ನ. 8ರಿಂದ ಹುಬ್ಬಳ್ಳಿಯಲ್ಲಿ ರಾಜ್ಯ ಮಟ್ಟದ ಹಿಂದೂ ಅಧಿವೇಶನ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಅ. 19
ಜಾತ್ಯತೀತತೆ ಹೆಸರಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಿದೆ. ಹಿಂದೂ ಶಕ್ತಿಯನ್ನು ವ್ಯವಸ್ಥಿತವಾಗಿ ಒಡೆಯುವ ಸಂಚು ನಡೆಸಿದೆಯಲ್ಲದೇ ಹಿಂದುಸ್ತಾನವನ್ನು ಪಾಕಿಸ್ತಾನ ಮಾಡ ಹೊರಟಿದೆ. ಇಂತಹ ಕುತಂತ್ರವನ್ನು ಬಗ್ಗು ಬಡೆದು ಹಿಂದೂ ಶಕ್ತಿ ಬಲಪಡಿಸುವ ಉದ್ದೇಶದಿಂದ ಹುಬ್ಬಳ್ಳಿಯಲ್ಲಿ ಮೂರು ದಿನಗಳ ಕಾಲ ರಾಜ್ಯ ಮಟ್ಟದ ಹಿಂದೂ ಅಧಿವೇಶನ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯ ಹೊಸ ಬಸ್ ನಿಲ್ದಾಣದ ಹಿಂಬದಿಯಲ್ಲಿರುವ ವಾಸವಿ ಕಲ್ಯಾಣ ಮಂಟಪದಲ್ಲಿ ನವೆಂಬರ್ 8, 9, 10ರಂದು ಅಧಿವೇಶನ ನಡೆಯಲಿದೆ. ಬಂಜಾರ ಸಮಾಜದ ಸೇವಾಲಾಲ್ ಸ್ವಾಮೀಜಿ ಅಧಿವೇಶನಕ್ಕೆ ಚಾಲನೆ ನೀಡುವುದಾಗಿ ತಿಳಿಸಿದರು.
ಮೂರು ದಿನಗಳ ಸಮಾವೇಶದಲ್ಲಿ ದೇಶದ ನಾನಾ ಮೂಲೆಯಿಂದ ವಿವಿಧ ಕ್ಷೇತ್ರದಲ್ಲಿ ಪರಿಣತಿ ಪಡೆದ ಹಾಗೂ ಎಲ್ಲ ಹಿಂದೂ ಸಂಘಟನೆಗಳ ಪ್ರಮುಖರು ಸೇರಿದಂತೆ ಸುಮಾರು 500 ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಹಿಂದೂ ಜನಜಾಗೃತಿ ಸಮಿತಿ ಹಾಗೂ ಶ್ರೀರಾಮ ಸೇನೆ ಅಧಿವೇಶನ ಆಯೋಜಿಸಿದ್ದ ಎಲ್ಲ ಹಿಂದೂ ಸಂಘಟನೆಗಳನ್ನು ಒಂದೇ ವೇದಿಕೆಯಲ್ಲಿ ಜೋಡಿಸುವ ಸದುದ್ದೇಶವನ್ನು ಅಧಿವೇಶನ ಹೊಂದಿದೆ ಎಂದರು.
