ಕೋರ್ಟ್ ಕೇಸ್ಗೆ ಮೇಲ್ಮನವಿ ಸಲ್ಲಿಸಿ
ಧಾರವಾಡ: ನ್ಯಾಯಾಲಯದಲ್ಲಿರುವ ಪ್ರಕರಣಗಳ ಕುರಿತು ಅರ್ಜಿದಾರರು ಹಲವಾರು ಅರ್ಜಿಗಳನ್ನು ಸಲ್ಲಿಸಿದ್ದು, ಅವು ಲೋಕಾಯುಕ್ತ ವ್ಯಾಪ್ತಿಗೆ ಬರುವುದಿಲ್ಲ. ಆದ್ದರಿಂದ ಅರ್ಜಿದಾರರು ನ್ಯಾಯಾಲಯ ಪ್ರಕರಣಗಳ ಕುರಿತು ಅಲ್ಲಿಯೇ ಮೇಲ್ಮನವಿ ಸಲ್ಲಿಸಿ ಎಂದು ಲೋಕಾಯುಕ್ತ ನ್ಯಾಯಮೂರ್ತಿ ವೈ. ಭಾಸ್ಕರ್ರಾವ್ ಮನವಿ ಮಾಡಿದರು.
ಇಲ್ಲಿನ ಆಲೂರು ವೆಂಕಟರಾವ್ ಸಭಾಭವನದಲ್ಲಿ ಮಂಗಳವಾರ ನಡೆದ ಅಹವಾಲು ಸ್ವೀಕಾರ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಅರ್ಜಿದಾರರು ತಾವು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಅರ್ಜಿ ಸಲ್ಲಿಸಿದ್ದರು. ಆದರೆ, ಅದರಲ್ಲಿ ಬಹುತೇಕ ಪ್ರಕರಣಗಳ ಕುರಿತು ನ್ಯಾಯಾಲಯದಲ್ಲಿ ಇರುವ ಕಾರಣ ಮತ್ತು ನೇಮಕಾತಿಯಲ್ಲಿ ನಡೆಯುತ್ತಿರುವ ಅವ್ಯವಹಾರದ ಕುರಿತಾಗಿ ಇದ್ದ ಅರ್ಜಿಗಳ ವಿಚಾರಣೆ ನಡೆಸಿ ಈ ರೀತಿ ಪ್ರಕರಣಗಳಲ್ಲಿ ಲೋಕಾಯುಕ್ತ ಇಲಾಖೆ ಮಧ್ಯ ಪ್ರವೇಶಿಸಲು ಅಧಿಕಾರವಿಲ್ಲ ಎಂದರು.
ಎಂ. ಭರತ ಮುಗದೂರ ಎಂಬುವವರು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರ ಸರ್ವೋದಯ ಶಿಕ್ಷಣ ಟ್ರಸ್ಟ್ದಿಂದ ನಡೆಯುತ್ತಿರುವ ಅವ್ಯವಹಾರ ಕುರಿತು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಭಾಸ್ಕರರಾವ್, ಅವ್ಯವಹಾರ, ಡಿಡಿಪಿಐ ಒತ್ತಡಕ್ಕೆ ಮಣಿದು ವಿರೋಧಿ ಕ್ರಮ ಕೈಗೊಳ್ಳುತ್ತಿರುವ ಕುರಿತು ಸಿವಿಲ್ ನ್ಯಾಯಾಲಯದಲ್ಲಿ ದೂರು ದಾಖಲಿಸಿ. ನಂತರ ನ್ಯಾಯಾಲಯ ಸೂಕ್ತ ಕ್ರಮ ಕೈಗೊಳ್ಳುವುದು. ರಾಯಚೂರಿನ ಸಾಬಣ್ಣ ಹಟ್ಟಿ ಎಂಬುವವರು ಕವಿವಿ ಕುಲಪತಿಗಳು ಎಫ್ಡಿಎ ನೇಮಕಾತಿ ಮಾಡಿಕೊಳ್ಳುತ್ತಿಲ್ಲ ಎಂದು ಅರ್ಜಿ ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ಭಾಸ್ಕರರಾವ್ ಅವರು, ನೇಮಕಾತಿ ವಿಷಯದಲ್ಲಿ ಲೋಕಾಯುಕ್ತ ಮಧ್ಯಸ್ಥಿಕೆ ವಹಿಸಲು ಬರುವುದಿಲ್ಲ. ಲೋಕಾಯುಕ್ತ ತನ್ನ ಕಾರ್ಯ ಮಿತಿಯಲ್ಲಿಯೇ ಕಾರ್ಯ ನಿರ್ವಹಿಸಬೇಕಾಗುತ್ತದೆ. ನೇಮಕಾತಿ ಕುರಿತಂತೆ ಅದಕ್ಕಾಗಿಯೇ ಪ್ರತ್ಯೇಕ ಇಲಾಖೆ ಇದ್ದು, ಅಲ್ಲಿ ಅರ್ಜಿ ಸಲ್ಲಿಸಿ ಎಂದರು.
