ಸಿಎಂ ಮೋಜಿನ ಪ್ರವಾಸ: ಶೆಟ್ಟರ್ ಲೇವಡಿ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಸೆ. 7
ರಾಜ್ಯದ ಅನೇಕ ತಾಲೂಕುಗಳಲ್ಲಿ ಬರ ತಾಂಡವವಾಡುತ್ತಿದೆ, ಸರ್ಕಾರದ ಹೊಸ ಯೋಜನೆಗಳು ಅನುಷ್ಠಾನಗೊಳ್ಳುತ್ತಿಲ್ಲ. ಈ ಸಂದರ್ಭ ರಾಜ್ಯದಲ್ಲಿದ್ದು ಸಮಸ್ಯೆ ಪರಿಹರಿಸುವುದನ್ನು ಬಿಟ್ಟು ಮುಖ್ಯಮಂತ್ರಿ ಸಿದ್ದರಾಮಯ್ಯ ಮೋಜಿನ ಪ್ರವಾಸಕ್ಕೆ ಚೀನಾಕ್ಕೆ ಹೊರಟು ನಿಂತಿದ್ದಾರೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಅಸ್ಥಿರಗೊಂಡಿದೆ, ಗೊಂದಲದ ಗೂಡಾಗಿದೆ. ಸರ್ಕಾರ 100 ದಿನದ ಗಡಿ ದಾಟಿದೆ ಎಂಬುದನ್ನು ಬಿಟ್ಟರೆ, ಯಾವುದೇ ಒಂದು ಸ್ಥಿರ ಯೋಜನೆಯನ್ನು ಜನತೆಗೆ ಕೊಡಲಾಗಿಲ್ಲ.
ರಾಜ್ಯದ ಸುಮಾರು 70ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರಗಾಲ ಎದುರಾಗಿದೆ. ಮುಖ್ಯಮಂತ್ರಿಗಳಾಗಲಿ, ಕಂದಾಯ ಸಚಿವರಾಗಲಿ ಬರ ಸಮೀಕ್ಷೆಯ ವರದಿ ತರಿಸಿಕೊಂಡಿಲ್ಲ. ನೆರವು ಕೋರಿ ಕೇಂದ್ರ ಸರ್ಕಾರಕ್ಕೆ ಮನವಿಯನ್ನೂ ಸಲ್ಲಿಸಿಲ್ಲ. ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂದು ದೂರಿದರು.
ಅನ್ನಭಾಗ್ಯ ಯೋಜನೆಯನ್ನು ಘೋಷಿಸಿದ ಸರ್ಕಾರ ಯೋಜನೆ ಜಾರಿಗೆ ತರಲು ದಿನ ಲೆಕ್ಕ ಹಾಕಿತು. ಕಾಟಾಚಾರಕ್ಕೆ ಯೋಜನೆಯನ್ನು ಜಾರಿಗೆ ತಂದಿರುವ ಸರ್ಕಾರ ಅಕ್ಕಿ ಕೊಡುವಲ್ಲಿ ವಿಫಲವಾಗಿದೆ. ಪ್ರತಿ ತಿಂಗಳು ಎಷ್ಟು ಫಲಾನುಭವಿಗಳಿಗೆ ಎಷ್ಟು ಅಕ್ಕಿ ಹಂಚಿಕೆ ಮಾಡಿದೆ ಎಂದು ಮುಖ್ಯಮಂತ್ರಿಗಳು ಶ್ವೇತಪತ್ರ ಹೊರಡಿಸಲಿ ಎಂದ ಶೆಟ್ಟರ್, ಸಿದ್ದರಾಮಯ್ಯನವರಿಗೆ ಪ್ರಚಾರದ ಗೀಳು. ಹೊಸ ಯೋಜನೆಗಳನ್ನು ಬೇಕಾಬಿಟ್ಟಿಯಾಗಿ ಘೋಷಿಸಿ ಪ್ರಚಾರ ಪಡೆಯುತ್ತಿದ್ದಾರೆ ವಿನಃ ಅದರ ಅನುಷ್ಠಾನದ ಬಗ್ಗೆ ನೈಜ ಕಾಳಜಿಯಿಲ್ಲ ಎಂದರು.
ಸಿಎಂಗೆ ಶೋಭೆ ತರದು: ಬಿಜೆಪಿ ಸರ್ಕಾರ ಜಾರಿಗೆ ತಂದ ಯೋಜನೆಗಳನ್ನು ಮೊಟಕುಗೊಳಿಸಿದ್ದೇ ಸಿದ್ದರಾಮಯ್ಯನವರ ಸಾಧನೆ. ಭಾಗ್ಯಲಕ್ಷ್ಮಿ, ಬೈಸಿಕಲ್ ವಿತರಣೆಯಂತಹ ಯೋಜನೆ ನಿಲ್ಲಿಸಿದ್ದಾರೆ. ನೀರಾವರಿಯ ಎಸ್‌ಸಿಪಿ ಮತ್ತು ಟಿಎಸ್‌ಪಿ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿದೆ. ಪ್ರತಿ ಗ್ರಾಪಂಗೆ ಆಶ್ರಯ ಮನೆಗಳನ್ನು 20ಕ್ಕೆ ಕಡಿತಗೊಳಿಸಲಾಗಿದೆ. ಸಾಲ ಮನ್ನಾ ಯೋಜನೆ ಕೈಬಿಡಲಾಗಿದೆ. ಸಿದ್ದರಾಮಯ್ಯನವರಿಗೆ ಇದು ಶೋಭೆ ತರದು.
