ಧಾರವಾಡ

ಟ್ರಾಫಿಕ್ ಕಿರಿಕಿರಿಗೆ ಯಾವಾಗ ಮುಕ್ತಿ?

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಅ. 20
ಹುಬ್ಬಳ್ಳಿ-ಧಾರವಾಡ ಟ್ರಾಫಿಕ್ ಸಮಸ್ಯೆಗೆ ಪರಿಹಾರವೇ ಇಲ್ಲವೇ...?
ಇದು ಅವಳಿ ನಗರದ ಜನರನ್ನು ನಿತ್ಯ ಕಾಡುತ್ತಿರುವ ಪ್ರಶ್ನೆ. ಟ್ರಾಫಿಕ್ ಸಮಸ್ಯೆಯಿಂದ ಜನ ಬೇಸತ್ತಿದ್ದಾರೆ. ಸಂಚಾರಿ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಚಾರಿ ಪೊಲೀಸರು ದಂಡ ಹಾಕುವುದನ್ನು ಬಿಟ್ಟು ಎಂದಿಗೂ ಸುಗಮ ಸಂಚಾರದ ಬಗ್ಗೆ ತಲೆ ಕೆಡಿಸಿಕೊಳ್ಳದಿರುವುದೇ ಸಮಸ್ಯೆಗೆ ಮೂಲ ಕಾರಣ.
ಹುಬ್ಬಳ್ಳಿ-ಧಾರವಾಡದ ಸಂಚಾರಿ ವ್ಯವಸ್ಥೆಗೆ ಅದ್ಯಾರ ಶಾಪ ತಟ್ಟಿದೆಯೋ ಗೊತ್ತಿಲ್ಲ, ಇದು ಸರಿಯಾಗುವ ಲಕ್ಷಣವೇ ಕಾಣುತ್ತಿಲ್ಲ. ಹೊಸದಾಗಿ ಬಂದ ಅಧಿಕಾರಿಗಳು ಕೆಲ ದಿನ ಸಂಚಾರಿ ವ್ಯವಸ್ಥೆ ಸರಿಪಡಿಸಿದಂತೆ ಮಾಡುತ್ತಾರೆಯೇ ವಿನಃ ಶಾಶ್ವತ ಪರಿಹಾರ ಕಂಡುಕೊಳ್ಳುತ್ತಿಲ್ಲ. ಸಂಚಾರಿ ವ್ಯವಸ್ಥೆ ಸರಿಪಡಿಸುವಲ್ಲಿ ನಿರ್ದಿಷ್ಟ ಯೋಜನೆ, ನೀತಿ, ನಿಯಮ ಪಾಲನೆಯಾಗುತ್ತಿಲ್ಲ. ಲೋಪ ಸರಿ ಪಡಿಸುವ ಕೆಲಸವೂ ಆಗುತ್ತಿಲ್ಲ.
45 ಲಕ್ಷ ವಾಹನ: ಮಹಾನಗರಗಳಿಗೆ ಹೋಲಿಸಿದಾಗ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿರುವ ವಾಹನಗಳ ಸಂಖ್ಯೆ ನಗಣ್ಯ. ಅವಳಿ ನಗರದಲ್ಲಿ ಸರಿಸುಮಾರು 45 ಲಕ್ಷ ವಾಹನಗಳಿವೆ. ಪ್ರತಿ ಮೂರು ತಿಂಗಳಿಗೆ ಸುಮಾರು 10 ಸಾವಿರ ವಾಹನಗಳು ಹುಬ್ಬಳ್ಳಿ-ಧಾರವಾಡದ ರಸ್ತೆಗಿಳಿಯುತ್ತವೆ. ವಾಹನಗಳ ಸಂಖ್ಯೆ ಏರುತ್ತಾ ಹೋದಂತೆ ಅವುಗಳ ಓಡಾಟಕ್ಕೆ ಬೇಕಾದ ರಸ್ತೆ, ಪಾರ್ಕಿಂಗ್ ಸೌಲಭ್ಯದಲ್ಲಿ ಮಾತ್ರ ಎಳ್ಳಷ್ಟೂ ಬದಲಾವಣೆ ಆಗದಿರುವುದು ವಿಪರ್ಯಾಸವೇ ಸರಿ.
