ಮಾರ್ಚ್ ಅಂತ್ಯಕ್ಕೆ ಕಳಸಾ ಪೂರ್ಣಗೊಳಿಸಿ
ಹುಬ್ಬಳ್ಳಿ: ರಾಜ್ಯದ ವ್ಯಾಪ್ತಿಗೆ ಒಳಪಡುವ ಕಳಸಾ ಕಾಮಗಾರಿ ವೀಕ್ಷಿಸಿದ ಬಿಜೆಪಿ ಸಂಸದ ಪ್ರಹ್ಲಾದ ಜೋಶಿ, ಸುರೇಶ ಅಂಗಡಿ ನೇತೃತ್ವದ ಬಿಜೆಪಿ ತಂಡ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿತು.
ಶುಕ್ರವಾರ ಕಳಸಾ ನಾಲಾ ಯೋಜನೆಯ ಕಾಮಗಾರಿ ವೀಕ್ಷಣೆಗೆ ಸಂಸದರೊಟ್ಟಿಗೆ ಮಾಜಿ ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪ, ಸೀಮಾ ಮಸೂತಿ, ಪ್ರಹ್ಲಾದ ರೇಮಾಣಿ, ಶಾಸಕ ಅರವಿಂದ ಬೆಲ್ಲದ, ಬೆಳಗಾವಿ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಬಿಜೆಪಿ ಪದಾಧಿಕಾರಿಗಳು, ಧಾರವಾಡ ಗ್ರಾಮಾಂತರ ಜಿಲ್ಲಾ ಬಿಜೆಪಿ ಪದಾಧಿಕಾರಿಗಳು, ಮಲಪ್ರಭಾ ಅಚ್ಚುಕಟ್ಟು ಸಮಿತಿ, ಜಿಲ್ಲಾ ಪಂಚಾಯಿತಿ ಬಿಜೆಪಿ ಸದಸ್ಯರು, ಮಹಾನಗರ ಪಾಲಿಕೆ ಸದಸ್ಯರು ಸೇರಿದಂತೆ ರೈತರು ಆಗಮಿಸಿದ್ದರು.
ಮಲಪ್ರಭಾ ನದಿ ಮೂಲ ಕಣಕುಂಬಿ ಬಳಿ ಅಂತಿಮ ಹಂತದಲ್ಲಿರುವ ಕಳಸಾ ನಾಲಾ ಕಾಮಗಾರಿಯನ್ನು ವೀಕ್ಷಿಸಿದ ಬಿಜೆಪಿ ತಂಡ, ಅಧಿಕಾರಿಗಳಿಂದ ಕಾಮಗಾರಿಯ ಪ್ರಗತಿ ವರದಿ ಪಡೆದುಕೊಂಡಿತು. ಈಗ ಮಳೆಗಾಲವಿದ್ದರಿಂದ ಇನ್ನು ಕೆಲವೇ ದಿನಗಳಲ್ಲಿ ಉಳಿದ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಮಾರ್ಚ್ನಲ್ಲಿ ಕಾಮಗಾರಿ ಪೂರ್ಣ: ಕಾಮಗಾರಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಹಾಗೂ ಸಂಸದ ಸುರೇಶ ಅಂಗಡಿ, ಕಳಸಾ ನಾಲಾ ಕಾಮಗಾರಿಯನ್ನು 2006ರಲ್ಲಿ ಕೈಗೆತ್ತಿಕೊಳ್ಳಲಾಗಿತ್ತು. 5.15 ಕಿ.ಮೀ. ಉದ್ದದ ನಾಲಾ ಯೋಜನೆಯ ಪೈಕಿ ಈಗಾಗಲೇ ಶೇ. 95ರಷ್ಟು ಕಾಲುವೆ ಕಾಮಗಾರಿ ಪೂರ್ಣಗೊಂಡಿದೆ. ಈ ಪೈಕಿ 450 ಮೀಟರ್ ಕಾಲುವೆ ನಿರ್ಮಾಣ ಕಾಮಗಾರಿ ಉಳಿದುಕೊಂಡಿದೆ. ಈ ಕೆಲಸವನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
1.5 ಟಿಎಂಸಿ ನೀರು ಲಭ್ಯ: ಕಳಸಾ ನಾಲಾ ಯೋಜನೆ ಪೂರ್ಣಗೊಂಡ ನಂತರ ಮಲಪ್ರಭಾ ನದಿಗೆ 1.5 ಟಿಎಂಸಿ ನೀರು ಹರಿದು ಬರಲಿದೆ. ಈ ನೀರಿನಿಂದ ಈ ಭಾಗದ ಜನರ ಕುಡಿಯುವ ನೀರಿನ ಸಮಸ್ಯೆಗೆ ತಕ್ಕಮಟ್ಟಿಗೆ ಪರಿಹಾರ ಲಭಿಸಲಿದೆ. ಕಳಸಾ ನಾಲಾ ಕಾಲುವೆಯನ್ನು 20-30 ಅಳವಾಗಿ ಅಗೆಯಲಾಗಿದೆ. ಭವಿಷ್ಯದ ಅಗತ್ಯವನ್ನು ಗಮನದಲ್ಲಿರಿಸಿಕೊಂಡು ಕಾಲುವೆ ಗಾತ್ರ ಮತ್ತು ಆಳ ಹೆಚ್ಚಿಸಲಾಗಿದೆ.
