ಆರ್ಥಿಕತೆ ವೃದ್ಧಿಗೆ ಗಮನ ಹರಿಸಿ
ಹುಬ್ಬಳ್ಳಿ: ಕುಂಠಿತವಾಗಿರುವ ಕೈಗಾರಿಕಾ ಕ್ಷೇತ್ರದ ಬೆಳವಣಿಗೆಗೆ ಕೇಂದ್ರ ಸರ್ಕಾರ ಗಮನ ಹರಿಸದಿದ್ದಲ್ಲಿ ದೇಶದ ಅರ್ಥವ್ಯವಸ್ಥೆ ಮತ್ತಷ್ಟು ಬಿಗಡಾಯಿಸಲಿದೆ ಎಂದು ಮಿವೇನ್ಮೆಂಫ್ರಾನ್ ವ್ಯವಸ್ಥಾಪಕ ನಿರ್ದೇಶಕ ವಿಕ್ರಂ ಶಿರೂರ ಹೇಳಿದರು.
ಭಾನುವಾರ, ಇನ್ಕಮೆಕ್ಸ್ 2013 ಅಂಗವಾಗಿ ಆಯೋಜಿಸಿದ್ದ ವೆಂಡರ್ಸ್ ಡೆವಲಪ್ಮೆಂಟ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗಂಭೀರವಾಗಿ ದೇಶದ ಅರ್ಥ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಮೌನವಾಗಿ ನೋಡುತ್ತ ಕುಳಿತರೆ ಹದಗೆಟ್ಟಿರುವ ದೇಶದ ಅರ್ಥವ್ಯವಸ್ಥೆಯನ್ನು ಸರಿದಾರಿಗೆ ತರಲು ಹರಸಾಹಸ ಪಡಬೇಕಾಗುತ್ತದೆ. ರಿಸರ್ವ್ ಬ್ಯಾಂಕ್ನ ನೂತನ ಗವರ್ನರ್ ಡಾ. ರಘುರಾಮ್ ರಾಜನ್ ಅವರು ಕುಸಿಯುತ್ತಿರುವ ರುಪಾಯಿ ಮೌಲ್ಯ ತಡೆಯುವ ನಿಟ್ಟಿನಲ್ಲಿ ಅನೇಕ ಬಿಗಿ ಕ್ರಮ ತೆಗೆದುಕೊಂಡಿದ್ದಾರೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಆರ್ಥಿಕ ನೀತಿಗೆ ಪೂರಕವಾಗುವಂತೆ ಕೇಂದ್ರ ಸರ್ಕಾರ ಉತ್ಪಾದನಾ ಕ್ಷೇತ್ರಕ್ಕೆ ಅನುಕೂಲವಾಗುವಂತೆ ಯೋಜನೆ, ನೀತಿ ರೂಪಿಸುತ್ತಿಲ್ಲ. ಇದು ಭವಿಷ್ಯದಲ್ಲಿ ಒಟ್ಟಾರೆ ದೇಶದ ಅರ್ಥ ವ್ಯವಸ್ಥೆ ಮೇಲೆ ಪರಿಣಾಮ ಬೀರಲಿದೆ. ಕಳಪೆ ಗುಣಮಟ್ಟದ ಬಿಡಿ ಭಾಗಗಳ ಉತ್ಪಾದನೆ, ಬಿಡಿ ಭಾಗ ಪೂರೈಕೆಯಲ್ಲಿ ವಿಳಂಬ, ಹೆಚ್ಚಿನ ಬೆಲೆ ವಿಧಿಸುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಬಿಡಿಭಾಗಗಳ ಉತ್ಪಾದನೆ ಕ್ಷೇತ್ರ ಇತರ ದೇಶಗಳಿಗೆ ಹೋಲಿಸಿದರೆ ಸಾಕಷ್ಟು ಹಿಂದುಳಿದಿದೆ ಎಂದರು. 90ರ ದಶಕದಲ್ಲಿ ದೇಶದಲ್ಲಿ ಕಾಣಿಸಿಕೊಂಡ ಉತ್ಪಾದನೆ ಕ್ಷೇತ್ರದ ದಿಢೀರ್ ಬೆಳವಣಿಗೆ ನಂತರದ ದಿನಗಳಲ್ಲಿ ಸೊರಗಿತು. ಇಂದು ಹಲವಾರು ಉದ್ಯಮಗಳು ಬೇರೆ ದೇಶಗಳಿಂದ ಬಿಡಿ ಭಾಗಗಳನ್ನು ಆಮದು ಮಾಡಿಕೊಳ್ಳುತ್ತಿವೆ. ತಮಿಳುನಾಡು, ದೆಹಲಿ, ಮಹಾರಾಷ್ಟ್ರಗಳಲ್ಲಿ ಇಂದು ಬೃಹತ್ ಉದ್ದಿಮೆಗಳು ನೆಲೆಯೂರವುದಕ್ಕೆ ಕಾರಣ ಉತ್ಕೃಷ್ಟವಾಗಿ ಬೆಳವಣಿಗೆ ಸಾಧಿಸಿರುವ ಬಿಡಿ ಭಾಗ ತಯಾರಿಕೆ ಉದ್ಯಮ ವಲಯ ಎಂದರು.
