ಧಾರವಾಡ

ಶವ ಸಾಗಿಸುವ ವಾಹನವೇ ಮರಣ ಸ್ಥಿತಿಗೆ

Published On :

ಎಂಟು ತಿಂಗಳ ಹಿಂದೆ ಶ್ರದ್ಧಾಂಜಲಿ ವಾಹನವಾಗಿ ಪರಿವರ್ತನೆಗೊಂಡ ಧಾರವಾಡ ನಗರದ ಪಾಲಿಕೆ ಸದಸ್ಯರನ್ನು ಕರೆತರುತ್ತಿದ್ದ ವಾಹನ ಇಲ್ಲಿಯವರೆಗೆ ಒಂದೇ ಒಂದು ಶವ ಸಾಗಿಸಿದ ಉದಾಹರಣೆ ಇಲ್ಲ.
ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಗೆ ಧಾರವಾಡ ನಗರ ವ್ಯಾಪ್ತಿಯ ಪಾಲಿಕೆ ಸದಸ್ಯರನ್ನು ಹುಬ್ಬಳ್ಳಿಗೆ ಕರೆತರುವುದಕ್ಕೆ ಟೆಂಪೋ ಉಪಯೋಗಿಸಲಾಗುತ್ತಿತ್ತು. ಆದರೆ, ಇಂದು ಕಾರ್ಪೋರೇಟರ್ಗಳು ಕೂಡ ಲಕ್ಷಾಂತರ ಮೌಲ್ಯದ ಕಾರುಗಳನ್ನು ಬಳಸುತ್ತಿದ್ದಾರೆ. ಹೀಗಾಗಿ ಪಾಲಿಕೆ ಸದಸ್ಯರಿಗೆ ಬೇಡವಾಗಿದ್ದ ಈ ವಾಹನವನ್ನು ಹೇಗಾದರೂ ಸದುಪಯೋಗ ಮಾಡಬೇಕು ಎಂದು ಪಾಲಿಕೆ ಅಧಿಕಾರಿಗಳು ಈ ವಾಹನಕ್ಕೆ ಶ್ರದ್ಧಾಂಜಲಿ ವಾಹನ ಎಂದು ಮರುನಾಮಕರಣ ಮಾಡಿ ಸಾವಿರಾರು ಖರ್ಚು ಮಾಡಿ ಬಣ್ಣ ಹಾಕಿ ಸಿಂಗಾರ ಮಾಡಿದರು.
ಅಧಿಕಾರಿಗಳ ನಿಷ್ಕಾಳಜಿ: ಆದರೆ, ವಾಹನ ಎಂಟು ತಿಂಗಳಿನಿಂದ ನಿಂತ ಜಾಗ ಬಿಟ್ಟು ಕದಲಿಲ್ಲ. ಏಕೆಂದರೆ ಪಾರ್ಥಿವ ಶರೀರ ಸಾಗಿಸುವುದಕ್ಕೆ ಸಾರ್ವಜನಿಕರಿಂದ ಕರೆ ಬಂದಿಲ್ಲ. ಹೀಗಾಗಿ ಹೊಸ ರೂಪ ಪಡೆದರೂ ಶವ ಸಾಗಿಸುವ ವಾಹನದ ಸದುಪಯೋಗವಾಗುತ್ತಿಲ್ಲ. ಅಂತ್ಯ ಸಂಸ್ಕಾರಕ್ಕೆ ಪಾರ್ಥಿವ ಶರೀರ ಸಾಗಿಸುವುದಕ್ಕೆ ಮಹಾನಗರ ಪಾಲಿಕೆ ವ್ಯವಸ್ಥೆ ಮಾಡಿದ್ದರೂ ಜನರಿಂದ ಸಕಾರಾತ್ಮಕ ಸ್ಪಂದನೆ ದೊರೆಯುತ್ತಿಲ್ಲ. ಏಕೆ ದೊರೆಯುತ್ತಿಲ್ಲ ಎಂದು ಅಧಿಕಾರಿಗಳನ್ನು ಕೇಳಬೇಕು ಎಂದರೆ ಪಾಲಿಕೆ ಆಯುಕ್ತ ರಮಣದೀಪ ಚೌಧರಿ ಅವರಿಂದ ಹಿಡಿದು ವಿಶೇಷ ಅಧಿಕಾರಿ ಕೂಡ ಫೋನ್ ಕರೆಗೆ ಸಿಗುತ್ತಿಲ್ಲ. ಫೋನ್ ಕರೆ ಮಾಡಿದರೆ ಒಂದು ಬ್ಯುಸಿ ಇಲ್ಲವೇ ನೀವು ಕರೆ ಮಾಡಿರುವ ಚಂದಾದಾರರು ಸದ್ಯ ನಿಮ್ಮ ಕರೆ ಸ್ವೀಕರಿಸುತ್ತಿಲ್ಲ ಎಂಬ ಸಂದೇಶ ಬಿತ್ತರವಾಗುತ್ತದೆ.
ಧೂಳು ತಿನ್ನುತ್ತಿರುವ ಕಾರುಗಳು: ದುಸ್ಥಿತಿ ಕೇವಲ ಶ್ರದ್ಧಾಂಜಲಿ ಸಲ್ಲಿಸುವ ವಾಹನಕ್ಕೆ ಅಷ್ಟೇ ಬಂದಿಲ್ಲ. ಒಂದು ಕಾಲದಲ್ಲಿ ರಾಜಕಾರಣಿಗಳ ಅಚ್ಚುಮೆಚ್ಚಿನವಾಗಿದ್ದ ಅಂಬಾಸಡರ್ ಕಾರುಗಳು ಕೂಡ ಪಾಲಿಕೆ ಆವರಣದಲ್ಲಿ ಸಾಲಾಗಿ ನಿಂತು ಧೂಳು ತಿನ್ನುತ್ತಿವೆ. ಸುಮಾರು ಆರಕ್ಕೂ ಹೆಚ್ಚು ಕಾರು, ಜೀಪುಗಳು ಉಪಯೋಗವಿಲ್ಲದೆ ಧೂಳು ತಿನ್ನುತ್ತಿದ್ದು, ಕೆಲವೊಂದು ವಾಹನಗಳಂತೂ ತುಕ್ಕು ಹಿಡಿದು ಗುಜರಿ ಸೇರುವ ಸ್ಥಿತಿಗೆ ತಲುಪಿವೆ.
