ಧಾರವಾಡ

ಹಿಂದೂ-ಭಾರತ ಒಂದೇ ನಾಣ್ಯದ ಎರಡು ಮುಖ: ಗೋಪಾಲ ಭಟ್

Published On :

ಕನ್ನಡಪ್ರಭ ವಾರ್ತೆ, ಧಾರವಾಡ, ಅ. 14
ಹಿಂದೂ ಸಮಾಜ ಮತ್ತು ಭಾರತದೇಶ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ವಿಶ್ವ ಹಿಂದೂ ಪರಿಷತ್ ಕ್ಷೇತ್ರೀಯ ಪ್ರಚಾರಕ ಗೋಪಾಲ ಭಟ್ ಹೇಳಿದರು.
ವಿಜಯದಶಮಿ ಅಂಗವಾಗಿ ಶಿವಾಜಿ ವೃತ್ತದಲ್ಲಿರುವ ಕೆ.ಇ. ಬೋರ್ಡ್‌ನ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಭಾನುವಾರ ನಡೆದ ಪಥಸಂಚಲನದ ಅನಂತರ ಮಾತನಾಡಿದ ಅವರು, 88 ವರ್ಷಗಳ ಹಿಂದೆ ಡಾ. ಹೆಡಗೆವಾರರು ವಿಜಯದಶಮಿಯ ದಿನದಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕಟ್ಟಿದರು. ಭಾರತದ ಸರ್ವಾಂಗೀಣ ವಿಕಾಸಕ್ಕಾಗಿ ಎಲ್ಲ ವರ್ಗದ ಜನರನ್ನು ಜಾತಿ, ಮತ, ಭಾಷೆ, ಬಡವ, ಶ್ರೀಮಂತ, ಮೇಲು, ಕೀಳು ಎನ್ನದೆ ಎಲ್ಲರನ್ನು ಸಂಘಟಿಸುವುದೇ ಅವರ ಕನಸಾಗಿತ್ತು ಎಂದರು.
ಭಯೋತ್ಪಾದನೆ ಪ್ರಪಂಚದ ಮೂಲೆ ಮೂಲೆಯಲ್ಲಿ ತಾಂಡವಾಡುತ್ತಿದೆ. ಇದು ನಮ್ಮ ಕರ್ನಾಟಕವನ್ನೂ ಬಿಟ್ಟಿಲ್ಲ. ಭಯೋತ್ಪಾದನೆಗೆ ಪಾಕಿಸ್ತಾನ ಬೆಂಗಾವಲಾಗಿ ನಿಂತಿದೆ.
ನಾಲ್ಕು ಕೋಟಿಗಿಂತಲೂ ಹೆಚ್ಚು ಮುಸ್ಲಿಮರು ಭಾರತಕ್ಕೆ ನುಸುಳಿದ್ದಾರೆ. ಕೆಲವು ರಾಜಕೀಯ ಪಕ್ಷದವರು ಇದನ್ನೇ ಚುನಾವಣೆ ಬಂಡವಾಳವನ್ನಾಗಿ ಮಾಡಿಕೊಂಡಿರುವುದು ವಿಷಾದದ ಸಂಗತಿ.
ನಮ್ಮ ಪಕ್ಕದಲ್ಲಿರುವ ಚೀನಾ, ನಮ್ಮ ದೊಡ್ಡ ದೊಡ್ಡ ಯೋಜನೆಗಳನ್ನು ತನ್ನ ಪಾಲಾಗಿಸಿಕೊಳ್ಳುತ್ತಿದ್ದು, ನಾವು ಎಚ್ಚೆತ್ತುಕೊಳ್ಳಬೇಕಾಗಿದೆ.
ಚಿಕ್ಕ-ಮಕ್ಕಳ ಆಟಿಕೆ ಸಾಮಾನುಗಳಿಂದ ಹಿಡಿದು ಮೊಬೈಲ್ ವರೆಗೂ ಅತಿ ಕಡಿಮೆ ಬೆಲೆಯಲ್ಲಿ ಕಳಪೆ ಗುಣಮಟ್ಟದ ವಸ್ತುಗಳನ್ನು ನೀಡಿ ನಮ್ಮನ್ನು ಆರ್ಥಿಕ ಸಂಕಷ್ಟದಲ್ಲಿಡಲು ಆತುರ ಪಡುತ್ತಿದೆ. ಹಿಂದೂ ಸಮಾಜ ಹಿಂದೂ ಶಕ್ತಿ ಜಾಗ್ರತಗೊಳಿಸಬೇಕಾಗಿದೆ. ಹಿಂದೂ ದೇವತೆಗಳಾದ ಹನುಮನ ಕೈಯಲ್ಲಿ ಗದೆ, ವಿಷ್ಣುವಿನ ಬೆರಳಲ್ಲಿ ಚಕ್ರ, ಶಿವನ ಕೈಯಲ್ಲಿ ತ್ರಿಶೂಲ, ದುರ್ಗೆಯ ಕೈಯಲ್ಲಿ ಖಡ್ಗ ಇಂತಹ ಆಯುಧಗಳನ್ನು ನೋಡಿದರೆ ದುಷ್ಟರ ಸಂಹಾರಕ್ಕಾಗಿ ಅವರ ಕೈಯಲ್ಲಿ ಆಯುಧಗಳಿದ್ದದ್ದು ಕಂಡು ಬರುತ್ತದೆ ಎಂದರು.
ಹಿರಿಯರಾದ ಮಲ್ಲಿಕಾರ್ಜುನ ನಡಕಟ್ಟಿ, ಮನೋಹರ ಪರಶುರಾಮ ಕಲಾಲ, ಜಗದೀಶ ಬರಗಿ, ಚೇತನ ಹುಬಳಿಕರ, ಸಂತೋಷ ಪೂಜಾರಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.