ಚರಗ ಚೆಲ್ಲಿ ಸಿಹಿಯುಂಡ ಮಣ್ಣಿನ ಮಕ್ಕಳು
ಕನ್ನಡಪ್ರಭ ವಾರ್ತೆ, ಧಾರವಾಡ, ಅ. 18
ತರಹೇವಾರಿ ಖಾದ್ಯ ಸಿದ್ಧಪಡಿಸಿಕೊಂಡು ಕುಟುಂಬ ಸದಸ್ಯರೆಲ್ಲ ಹೊಲಕ್ಕೆ ಹೋಗಿ ಭೂಮಿತಾಯಿಗೆ ನೈವೇದ್ಯ ಮಾಡುವ ಮೂಲಕ ಆಚರಿಸುವ ಸೀಗಿ ಹುಣ್ಣಿಮೆ ಹಬ್ಬವನ್ನು ಧಾರವಾಡ ಜಿಲ್ಲೆಯಾದ್ಯಂತ ಶುಕ್ರವಾರ ಸಂಭ್ರಮದಿಂದ ಆಚರಿಸಲಾಯಿತು.
ಪರ ಊರುಗಳಿಂದ ಬಂದ ಸಂಬಂಧಿಕರೊಂದಿಗೆ ಟ್ರ್ಯಾಕ್ಟರ್, ಚಕ್ಕಡಿಗಳಲ್ಲಿ ಹೊಲಕ್ಕೆ ತೆರಳಿದ ರೈತರು, ಸಂಜೆಯವರೆಗೂ ಹೊಲದಲ್ಲಿಯೇ ಸಮಯ ಕಳೆದರು. ತರಹೇವಾರಿ ಅಡುಗೆ ಸಿದ್ಧಪಡಿಸಿಕೊಂಡ ರೈತರು, ಹೊಲದಲ್ಲೆಲ್ಲ ತಿರುಗಾಡಿ ಚರಗ ಚೆಲ್ಲಿದರು. ರೈತರು ಈ ಹುಣ್ಣಿಮೆಯಂದು ಜೋಳದ ಕಡಬು, ಅಕ್ಕಿ ಹುಗ್ಗಿ, ಕುಚ್ಚಿದ ಖಾರ, ಹುರಕ್ಕಿ ಹೋಳಗಿ, ವಡೆ ಸೇರಿದಂತೆ ಮತ್ತಿತರ ಅಡುಗೆ ಮಾಡಿಕೊಂಡು ಕುಟುಂಬದ ಸದಸ್ಯರೊಂದಿಗೆ ಹೊಲಕ್ಕೆ ತೆರಳಿದರು. ಬೆಳಗಿನ ಜಾವದಿಂದಲೇ ಅಡುಗೆ ಸಿದ್ಧತೆಯಲ್ಲಿ ತೊಡಗಿದ್ದ ಮಹಿಳೆಯರು, ಹೊಸ ಬಟ್ಟೆ ತೊಟ್ಟಿದ್ದರು.
'ಮುಂಗಾರಿನ ಫಸಲು ಮನೆ ತುಂಬಿಸಿಕೊಳ್ಳುವ ಮತ್ತು ಹಿಂಗಾರಿನ ಮಳೆಗಾಗಿ ಭೂಮಿ ಸಿದ್ಧತೆ ಮಾಡುವ ಕಾಲದಲ್ಲಿ ಫಸಲನ್ನು ಪೂಜಿಸುವ ಮತ್ತು ಮುಂದಿನ ಫಸಲು ಉತ್ತಮವಾಗಿರಲೆಂದು ಭೂಮಿ ಪೂಜಿಸುವ ರೈತ ಕುಲದ ತಾಯಿ' ಪೂಜೆಯೇ ಚರಗ.
