆಸರು ಬರುವ ಸಾಧ್ಯತೆಯಿದೆ ಎಂಬ ಆತಂಕವನ್ನೂ ವ್ಯಕ್ತಪಡಿಸಲಾಯಿತು. ಗುರುವಾರದಿಂದ ಈ ಸಮಸ್ಯೆ ಮರುಕಳಿಸದಿರುವಂತೆ ಎಚ್ಚರಿಕೆ ವಹಿಸಬೇಕೆಂದು ಸಭೆಯಲ್ಲಿ ಸೂಚ್ಯವಾಗಿ ತಿಳಿಸಲಾಗಿದೆ.
ರಾಜನಗರ ಮೈದಾನದಲ್ಲಿ ಇದೇ ಮೊಟ್ಟ ಮೊದಲಿಗೆ ಅಂತಾರಾಷ್ಟ್ರೀಯ ಪಂದ್ಯಾವಳಿ ನಡೆಯುತ್ತಿದ್ದು, ಭದ್ರತಾ ವ್ಯವಸ್ಥೆ ವೈಫಲ್ಯದಿಂದ ಪಂದ್ಯಾವಳಿಗೆ ಕೆಟ್ಟ ಹೆಸರು ಬರುವ ಆತಂಕ ಎದುರಾಗಿದೆ. ಹೀಗಾಗದಿರಲು ಪೊಲೀಸರು, ಕೆಎಸ್ಸಿಎ ಹಾಗೂ ಕ್ರಿಕೆಟ್ ಅಭಿಮಾನಿಗಳು ಸಹಕರಿಸಬೇಕಷ್ಟೇ.
ಹೆಚ್ಚಿನ ಭದ್ರತೆ ನೀಡುತ್ತೇವೆ
ತಾವು ಕಚೇರಿ ಕೆಲಸದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಬಂದಿದ್ದು, ಸೆಹ್ವಾಗ್ ಸೇರಿದಂತೆ ಆಟಗಾರರು ಮಾಡಿರುವ ದೂರು ತಮಗೆ ತಿಳಿದು ಬಂದಿಲ್ಲ. ಕೆಎಸ್ಸಿಎ ಬೇಡಿಕೆಗೂ ಹೆಚ್ಚಿನ ಸಿಬ್ಬಂದಿಯನ್ನು ಭದ್ರತಾ ಕಾರ್ಯಕ್ಕೆ ನೇಮಿಸಲಾಗಿದೆ. ಗುರುವಾರದಿಂದ ಮತ್ತಷ್ಟು ಹೆಚ್ಚಿನ ಭದ್ರತೆ ನೀಡಲಾಗುವುದು. ಆಟಗಾರರಿಗೆ ಯಾವುದೇ ತೊಂದರೆಯಾಗದಂತೆ ನಿಗಾ ವಹಿಸಲಾಗುವುದು.
- ಬಿ. ಎ. ಪದ್ಮನಯನ,
ಮಹಾನಗರ ಪೊಲೀಸ್ ಆಯುಕ್ತ
-ಪ್ರಕಾಶ ಎಸ್. ಶೇಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

