ಧಾರವಾಡ

ಹುಬ್ಬಳ್ಳಿ ರಸ್ತೆಗಳ್ಯಾವಾಗ ದುರಸ್ತಿ?

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಅ. 16
'ಹಗ್ಗ ಹರಿಯಲಿಲ್ಲ ಕೋಲು ಮುರಿಯಲಿಲ್ಲ' ಎಂಬಂತೆ ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ಬರಲಿಲ್ಲ ಹುಬ್ಬಳ್ಳಿ-ಧಾರವಾಡ ಮಹಾನಗರದ ರಸ್ತೆಗಳು ಸುಧಾರಿಸಲಿಲ್ಲ..!
ಜನಪ್ರತಿನಿಧಿಗಳ ಆಡಳಿತ ಇಲ್ಲದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಭಿವೃದ್ಧಿಕಾರ್ಯಗಳು ತಟಸ್ಥಗೊಂಡಂತ ಭಾವನೆ ಇಲ್ಲಿಯ ರಸ್ತೆಗಳನ್ನು ಗಮನಿಸಿದಾಗ ಬರದೇ ಇರದು. ಹದಗೆಟ್ಟಿರುವ ರಸ್ತೆ ರಿಪೇರಿಯಾಗದಿರುವ ಜೊತೆಗೆ ಇಲ್ಲಿಯ ಅನೇಕ ಪ್ರದೇಶದಲ್ಲಿನ ತ್ಯಾಜ್ಯವೂ ವಿಲೇವಾರಿಯಾಗುತ್ತಿಲ್ಲ.
ಈ ಎಲ್ಲ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕಿದ್ದ ಪಾಲಿಕೆ ಆಯುಕ್ತ ರಮಣದೀಪ ಚೌಧರಿ ಅವರು ಮೌನ ವಹಿಸಿದ್ದಾರೆ. ಅಧಿಕಾರ ಸ್ವೀಕರಿಸಿದ ಒಂದು ವಾರದಲ್ಲಿ ಮಹಾನಗರದ ವಿವಿಧೆಡೆ ಭೇಟಿ ನೀಡಿ, ರಸ್ತೆ ದುರಸ್ತಿಗೊಳಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದರು. ಮಳೆಗಾಲ ಮುಗಿಯುವ ಹಂತ ಬಂದಿದ್ದರೂ ರಸ್ತೆಗಳ ದುಸ್ಥಿತಿ ಮಾತ್ರ ಇನ್ನೂ ಹಾಗೆಯೇ ಇದೆ. ಮಳೆಗಾಲದಲ್ಲಿ ಕೆಸರೆರಚಿಕೊಂಡು ಈಗ ಧೂಳಿನ ಸ್ನಾನ ಮಾಡಿಸುತ್ತಿರುವ ಅವಳಿ ನಗರಗಳ ರಸ್ತೆಗಳಿಗೆ ಡಾಂಬರೀಕರಣದ ಕೆಲಸ ಪ್ರಾರಂಭಗೊಳ್ಳುವ ಲಕ್ಷಣಗಳೇ ಗೋಚರಿಸುತ್ತಿಲ್ಲ.  
ಕಳೆದ ಫೆಬ್ರವರಿಯಲ್ಲೇ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದು ಸದಸ್ಯರು ಆಯ್ಕೆಯಾಗಿದ್ದರೂ ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಒಳಚರಂಡಿ ಕಾಮಗಾರಿ ಹೆಸರಿನಲ್ಲಿ ನಗರದ ರಸ್ತೆಗಳನ್ನು ಅಗೆದು ಹಾಕಲಾಗಿದೆ. ಮಳೆಗಾಲ ಮುಗಿದ ನಂತರವೂ ರಸ್ತೆ ದುರಸ್ತಿ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ನಿರ್ಧರಿಸಿಲ್ಲ. ಪಾಲಿಕೆ ಅಧಿಕಾರಿಗಳ ನಿಷ್ಕಾಳಜಿಯಿಂದಾಗಿ ಇಡೀ ನಗರದ ರಸ್ತೆಗಳು ಹಳ್ಳಿಗಳ ರಸ್ತೆಗಳಿಂತಲೂ ಕಡೆಯಾಗಿ ಪರಿಣಮಿಸಿವೆ. ಮುಖಕ್ಕೆ ರಾಚುವ ಧೂಳು, ರಸ್ತೆಯಲ್ಲಿನ ತಗ್ಗು ದಿನ್ನೆ ಹೀಗೆ ನೂರೆಂಟು ಸವಾಲುಗಳನ್ನು ಎದುರಿಸಿ ಚಾಲಕರು ವಾಹನ ಚಲಾಯಿಸಬೇಕಿದೆ. ಸದಾ ಜನ-ವಾಹನಗಳಿಂದ ಗಿಜಿಗಿಟ್ಟುವ ರೇಲ್ವೆ ಸ್ಟೇಷನ್ ರಸ್ತೆಯದ್ದಂತೂ ಹೇಳತೀರದ ಪರಿಸ್ಥಿತಿ. ನಗರ ಸಾರಿಗೆಯ ಎಲ್ಲ ಬಸ್‌ಗಳು ಇದೇ ರಸ್ತೆ ಮುಖಾಂತರ ವಿವಿಧ ಪ್ರದೇಶಗಳಿಗೆ ತೆರಳುವುದರಿಂದ ಟ್ರಾಫಿಕ್ ಜಾಮ್ ಎನ್ನುವುದು ಈ ರಸ್ತೆಯಲ್ಲಿ ಹೊಸ ಸಮಸ್ಯೆಯಲ್ಲ.
