ಬೆಳಕಿನ ಹಬ್ಬ ದೀಪಾವಳಿಗೆ ಎಲ್ಲೆಡೆ ಕಾತುರ
ಕನ್ನಡಪ್ರಭ ವಾರ್ತೆ, ಧಾರವಾಡ, ಅ. 31
ಕೃಷ್ಣಪಕ್ಷದ ಚತುರ್ದಶಿ, ಅಮಾವಾಸ್ಯೆ ಹಾಗೂ ಪಾಡ್ಯ ಒಟ್ಟೂ ಮೂರು ದಿನಗಳು ಮನೆಯಂಗಳದಲ್ಲಿ ಸಾಲು ಸಾಲು ದೀಪಗಳನ್ನು ಹಚ್ಚಿ, ವಿಶೇಷ ಪೂಜೆಗಳ ಜೊತೆಗೆ ಪಟಾಕಿ ಹೊಡೆದು ವಿಶಿಷ್ಟವಾಗಿ ಆಚರಿಸುವ ದೀಪಾವಳಿ ಹಬ್ಬ ಇದೀಗ ಮನೆ ಹೊಸ್ತಿಲಲ್ಲಿದೆ.
ಹಿಂದೂ ಧರ್ಮದ ಜನರು ಪ್ರತಿ ವರ್ಷವೂ ಪ್ರಪಂಚದ ಎಲ್ಲೆಡೆ ದೀಪಾವಳಿಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಹಬ್ಬದ ಪ್ರಯುಕ್ತ ಹೊಸ ಬಟ್ಟೆಗಳ ಖರೀದಿ, ಸಿಹಿ ತಿಂಡಿಗಳ ತಯಾರಿಕೆ ಈ ಹಬ್ಬದ ವಿಶೇಷ. ಹಿಂದೂಗಳು ದೀಪವಾಳಿ ಹಬ್ಬವನ್ನು ಬಲು ವಿಜೃಂಭಣೆ ಹಾಗೂ ಕೆಲವೆಡೆ ವಿಶೇಷವಾಗಿ ಆಚರಿಸುವುದು ರೂಢಿಯಲ್ಲಿದೆ. ಅಂತೆಯೇ ಧಾರವಾಡ ಜಿಲ್ಲೆಯಲ್ಲೂ ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಜನತೆ ಸಿದ್ಧರಾಗಿದ್ದಾರೆ.
ಸಾಮಾನ್ಯವಾಗಿ ದೀಪಾವಳಿ ನಿಮಿತ್ತ ಮನೆಗಳ ಬಾಗಿಲ ಮುಂದೆ ಹಾಗೂ ಅಂಗಳದಲ್ಲಿ ಸಾಲು ಸಾಲಾಗಿ ಹಣತೆ ಅಥವಾ ಮೇಣದ ಬತ್ತಿಗಳನ್ನು ಹಚ್ಚಿಡಲಾಗುತ್ತದೆ. ಕತ್ತಲೆಯಲ್ಲಿ ದೀಪ ಹಚ್ಚುವ ಮೂಲಕ ದೀಪಾವಳಿ ಹಬ್ಬ ಬಾಳಿನ ಕತ್ತಲೆಯಲ್ಲಿರುವ ಪ್ರತಿಯೊಬ್ಬರನ್ನು ಬೆಳಕಿನೆಡೆಗೆ ಕರೆದ್ಯೊಯಲಿ ಎಂಬ ಆಶಯದೊಂದಿಗೆ ಈ ಸಾಲು ದೀಪಗಳನ್ನು ಹಚ್ಚಲಾಗುತ್ತದೆ ಎಂಬುದು ನಂಬಿಕೆ.
ಪೌರಾಣಿಕತೆಯಲ್ಲಿ ದೀಪಾವಳಿ: ಪ್ರಮುಖವಾಗಿ ದೀಪಾವಳಿ ಹಬ್ಬದ ಆಚರಣೆಗೆ ಪೌರಾಣಿಕೆ ಘಟನೆಗಳು ಸಂಬಂಧಿತಗೊಂಡಿವೆ. ಕೆಲವರು ಶ್ರೀ ರಾಮನು ರಾವಣನನ್ನು ಸೋಲಿಸಿ ಸೀತೆ ಮತ್ತು ಲಕ್ಷ್ಮಣರೊಂದಿಗೆ ಅಯೋಧ್ಯೆಗೆ ಮರಳಿದ ಸಮಯದ ಸಂಭ್ರಮವೇ ದೀಪಾವಳಿ ಎಂದು ಆಚರಿಸಿದರೆ, ಇನ್ನೂ ಕೆಲವರು ಅಮಾವಾಸ್ಯೆಯ ಹಿಂದಿನ ದಿನ (ಚತುರ್ದಶಿ) ಶ್ರೀ ಕೃಷ್ಣ ನರಕಾಸುರನನ್ನು ಸಂಹರಿಸಿದ ದಿನವೆಂದು ತಿಳಿಯಲಾಗಿದೆ. ಹಾಗೆಯೇ, ಸಿಖ್ ಹಾಗೂ ಜೈನ್ ಧರ್ಮದಲ್ಲಿಯೂ ದೀಪಾವಳಿ ಮುಖ್ಯ ಹಬ್ಬ.