ಹೊಂದಾಣಿಕೆ ಇಲ್ಲ: ಸುಗಮ ಸಂಚಾರ ಕಲ್ಪಿಸುವ ಜವಾಬ್ದಾರಿ ಕೇವಲ ಪೊಲೀಸರ ಮೇಲಿಲ್ಲ, ಮಹಾನಗರ ಪಾಲಿಕೆಯೂ ಇದಕ್ಕೆ ಹೊಣೆಯಾಗುತ್ತದೆ. ಸಂಚಾರಿ ವ್ಯವಸ್ಥೆ ಬಲ ಪಡಿಸುವ ಉದ್ದೇಶದಿಂದ ಪಾಲಿಕೆ ಹಾಗೂ ಪೊಲೀಸ್ ಅಧಿಕಾರಿಗಳ ನಡುವೆ ಸಭೆ ನಡೆದ ಉದಾಹರಣೆಯೇ ಅತ್ಯಲ್ಪ.
ಹುಬ್ಬಳ್ಳಿ-ಧಾರವಾಡದಲ್ಲಿ ಸುಮಾರು 150ಕ್ಕೂ ಹೆಚ್ಚು ಪಾರ್ಕಿಂಗ್ ಸ್ಥಳಗಳಿವೆ. 45 ಲಕ್ಷ ವಾಹನಗಳಿಗೆ ಹೋಲಿಸಿದಾಗ ಪಾರ್ಕಿಂಗ್ ಜೋನ್‌ಗಳ ಸಂಖ್ಯೆ ತೀರಾ ಕಡಿಮೆ. ಅಂದಹಾಗೆ ಅಧಿಕೃತವಾಗಿ 150 ಪಾರ್ಕಿಂಗ್ ಸ್ಥಳಗಳನ್ನು ಗುರುತು ಮಾಡಿದ್ದು ಓಬಿರಾಯನ ಕಾಲದಲ್ಲಿ. ಹೊಸ ಪಾರ್ಕಿಂಗ್ ಸ್ಥಳಗಳನ್ನು ಗುರುತಿಸುವ ಕಾರ್ಯಕ್ಕೆ ಪಾಲಿಕೆ ಮುಂದಾಗಿಲ್ಲ, ಪೊಲೀಸ್ ಅಧಿಕಾರಿಗಳೂ ಬೇಡಿಕೆಯನ್ನಿಟ್ಟು ಜಾರಿಗೆ ಒತ್ತಾಯಿಸಿಲ್ಲ. ವಾಹನ ದಟ್ಟಣೆ ತಗ್ಗಿಸಲು ಹೊಸದಾಗಿ ಒನ್ ವೇ ಮಾರ್ಗ ಗುರುತು ಮಾಡಿದ ಉದಾಹರಣೆಯೇ ಇಲ್ಲ. ಹೀಗೆ ಯರ್ರಾಬಿರ್ರಿಯಾಗಿ ಎಲ್ಲ ವಾಹನಗಳು ನಗರದೊಳಕ್ಕೆ ನುಗ್ಗುವುದರಿಂದ ಟ್ರಾಫಿಕ್ ಜಾಮ್ ಆಗುತ್ತಿದೆ.
