ಧಾರವಾಡ

ಬಿಜೆಪಿಗೆ ಕರೆ ತರುವ ವ್ಯರ್ಥ ಪ್ರಯತ್ನ ಬೇಡ

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಅ. 17
ನನ್ನನ್ನು ಬಿಜೆಪಿಗೆ ಕರೆ ತರುವ ವ್ಯರ್ಥ ಪ್ರಯತ್ನಕ್ಕೆ ಬಿಜೆಪಿಗರು ಕೈಹಾಕದಿರಲಿ. ನಾನು ಯಾವುದೇ ಕಾರಣಕ್ಕೂ ಕೆಜೆಪಿಯನ್ನು ಬಿಜೆಪಿಯಲ್ಲಿ ವಿಲೀನ ಮಾಡುವುದಿಲ್ಲ ಎಂದು ಕೆಜೆಪಿ ಸಂಸ್ಥಾಪಕ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶ ದಯನೀಯ ಸ್ಥಿತಿಯಲ್ಲಿದೆ. ಇದಕ್ಕೊಬ್ಬ ಸಮರ್ಥ ನಾಯಕ ಬೇಕಿದ್ದಾರೆ. ನರೇಂದ್ರ ಮೋದಿ ದೇಶದ ಪ್ರಧಾನಿಯಾದರೆ ಮಾತ್ರ ಭಾರತದ ಭವಿಷ್ಯ ಬದಲಾಗಲು ಸಾಧ್ಯ ಎಂಬುದನ್ನು ಮನಗಂಡು ತಾವು ಮೋದಿಯನ್ನು ಬೆಂಬಲಿಸುವುದಾಗಿ ಹೇಳಿದ್ದೇವೆಯೇ ಹೊರತು, ಇದನ್ನು ಬಿಜೆಪಿ ಸೇರುತ್ತಿದೆ ಎಂದು ವ್ಯಾಖ್ಯಾನಿಸುವುದು ಸರಿಯಲ್ಲ. ಹೀಗಾಗಿ ಬಿಜೆಪಿಗರು ಪಕ್ಷಕ್ಕೆ ಸೆಳೆಯುವ ಪ್ರಯತ್ನ ಮಾಡದಿರಲಿ ಎಂದರು.
ಬಿಜೆಪಿಯೊಂದಿಗೆ ಹೊಂದಾಣಿಕೆ: ಮೋದಿಯವರನ್ನು ಪ್ರಧಾನಿಯಾಗಿಸಬೇಕೆಂಬ ಏಕೈಕ ಉದ್ದೇಶಕ್ಕೆ ತಾವು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಬಿಜೆಪಿ ನಾಯಕರೊಂದಿಗೆ ಮಾತುಕತೆಗೂ ಸಿದ್ಧ. ರಾಷ್ಟ್ರ ರಾಜಕಾರಣದಲ್ಲಿ ಪಾತ್ರ ವಹಿಸಲು ಲೋಕಸಭೆ ಚುನಾವಣೆಯಲ್ಲಿ ಕೆಜೆಪಿ 10 ಸ್ಥಾನಗಳಲ್ಲಿ ಸ್ಪರ್ಧೆಗಿಳಿಯಲಿದೆ, ಇನ್ನುಳಿದ ಸ್ಥಾನಗಳನ್ನು ಬಿಜೆಪಿಗೆ ಬಿಟ್ಟುಕೊಡಲಿದೆ. ಕೆಜೆಪಿ-ಬಿಜೆಪಿ ಎರಡೂ ಪಕ್ಷಗಳ ವೇದಿಕೆಯಲ್ಲಿ ತಾವು ಪ್ರಚಾರ ಕಾರ್ಯ ಕೈಗೊಳ್ಳಲಿದ್ದೇವೆಂದರು.