ಇಲ್ಲಿನ ಗೌಸುಖಾನ ನವಲೂರ ಎಂಬುವರು ಒಂದು ವರ್ಷದ ಹಿಂದೆ ಉಪನಗರ ಠಾಣೆಯಲ್ಲಿ ವಂಚನೆ ಮಾಡಿದ ಕುರಿತು ದೂರು ಸಲ್ಲಿಸಿದ್ದರು. ನ್ಯಾಯಾಲಯ ಸಹ ಪೊಲೀಸರಿಗೆ ವಿಚಾರಣೆ ನಡೆಸುವಂತೆ ಆದೇಶಿಸಿತ್ತು. ಇಲ್ಲಿಯ ವರೆಗೆ ಯಾವುದೇ ರೀತಿಯ ನ್ಯಾಯ ದೊರೆತಿಲ್ಲ ಎಂದು ಅರ್ಜಿ ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ಲೋಕಾಯುಕ್ತರು, ಪೊಲೀಸರನ್ನು ವಿಚಾರಿಸಿ, ಕೋರ್ಟಿನಿಂದ ನಿರ್ದೇಶನ ಬಂದರೂ ಯಾತಕ್ಕಾಗಿ ಪ್ರಕರಣ ಇತ್ಯರ್ಥ್ಥಗೊಳಿಸುವಲ್ಲಿ ತಡವಾಗುತ್ತಿದೆ ಎಂದು ಪ್ರಶ್ನಿಸಿದಾಗ, ಇದಕ್ಕೆ ಸಂಬಂಧಿಸಿದ ಎಲ್ಲ ರೀತಿ ಮಾಹಿತಿ ಕಲೆ ಹಾಕಿದೆ. ಶೀಘ್ರ ಮುಗಿಸುವುದಾಗಿ ಹೇಳುತ್ತಿದ್ದಂತೆ 2 ತಿಂಗಳದಲ್ಲಿ ಈ ಪ್ರಕರಣಗಳ ಕುರಿತು ಇತ್ಯರ್ಥಗೊಳಿಸಿ ಎಂದರು.
ನಂತರ ವಿವಿಧ ವಿಷಯಗಳ ಕುರಿತು ಸಂಜೆವರೆಗೆ ವಿಚಾರಣೆ ನಡೆಸಿದರು. ಲೋಕಾಯುಕ್ತ ರಜಿಸ್ಟ್ರಾರ್ ದೇಶಪಾಂಡೆ, ಲೋಕಾಯುಕ್ತ ಡಿಎಸ್ಪಿ ಎಂ.ಬಿ. ಮೇಘಣ್ಣವರ, ಅಪರ ಜಿಲ್ಲಾಧಿಕಾರಿ ಶಿವಾನಂದ ಕಾಪಸೆ, ಪೊಲೀಸ್ ಆಯುಕ್ತ ಬಿ.ಎ. ಪದ್ಮನಯನ, ಜಿಪಂ ಸಿಇಒ ಪಿ.ಎ. ಮೇಘಣ್ಣವರ, ಎಸ್ಪಿ ಬಿ.ಎಸ್. ಲೋಕೇಶಕುಮಾರ, ಪಾಲಿಕೆ ಜಂಟಿ ಆಯುಕ್ತ ಬಿ.ಎಫ್. ಕುಂದಗೋಳ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