ವಿಜಯ ದಶಮಿ ಬಳಿಕ ಬರುವ ಸೀಗಿ ಹುಣ್ಣಿಮೆಗೆ ಗ್ರಾಮೀಣ ಭಾಗದಲ್ಲಿ ವಿಶೇಷ ಮಹತ್ವ ನೀಡಲಾಗುತ್ತದೆ. ಬೆಳಗ್ಗೆ ಮನೆಯಲ್ಲಿ 5 ಬಗೆಯ ಕಾಳ್ನು ಕುದಿಸಿ ಅದನ್ನು ಹೊಲದ ಸುತ್ತಲೂ ಚರಗದ ರೂಪದಲ್ಲಿ ಚೆಲ್ಲುವ ಸಂಪ್ರದಾಯವಿದೆ. ಹೀಗೆ ಚರಗ ಚೆಲ್ಲುವುದರಿಂದ ಫಸಲು ಸಮದ್ಧವಾಗಿರಲಿದೆ ಎನ್ನ್ನುವ ನಂಬಿಕೆ ಜನಪದರಲ್ಲಿದೆ. ಜಾನುವಾರುಗಳ ಮೈತೊಳೆದು ಸಿಂಗರಿಸಿ ಚಕ್ಕಡಿ ಕಟ್ಟಿಕೊಂಡು ಕುಟುಂಬ ಸದಸ್ಯರ ಜತೆಗೆ ತಮ್ಮ ಕೃಷಿ ಭೂಮಿಗೆ ತೆರಳಿದ ರೈತರು ಬೆಳೆದು ನಿಂತ ಫಸಲಿಗೆ ಪೂಜೆ ಸಲ್ಲಿಸಿದರು.
ಫಸಲಿಗೆ ಉಡಿ ಕಟ್ಟಿ ಸೀರೆ, ಕುಪ್ಪಸ ತೊಡಿಸಿ ಪೂಜಿಸಿ ಆರಾಧಿಸಿದ ರೈತ ಸಮೂಹ ಅಲ್ಲಿಯೇ ಪಾಂಡವರ ಮೂರ್ತಿಗಳನ್ನು ನಿರ್ಮಿಸಿ ಅವುಗಳಿಗೂ ಪೂಜೆ ಸಲ್ಲಿಸಿದರು. ಕುಟುಂಬದ ಯಜಮಾನ ಫಸಲಿಗೆ ಅರ್ಪಿಸಿರುವ ಎಡೆ (ಊಟ)್ನ ಸೇವಿಸುವ ಪದ್ಧತಿ ಆಚರಿಸಲಾಯಿತು. ಪ್ರಸಾದ ಸ್ವೀಕರಿಸುವ ಸಂದರ್ಭ ಯಾರೊಂದಿಗೂ ಮಾತನಾಡದೇ ಮೌನವಾಗಿ ಅತ್ಯಂತ ಶ್ರದ್ಧೆಯಿಂದ ಪ್ರಸಾದ ಸ್ವೀಕರಿಸಿದರೆ ಮುಂದಿನ ವರ್ಷದವರೆಗೆ ಯಾವುದೇ ತೊಂದರೆ ಇಲ್ಲದಂತೆ ಫಸಲು ಕೈಹಿಡಿಯಲಿದೆ ಎನ್ನ್ನುವ ನಂಬಿಕೆ ಇದೆ.
ಚಕ್ಕಡಿಯಲ್ಲಿ ಮನೆ ಮಂದಿಯೆಲ್ಲಾ ಬುತ್ತಿಗಂಟು ಹೊತ್ತು ಹೊಲದತ್ತ ಸಾಗಿದಾಗ ಮಧ್ಯಾಹ್ನ ಸುಮಾರು 1 ಗಂಟೆ. ಮುತ್ತೈದೆಯರು ಮತ್ತು ಮಕ್ಕಳು ಎಲೆಯಲ್ಲಿ ನೈವೇದ್ಯ ಮಾಡಿ ಹೊಲದ ತುಂಬೆಲ್ಲ 'ಹುಲ್ಲಲಿಗೋ.. ಸುಲಾಂಬ್ರಿಗೋ..' ಎನ್ನುತ್ತ ಚರಗ ಎರಚಿ ಭೂತಾಯಿಗೆ ನಮನ ಸಲ್ಲಿಸಿದರು.
ನಂತರ ಹೊಲದಲ್ಲಿನ ಮರದ ಕೆಳಗಿನ ನೆರಳಿನಲ್ಲಿ ಕುಳಿತು ಸವಿಯೂಟ ಸವಿದರು. ಹಸಿರು ತುಂಬಿದ ಹೊಲದಲ್ಲಿ ತಿರುಗಾಡಿದರು. ಮಕ್ಕಳು ಹೊಲದ ತುಂಬೆಲ್ಲ ಓಡಾಡಿ ಆಟವಾಡಿದರು. ನಗರ ಪ್ರದೇಶದ ಜನರು ಮಕ್ಕಳೊಂದಿಗೆ ಗ್ರಾಮೀಣ ಪ್ರದೇಶದಲ್ಲಿದ್ದ ಬೀಗರ ಮನೆಗೆ ಹೋಗಿ ಹೊಲದಲ್ಲಿ ರುಚಿಯಾದ ಅಡುಗೆ ಸವಿ ಸವಿದರು.