ಗದಗ ಮಾರ್ಗವಾಗಿ ಹಾಗೂ ಹಳೆ ಬಸ್ ನಿಲ್ದಾಣದ ಮಾರ್ಗವಾಗಿ ಬರುವ ಬಸ್‌ಗಳು ಸ್ಟೇಷನ್ ರಸ್ತೆಗೆ ಎರಡೂ ಕಡೆಯಿಂದ ನುಗ್ಗುವುದರಿಂದ ಉಳಿದ ವಾಹನಗಳಿಗೆ ಸಂಚರಿಸಲು ಅವಕಾಶವೇ ಇಲ್ಲ. ಬಸ್‌ನ ಹಿಂದೆ ಸಾಗುತ್ತಿದ್ದರೆ ಧೂಳಿನ ಸ್ನಾನ ಗ್ಯಾರಂಟಿ. ಧೂಳಿನ ಸಹವಾಸ ಬೇಡ ಎಂದು ಬಸ್ ಓವರ್‌ಟೇಕ್ ಮಾಡ ಹೊರಟರೂ ಎದುರಿನಿಂದ ಬರುವ ವಾಹನಗಳ ಸಾಲು ಅದಕ್ಕೂ ಅವಕಾಶ ನೀಡುವುದಿಲ್ಲ. ಸಿಬಿಟಿಯಿಂದ ಪಿಂಟೋ ಸರ್ಕಲ್‌ವರೆಗಿನ ಮಾರ್ಗದಲ್ಲಂತೂ ಧೂಳಿನಿಂದ ಮುಕ್ತಿ ಪಡೆಯುವುದು ಸಾಧ್ಯವೇ ಇಲ್ಲ.
ಹುಬ್ಬಳ್ಳಿ ನಗರದ ಹೃದಯ ಭಾಗ ಎನ್ನಿಸಿಕೊಂಡಿರುವ ದುರ್ಗದ ಬೈಲ್, ಬೆಳಗಾಂವ ಗಲ್ಲಿ ಮುಂತಾದ ಪ್ರದೇಶಗಳಲ್ಲಿ ಪರಿಸ್ಥಿತಿ ಇದಕ್ಕಿಂತ ಭೀಕರ. ಮೊದಲೇ ಕಿರಿದಾದ ರಸ್ತೆ. ಅದರಲ್ಲಿ ಒಳಚರಂಡಿ ಕೆಲಸದಿಂದ ನಿರ್ಮಾಣಗೊಂಡಿರುವ ತಗ್ಗು ಗುಂಡಿಗಳಿಂದಾಗಿ ಆಟೋ ಚಲಿಸಲೂ ಪರದಾಡಬೇಕಿದೆ. ಕುಟುಂಬ ಸಮೇತ ಸಾಗುವ ಬೈಕ್ ಸವಾರರಂತೂ ಸರ್ಕಸ್ ಮಾಡುತ್ತಲೇ ಮುಖ್ಯ ರಸ್ತೆ ತಲುಪುತ್ತಾರೆ. ಇದು ನಗರದ ಹೃದಯ ಭಾಗದ ಪರಿಸ್ಥಿತಿ ಆದರೆ ಜನವಸತಿ ಬಡಾವಣೆಗಳಲ್ಲಿ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಸಾಯಿನಗರ, ಶ್ರೀನಗರ, ಲಿಂಗರಾಜ ನಗರ, ಕೇಶ್ವಾಪುರ, ಉದಯ ನಗರ, ಭವಾನಿ ನಗರ, ರಂಭಾಪುರಿ ಕಲ್ಯಾಣ ಮಂಟಪ ರಸ್ತೆಗಳಲ್ಲಿ ಬಿದ್ದಿರುವ ತಗ್ಗುಗಳು, ವಾಹನ ಎಬ್ಬಿಸುವ ಧೂಳು ನೋಡಿದರೆ 'ಅಯ್ಯೋ ಶಿವನೆ.. ಇದು ರಾಜ್ಯದ ವಾಣಿಜ್ಯ ರಾಜಧಾನಿಯಾ...' ಎನ್ನುವಂತಾಗಿದೆ.
ಜನಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ತಾವೇ ಖುದ್ದಾಗಿ ನಿಂತು ಜನರಿಗೆ ಸೌಕರ್ಯ ಕಲ್ಪಿಸಬೇಕಿರುವ ಅಧಿಕಾರಿಗಳು ಮಾತ್ರ ತಮಗೂ ಈ ರಸ್ತೆಗಳಿಗೂ ಸಂಬಂಧವೇ ಇಲ್ಲವೆನ್ನುವಂತೆ ವರ್ತಿಸುತ್ತಿದ್ದಾರೆ.
- ಸತೀಶ ಪಾಗಾದ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.