ಲೋಕಸಭೆ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು ಹಾಗೂ ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಆರಂಭಿಸುವುದಾಗಿ ತಿಳಿಸಿದ ಯಡಿಯೂರಪ್ಪ, ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಎರಡು ದಿನ ಕಾಲ ತಂಗಿ, ಪಕ್ಷ ಸಂಘಟನೆ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಕೈಗೊಳ್ಳಲಾಗುವುದು. ಇದರ ಪ್ರಥಮ ಹಂತ ಹುಬ್ಬಳ್ಳಿಯಿಂದ ಆರಂಭಗೊಂಡಿದೆ. ಇದೇ 21ರಂದು ಶಿವಮೊಗ್ಗದಲ್ಲಿ ಹೋರಾಟ ಕೈಗೊಳ್ಳಲಾಗುವುದು ಈ ತಿಂಗಳ ಕೊನೆಯಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದರು.
ಸರ್ಕಾರ ಸತ್ತಿದೆ: ರಾಜ್ಯ ಕಾಂಗ್ರೆಸ್ ಸರ್ಕಾರ ಬದುಕಿದ್ದರೂ ಸತ್ತಿದೆ. ಕಾಂಗ್ರೆಸ್ ಶಾಸಕರೇ ಸಿದ್ದರಾಮಯ್ಯ ಆಡಳಿತ ವಿರುದ್ಧ ತಿರುಗಿ ಬಿದ್ದಿದ್ದಾರೆ. ಸಿದ್ದರಾಮಯ್ಯನವರ ಚಟುವಟಿಕೆಯ ಮೇಲೆ ಹಿಡಿತ ಸಾಧಿಸಲು ಕಾಂಗ್ರೆಸ್ ಹೈಕಮಾಂಡ್ ಸಮಿತಿ ರಚಿಸಿದೆ. ರೈತರು ಸಂಕಷ್ಟದಲ್ಲಿದ್ದರೂ ಸಮಸ್ಯೆ ಆಲಿಸಲು ಸರ್ಕಾರಕ್ಕೆ ಕಿವಿಯಿಲ್ಲ, 8 ಲಕ್ಷ ರೈತರಿಗೆ ಸಾಲ ಮನ್ನಾ ಯೋಜನೆಯ ಲಾಭ ಸಿಕ್ಕಿಲ್ಲ, ಜೋಳ, ಅಡಕೆಗೆ ರೋಗ ತಗುಲಿದೆ. ರಾಜ್ಯಪಾಲರೇ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಲೋಕಾಯುಕ್ತರೂ ಸರ್ಕಾರದ ಹುಳುಕು ಬಯಲಿಗೆ ತಂದಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದರು.
ವರ್ಗಾವಣೆ ದಂಧೆ: ರಾಜ್ಯ ಸರ್ಕಾರ ವರ್ಗಾವಣೆಯ ದಂಧೆ ನಡೆಸಿದೆ. 4 ತಿಂಗಳ ಅವಧಿಯಲ್ಲಿ ಹಿಂದೆಂದೂ ಕಂಡರಿಯದಷ್ಟು ಅಧಿಕಾರಿಗಳನ್ನು ವರ್ಗಾವಣೆ ಮಾಡಿ ವಸೂಲಿ ನಡೆಸಿದೆ.
ಹಣಕೊಟ್ಟು ವರ್ಗಾವಣೆ ಮಾಡಿಸಿಕೊಂಡ ಅಧಿಕಾರಿಗಳು ಕೆಲಸ ಬಿಟ್ಟು ಹಣ ಪೀಕುವ ಕೆಲಸ ಮಾಡುತ್ತಿದ್ದಾರೆ. ಜನತೆಯ ನಿರೀಕ್ಷೆಯನ್ನು ಕಾಂಗ್ರೆಸ್ ಸರ್ಕಾರ ಹುಸಿಗೊಳಿಸಿದೆ. ಇಂಥ ಸರ್ಕಾರವನ್ನು ಜನ ಕಿತ್ತೊಗೆಯಬೇಕು ಎಂದರು.
ಮಾಜಿ ಸಚಿವ ಸಿ.ಎಂ. ಉದಾಸಿ, ವಿಜಯ ಸಂಕೇಶ್ವರ, ರಾಜೇಂದ್ರ ಗೋಖಲೆ ಮತ್ತಿತರರು ಗೋಷ್ಠಿಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.