ಸುದ್ದಿ ಸಂಕ್ಷೇಪ
ಇಂದು ನೂಲು ಉತ್ಪಾದನೆ ಘಟಕ ಕಟ್ಟಡ ಉದ್ಘಾಟನೆ
ಧಾರವಾಡ: ಖಾದಿ ಕ್ಷೇತ್ರದಲ್ಲಿ 58 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಇಲ್ಲಿನ ಧಾರವಾಡ ತಾಲೂಕು ಸೇವಾ ಸಂಘವು ಈಗ ನೂಲುಗಾರರಿಗೆ ಹೊಸ ಯಲ್ಲಾಪುರ ರಸ್ತೆ ಬಳಿ ಸುಸಜ್ಜಿತ ಕಟ್ಟಡ ಸೇವಾಸದನ ನಿರ್ಮಿಸಿದ್ದು, ಅ. 20ರಂದು ಈ ಕಟ್ಟಡದ ಉದ್ಘಾಟನೆ ಏರ್ಪಡಿಸಲಾಗಿದೆ. ರು. 15 ಲಕ್ಷ ವೆಚ್ಚದಲ್ಲಿ ಈ ಕಟ್ಟಡ ನಿರ್ಮಾಣಗೊಂಡಿದ್ದು, 20ರಂದು ಸಂಜೆ 4ಕ್ಕೆ ಆಲೂರು ವೆಂಕಟರಾವ್ ಸಭಾಭವನದಲ್ಲಿ ಮುಂಬೈ ಖಾದಿ ಆಯೋಗದ ರಾಷ್ಟ್ರೀಯ ಅಧ್ಯಕ್ಷ ದೇವೇಂದ್ರಬಾಯಿ ದೇಸಾಯಿ ಉದ್ಘಾಟಿಸಲಿದ್ದಾರೆ. ಖಾದಿ ಮಾರಾಟ ಮಳಿಗೆಯನ್ನು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ ಉದ್ಘಾಟಿಸಲಿದ್ದು, ಸಚಿವ ಸಂತೋಷ ಲಾಡ್ ನೂಲುಗರು, ನೇಕಾರರಿಗೆ ಅನುದಾನ ವಿತರಿಸುವರು. ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅಧ್ಯಕ್ಷತೆ ವಹಿಸುತ್ತಾರೆ. ಸಂಸದ ಪ್ರಹ್ಲಾದ ಜೋಶಿ, ವಿಧಾನ ಪರಿಷತ್ ಸದಸ್ಯ ವೀರಣ್ಣ ಮತ್ತಿಕಟ್ಟಿ, ಶಾಸಕ ವಿನಯ ಕುಲಕರ್ಣಿ, ಮಾಜಿ ಶಾಸಕಿ ಸೀಮಾ ಮಸೂತಿ ಭಾಗವಹಿಸುತ್ತಾರೆ. ಇದೇ ಸಂದರ್ಭ ಹಿರಿಯ ಸಾಧಕರಿಗೆ ಸನ್ಮಾನ ಮಾಡಲಾಗುವುದು ಎಂದು ಸಂಸ್ಥೆ ಕಾರ್ಯದರ್ಶಿ ಎನ್.ಕೆ. ಕಾಗಿನೆಲ್ಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 1956ರಲ್ಲಿ ಪ್ರಾರಂಭವಾದ ಈ ಸಂಘವು ಗ್ರಾಮೀಣ ಭಾಗದ ಜನತೆಗೆ ವಿಶೇಷವಾಗಿ ಮಹಿಳಾ ಕಸಬುದಾರರಿಗೆ ಉದ್ಯೋಗಾವಕಾಶ ಒದಗಿಸುವ ಉದ್ದೇಶ ಹೊಂದಿದೆ. ಗರಗ, ಹೆಬ್ಬಳ್ಳಿ ಹಾಗೂ ಅಮ್ಮಿನಬಾವಿಗಳಲ್ಲಿ ಕೇಂದ್ರಗಳನ್ನು ಸ್ಥಾಪಿಸಿ 2000 ಜನರಿಗೆ ಉದ್ಯೋಗಾವಕಾಶ ಒದಗಿಸಿದೆ. 2012-13ರಲ್ಲಿ 53 ಲಕ್ಷ ಉತ್ಪಾದನೆ ಮಾರಾಟ, ರು. 18.10 ಲಕ್ಷ ಕಸಬುದಾರರು ಗಳಿಕೆ ಮಾಡಿದ್ದಾರೆ ಎಂದು ಸಂಸ್ಥೆ ಕುರಿತು ಕಾಗಿನೆಲ್ಲಿ ತಿಳಿಸಿದ್ದಾರೆ.