ದೀಪಾವಳಿ ಬಜಾರ್: ದೀಪಾವಳಿ ಹಬ್ಬದ ನಿಮಿತ್ತ ಮಾರುಕಟ್ಟೆಯ ಪ್ರತಿಯೊಂದು ಅಂಗಡಿಗಳು ಕಣ್ಣಿಗೆ ರಾಚುವಂತೆ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿವೆ. ವಿಶೇಷವಾಗಿ ದೀಪಾವಳಿ ಹಬ್ಬದಲ್ಲಿ ರಾತ್ರಿ ವೇಳೆಯಲ್ಲಿ ಮಾರುಕಟ್ಟೆಗೆ ಹೆಚ್ಚು ಜನರು ಬರುತ್ತಾರೆ. ಹೀಗಾಗಿ, ಮಾರುಕಟ್ಟೆಯಲ್ಲಿಯೂ ದೀಪಾವಳಿ ಹಬ್ಬಕ್ಕಾಗಿ ಬಂಪರ್ ಕೊಡುಗೆಗಳನ್ನು ನೀಡುವ ಮೂಲಕ ಗ್ರಾಹಕರನ್ನು ಸೆಳೆದು ಉತ್ತಮ ವ್ಯಾಪಾರ ಕೈಗೂಡಿಸಿಕೊಳ್ಳತ್ತಾರೆ. ಹಣ್ಣು ಹಾಗೂ ಹೂವಿನ ದರ ಈಗ ಹೆಚ್ಚಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಪ್ರತಿಯೊಂದು ವಸ್ತುವಿನ ಬೆಲೆಯಲ್ಲಿ ರಿಯಾಯ್ತಿ ಇದ್ದೆ ಇದೆ. ಹೀಗಾಗಿ, ಈ ಸಂದರ್ಭದಲ್ಲಿ ತರಹೇವಾರಿ ವಸ್ತುಗಳ ಮಾರಾಟ ನಿರಂತರವಾಗಿದ್ದು, ನಿರೀಕ್ಷೆಗಿಂತ ವ್ಯಾಪಾರ ಹೆಚ್ಚಾಗುತ್ತಿದೆ.
ರಸ್ತೆ ಬದಿ ವ್ಯಾಪಾರಸ್ಥರೂ ಈ ಹಬ್ಬದಲ್ಲಿ ಉತ್ತಮ ವ್ಯಾಪಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ದೀಪಾವಳಿಯಂದು ಎಲ್ಲ ಅಂಗಡಿಗಳಲ್ಲಿ ಲಕ್ಷ್ಮೀ ಪೂಜೆ ಮಾಡಲು ಸಿದ್ಧತೆ ನಡೆದಿದೆ.
ದೇವರಹುಬ್ಬಳ್ಳಿ ವಿಶೇಷ ದೀಪಾವಳಿ: ತಾಲೂಕಿನ ದೇವರ ಹುಬ್ಬಳ್ಳಿಯಲ್ಲಿ ದೀಪಾವಳಿಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ದೀಪಾವಳಿ ಹಬ್ಬದ ತಯಾರಿಯಾಗಿ ಒಂದು ತಿಂಗಳು ಮುಂಚೆಯೇ ತಾವು ಸಾಕಿದ ಎತ್ತುಗಳನ್ನು ಉತ್ತಮವಾಗಿ ಮೇಯಿಸುತ್ತಾರೆ. ಮೂರು ದಿನಗಳ ಕಾಲ ಆಚರಿಸುವ ಈ ಹಬ್ಬದಲ್ಲಿ ಎತ್ತುಗಳನ್ನು ವಿಶೇಷ ರೀತಿಯಲ್ಲಿ ಅಲಂಕರಿಸಿ ಪಾಡ್ಯದ ದಿನ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುತ್ತದೆ. ಮೆರವಣಿಗೆ ಸಂದರ್ಭದಲ್ಲಿ ಗ್ರಾಮದ ಎಲ್ಲ ಕುಟುಂಬಗಳು ಎತ್ತುಗಳಿಗೆ ಪೂಜೆ ಸಲ್ಲಿಸುತ್ತವೆ. ಅಲ್ಲದೆ, ಇಲ್ಲಿ ಹಬ್ಬದ ಪ್ರಯುಕ್ತ ಎತ್ತುಗಳ ಕಾದಾಟ ಸ್ಪರ್ಧೆಯನ್ನೂ ನಡೆಸಲಾಗುತ್ತದೆ. ಪ್ರತಿಯೊಂದು ರೈತ ಕುಟುಂಬಗಳು ಈ ಹಬ್ಬದಲ್ಲಿ ಭಾಗವಹಿಸುವ ಮೂಲಕ ಆಧುನಿಕತೆಯ ಭರಾಟೆಯಲ್ಲಿ ನಶಿಸಿ ಹೋಗುತ್ತಿರುವ ದೀಪಾವಳಿಗೆ ಇಂಬು ಕೊಡುವ ನಿಟ್ಟಿನಲ್ಲಿ ಈ ಗ್ರಾಮದಲ್ಲಿ ದೀಪಾವಳಿ ಆಚರಿಸಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