ನಿಯಮ ಉಲ್ಲಂಘನೆ: ಇರುವ ವ್ಯವಸ್ಥೆಯಲ್ಲಿಯೇ ಸುಗಮ ಸಂಚಾರಕ್ಕೆ ಪೊಲೀಸರು ಕ್ರಮ ಕೈಗೊಳ್ಳಬಹುದು. ಪಾರ್ಕಿಂಗ್ ಸ್ಥಳಗಳಲ್ಲಿ ಅದೆಷ್ಟೋ ವಾಹನಗಳನ್ನು ಮನ ಬಂದಂತೆ ನಿಲ್ಲಿಸಲಾಗಿರುತ್ತದೆ. ರಸ್ತೆಯ ಮಧ್ಯದಲ್ಲಿ ವಾಹನ ಪಾರ್ಕ್ ಮಾಡಿ ಹೋಗುವುದರಿಂದ ಹಿಂಬದಿಯ ವಾಹನಗಳಿಗೆ ದಾರಿಯಿಲ್ಲದಂತಾಗುತ್ತದೆ. ಪ್ರಮುಖವಾಗಿ ನೋ ಪಾರ್ಕಿಂಗ್ ಬೋರ್ಡ್ ಹೊಂದಿಕೊಂಡಂತೆ ಅನೇಕ ವಾಹನಗಳನ್ನು ಪಾರ್ಕ್ ಮಾಡಲಾಗುತ್ತದೆ. ನಿಯಮ ಉಲ್ಲಂಘಿಸುವ ಇಂಥ ವಾಹನ ಮಾಲೀಕರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವ ಕೆಲಸ ಆಗುತ್ತಿಲ್ಲ.
ಆಟೋ ಕಿರಿಕಿರಿ: ಇನ್ನು ನಗರದಲ್ಲಿ ಆಟೋಗಳ ಕಿರಿಕಿರಿಯಂತೂ ಹೇಳತೀರದು. ನಿಯಮ ಉಲ್ಲಂಘಿಸುವುದೆಂದರೆ ಆಟೋಗಳಿಗೆ ಸಲೀಸು. ನೋ ಪಾರ್ಕಿಂಗ್ ಸ್ಥಳದಲ್ಲಿ ಆಟೋ ಪಾರ್ಕ್ ಮಾಡುವುದು, ಸಿಗ್ನಲ್ ಬಳಿ ಸುತ್ತಾಡುತ್ತ ಹಿಂಬದಿಯ ವಾಹನಗಳ ಓಡಾಟಕ್ಕೆ ಅಡೆತಡೆಯುಂಟು ಮಾಡುವುದು, ಒನ್ ವೇ ನಿಯಮ ಉಲ್ಲಂಘಿಸುವುದು, ಬೇಕಾಬಿಟ್ಟಿಯಾಗಿ ಪ್ರಯಾಣಿಕರನ್ನು ಹತ್ತಿಸುವುದು ನಿತ್ಯದ ರಗಳೆ.
ಬಹುಶಃ ಅವಳಿ ನಗರದಲ್ಲಿ ಸಂಚಾರಿ ವ್ಯವಸ್ಥೆ ಉಸಿರುಗಟ್ಟುವಂತೆ ಮಾಡಿದ್ದೇ ಆಟೋಗಳು ಎಂದರೂ ತಪ್ಪಾಗಲಾರದು.
ಆಟೋಗಳಿಗಾಗೇ ಪ್ರತ್ಯೇಕ ಸ್ಟ್ಯಾಂಡ್ ಇದ್ದರೂ ಈ ಪೈಕಿ ಕೆಲವರು ಬಾಡಿಗೆ ಗಿಟ್ಟಿಸಿಕೊಳ್ಳಲು ಸ್ಟ್ಯಾಂಡ್‌ನಲ್ಲಿ ನಿಲ್ಲುವುದೇ ಇಲ್ಲ. ಆಟೋಗಳ ಆಟಾಟೋಪಕ್ಕೆ ಕಡಿವಾಣ ಹಾಕಿದರೆ ಹುಬ್ಬಳ್ಳಿ-ಧಾರವಾಡದ ಅರ್ಧದಷ್ಟು ಟ್ರಾಫಿಕ್ ಕಿರಿಕ್ ಕಡಿಮೆಯಾಗುತ್ತದೆ.
ಹೀಗೆ ಮಾಡಿ...
ಹೀಗೆ ಮಾಡಿ...
 ನಿಗದಿತ ಸ್ಥಳದಲ್ಲಿಯೇ ವಾಹನ ಪಾರ್ಕ್ ಮಾಡಿ.
 ಅವಸರದಲ್ಲಿ ಬೇಕಾಬಿಟ್ಟಿ ಪಾರ್ಕ್ ಮಾಡುವ ವಾಹನಗಳಿಂದ ಇತರ ವಾಹನಗಳಿಗೆ ತೊಂದರೆಯಾಗುತ್ತದೆ.
