ರೈತರಲ್ಲಿ ಆಶಾವಾದ ಮೂಡಿಸಿದ ಚಿತ್ತಿ ಮಳೆ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಅ. 24
ಬಂಗಾಲ ಉಪಸಾಗರದಲ್ಲಿ ವಾಯುಭಾರ ಕುಸಿತದಿಂದ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಚಿತ್ತಿ ಮಳೆ ಜಿಲ್ಲೆಯ ಹಿಂಗಾರು ಕೃಷಿ ಚಟುವಟಿಕೆಗೆ ಮತ್ತಷ್ಟು ಚುರುಕು ನೀಡಿದೆ.
ಈ ಮಳೆ ಇನ್ನೂ ಎರಡ್ಮೂರು ದಿನ ಮುಂದುವರೆಯುವ ಲಕ್ಷಣ ಇರುವುದಾಗಿ ಹವಮಾನ ಇಲಾಖೆ ನೀಡಿರುವ ಮುನ್ಸೂಚನೆ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರು ಕೃಷಿ ಚಟುವಟಿಕೆಗಳ ಪೂರ್ವ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ಈ ಬಾರಿ 1,91,115 ಹೆಕ್ಟೇರ್ ಕೃಷಿ ಜಮೀನಿನಲ್ಲಿ ಹಿಂಗಾರು ಬಿತ್ತನೆಯಾಗುವ ಗುರಿಯನ್ನು ಜಿಲ್ಲಾ ಕೃಷಿ ಇಲಾಖೆ ಹೊಂದಿದ್ದು, ಇದರಲ್ಲಿ ಈಗಾಗಲೇ 89 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಜಮೀನಿನಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಆದರೆ, ಸಮರ್ಪಕ ಮಳೆಯಾಗದೇ ಇದ್ದ ಕಾರಣ ಹಿಂಗಾರು ಬೆಳೆ ಕೈಗೆಟುಕುವ ಬಗ್ಗೆ ರೈತರಲ್ಲಿ ಆತಂಕ ಮನೆ ಮಾಡಿತ್ತು.
ಬಿತ್ತನೆಯಾಗದ ಜಮೀನನ್ನು ಸಾಕಷ್ಟು ಹದಗೊಳಿಸಲೂ ತೇವಾಂಶ ಕಡಿಮೆ ಇದ್ದ ಕಾರಣ ಹಿಂಗಾರು ಬಿತ್ತನೆ ಮಾಡುವ ಬಗ್ಗೆಯೂ ರೈತರು ಗೊಂದಲದಲ್ಲಿದ್ದರು. ಆದರೆ ಬಂಗಾಲ ಉಪಸಾಗರದಲ್ಲಿ ಉಂಟಾದ ವಾಯುಭಾರ ಕುಸಿತ ರೈತರಲ್ಲಿ ಹೊಸ ಕಳೆ ಮೂಡಿಸಿದೆ.
ಹಿಂಗಾರು ಬಿತ್ತನೆಗೆ ಸಾಕಷ್ಟು ಮಳೆಯಾಗದ ಕಾರಣ ರೈತ ಚಿಂತಾಕ್ರಾಂತನಾಗಿದ್ದ. ಈಗಾಗಲೇ ಬಿತ್ತಿದ ಬೀಜ ಮೊಳಕೆಯೊಡೆಯಬೇಕಿದ್ದರೆ ಮಳೆಯ ಅವಶ್ಯಕತೆ ಇತ್ತು. ಬಿತ್ತದೇ ಇರುವ ಕೃಷಿ ಜಮೀನುಗಳನ್ನು ಹದಗೊಳಿಸಲೂ ಮಳೆ ಬೇಕಾಗಿತ್ತು.
