ಕಾರ್ಯಕ್ರಮಕ್ಕೆ ವೇದಿಕೆ ಕಲ್ಪಿಸದ ರಂಗಾಯಣ
ಕನ್ನಡಪ್ರಭ ವಾರ್ತೆ, ಧಾರವಾಡ, ಅ. 29
ಸಾಂಸ್ಕೃತಿಕ ನಗರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಧಾರವಾಡದ ರಂಗಾಯಣದಲ್ಲಿ ಐದು ವರ್ಷಗಳಿಂದ ಯಾವುದೇ ರೀತಿಯ ಸಮರ್ಥವಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿಲ್ಲ ಎಂದು ಕಲಾವಿದರು ಬೇಸರ ವ್ಯಕ್ತಪಡಿಸಿದರು.
ಇಲ್ಲಿನ ರಂಗಾಯಣ ಆವರಣದ ಸಾಂಸ್ಕೃತಿಕ ಸಮುಚ್ಛಯ ಸಭಾಭನದಲ್ಲಿ ನಡೆದ ಕಲಾವಿದರ ಸಂವಾದ ಕಾರ್ಯಕ್ರಮದಲ್ಲಿ ಕಲಾವಿದರು ಬೇಸರ ವ್ಯಕ್ತಪಡಿಸಿದರು.
ಮೈಸೂರು ರಂಗಾಯಣ ನಿರ್ದೇಶಕ ಎಚ್. ಜನಾರ್ದನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಂವಾದ ಕಾರ್ಯಕ್ರಮದಲ್ಲಿ, ರಂಗಾಯಣ ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಮುಟ್ಟಬೇಕು. ರಂಗಾಯಣ ಕೇವಲ ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗದೆ ಗ್ರಾಮೀಣ ಭಾಗದ ಜನತೆಗೂ ರಂಗಾಯಣದ ರುಚಿ ಮುಟ್ಟಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾದವು.
ಇದಕ್ಕೆ ಉತ್ತರಿಸಿದ ರಂಗಸಮಾಜದ ಸದಸ್ಯ ಡಾ. ಡಿ.ಎಸ್. ಚೌಗಲೆ, ಹಿಂದಿನ ಅವಧಿಯಲ್ಲಿ ಆದ ವಿಷಯಗಳ ಕುರಿತು ಚರ್ಚಿಸುವ ಬದಲಿಗೆ ಸದ್ಯ ರಂಗಾಯಣ ಯಾವ ರೀತಿಯಲ್ಲಿ ಕ್ರಿಯಾತ್ಮಕವಾಗಿ ಕಾರ್ಯ ನಿರ್ವಹಿಸಬೇಕು ಎಂಬುದರ ಕುರಿತು ಚಿಂತಿಸಬೇಕು. ಅಲ್ಲದೆ, ಕಲಾವಿದರು ಹಾಗೂ ನಿರ್ದೇಶಕರು ಸೃಜನಾತ್ಮಕವಾಗಿ ಕಾರ್ಯ ನಿರ್ವಹಿಸಿದರೆ ಪ್ರತಿಯೊಬ್ಬರಿಗೆ ರಂಗಭೂಮಿಯ ಸವಿ ಮುಟ್ಟುತ್ತದೆ. ಈ ನಿಟ್ಟಿನಲ್ಲಿ ಧಾರವಾಡ ರಂಗಾಯಣವನ್ನು ಪ್ರಾದೇಶಿಕ ಕಲೆಗಳಿಗೆ ಅನುಸಾರವಾಗಿ ರೂಪಿಸುವ ಯೋಜನೆ ನಮ್ಮದಾಗಿದ್ದು, ಇದಕ್ಕೆ ಸ್ವಲ್ಪ ಸಮಯಾವಕಾಶ ಬೇಕು ಎಂದು ತಿಳಿಸಿದರು.
ಬಿ.ಐ. ಈಳಿಗೇರ ಮಾತನಾಡಿ, ರಂಗಾಯಣ ಪ್ರಾರಂಭವಾದಾಗಿನಿಂದ ಇಂದಿನ ವರೆಗೆ ಕಲಾವಿದರ ನೇಮಕ ಮಾಡುವುದಾಗಿ ಹೇಳುತ್ತಲೇ ಬರಲಾಗುತ್ತಿದೆ. ಆದರೆ, ಇಂದಿಗೂ ಕಲಾವಿದರ ನೇಮಕ ಮಾಡಿಲ್ಲ. ಜೊತೆಗೆ ನಿರ್ದೇಶಕರ ಸ್ಥಾನವೂ ಖಾಲಿ ಇದೆ. ಈ ರೀತಿ ವಿಳಂಬವಾದರೆ ರಂಗಾಯಣ ಇರುವುದು ನಿರರ್ಥಕ. ಅಲ್ಲದೆ, ಮೈಸೂರು ರಂಗಾಯಣಕ್ಕೆ ಸಿಕ್ಕಷ್ಟು ಸೌಲಭ್ಯಗಳು ಧಾರವಾಡ ರಂಗಾಯಣಕ್ಕೆ ದೊರೆತಿಲ್ಲ ಎಂದರು.
ಸದ್ಯ ನಿರ್ದೇಶಕರ ಸ್ಥಾನಕ್ಕಾಗಿ ಪ್ರಬುದ್ಧ ವ್ಯಕ್ತಿಗಳ ಪಟ್ಟಿ ಸಿದ್ಧಪಡಿಸಲಾಗಿದ್ದು, ಶೀಘ್ರದಲ್ಲಿಯೇ ಧಾರವಾಡ, ಶಿವಮೊಗ್ಗ ಮತ್ತು ಗುಲ್ಬರ್ಗ ರಂಗಾಯಣಕ್ಕೆ ನಿರ್ದೇಶಕರನ್ನು ನೇಮಕ ಮಾಡಲಾಗುವುದು. ನಂತರ ಹಂತ ಹಂತವಾಗಿ ಕಲಾವಿದರನ್ನು ಮತ್ತು ರಂಗಾಯಣಕ್ಕೆ ಬೇಕಾದ ಸಂಪನ್ಮೂಲ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಡಾ. ಚೌಗಲೆ ಹೇಳಿದರು.
ನಂತರ ಮೈಸೂರು ರಂಗಾಯಣದ ನಿರ್ದೇಶಕ ಎಚ್. ಜನಾರ್ದನ ಮಾತನಾಡಿ, ಕಳೆದ ಕೆಲ ವರ್ಷಗಳಿಂದ ನುರಿತ ರಂಗ ಕಲಾವಿದರು ರಂಗಾಯಣದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಇವರ ಅನುಭವ ಹಾಗೂ ಅಭಿನಯವನ್ನು ವಿನಿಮಯ ಮಾಡುವ ಹಿನ್ನೆಲೆಯಲ್ಲಿ ಮತ್ತು ವೈವಿಧ್ಯಮಯದಿಂದ ಕೂಡಿದ ನಾಟಕಗಳನ್ನು ಇಲ್ಲಿಯ ರಂಗಾಯಣದಲ್ಲಿ ಪ್ರದರ್ಶಿಸುವ ಮೂಲಕ ಈ ಭಾಗಕ್ಕೆ ಮಾದರಿಯಾಗಬೇಕು ಎಂಬ ಉದ್ದೇಶದಿಂದ ನಾಟಕ ಹಮ್ಮಿಕೊಳ್ಳಲಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