ಅಹವಾಲು ಸ್ವೀಕಾರ
ಧಾರವಾಡ: ಅನುಸೂಚಿತ ಜಾತಿ-ಪಂಗಡದವರ ಸಮಸ್ಯೆಗಳ ಕುರಿತು ಮನವಿ, ಅಹವಾಲುಗಳನ್ನು ಜಿಪಂ ಸಭಾಭವನದಲ್ಲಿ ಅ. 20ರ ಮಧ್ಯಾಹ್ನ 12.30ಕ್ಕೆ ಅನುಸೂಚಿತ ಜಾತಿ, ಪಂಗಡಗಳ ಕಲ್ಯಾಣ ಸಮಿತಿ ಸಭೆಯಲ್ಲಿ ಸ್ವೀಕರಿಸಲಾಗುವುದು ಎಂದು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದೆ.
ಅಪಘಾತ: ಯುವಕ ಸಾವು
ಧಾರವಾಡ: ಇಲ್ಲಿನ ಸಾಧನಕೇರಿ ಜಂಬಗಿ ಆಸ್ಪತ್ರೆ ಬಳಿ ದ್ವಿಚಕ್ರ ವಾಹನಗಳ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ದ್ವಿಚಕ್ರ ವಾಹನದ ಹಿಂಬದಿ ಸವಾರ ಮೃತಪಟ್ಟಿದ್ದು, ಮೂವರಿಗೆ ಗಾಯಗಳಾದ ಘಟನೆ ಶನಿವಾರ ಸಂಜೆ ನಡೆದಿದೆ. ಇಲ್ಲಿನ ವಿನಾಯಕ ನಗರದ ನಿವಾಸಿ ಹಾಗೂ ಕರ್ನಾಟಕ ಕಾಲೇಜಿನ ವಿದ್ಯಾರ್ಥಿ ನಿಹಾಲ್ ಕಲ್ಲೇಶ್ವರ ಹಳ್ಳಿಕೇರಿ (18) ಮೃತಪಟ್ಟ ದುರ್ದೈವಿ. ಫಯಾಜ್ ನದಾಫ್, ಖಾನಪೂರ ಮೂಲದ ಬಾಬಾಸಾಬ ಸನದಿ ಹಾಗೂ ಆತನ ಪತ್ನಿ ಪೈರೋಜಾ ಎಂಬುವರಿಗೆ ಗಾಯಗಳಾಗಿದ್ದು, ಫಯಾಜ್ ಓಡಿಸುತ್ತಿದ್ದ ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಕುಳಿತಿದ್ದ ನಿಹಾಲ್ ಅಪಘಾತದಲ್ಲಿ ಮೃತಪಟ್ಟಿದ್ದು, ಎದುರಿಗೆ ಹೊರಟಿದ್ದ ಬಾಬಾಸಾಬ ದಂಪತಿಗಳ ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಈ ಸಾವು ಸಂಭವಿಸಿದೆ ಎಂದು ಪ್ರಕರಣ ದಾಖಲಿಸಿಕೊಂಡ ಸಂಚಾರಿ ಪೊಲೀಸ್ ಠಾಣೆ ಪೊಲೀಸರು ಪತ್ರಿಕೆಗೆ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