ಜಿಲ್ಲೆಗೆ ಸೀಮಿತ: ರಾಜ್ಯದ ಎಲ್ಲ ಸಚಿವರು ತಮ್ಮ ಜಿಲ್ಲೆಗೆ ಸೀಮಿತರಾಗಿ ಬಿಟ್ಟಿದ್ದಾರೆ. ಜಿಲ್ಲೆಯನ್ನು ಹೊರತುಪಡಿಸಿ ಯಾವುದೇ ಸ್ಥಳ ಪರಿಶೀಲನೆ ಮಾಡಿಲ್ಲ, ಅಧಿಕಾರಿಗಳ ಸಭೆ ನಡೆಸಿಲ್ಲ. ರಾಜ್ಯದ ಜನತೆಯ ಸಮಸ್ಯೆಗಳನ್ನು ಆಲಿಸುವ ಸಚಿವರೇ ಇಲ್ಲವಾಗಿದ್ದಾರೆ. ಬಜೆಟ್‌ನಲ್ಲಿ ಘೋಷಿಸಿದ ಯೋಜನೆಗಳು ಅನುಷ್ಠಾನಕ್ಕೆ ಬರುತ್ತಿಲ್ಲ. ಆಡಳಿತ ಯಂತ್ರ ಕುಸಿದಿದೆ. ಸರ್ಕಾರ ಈ ಕೂಡಲೇ ಎಚ್ಚೆತ್ತುಕೊಳ್ಳಲಿ ಎಂದರು.
ಇದೇ ಸಂದರ್ಭ ಬಿಜೆಪಿ ತೊರೆದಿದ್ದ ಮಾಜಿ ವಿಪ ಸದಸ್ಯ ಶಶಿಲ್ ನಮೋಶಿ, ಲಕ್ಷ್ಮಣ ಬೀಳಗಿ ಪುನಃ ಬಿಜೆಪಿಗೆ ಸೇರಿದರು. ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ, ಶಂಕರಪಾಟೀಲ ಮುನೇನಕೊಪ್ಪ, ಲಿಂಗರಾಜ ಪಾಟೀಲ ಇದ್ದರು.
ಚಾಮರಾಜನಗರಕ್ಕೆ ಮುಖ್ಯಮಂತ್ರಿ ಹೋಗಲಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು ಮೈಸೂರಿಗೆ ಸೀಮಿತರಾಗಿದ್ದಾರೆ. ರಾಜ್ಯದಲ್ಲಿ ಇನ್ನಿತರ ಜಿಲ್ಲೆಗಳಿವೆ ಎಂಬ ಅರಿವು ಅವರಿಗಿದ್ದಂತಿಲ್ಲ. ಸಮಾಜವಾದಿ, ವೈಚಾರಿಕ ವ್ಯಕ್ತಿ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯನವರು ಪಕ್ಕದ ಚಾಮರಾಜ ನಗರಕ್ಕಾದರೂ ಹೋಗಿ ಬರಲಿ ಎಂದು ಶೆಟ್ಟರ್ ಲೇವಡಿ ಮಾಡಿದರು. ತಾವು ಮುಖ್ಯಮಂತ್ರಿಯಾಗಿದ್ದಾಗ ಚಾಮರಾಜ ನಗರಕ್ಕೆ ಹೋಗಲಿ ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದರು. ತಾವು ಚಾಮರಾಜ ನಗರಕ್ಕೆ ಭೇಟಿ ಕೊಟ್ಟಿದ್ದೂ ಆಯಿತು. ಇದೀಗ ಸಿದ್ದರಾಮಯ್ಯ ತಮ್ಮ ಪಕ್ಕದಲ್ಲೇ ಇರುವ ಚಾಮರಾಜ ನಗರಕ್ಕೆ ಹೋಗಲು ಏಕೆ ಹಿಂದೇಟು ಹಾಕುತ್ತಿದ್ದಾರೆ? ಚಾಮರಾಜ ನಗರಕ್ಕೆ ಹೋದರೆ ಅಧಿಕಾರ ಹೋಗುತ್ತದೆ ಎನ್ನುವ ಭಯ ಸಿದ್ದರಾಮಯ್ಯನವರನ್ನು ಆವರಿಸಿರಬೇಕು ಎಂದು ಕುಟುಕಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

