ಸುದ್ದಿ ಸಂಕ್ಷೇಪ
ಲಸಿಕೆ, ಚಿಕಿತ್ಸಾಕ್ರಮಕ್ಕೆ ಸಲಹೆ
ಧಾರವಾಡ: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಜಾನುವಾರುಗಳಿಗೆ ಕಾಲು, ಬಾಯಿ ಬೇನೆ ರೋಗ ತೀವ್ರವಾಗಿ ಕಾಣಿಸಿಕೊಂಡಿದೆ. ಆದ್ದರಿಂದ ಜಿಲ್ಲೆಯ ಪಶು ಪಾಲಕರು ಮತ್ತು ರೈತ ಬಾಂಧವರು ತಮ್ಮ ಪಶುಗಳಿಗೆ ಕಾಲು, ಬಾಯಿ ಬೇನೆ ರೋಗದ ಚಿಹ್ನೆಗಳು ಕಂಡ ತಕ್ಷಣ ಹತ್ತಿರದ ಪಶುವ್ಶೆದ್ಯ ಕೇಂದ್ರಗಳಿಗೆ ಭೇಟಿ ನೀಡಿ ಜಾನುವಾರುಗಳಿಗೆ ಸೂಕ್ತ ಲಸಿಕೆ ಮತ್ತು ಚಿಕಿತ್ಸಾ ಕ್ರಮಗಳನ್ನು ಅನುಸರಿಸಲು ಪಶುಪಾಲನೆ ಹಾಗೂ ಪಶುವೈದ್ಯಕೀಯ ಇಲಾಖೆ ಉಪ ನಿರ್ದೇಶಕ ತಿಪ್ಪೇಸ್ವಾಮಿ ತಿಳಿಸಿದ್ದಾರೆ. ಪ್ರಕಟಣೆ ಮೂಲಕ ಈ ಕುರಿತು ಮಾಹಿತಿ ನೀಡಿರುವ ಅವರು, ಜಾನುವಾರುಗಳ ಬಾಯಿಯಲ್ಲಿ ನೀರಿನ ಗುಳ್ಳೆಗಳು ಕಾಣಿಸಿಕೊಂಡು ಅವುಗಳು ಒಡೆದ ನಂತರ ಹುಣ್ಣಾಗುವುದು ಮತ್ತು ಬಾಯಿಯಿಂದ ಜೊಲ್ಲು ಸೋರುವುದು ಹಾಗೂ ಕಾಲಿನ ಗೊರಸುಗಳ ಸಂದಿಯಲ್ಲಿ ಗುಳ್ಳೆಗಳಾಗಿ ನಂತರ ಗಾಯಗಳಾಗುವುದು. ಇದರಿಂದ ಜಾನುವಾರುಗಳು ಮೇವು ತಿನ್ನುವುದನ್ನು ಬಿಡುತ್ತವೆ. ಸ್ವಲ್ಪ ಪ್ರಮಾಣದಲ್ಲಿ ಜ್ವರ ಕಾಣಿಸಿಕೊಂಡು ಜಾನುವಾರುಗಳು ಆಹಾರ ಸೇವಿಸದೆ ಸೊರಗುತ್ತವೆ. ಇಂಥ ಸಂದರ್ಭ ಬಾಯಿ ಮತ್ತು ಕಾಲಿನ ಹುಣ್ಣುಗಳನ್ನು ಅಡುಗೆ ಸೋಡ ದ್ರಾವಣದಿಂದ ತೊಳೆದು ನೊಣಗಳು ಕೂಡದಂತೆ ಬೇವಿನ ಎಣ್ಣೆ ಮತ್ತು ಬೋರಿಕ್ ಆಸಿಡ್ ಮಿಶ್ರಣವನ್ನು ಕಾಲಿನ ಗಾಯಗಳಿಗೆ ಹಚ್ಚಬೇಕು. ಆಹಾರ ಸೇವನೆ ಬಿಟ್ಟಂತಹ ರಾಸುಗಳಿಗೆ ಅಂಬಲಿ, ಬಾಳೆಹಣ್ಣು ಮತ್ತು ಇತರೆ ಮೃದು ಆಹಾರ ನೀಡಬೇಕು. ಜಿಲ್ಲೆಯಲ್ಲಿ ಈಗಾಗಲೆ ಫೆಬ್ರವರಿ-ಮಾರ್ಚ್ ಮತ್ತು ಆಗಸ್ಟ್- ಸೆಪ್ಟೆಂಬರ್ ತಿಂಗಳಲ್ಲಿ ಎರಡು ಸುತ್ತಿನ ಲಸಿಕೆಗಳನ್ನು ಇಲಾಖೆಯಿಂದ ಉಚಿತವಾಗಿ ಹಾಕಲಾಗಿರುತ್ತದೆ. ಆದಾಗ್ಯೂ ಕೆಲವು ರೈತ ಬಾಂಧವರು ತಪ್ಪು ತಿಳಿವಳಿಕೆಯಿಂದ ತಮ್ಮ ಜಾನುವಾರುಗಳಿಗೆ ಸೂಕ್ತ ಲಸಿಕೆಗಳನ್ನು ಹಾಕಿಸಿಕೊಳ್ಳಲು ಹಿಂಜರಿಕೆ ತೋರುತ್ತಿದ್ದಾರೆ. ಪ್ರಸಕ್ತ ರೋಗವು ವ್ಶೆರಸ್ನಿಂದ ಹರಡುವ ಕಾಯಿಲೆಯಾಗಿರುವುದರಿಂದ ಇದಕ್ಕೆ ಲಸಿಕೆ ಹಾಕಿಸಿಕೊಳ್ಳುವುದೊಂದೆ ಮಾರ್ಗ. ಇಂತಹ ಸಂದರ್ಭದಲ್ಲಿ ರೈತರು ಜಾನುವಾರುಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸುವುದನ್ನು ನಿರ್ಬಂಧಿಸಬೇಕು. ಜಾನುವಾರು ಸಂತೆಗಳು ಹಾಗೂ ಜಾತ್ರೆ ಮೂಲಕ ಈ ರೋಗವು ಬಹಳ ಬೇಗ ಹರಡುವುದರಿಂದ ರೋಗದ ತೀವ್ರತೆ ಹೆಚ್ಚುತ್ತದೆ. ಈ ಕಾಯಿಲೆಗೆ ತುತ್ತಾದ ಜಾನುವಾರುಗಳು ಮರಣ ಹೊಂದಿದರೆ ಅವುಗಳನ್ನು ಸೂಕ್ತ ರೀತಿಯಲ್ಲಿ ಆಳವಾದ ಗುಂಡಿ ತೆಗೆದು ಸುಣ್ಣ ಅಥವಾ ಬ್ಲೀಚಿಂಗ್ ಪೌಡರ್ ಸಿಂಪಡಿಸಬೇಕು ಎಂದು ತಿಪ್ಪೇಸ್ವಾಮಿ ತಿಳಿಸಿದ್ದಾರೆ.
18ಕ್ಕೆ ವಾಲ್ಮೀಕಿ ಜಯಂತಿ
ಧಾರವಾಡ: ಜಿಲ್ಲಾಡಳಿತ, ಜಿಪಂ ಸಹಯೋಗದಲ್ಲಿ ಸಮಾಜ ಕಲ್ಯಾಣ ಇಲಾಖೆ ಅ. 18ರಂದು ಬೆಳಗ್ಗೆ 11ಕ್ಕೆ ವಿದ್ಯಾವರ್ಧಕ ಸಂಘದ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಏರ್ಪಡಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಉದ್ಘಾಟಿಸುವರು. ಶಾಸಕ ಅರವಿಂದ ಬೆಲ್ಲದ ಅಧ್ಯಕ್ಷತೆ ವಹಿಸುವರು. ಸುಬ್ಬು ಹೊಲೆಯಾರ ಉಪನ್ಯಾಸ ನೀಡುವರು. ಕನ್ನಡ, ಸಂಸ್ಕೃತಿ, ರಂಗಾಯಣ, ಪಪೂ ಶಿಕ್ಷಣ ಇಲಾಖೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಿವೆ ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಅಶೋಕ ಚಲವಾದಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

