ಇಂದಿನಿಂದ ವೃತ್ತಿಪರ ತರಬೇತಿ ಶಿಬಿರ
ಧಾರವಾಡ: ಕರ್ನಾಟಕ ಕಲಾ ಮಹಾವಿದ್ಯಾಲಯದಲ್ಲಿನ ಸ್ನಾತಕೋತ್ತರ ತರಗತಿಗಳ ವಿದ್ಯಾರ್ಥಿಗಳಿಗಾಗಿ ಕಾಲೇಜಿನ ಬಿಬಿಎ ಸಭಾಂಗಣದಲ್ಲಿ ಅ. 30 ಹಾಗೂ 31ರಂದು ವೃತ್ತಿಪರ ತರಬೇತಿ ಶಿಬಿರ ಏರ್ಪಡಿಸಲಾಗಿದೆ. ಕರ್ನಾಟಕ ವಿಶ್ವವಿದ್ಯಾಲಯ ಕುಲಪತಿ ಡಾ. ಎಚ್.ಬಿ. ವಾಲೀಕಾರ ಉದ್ಘಾಟಿಸುವರು. ಕಾಲೇಜಿನ ಪ್ರಾಚಾರ್ಯ ಡಾ. ಎಸ್.ಎಸ್. ಕಟ್ಟಿಮನಿ ಅಧ್ಯಕ್ಷತೆ ವಹಿಸುವರು. ಮೊದಲ ದಿನದ ಶಿಬಿರದಲ್ಲಿ ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿಗೆ ಸಂಬಂಧಿಸಿದ ವ್ಯಕ್ತಿತ್ವ ವಿಕಸನಕ್ಕೆ ಒತ್ತು ಕೊಡಲಾಗುವುದು. ಅಲ್ಲಿ ವಿದ್ಯಾರ್ಥಿಗಳ ಸಂವಹನ, ಭಾಷಾ ಪ್ರಭುತ್ವ, ಮುಂದಾಳತ್ವ, ಆತ್ಮ ಸ್ಥೈರ್ಯ, ಅನೇಕ ಸಂದರ್ಶನ, ಗುಂಪು ಚರ್ಚೆ, ಕಂಪ್ಯೂಟರ್ಗೆ ಸಂಬಂಧಿಸಿದ ಮೂಲಜ್ಞಾನ ಸೇರಿದಂತೆ ಅನೇಕ ವಿಷಯಗಳ ಕುರಿತು ತರಬೇತಿ ನೀಡಲಾಗುವುದು. ಇದಕ್ಕಾಗಿ ಬೆಂಗಳೂರಿನ ಪ್ರಮುಖ ತರಬೇತಿ ಸಂಸ್ಥೆಯಿಂದ ಪರಿಣಿತರನ್ನು ಆಹ್ವಾನಿಸಲಾಗಿದೆ. ಅಲ್ಲದೇ, ಅ. 31ರಂದು ನಡೆಯುವ ಶಿಬಿರದಲ್ಲಿ ವಿದ್ಯಾರ್ಥಿಗಳ ಭಾವಿ ವೃತ್ತಿಪರ ಜೀವನಕ್ಕಾಗಿ ಅವರ ಆಸೆ ಆಕಾಂಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ನಾಲ್ಕು ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿಯನ್ನು ನೀಡಲಾಗುವುದು. ಸ್ನಾತಕೋತ್ತರ ಪದವಿ ಮುಗಿದ ಮೇಲೆ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಲು ಬಯಸುವ ವಿದ್ಯಾರ್ಥಿಗಳಿಗೆ ನೆಟ್ ಮತ್ತು ಸೆಟ್ ಪರೀಕ್ಷೆ ಪಾಸಾಗಿರಬೇಕು. ಈ ಕುರಿತು ಶಿಬಿರದಲ್ಲಿ ಸಮಗ್ರ ಮಾಹಿತಿ ನೀಡಲಾಗುವುದು. ಸಂಶೋಧನೆ ಕೈಗೊಳ್ಳುವವರಿಗಾಗಿ ಮಾಹಿತಿ ಜೊತೆಗೆ ವಿವಿಧ ಮೂಲಗಳಿಂದ ಧನಸಹಾಯದ ಬಗ್ಗೆ ಮಾಹಿತಿ ಒದಗಿಸಲಾಗುವುದು. ಅಲ್ಲದೇ ಇನ್ನು ಕೆಲವರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಕುರಿತು ಆಯಾ ಪರೀಕ್ಷೆಗಳಲ್ಲಿ ಪಾಸಾದ ಪರಿಣಿತರಿಂದ ಸಮಗ್ರ ಮಾಹಿತಿಗಳನ್ನು ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಕಲಹ: ವ್ಯಕ್ತಿ ಆತ್ಮಹತ್ಯೆ
ಕಲಘಟಗಿ: ಕೌಟುಂಬಿಕ ಕಲಹದಿಂದ ಬೇಸತ್ತ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ತಾಲೂಕಿನ ಸೂರಶೆಟ್ಟಿಕೊಪ್ಪ ಗ್ರಾಮದ ಸಂಗಯ್ಯ ಬಸವಣ್ಣಯ್ಯ ಹಿರೇಮಠ (30) ನೇಣು ಹಾಕಿಕೊಂಡಾತ. ಆತನ ಪತ್ನಿ ಗಿರಿಜಮ್ಮ ಎಂಬುವಳು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೋಲೀಸರು ತನಿಖೆ ಕೈಗೊಂಡಿದ್ದಾರೆ.
ಕಮಲಾಬಾಯಿ ಜಾಧವ
ಧಾರವಾಡ: ಇಲ್ಲಿನ ಕೊಪ್ಪದಕೇರಿಯ ಮಹಾತ್ಮ ಬಸವೇಶ್ವರ ನಗರ ನಿವಾಸಿ ಕಮಲಾಬಾಯಿ ಲಿಂಬಾಜಿರಾವ್ ಜಾಧವ(84) ಮಂಗಳವಾರ ನಿಧನರಾದರು. ಮೃತರಿಗೆ ಪತಿ, ಆರು ಪುತ್ರರು, ಓರ್ವ ಪುತ್ರಿ, ಅಪಾರ ಬಂಧು ಬಳಗವಿದೆ. ನ್ಯಾಯವಾದಿ ಜೆ.ಎಲ್. ಜಾಧವ ಮೃತರ ಪುತ್ರರಲ್ಲಿ ಒಬ್ಬರು. ಮೃತರಿಗೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವಿ.ಡಿ. ಕಾಮರೆಡ್ಡಿ, ನ್ಯಾಯವಾದಿ ಬಿ.ವಿ. ಸೋಮಾಪುರ ಸಂತಾಪ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

