ಧಾರವಾಡ

ಹೈ. ನ್ಯಾಯಾಧೀಶರಾಗಿ ಪ್ರದೀಪ ವೈಂಗಣಕರ್

Published On :

ಕಾರವಾರ: ಮೂಲತಃ ಕಾರವಾರದ ನ್ಯಾ. ಪ್ರದೀಪ ಡಿ. ವೈಂಗಣಕರ್ ಹೈಕೋರ್ಟ್ನ ನ್ಯಾಯಾಧೀಶರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ಅವರು ಪ್ರಮಾಣ ವಚನ ಬೋಧಿಸಿದರು. ಪ್ರಸ್ತುತ ನ್ಯಾ. ಪ್ರದೀಪ ಡಿ. ವೈಂಗಣಕರ್ ಹೈಕೋರ್ಟ್ನಲ್ಲಿ ರೆಜಿಸ್ಟ್ರಾರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಕಾರವಾರದಲ್ಲಿ ಜನಿಸಿ, ಕನ್ನಡ ಮಾಧ್ಯಮದಲ್ಲಿ ಕಲಿತು ಗೋವಾದ, ಮುಂಬಯಿ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಶಿಕ್ಷಣ ಪೂರೈಸಿದ್ದರು. ಬೆಳಗಾವಿ ಜ್ಯೋತಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ 2 ವರ್ಷ ಸೇವೆ ಸಲ್ಲಿಸಿದರು. ನಂತರ ಬೆಳಗಾವಿಯ ಬಿ.ವಿ. ಬೆಲ್ಲದ ಕಾಲೇಜಿನಲ್ಲಿ ಕಾನೂನು ಶಿಕ್ಷಣ ಪಡೆದಿದ್ದರು. ಅವರು ಬೆಂಗಳೂರು, ಮಂಡ್ಯ, ಧಾರವಾಡ ಜಿಲ್ಲೆಯಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದಾರೆ. ಕಾರವಾರದವರು ಹೈಕೋರ್ಟ್ನ ನ್ಯಾಯಾಧೀಶರಾಗಿ ನೇಮಕವಾಗಿರುವುದರಿಂದ ಸ್ಥಳೀಯರು ಹರ್ಷ ವ್ಯಕ್ತಪಡಿಸಿದ್ದಾರೆ. ಕುಟುಂಬದವರು ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದ್ದಾರೆ.
ನೇಮಕಾತಿಯಲ್ಲಿ ಖರ್ಗೆಯಿಂದ ಅನ್ಯಾಯ
ಹುಬ್ಬಳ್ಳಿ: ನೈಋತ್ಯ ರೇಲ್ವೆ ವಲಯದ ಡಿ ದರ್ಜೆ ನೌಕರರ ನೇಮಕಾತಿಯಲ್ಲಿ ತಮ್ಮ ಭಾಗದ ಜನರಿಗೆ ಉದ್ಯೋಗಾವಕಾಶ ಕಲ್ಪಿಸುವುದಕ್ಕೆ ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹುನ್ನಾರ ಮಾಡಿದ್ದಾರೆ ಎಂದು ನೈಋತ್ಯ ರೇಲ್ವೆ ವಲಯ ಮಜ್ದೂರ್ ಯೂನಿಯನ್ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಎಂ. ಡಿಕ್ರೂಜ್ ಆರೋಪಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ನೈಋತ್ಯ ರೇಲ್ವೆ ವಲಯಕ್ಕೆ ಸೇರ್ಪಡದ ಗುಲ್ಬರ್ಗದಲ್ಲಿ ಡಿ ದರ್ಜೆ ನೌಕರರ ನೇಮಕಾತಿಗೆ ಪರೀಕ್ಷಾ ಕೇಂದ್ರ ತೆರೆದು ಅಲ್ಲಿನ ಜನರಿಗೆ ರೇಲ್ವೆ ಇಲಾಖೆಯಲ್ಲಿ ಉದ್ಯೋಗ ಕಲ್ಪಿಸುವ ಕೆಲಸವನ್ನು ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಮಾಡುತ್ತಿದ್ದಾರೆ. ನೈಋತ್ಯ ರೇಲ್ವೆ ವಲಯದ ವ್ಯಾಪ್ತಿಗೆ ಹುಬ್ಬಳ್ಳಿ, ಮೈಸೂರು ಮತ್ತು ಬೆಂಗಳೂರು ವಲಯಗಳು ಮಾತ್ರ ಬರುತ್ತಿವೆ. ಈ ವಲಯಕ್ಕೆ ಸಂಬಂಧವಿರದ ಗುಲ್ಬರ್ಗದಲ್ಲಿ ನೈಋತ್ಯ ವಲಯಕ್ಕೆ ಸಂಬಂಧಿಸಿದ ನೇಮಕಾತಿ ಪರೀಕ್ಷೆ ಕೇಂದ್ರ ತೆರೆದು ಹುಬ್ಬಳ್ಳಿ ಭಾಗದ ಯುವಕರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಸೆಂಟ್ರಲ್ ರೇಲ್ವೆ ವ್ಯಾಪ್ತಿಯಲ್ಲೂ ಡಿ ದರ್ಜೆ ನೌಕರರ ನೇಮಕಾತಿ ನಡೆಯುತ್ತಿದ್ದು, ಕಳೆದ ಮೂರು ವರ್ಷಗಳಿಂದ ನಡೆಯುತ್ತಿದ್ದ ನೇಮಕಾತಿ ಪರೀಕ್ಷಾ ಕೇಂದ್ರವನ್ನು ಮಲ್ಲಿಕಾರ್ಜುನ ಖರ್ಗೆ ಅವರು ಎತ್ತಂಗಡಿ ಮಾಡಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.  ಅ. 27ರಿಂದ ಮೈಸೂರು, ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಡಿ. ದರ್ಜೆ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆ ನಡೆಯಲಿದ್ದು, ಅದರಲ್ಲಿ ನೈಋತ್ಯ ವಲಯಕ್ಕೆ ಸೇರ್ಪಡೆಯಾಗದ ಗುಲ್ಬರ್ಗದಲ್ಲೂ ಪರೀಕ್ಷಾ ಕೇಂದ್ರ ತೆರೆದು ನೇಮಕಾತಿಯಲ್ಲಿ ಅಕ್ರಮ ನಡೆಯುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕನ್ನಡಿಗರ ಬಗ್ಗೆ ನಿಜವಾದ ಕಾಳಜಿ ಇದ್ದಲ್ಲಿ, ಆಯಾ ಭಾಗದ ಕನ್ನಡಿಗರನ್ನು ಡಿ ದರ್ಜೆ ನೌಕರರ ಹುದ್ದೆಗೆ ನೇಮಕ ಮಾಡುವ ಮೂಲಕ ಕಾಳಜಿ ತೊರಲಿ ಅದು ಬಿಟ್ಟು ಕೇವಲ ಗುಲ್ಬರ್ಗ ಮತ್ತು ಬೀದರ್ ಭಾಗದ ಜನರನ್ನು ತೃಪ್ತಿಗೊಳಿಸುವುದು ಸರಿಯಲ್ಲ ಎಂದು ಆರೋಪಿಸಿದ್ದಾರೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.