ಕರ್ನಾಟಕ ಸಣ್ಣ ಕೈಗಾರಿಕೆಗಳ ಒಕ್ಕೂಟ (ಕಾಸಿಯಾ) ಅಧ್ಯಕ್ಷ ಬಿ.ಪಿ. ಶ್ರೀಧರ, ಕರ್ನಾಟಕದ ಕೈಗಾರಿಕೆಗಳಿಂದ ಏನೂ ಖರೀದಿಸುವುದಿಲ್ಲ ಎಂಬ ಧೋರಣೆಯನ್ನು ರೈಲ್ವೆ ಇಲಾಖೆ ಬದಲಿಸಿಕೊಂಡು ಕರ್ನಾಟಕದಲ್ಲಿ ಸಣ್ಣ ಕೈಗಾರಿಕೆಗಳಿಂದ ರೈಲ್ವೆ ಬೋಗಿ ನಿರ್ಮಾಣಕ್ಕೆ ಅಗತ್ಯವಿರುವ ಬಿಡಿ ಭಾಗಗಳನ್ನು ಖರೀದಿಸುವ ನಿಟ್ಟಿನಲ್ಲಿ ಮನಸ್ಸು ಮಾಡಬೇಕು ಎಂದರು.
ನೈಋತ್ಯ ರೈಲ್ವೆ ವಲಯ ಚೀಫ್ ಮಟಿರಿಯಲ್ ಮ್ಯಾನೇಜರ್ ಎಂ.ಕೆ. ಕೌಶಿಕ್ ಅವರು, ರೈಲ್ವೆ ಇಲಾಖೆ ಪ್ರತಿ ವರ್ಷ ರು. 300 ಕೋಟಿಗಳನ್ನು ರೈಲ್ವೆ ಭೋಗಿ, ಎಂಜಿನ್ಗೆ ಅಗತ್ಯವಿರುವ ಬಿಡಿ ಭಾಗಗಳಿಗೆ ವೆಚ್ಚ ಮಾಡುತ್ತಿದೆ. ಅದರಲ್ಲೂ ಬಹುಪಾಲು ಹಣವನ್ನು ಸುರಕ್ಷಾ ಸಾಮಗ್ರಿಗಳ ಖರೀದಿಗೆ ವೆಚ್ಚ ಮಾಡುತ್ತಿದ್ದು, ಸುರಕ್ಷಾ ಸಾಮಗ್ರಿಗಳನ್ನು ಉತ್ಪಾದಿಸಿ ರೈಲ್ವೆ ಇಲಾಖೆಗೆ ಪೂರೈಸುವ ಕೆಲಸ ಇಲ್ಲಿನ ಸಣ್ಣ ಕೈಗಾರಿಕೆಗಳಿಂದ ಆಗಬೇಕಿದೆ. ಸದ್ಯ ರೈಲ್ವೆ ಇಲಾಖೆ ಮುಂಬೈ, ಕೊಲ್ಕತ್ತಾ ಮತ್ತು ದೆಹಲಿ ಸುತ್ತಲಿನ ಕೈಗಾರಿಕೆಗಳಿಂದ ತನ್ನ ಅಗತ್ಯಗಳನ್ನು ಪೂರೈಸಿಕೊಳ್ಳುತ್ತಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ವಿಶ್ವನಾಥ ಗಿಣಿಮಾವ, ಪ್ರಸಾದ ರೂಢಗಿ, ಜಯಪ್ರಕಾಶ ಟೆಂಗಿನಕಾಯಿ, ಕೆ.ಟಿ. ಪವಾರ, ಕೇಂದ್ರ ಸರ್ಕಾರದ ಮಧ್ಯಮ ಮತ್ತು ಸಣ್ಣ ಕೈಗಾರಿಕೆ ಇಲಾಖೆ ನಿರ್ದೇಶಕ ಚಂದ್ರಶೇಖರ ಇತರರು ಇದ್ದರು.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಆರ್ಥಿಕ ನೀತಿಗೆ ಪೂರಕವಾಗುವಂತೆ ಕೇಂದ್ರ ಸರ್ಕಾರ ಉತ್ಪಾದನಾ ಕ್ಷೇತ್ರಕ್ಕೆ ಅನುಕೂಲವಾಗುವಂತೆ ಯೋಜನೆ, ನೀತಿ ರೂಪಿಸುತ್ತಿಲ್ಲ. ಇದು ಭವಿಷ್ಯದಲ್ಲಿ ಒಟ್ಟಾರೆ ದೇಶದ ಅರ್ಥ ವ್ಯವಸ್ಥೆ ಮೇಲೆ ಪರಿಣಾಮ ಬೀರಲಿದೆ. ಕಳಪೆ ಬಿಡಿಭಾಗಗಳ ಉತ್ಪಾದನೆ, ಬಿಡಿ ಭಾಗ ಪೂರೈಕೆಯಲ್ಲಿ ವಿಳಂಬ, ಹೆಚ್ಚಿನ ಬೆಲೆ ವಿಧಿಸುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಬಿಡಿಭಾಗಗಳ ಉತ್ಪಾದನೆ ಕ್ಷೇತ್ರ ಇತರ ದೇಶಗಳಿಗೆ ಹೋಲಿಸಿದರೆ ಸಾಕಷ್ಟು ಹಿಂದುಳಿದಿದೆ.
- ವಿಕ್ರಂ ಶಿರೂರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