ಹೊಲದಿಂದ ಮರಳುವ ಸಂದರ್ಭ ಸ್ವಲ್ಪ ಫಸಲನ್ನು ಕೊಯ್ದು ಮನೆಗೆ ತಂದು ಪೂಜೆ ಸಲ್ಲಿಸಲಾಯಿತು. ಮುಂದೆ ಫಸಲಿನ ರಾಶಿಯಲ್ಲಿ ಅದನ್ನ್ನು ಇಟ್ಟರೆ ಮತ್ತಷ್ಟು ಸಮದ್ಧವಾಗಲಿದೆ ಎನ್ನ್ನುವ ನಂಬಿಕೆ ಇದೆ. ಒಟ್ಟಾರೆ ಭೂತಾಯಿಯ ಆರಾಧನೆಗೆ ಮೀಸಲಿರುವ ಸೀಗಿ ಹುಣ್ಣಿಮೆ ಈ ಪ್ರದೇಶದಲ್ಲಿ ಶ್ರದ್ಧೆಯಿಂದ ನಡೆಯಿತು.
ಸೀಗಿ ಹುಣ್ಣಿಮೆ ಮಹತ್ವ
ಗ್ರಾಮೀಣ ಜನರಿಗೆ ಭೂಮಿ ಕೇವಲ ಮಣ್ಣಲ್ಲ. ಕೋಟ್ಯಂತರ ಜೀವಿಗೆ ಆಹಾರ, ರಕ್ಷಣೆ ನೀಡಿ ಸಲಹುವ ಮಹಾಮಾತೆ. ಹಾಗಾಗಿ ಭೂಮಿ ತಾಯಿಯ ಆರಾಧನೆಗೆ ವಿವಿಧ ರೀತಿಯ ಆಚರಣೆಗಳು, ಮಾರ್ಗಗಳು ಭಾರತದ ಎಲ್ಲೆಡೆ ಪ್ರಚಲಿತದಲ್ಲಿವೆ. ಉ-ಕದ ಸೀಗಿ ಹುಣ್ಣಿಮೆ, ಮಲೆನಾಡಿನ ಭೂಮಿ ಹುಣ್ಣಿಮೆ, ಬಯಲು ಸೀಮೆಯ ಹೊನ್ನ್ನಾರು, ಕೊಂತಿಹಬ್ಬ, ತುಳುನಾಡಿನವರ ಖೆಡ್ವಾಸ, ಸೋಲಿಗ ಆದಿವಾಸಿಗಳ ಭೂಮಿತಾಯಿ ಪೂಜೆ, ಅಲ್ಲದೆ ದೇಶದ ಇತರ ರಾಜ್ಯಗಳಾದ ರಾಜಸ್ಥಾನದ ಹಿರ್ಸೋತಿ, ಪಶ್ಚಿಮ ಬಂಗಾಳದ ಹಲ್ ಚಲ್ ಇವೆಲ್ಲಾ ಭೂಮಿಗೆ ಧನ್ಯವಾದ ಸಲ್ಲಿಸುವ ಆಚರಣೆಗಳು. ಪಂಚಭೂತಗಳಾದಿಯಾಗಿ ಪ್ರಕೃತಿಯ ಎಲ್ಲ ಘಟಕಗಳಲ್ಲೂ ರೈತ ಮಕ್ಕಳು ದೈವತ್ವ ಕಂಡು ಗೌರವಿಸುತ್ತಾರೆ. ಅದರಲ್ಲಿಯೂ ಅವರಿಗೆ ನೆಲೆ, ಅನ್ನ್ನ, ಆಶ್ರಯ ನೀಡುವ ಭೂಮಿಯ ಮೇಲೆ ಅಪಾರ ಗೌರವ, ಭಕ್ತಿ, ಶ್ರದ್ಧೆಗಳನ್ನಿಟ್ಟುಕೊಂಡಿರುತ್ತಾರೆ. ಹಾಗಾಗಿ ಭೂಮಿ ಕುರಿತಾದ ಅವರ ಆಚರಣೆಗಳೂ ಸಹ ನಾಡಿನಾದ್ಯಂತ ಸಮೃದ್ಧವಾಗಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