ರು. 124 ಕೋಟಿ ವೆಚ್ಚ: ಕಳಸಾ ನಾಲಾ ಕಾಮಗಾರಿಗೆ ಇಲ್ಲಿಯವರೆಗೆ ಒಟ್ಟು ರು. 124 ಕೋಟಿ ವೆಚ್ಚವಾಗಿದೆ. ಇನ್ನುಳಿದ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಹಣಕಾಸು ನೆರವನ್ನು ರಾಜ್ಯ ಸರ್ಕಾರ ಒದಗಿಸಿಕೊಡಬೇಕು. ಈ ವಿಷಯದಲ್ಲಿ ರಾಜ್ಯ ಸರ್ಕಾರ ಉದಾರತೆ ತೋರಲಿ ಎಂದರು.
ರಾಜಕೀಯ ಬೇಡ: ಕಳಸಾ-ಬಂಡೂರಿ ಯೋಜನೆಯ ವಿವಾದ ಇಂದು ನಿನ್ನೆಯದಲ್ಲ. ಆದರೆ, ಈ ಹಿಂದಿನ ಸರ್ಕಾರಗಳು ಯೋಜನೆಯ ಪೂರ್ವಾಪರ ಅರಿಯದೇ ಸಮಸ್ಯೆ ಪರಿಹರಿಸಲು ಮುಂದಾಗಿರಲಿಲ್ಲ. ಏತನ್ಮಧ್ಯೆ ಬಿಜೆಪಿ ಸರ್ಕಾರ ರಾಜ್ಯದ ವ್ಯಾಪ್ತಿಗೆ ಒಳಪಡುವ ಕಳಸಾ ನಾಲಾವನ್ನು ಮಲಪ್ರಭೆಗೆ ಜೋಡಿಸುವ ಕಾಮಗಾರಿಯನ್ನು ಕೈಗೆತ್ತಿಕೊಂಡಿತು. ರಾಜ್ಯದ ಪಾಲಿಗೆ ಕಳಸಾ-ಬಂಡೂರಿ ನಾಲಾಗಳಿಂದ 7.56 ಟಿಎಂಸಿ ನೀರು ಹರಿದು ಬರಬೇಕಿದ್ದರೂ, ವಿವಾದದ ಹಿನ್ನೆಲೆಯಲ್ಲಿ ಈ ಕೂಡಲೇ ಅಷ್ಟು ಪ್ರಮಾಣದ ನೀರು ಲಭ್ಯವಾಗುವುದು ಕಷ್ಟ. ಹೀಗಿರುವಾಗ ಬಿಜೆಪಿ ಸರ್ಕಾರ ಕನಿಷ್ಠ ಕಳಸಾ ನಾಲಾದಿಂದ ಕನಿಷ್ಠ 1.5 ಟಿಎಂಸಿ ನೀರನ್ನು ತರುವಲ್ಲಿ ಯಶಸ್ವಿಯಾಗಿದೆ. ಬಾಕಿ ಉಳಿದಿರುವ ಅಲ್ಪಮಟ್ಟಿನ ಕಾಮಗಾರಿಯನ್ನು ರಾಜ್ಯ ಸರ್ಕಾರ ಕೈಗೆತ್ತಿಕೊಂಡು ಪೂರ್ಣಗೊಳಿಸಲಿ. ಬಿಜೆಪಿಯವರು ಈ ಯೋಜನೆ ಕೈಗೆತ್ತಿಕೊಂಡಿದ್ದಾರೆ ಎನ್ನುವ ಕಾರಣಕ್ಕೆ ರಾಜಕಾರಣ ಮಾಡುವುದು ಬೇಡ. ಈ ಯೋಜನೆಯ ಹಿಂದೆ ಜನ ಜಾನುವಾರಿಗೆ ಜೀವ ಜಲ ಒದಗಿಸುವ ಸದುದ್ದೇಶವಿದೆ. ಈ ಕೈಂಕರ್ಯಕ್ಕೆ ಕಾಂಗ್ರೆಸ್ ಕೈ ಜೋಡಿಸಲಿ ಎಂದರು.