 ನೋ ಪಾರ್ಕಿಂಗ್ ಹಾಗೂ ಜನದಟ್ಟಣೆ ಮತ್ತು ವಾಹನ ದಟ್ಟಣೆ ಪ್ರದೇಶದಲ್ಲಿ ವಾಹನ ಪಾರ್ಕ್ ಮಾಡಬೇಡಿ.
 ಪಾದಚಾರಿ ಮಾರ್ಗದಲ್ಲಿ ವಾಹನ ಪಾರ್ಕ್ ಮಾಡಬೇಡಿ.
 ಪಾರ್ಕಿಂಗ್‌ಗೆ ಮೀಸಲಿಟ್ಟ ಜಾಗ ಪರ್ಯಾಯ ಬಳಕೆಗೆ ಬೇಡ.
 ವಾಹನಗಳ ಪಾರ್ಕಿಂಗ್‌ಗಾಗಿ ಬಹುಮಹಡಿ ಕಟ್ಟಡ ನಿರ್ಮಿಸಬೇಕು.
ಎಲ್ಲೆಲ್ಲಿ ಸಮಸ್ಯೆ
ಹುಬ್ಬಳ್ಳಿ-ಧಾರವಾಡದ ಎಲ್ಲ ಸ್ಥಳಗಳಲ್ಲೂ ಸಂಚಾರಿ ಸಮಸ್ಯೆ ಇದೆ. ಈ ಪೈಕಿ ಹುಬ್ಬಳ್ಳಿಹೃದಯಭಾಗ ಹಳೇ ಬಸ್ ನಿಲ್ದಾಣ, ಹೊಸೂರು ಸರ್ಕಲ್, ವಿದ್ಯಾನಗರ, ಕೆಎಂಸಿ, ಕಾಟನ್ ಮಾರ್ಕೇಟ್, ಶಾರದಾ ಹೋಟೆಲ್ ಸರ್ಕಲ್, ಸರ್ಕ್ಯೂಟ್ ಹೌಸ್ ರೋಡ್, ದೇಸಾಯಿ ಸರ್ಕಲ್, ಸರ್ವೋದಯ ಸರ್ಕಲ್, ಕೋರ್ಟ್ ಸರ್ಕಲ್, ಸಂಗೊಳ್ಳಿ ರಾಯಣ್ಣ ಸರ್ಕಲ್, ದಾಜಿಬಾನಪೇಟೆ, ಮ್ಯಾದಾರ ಓಣಿ, ದುರ್ಗದ ಬೈಲ್, ಜವಳಿ ಸರ್ಕಲ್, ಘಂಟಿಕೇರಿ ಪೊಲೀಸ್ ಸ್ಟೇಶನ್ ಬಳಿ, ಸಿಬಿಟಿ, ಕೊಪ್ಪಿಕರ ರಸ್ತೆ, ಕೋಯಿನ್ ರಸ್ತೆ, ಗಣೇಶ ಪೇಟೆ ಸರ್ಕಲ್, ಸ್ಟೇಶನ ರಸ್ತೆಯಲ್ಲಿ ತೀವ್ರ ಟ್ರಾಫಿಕ್ ಜಾಮ್ ಆಗುತ್ತದೆ. ಇನ್ನು ಧಾರವಾಡದ ಟೋಲ್ ನಾಕಾ, ಎನ್‌ಟಿಟಿಎಫ್, ಕೋರ್ಟ್ ಸರ್ಕಲ್, ಆಲೂರು ವೆಂಕಟರಾವ್ ವೃತ್ತ, ಸುಭಾಷ ರಸ್ತೆ, ಹಳೆ ಹಾಗೂ ಸಿಬಿಟಿ ಬಸ್ ನಿಲ್ದಾಣ, ಶಿವಾಜಿ ಸರ್ಕಲ್, ಟಿಕಾರೆ ರಸ್ತೆ, ಹಳೆ ಎಸ್ಪಿ ಕಚೇರಿ ಬಳಿ ಟ್ರಾಫಿಕ್ ಜಾಮ್ ಮಾಮೂಲಿ.

ಪ್ರಕಾಶ ಎಸ್. ಶೇಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.