21ರಂದು ಎಫ್ಎಂ ಕಾರ್ಯಾರಂಭ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಸೆ. 17
ಕೆಎಲ್ಇ ಸಂಸ್ಥೆಯ ಮಹತ್ವಾಕಾಂಕ್ಷಿಯ ಸಮುದಾಯ ಬಾನುಲಿ ಕೇಂದ್ರ (ಕಮ್ಯುನಿಟಿ ರೇಡಿಯೋ ಸ್ಟೇಶನ್) 'ಕೆಎಲ್ಇ ಧ್ವನಿ'-ಬಿವಿಬಿ ಎಫ್ಎಂ 90.4 ಉದ್ಘಾಟನೆ ಸೆ. 21ರಂದು ಸಂಜೆ 4ಕ್ಕೆ ನಗರದ ಬಿವಿಬಿ ಕಾಲೇಜು ಆವರಣದ ಬಯೋಟೆಕ್ನಾಲಜಿ ಆಡಿಟೋರಿಯಂನಲ್ಲಿ ನೆರವೇರಲಿದೆ.
ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದ ರಾಜ್ಯಸಭಾ ಸದಸ್ಯ ಹಾಗೂ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, ಸೋನಿ ಎಂಟರ್ಟೈನ್ಮೆಂಟ್ನ ರಿಯಾಲಿಟಿ ಶೋ ಇಂಡಿಯನ್ ಐಡಿಯಲ್ ಜೂನಿಯರ್ ಸ್ಪರ್ಧೆಯಲ್ಲಿ ವಿಜೇತ ಬೆಂಗಳೂರಿನ 10 ವರ್ಷದ ಬಾಲಕಿ ಅಂಜನಾ ಪದ್ಮನಾಭನ್ ಈ ಬಾನುಲಿ ಕೇಂದ್ರ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.
ರು. 50 ಲಕ್ಷ ವೆಚ್ಚ: ಈ ಸಮುದಾಯ ಬಾನುಲಿ ಕೇಂದ್ರದ ಮೂಲಕ ಕೃಷಿ, ವಿಜ್ಞಾನ, ಆರೋಗ್ಯ, ಇಂಗ್ಲಿಷ್ ಭಾಷೆಯನ್ನು ಸುಲಲಿತವಾಗಿ ಮಾತನಾಡುವ ಕಲೆ, ಮನರಂಜನೆ, ಶಿಕ್ಷಣದ ಮಾರ್ಗದರ್ಶನ, ಹಣ ಉಳಿತಾಯ ಹಾಗೂ ಗಳಿಕೆ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಬಿತ್ತರಿಸಲಾಗುವುದು. ಆಕಾಶ ಹಾಗೂ ಲಹರಿ ಆಡಿಯೋ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಈ ಸಂಸ್ಥೆಗಳ 20 ಸಾವಿರ ಹಾಡುಗಳು ಬಿತ್ತರಗೊಳ್ಳಲಿವೆ. ಚಲನಚಿತ್ರ ಗೀತೆಗಳಷ್ಟೇ ಅಲ್ಲದೇ ಜಾನಪದ, ಲಾವಣಿ ಗೀತೆಗಳೂ ಪ್ರಸಾರಗೊಳ್ಳಲಿವೆ. ಸುಮಾರು ರು. 50 ಲಕ್ಷ ವೆಚ್ಚದಲ್ಲಿ ಈ ಬಾನುಲಿ ಕೇಂದ್ರ ಸಿದ್ಧಗೊಂಡಿದೆ. 11 ಕಿಮೀ ವ್ಯಾಪ್ತಿವರೆಗೆ ಬಾನುಲಿ ಕೇಂದ್ರದ ತರಂಗಾಂತರಗಳು ಪ್ರಸಾರಗೊಳ್ಳಲಿವೆ. ಪ್ರಾರಂಭದಲ್ಲಿ ನಿತ್ಯ 8 ತಾಸುಗಳವರೆಗೆ ಕಾರ್ಯಕ್ರಮಗಳನ್ನು ಬಿತ್ತರಿಸಲಾಗುತ್ತಿದ್ದು, ಬೆಳಗ್ಗೆ 6.30ರಿಂದ ರಾತ್ರಿ 8 ಗಂಟೆಯವರೆಗೆ ಕಾರ್ಯಕ್ರಮಗಳು ಪ್ರಸಾರಗೊಳ್ಳಲಿವೆ. ಬಾನುಲಿ ಕೇಂದ್ರದ ಕಾರ್ಯಕ್ರಮಗಳ ನಿರೂಪಣೆಗಾಗಿ ಉತ್ತರ ಕರ್ನಾಟಕದವರೇ ಆದ ನಾಲ್ವರು ರೇಡಿಯೋ ಜಾಕಿಗಳಿಗೆ ತರಬೇತಿ ನೀಡಲಾಗಿದೆ. ಈಗಾಗಲೇ 3 ತಿಂಗಳವರೆಗೆ ಪ್ರಸಾರ ಮಾಡತಕ್ಕಂಥ ಕಾರ್ಯಕ್ರಮಗಳು ಸಿದ್ಧಗೊಂಡಿವೆ.
ಬೆಳಗಾವಿಯಲ್ಲಿ ಮುಂದಿನ ವರ್ಷ ಆರೋಗ್ಯಕ್ಕೆ ಸಂಬಂಧಿಸಿದ ಬಾನುಲಿ ಕೇಂದ್ರ 'ಕೆಎಲ್ಇ ಹೆಲ್ತ್ ಧ್ವನಿ' ಪ್ರಾರಂಭಿಸುವ ಯೋಜನೆ ಇದೆ. ಅಥಣಿಯಲ್ಲಿಯೂ ಕೇವಲ ಕೃಷಿ ವಿಷಯಕ್ಕೆ ಸಂಬಂಧಿಸಿದ ಬಾನುಲಿ ಕೇಂದ್ರ ಪ್ರಾರಂಭಿಸಲಾಗುತ್ತದೆ.
ಮಹತ್ವದ ಕಾರ್ಯಕ್ರಮ: 'ಕೆಎಲ್ಇ ಧ್ವನಿ'-ಬಿವಿಬಿ ಎಫ್ಎಂ 90.4ರಲ್ಲಿ ಪ್ರಸಾರಗೊಳ್ಳಲಿರುವ ನಾ ಹುಬ್ಬಳ್ಳಿಯಂವ ಕಾರ್ಯಕ್ರಮದ ಮೂಲಕ ಉದ್ಯೋಗನಿರತರಿಗೆ, ಮಹಿಳೆಯರಿಗೆ ಹಾಗೂ ಯುವಕರಿಗಾಗಿ ಮಹತ್ವದ ಕಾರ್ಯಕ್ರಮಗಳನ್ನು ಸಿದ್ಧಪಡಿಸಲಾಗಿದೆ. ಪ್ರತಿ ಶನಿವಾರ ಮತ್ತು ಭಾನುವಾರ ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತದೆ ಎಂದು ಡಾ. ಪ್ರಭಾಕರ ಕೋರೆ ವಿವರಿಸಿದರು. ಬಿವಿಬಿ ಕಾಲೇಜಿನ ಪ್ರಾಚಾರ್ಯ ಡಾ. ಅಶೋಕ ಶೆಟ್ಟರ, ಬಾನುಲಿ ಕೇಂದ್ರದ ಮುಖ್ಯಸ್ಥ ರಾಘವೇಂದ್ರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