ಸಹಾಯವಾಣಿ ಬ್ಯುಸಿ: ಮಹಾನಗರ ಪಾಲಿಕೆಯ ಶ್ರದ್ಧಾಂಜಲಿ ವಾಹನದ ಮೇಲೆ ನಮೂದಿಸಿರುವ ಸಹಾಯವಾಣಿಯ ಮೂರು ದೂರವಾಣಿಗಳಿಗೆ ಕರೆ ಮಾಡಿ ಅಂತ್ಯಸಂಸ್ಕಾರಕ್ಕೆ ವಾಹನ ಬುಕ್ ಮಾಡುವುದು ಸಾಧ್ಯವೇ ಇಲ್ಲ. ಏಕೆಂದರೆ ಈ ಮೂರು ದೂರವಾಣಿಗಳು ಸದಾಕಾಲ ಸಂಭಾಷಣೆಯಲ್ಲಿ ನಿರತವಾಗಿರುತ್ತವೆ. ಹೀಗಾಗಿ ಅಂತ್ಯಸಂಸ್ಕಾರಕ್ಕೆ ಇನ್ನಿತರ ತಯಾರಿ ಮಾಡಿಕೊಳ್ಳಬೇಕಿರುವ ಅನಿವಾರ್ಯತೆಯಲ್ಲಿರುವ ಮೃತನ ಸಂಬಂಧಿ ಪಾಲಿಕೆ ಶ್ರದ್ಧಾಂಜಲಿ ವಾಹನದ ಸಹವಾಸ ಬೇಡವೇ ಬೇಡ ಎಂದುಕೊಂಡು ಪರ್ಯಾಯ ಆಯ್ಕೆಯತ್ತ ಗಮನ ಹರಿಸುತ್ತಾರೆ.
ಸುಸಜ್ಜಿತ ವ್ಯವಸ್ಥೆ: ಮಹಾನಗರ ಪಾಲಿಕೆಯ ತುಕ್ಕು ಹಿಡಿದ ಈ ವಾಹನಕ್ಕಿಂತ ಹುಬ್ಬಳ್ಳಿಯ ಮೂರುಸಾವಿರಮಠದ ವಾಹನ, ಖಾಸಗಿ ಆಸ್ಪತ್ರೆಗಳ ವಾಹನಗಳು ಅತ್ಯಂತ ಸುಸಜ್ಜಿತವಾಗಿವೆ. ಕೆಲವೊಂದು ವಾಹನಗಳಲ್ಲಂತೂ ರಾಮನಾಮ, ಶಿವನಾಮ ಜಪ ಸ್ಪೀಕರ್ ಮುಖಾಂತರ ಪಾರ್ಥಿವ ಶರೀರ ಸಾಗಿಸುವ ಸಂದರ್ಭದಲ್ಲಿ ಬಿತ್ತರವಾಗುತ್ತಿರುತ್ತದೆ.
ಶ್ರದ್ಧಾಂಜಲಿ ಸೇವೆಯಲ್ಲಿಲ್ಲ: ಎಲ್ಲದಕ್ಕಿಂತ ದುರಾದೃಷ್ಟ ಎಂದರೆ ಶ್ರದ್ಧಾಂಜಲಿ ವಾಹನದ ಮೇಲೆ ನಮೂದಿಸಿರುವ ದೂರವಾಣಿಗೆ ಕರೆ ಮಾಡಿ ಶ್ರದ್ಧಾಂಜಲಿ ವಾಹನ ಬೇಕಿತ್ತು ಸರ್ ಎಂದರೆ, ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂಬ ಸಿಡಿಲುತ್ತರ ಬರುತ್ತದೆ. ಅಲ್ಲಿಗೆ ನೀವು ಸುಮ್ಮನಾಗದೇ ವಾಹನದ ಮೇಲೆ ಈ ದೂರವಾಣಿ ಸಂಖ್ಯೆ ನಮೂದಿಸಿದ್ದಾರೆ ಎಂದು ಪ್ರತಿವಾದ ಮಾಡಿದರೆ, ಸದ್ಯಕ್ಕೆ ಶ್ರದ್ಧಾಂಜಲಿ ವಾಹನ ಸೇವೆಯಲ್ಲಿಲ್ಲ. ಹೀಗಾಗಿ ನೀವು ಮುಕ್ತಿಧಾಮಕ್ಕೊ ಅಥವಾ ಮರಳಿ ಧರೆಗೆ ಸಂಸ್ಥೆಗೆ ಕರೆ ಮಾಡಿ ಅಂತ್ಯ ಸಂಸ್ಕಾರಕ್ಕೆ ವಾಹನದ ವ್ಯವಸ್ಥೆ ಮಾಡಿಕೊಳ್ಳಬಹುದು ಎಂದು ಹೇಳುತ್ತಾರೆ. ಇಂಥ ಸ್ಥಿತಿಯಲ್ಲಿ ವಾಹನವೂ ಸತ್ತು ಹೋಗಿದೆ ಎಂದು ಜನ ಸುಮ್ಮನಾಗುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.