ಕಿಮ್ಸ್ನಲ್ಲಿ ಲಾಡ್ರಿಂದ ಸ್ವಚ್ಛತೆ ಪಾಠ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಸೆ. 15
ಉತ್ತರ ಕರ್ನಾಟಕದ ಪ್ರಮುಖ ವೈದ್ಯಕೀಯ ಸಂಸ್ಥೆ ಕರ್ನಾಟಕ ವೈದ್ಯವಿಜ್ಞಾನ ಸಂಸ್ಥೆ (ಕಿಮ್ಸ್)ನಲ್ಲಿ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ನೇತೃತ್ವದಲ್ಲಿ ವಿವಿಧ ಕಾಲೇಜಿನ ಎನ್ಎಸ್ಎಸ್ ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.
ಹುಬ್ಬಳ್ಳಿಯ ಒಂಭತ್ತು ಕಾಲೇಜುಗಳ ಸುಮಾರು ಐದುನೂರು ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಸಚಿವ ಸಂತೋಷ ಲಾಡ್ ಅವರು, ಮಹಾತ್ಮಾಗಾಂಧಿ ಜಯಂತಿ ನಿಮಿತ್ತ ಅಕ್ಟೋಬರ್ 2ರಂದು ಧಾರವಾಡದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಲಿದೆ. ಆ ಕಾರ್ಯಕ್ರಮದಲ್ಲೂ ಎನ್ಎಸ್ಎಸ್ ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕು ಎಂದರು.
ಕಿಮ್ಸ್ ನಿರ್ದೇಶಕಿ ಡಾ. ವಸಂತಾ ಕಾಮತ್ ಅವರು ಮಾತನಾಡಿ, ಸಾರ್ವಜನಿಕರಿಗೆ, ರೋಗಿಗಳಿಗೆ ಹಾಗೂ ಅವರ ಬಂಧುಗಳಿಗೆ ಸ್ವಚ್ಛತೆಯ ಕುರಿತು ಅರಿವು ಮೂಡಿಸುವ ಇಂತಹ ಕಾರ್ಯಕ್ರಮಗಳು ಸಾರ್ವಜನಿಕ ಸ್ವಚ್ಛತೆಯಲ್ಲಿ ಮಹತ್ವದ ಪಾತ್ರವಹಿಸುತ್ತವೆ ಎಂದು ತಿಳಿಸಿದರು.
ಕರ್ನಾಟಕ ವಿಶ್ವವಿದ್ಯಾಲಯದ ಎನ್ಎಸ್ಎಸ್ ಸಂಯೋಜಕ ಡಾ. ಧನವಂತ ಹಾಜವಗೋಳ, ಹುಬ್ಬಳ್ಳಿಯ ಕಾಡಸಿದ್ದೇಶ್ವರ ಕಲಾ ಹಾಗೂ ಕೋತಂಬರಿ ವಿಜ್ಞಾನ ಮಹಾವಿದ್ಯಾಲಯ, ಜೆ.ಜೆ. ಕಾಮರ್ಸ್ ಕಾಲೇಜು, ಪಿ.ಸಿ. ಜಾಬಿನ್ ಕಾಲೇಜು, ನೆಹರು ಕಾಲೇಜು, ಎಸ್.ಜೆ.ಎಂ.ವಿ. ಕಲಾ ಮತ್ತು ವಿಜ್ಞಾನ ಕಾಲೇಜು, ಕೆ.ಎಸ್.ಎಸ್ ಕಾಲೇಜು, ಕೆ.ಎಸ್.ಎಸ್.ಬಿ.ಡಬ್ಲೂ ಕಾಲೇಜು, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಸರ್ಕಾರಿ ಕಾಲೇಜುಗಳ ಎನ್.ಎಸ್.ಎಸ್.ಸಂಯೋಜಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕಿಮ್ಸ್ ಆವರಣದ ಮುಖ್ಯ ಕಟ್ಟಡದ ಹಿಂಭಾಗ, ಹಾಸ್ಟೆಲ್, ಆಸ್ಪತ್ರೆ ಸಿಬ್ಬಂದಿ ವಸತಿ ಗೃಹಗಳ ಸುತ್ತಲಿನ ಹುಲ್ಲು, ಕಸಕಡ್ಡಿ ಹಾಗೂ ಕಲ್ಲುಗಳನ್ನ್ನು ವಿದ್ಯಾರ್ಥಿಗಳು ಸ್ವಚ್ಛಗೊಳಿಸಿದರು.
ಕಿಮ್ಸ್ ಸ್ವಚ್ಛತಾ ಅಭಿಯಾನದಲ್ಲಿ ಮಹಾನಗರ ಪಾಲಿಕೆ ಅಭಿಯಂತರ ರವೀಶ ಹಾಗೂ ಪಾಲಿಕೆ ಪರಿಸರ ಅಧಿಕಾರಿ ಗಿರೀಶ ಅವರ ನೇತೃತ್ವದಲ್ಲಿ 80 ಪೌರ ಕಾರ್ಮಿಕರು ಆವರಣದ ವಿವಿಧ ಭಾಗಗಳ ಸ್ವಚ್ಛತೆಯಲ್ಲಿ ತೊಡಗಿದ್ದರು. ಅರಣ್ಯ ಇಲಾಖೆಯ ಹುಬ್ಬಳ್ಳಿ ಪ್ರಾದೇಶಿಕ ಅರಣ್ಯಾಧಿಕಾರಿ ಆರ್.ಎಂ. ಪತ್ತಾರ ಹಾಗೂ ಅವರ ಸಿಬ್ಬಂದಿ ಸುಮಾರು 300 ವಿವಿಧ ಬಗೆಯ ಸಸಿಗಳನ್ನು ಕಿಮ್ಸ್ನಲ್ಲಿ ನೆಡಲು ಆರಂಭಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