ಬೀಜಕ್ಕೆ ಹೊಸ ಜೀವ: ಬಿತ್ತನೆಯಾಗಿ ಕಮರುವ ಸ್ಥಿತಿಯಲ್ಲಿದ್ದ ಬೀಜಗಳಿಗೆ ಈ ಮಳೆ ಹೊಸ ಜೀವ ನೀಡಿದೆ. ಕೃಷಿ ಜಮೀನು ಸಾಕಷ್ಟು ಹದಗೊಂಡಿದ್ದು, ಮಳೆ ನಿಂತ ತಕ್ಷಣ ಭೂಮಿ ಹದಗೊಳಿಸಿ ಬಿತ್ತನೆ ನಡೆಸುವ ಸಿದ್ಧತೆಯಲ್ಲಿ ಅನ್ನದಾತರು ತೊಡಗಿಕೊಂಡಿದ್ದಾರೆ.
ನವಲಗುಂದ ತಾಲೂಕಿನಲ್ಲಿ ತಡವಾಗಿ ಬಿತ್ತನೆಯಾಗುವ ಸಾಧ್ಯತೆ ಇದ್ದು, ನ. 15ರೊಳಗೆ ಜಿಲ್ಲೆಯಾದ್ಯಂತ ಹಿಂಗಾರು ಬಿತ್ತನೆ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಕೃಷಿ ಇಲಾಖೆ ಅಧಿಕಾರಿ ಗಡಾದ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಜೋಳ, ಗೋದಿ, ಕಡಲೆ, ಜಯಧರ ಹತ್ತಿ, ಸೂರ್ಯಕಾಂತಿ, ಕುಸುಬಿ ಸೇರಿದಂತೆ ಇತರ ಹಿಂಗಾರು ಬೆಳೆಗಳ ಬಿತ್ತನೆಗೆ ಹಾಗೂ ಈಗಾಗಲೇ ಬಿತ್ತನೆಯಾದ ಬೀಜ ಮೊಳಕೆಯೊಡೆಯಲು ಚಿತ್ತಿ ಮಳೆ ಹೆಚ್ಚು ಅನುಕೂಲಕಾರಿ.
ಅಕ್ಟೋಬರ್ ಅಂತ್ಯದವರೆಗೆ ಸುರಿಯುವ ಮಳೆಯ ನಂತರ ಮುಂದಿನ ಇನ್ನಾವುದೇ ಮಳೆಗಳು ಸುರಿಯುವ ಖಚಿತತೆ ಇರುವುದಿಲ್ಲ. ಹವಾಮಾನದಲ್ಲಿ ಏರುಪೇರುಗಳಾದಲ್ಲಿ ಮಾತ್ರ ಮಳೆ ಸುರಿಯುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಬಂಗಾಲ ಉಪಸಾಗರದಲ್ಲಿ ವಾಯುಭಾರ ಕುಸಿತವಾಗದಿದ್ದರೆ ಚಿತ್ತಿ ಮಳೆ ಸುರಿಯುವ ಸಾಧ್ಯತೆ ತೀರ ಕಡಿಮೆ ಇತ್ತು. ಇದರ ನೇರ ಪರಿಣಾಮ ಹಿಂಗಾರು ಬೆಳೆಗಳ ಮೇಲಾಗಿ, ಬೆಳೆ ಕೈಗೆಟುಕದೇ ರೈತ ಕಂಗಾಲಾಗುವ ಪರಿಸ್ಥಿತಿ ಎದುರಾಗುತ್ತಿತ್ತು. ಆದರೆ, ಚಿತ್ತಿ ಮಳೆ ಸುರಿದಿದ್ದರಿಂದ ಬಿತ್ತದ ಬೆಳೆ ಮೊಳಕೆಯೊಡೆದಿದ್ದಲ್ಲದೇ, ಬಿತ್ತನೆಯಾಗದ ಕೃಷಿ ಜಮೀನು ಹದಗೊಳಿಸಿ ಬಿತ್ತನೆ ಮಾಡಲೂ ರೈತರಿಗೆ ಸಹಾಯವಾದಂತಾಯಿತು.
ರೈತರ ಮೊಗದಲ್ಲಿದ್ದ ಚಿಂತೆ ಮಾಯ ಮಾಡಿದ ಚಿತ್ತಿ ಮಳೆ, ಹಿಂಗಾರು ಬೆಳೆ ಕೈಗೆಟುಕುವ ಆಶಾವಾದ ಮೂಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