ಲಿಂಗರಾಜ ಪಾಟೀಲ, ವೀರೇಶ ಸಂಗಳದ, ಲಕ್ಷ್ಮಣ ಗಂಡಗಾಳೇಕರ್, ಶಿವಾನಂದ ಮುತ್ತಣ್ಣವರ, ಕರ್ನಾಟಕ ನೀರಾವರಿ ನಿಗಮದ ಧಾರವಾಡ ವಿಭಾಗದ ಮುಖ್ಯ ಎಂಜಿನಿಯರ್ ಅಶೋಕ ವಾಸನದ ಇತರರಿದ್ದರು.
ಪ್ರಧಾನಿ ಮನಮೋಹನ ಸಿಂಗ್ ಭೇಟಿಗೆ ಸಿದ್ಧ
ಕಳಸಾ ಬಂಡೂರಿ ನಾಲಾ ಯೋಜನೆಯ ವಿವಾದ ಪರಿಹರಿಸುವ ನಿಟ್ಟಿನಲ್ಲಿ ಪ್ರಧಾನಿ ಮನ್ಮೋಹನ್ ಸಿಂಗ್ ಅವರನ್ನು ಭೇಟಿಯಾಗಲು ಬಿಜೆಪಿ ಸಂಸದರೆಲ್ಲರೂ ಸಿದ್ಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಜನೆಯ ಬಿಕ್ಕಟ್ಟು ಪರಿಹರಿಸಲು ರಾಜ್ಯ ಸರ್ಕಾರ ಮುಂದಾಗಬೇಕಿದೆ. ರಾಜ್ಯ ಸರ್ಕಾರ ನೇತೃತ್ವ ವಹಿಸಿ ಪ್ರಧಾನಿ ಭೇಟಿಗೆ ಸಮಯ ನಿಗದಿ ಮಾಡಲಿ, ಬಿಜೆಪಿ ಸಂಸದರೆಲ್ಲರೂ ನಿಯೋಗದೊಂದಿಗೆ ಬರಲು ಸಿದ್ಧ ಎಂದರು. ಪ್ರಧಾನಿ ಮನಸ್ಸು ಮಾಡಿದರೆ ಈ ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಬಹುದು. ಕರ್ನಾಟಕ-ಗೋವಾ ರಾಜ್ಯದ ಮುಖ್ಯಮಂತ್ರಿಗಳನ್ನು ಕರೆಯಿಸಿ ಪ್ರಧಾನಿ ನೇತೃತ್ವದಲ್ಲಿ ಚರ್ಚೆ ನಡೆಸಲಿ ಎಂದು ಜೋಶಿ ಹೇಳಿದರು.
ಕಳಸಾ ಬಂಡೂರಿ ಯೋಜನೆ ಈ ಭಾಗದ ಜನರ ಕನಸು. ಯೋಜನೆ ಪೂರ್ಣಗೊಂಡಲ್ಲಿ ಕುಡಿಯುವ ನೀರಿನ ಸಮಸ್ಯೆಯ ಜೊತೆಗೆ ನೀರಾವರಿಗೂ ಅನುಕೂಲವಾಗಲಿದೆ. ಈ ಯೋಜನೆ ಕಾರ್ಯರೂಪಕ್ಕೆ ಬರುವುದರಿಂದ ರಾಜಕೀಯವಾಗಿ ಎಷ್ಟು ಲಾಭವಾಗುತ್ತದೆ ಎನ್ನುವುದನ್ನು ಲೆಕ್ಕಾಚಾರ ಮಾಡುವುದಕ್ಕಿಂತ ಜನರಿಗೆ ಎಷ್ಟು ಅನುಕೂಲವಾಗುತ್ತದೆ ಎನ್ನುವುದನ್ನು ಯೋಚಿಸಬೇಕಿದೆ. ಹೀಗಾಗಿ ಯೋಜನೆ ವಿಷಯದಲ್ಲಿ ರಾಜಕೀಯ ಬೆರೆಸಬಾರದು. ಮೊದಲನೇ ಹಂತದಲ್ಲಿ ರಾಜ್ಯ ಸರ್ಕಾರ ಅಲ್ಪ ಪ್ರಮಾಣದಲ್ಲಿ ಉಳಿದಿರುವ ಕಳಸಾ ನಾಲಾ ಕಾಮಗಾರಿ ಪೂರ್ಣಗೊಳಿಸಬೇಕು. ಆ ಬಳಿಕ ಒಟ್ಟಾರೆ ಯೋಜನೆ ವಿವಾದ ಪರಿಹರಿಸಿ ಯೋಜನೆಯ ಅನುಷ್ಠಾನಕ್ಕೆ ಇಚ್ಛಾಶಕ್ತಿ ತೋರಬೇಕಿದೆ. ನ್ಯಾಯಾಧೀಕರಣದ ಎದುರು ರಾಜ್ಯದ ಪರ ಸಮರ್ಥ ವಾದ ಮಂಡಿಸಬೇಕಿದೆ.
- ಶಂಕರ ಪಾಟೀಲಮುನೇನಕೊಪ್ಪ, ಮಾಜಿ ಶಾಸಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