ಸರ್ಕಾರವು ಜಾತ್ಯತೀತತೆಯ ಹೆಸರಲ್ಲಿ ಅಲ್ಪಸಂಖ್ಯಾತರನ್ನು ಓಲೈಸುವುದಷ್ಟೇ ಅಲ್ಲದೇ ಹಿಂದೂ ಧರ್ಮ, ರಾಷ್ಟ್ರೀಯ ಸಂಕಟಗಳತ್ತ ಹಾಗೂ ಹಿಂದೂ ಧರ್ಮೀಯರ ಮೇಲಿನ ದೌರ್ಜನ್ಯ ನಿರ್ಲಕ್ಷಿಸುತ್ತಿದೆ. ಇದೀಗ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಮತಬ್ಯಾಂಕ್ ಭದ್ರಪಡಿಸಲು ರಾಜ್ಯ ಸರ್ಕಾರ ಮುಸ್ಲಿಂ ಯುವಕರಿಗೆ ಟೂರಿಸ್ಟ್ ವಾಹನ ಖರೀದಿಸಲು ರು. 2 ಲಕ್ಷ ಅನುದಾನ ನೀಡುತ್ತಿದೆ. ಮುಸ್ಲಿಂ ಹೆಣ್ಣು ಮಕ್ಕಳ ಮದುವೆಗೆ ರು. 50 ಸಾವಿರ ನೀಡುವ ಯೋಜನೆ ಜಾರಿಗೆ ತಂದಿದೆ. ಇದೇ ವೇಳೆ ಹಿಂದೂ ಸಂತರ ತೇಜೋವಧೆ ಮಾಡುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ. ಕೇಂದ್ರ ಗೃಹ ಸಚಿವ ಸುಶೀಲಕುಮಾರ ಶಿಂದೆ ಮುಸ್ಲಿಂ ಯುವಕರನ್ನು ವಿನಾಕಾರಣ ಬಂಧಿಸಬೇಡಿ ಎಂದು ಪತ್ರ ಬರೆಯುತ್ತಾರೆ. ರಾಜ್ಯ ಸರ್ಕಾರ ಮಾಟ-ಮಂತ್ರ ಕಾನೂನಿನ ಹೆಸರಿನಲ್ಲಿ ಹಿಂದೂ ಧಾರ್ಮಿಕ ಪದ್ಧತಿಗಳನ್ನು ನಿಷೇಧಿಸುವ ಪ್ರಯತ್ನ ಮಾಡುತ್ತಿದೆ. ತನ್ಮೂಲಕ ಹಿಂದೂ ಸಮಾಜವನ್ನು ದುರ್ಬಲಗೊಳಿಸುವ ಅನೇಕ ಆಕ್ರಮಣಗಳು ನಡೆಯುತ್ತಿದೆ ಎಂದು ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನು ತಡೆಯುವ ನಿಟ್ಟಿನಲ್ಲಿ ಎಲ್ಲ ಹಿಂದೂ ಸಂಘಟನೆಗಳು ಒಟ್ಟಾಗಿ ಹೋರಾಟ ಮಾಡಬೇಕಿದೆ. ಹಿಂದೂ ಶಕ್ತಿಯನ್ನು ಬಲ ಪಡಿಸಲು ಚಿಂತನೆ, ಯೋಜನೆ, ನಿರ್ಧಾರ ಕೈಗೊಳ್ಳಬೇಕಿದೆ. ಹಿಂದೂ ಶಿಕ್ಷಣ ನೀಡಲು ಪಾಲಕರಲ್ಲಿ ಜಾಗೃತಿ ಮೂಡಿಸಬೇಕಿದೆ. ಹಿಂದೂಗಳ ಸಾಮಾಜಿಕ, ರಾಷ್ಟ್ರೀಯ ಮತ್ತು ಧಾರ್ಮಿಕ ಸಮಸ್ಯೆಗಳನ್ನು ದೂರಗೊಳಿಸಲು ಹಿಂದೂರಾಷ್ಟ್ರ ಸ್ಥಾಪಿಸಲು ಪಣ ತೊಡಬೇಕಿದೆ. ಈ ಉದ್ದೇಶದಿಂದ ಹಿಂದೂ ಅಧಿವೇಶನ ಹಮ್ಮಿಕೊಳ್ಳಲಾಗಿದೆ. ಈ ಅಧಿವೇಶನದಲ್ಲಿ ಹಿಂದೂ ಹಿತದ ವಿವಿಧ ವಿಷಯದಲ್ಲಿ ಗಹನವಾದ ಚರ್ಚೆ, ಹಿಂದೂ ರಾಷ್ಟ್ರ ಸ್ಥಾಪನೆಯ ಠರಾವಿನ ನಿರ್ಣಯ ಅಂಗೀಕರಸಲಾಗುವುದು ಎಂದು ಮುತಾಲಿಕ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಪ್ರಮುಖ ಮೋಹನಗೌಡ, ರಮೇಶ ಶಿಂದೆ, ಗಂಗಾಧರ ಕುಲಕರ್ಣಿ, ವೀಣಾ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

