ಸುದ್ದಿ ಸಂಕ್ಷೇಪ
ನಾಳೆ ಧಾರ್ಮಿಕ ಕಾರ್ಯಕ್ರಮ
ಹುಬ್ಬಳ್ಳಿ: ವರೂರು ನವಗ್ರಹ ತೀರ್ಥದ ಪ್ರವರ್ತಕ, ರಾಷ್ಟ್ರಸಂತ ಯುವಾಚಾರ್ಯ ಶ್ರೀ ಗುಣಧರನಂದಿ ಮಹಾರಾಜರ 41ನೇ ಜನ್ಮ ಜಯಂತಿ ಅಂಗವಾಗಿ ನಗರದ ಶಾಂತಿನಾಥ ಸಾಂಸ್ಕೃತಿಕ ಭವನದಲ್ಲಿ ಸೆ. 21ರಿಂದ ಎರಡು ದಿನಗಳವರೆಗೆ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದ ವರೂರು ನವಗ್ರಹ ತೀರ್ಥಕ್ಷೇತ್ರದ ಧರ್ಮಸೇನ ಭಟ್ಟಾರಕರು, ಶ್ರೀ ಗುಣಧರನಂದಿ ಮಹಾರಾಜರ ಜನ್ಮ ಜಯಂತಿಯನ್ನು ಪ್ರತಿವರ್ಷ 'ಜೈನ ಸಮಾಜ-ಸಾಮಾಜಿಕ ಜಾಗೃತಿ ದಿನ'ವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದರು. ಸೆ. 20ರಂದು ಸಂಜೆ 4ಕ್ಕೆ ಗುಣಧರನಂದಿ ಮಹಾರಾಜರು ನಗರ ಮಂಗಲ ಪ್ರವೇಶ ಮಾಡುವರು. ನ್ಯೂ ಇಂಗ್ಲಿಷ್ ಸ್ಕೂಲ್ ಬಳಿ ಸ್ವಾಮೀಜಿಯವರನ್ನು ಸ್ವಾಗತಿಸಲಾಗುವುದು. ಸೆ. 21ರಂದು ಮಧ್ಯಾಹ್ನ 2ಕ್ಕೆ ಮಹಾಮೃತ್ಯುಂಜಯ ವಿಧಾನ ನಡೆಯುವುದು. ಸೆ. 22ರಂದು ಮಧ್ಯಾಹ್ನ 1ಕ್ಕೆ ಆಚಾರ್ಯ ಗುಣಧರನಂದಿ ಮಹಾರಾಜರ 41ನೇ ಜಯಂತಿ ಕಾರ್ಯಕ್ರಮ, ವಿನಯಾಂಜಲಿ, ಪಾದಪೂಜೆ, ಆರತಿ ನಡೆಯುವುದು ಎಂದು ತಿಳಿಸಿದರು. ಶ್ರೀ ನಿಜಾನಂದಸಾಗರ ಮಹಾರಾಜರು, ಬ್ರಹ್ಮಕುಮಾರ ಬೀಳಗಿ ಮತ್ತಿತರರು ಇದ್ದರು.
ಗಂಜೀಗಟ್ಟಿ ಉಪಚುನಾವಣೆ: ನಾಲ್ವರ ನಾಮಪತ್ರ ಸಲ್ಲಿಕೆ
ಕಲಘಟಗಿ: ತಾಲೂಕಿನ ಗಂಜೀಗಟ್ಟಿ ತಾಪಂ ಕ್ಷೇತ್ರದ ಉಪ ಚುನಾವಣೆಯ ನಾಮಪತ್ರ ಸಲ್ಲಿಸುವ ಕೊನೆಯ ಸೆ. 18ರ ಮಧ್ಯಾಹ್ನ 3ರ ವರೆಗೆ ನಾಲ್ವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ತಾಪಂ ಕಚೇರಿಯ ಸಭಾಭವನದ ಚುನಾವಣಾಧಿಕಾರಿ ಕಾರ್ಯಾಲಯದಲ್ಲಿ ಪಕ್ಷೇತರ ಅಭ್ಯರ್ಥಿ ಸುರೇಶ ಚಿನ್ನಪ್ಪ ಕೊಪ್ಪದಗಾಣಿಗೇರ, ಕಾಂಗ್ರೆಸ್ಸಿನಿಂದ ಮಂಜುನಾಥ ಎಂ. ಧಾರವಾಡ, ಮಾಜಿ ತಾಪಂ ಅಧ್ಯಕ್ಷ ಬಿ.ವೈ. ಗಾಣಿಗೇರ, ಬಿಜೆಪಿಯಿಂದ ಮಂಜುನಾಥ ಕೆ. ಬಡಿಗೇರ ನಾಮಪತ್ರವನ್ನು ಸಹಾಯಕ ಚುನಾವಣಾಧಿಕಾರಿ ಎಂ.ವಿ. ಬದಿಯವರಿಗೆ ಸಲ್ಲಿಸಿದರು. ಸೆ. 21ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿದ್ದು, 29ರಂದು ಮತದಾನ ನಡೆಯಲಿದ್ದು, ಗಂಜೀಗಟ್ಟಿ ತಾಪಂ ಕ್ಷೇತ್ರದ ಒಟ್ಟು 7 ಗ್ರಾಮದ ಮತದಾರರು ಮತಚಲಾವಣೆ ಮಾಡಲಿದ್ದಾರೆ. ಇದೇ ಕ್ಷೇತ್ರದ ತಾಪಂ ಮಾಜಿ ಅಧ್ಯಕ್ಷ ಚಿನ್ನಪ್ಪ ಕೊಪ್ಪದಗಾಣಿಗೇರ ಅಕಾಲಿಕ ನಿಧನದಿಂದಾಗಿ ತೆರವುಗೊಂಡ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ.
ಬೀಜೋತ್ಪಾದನಾ
ತರಬೇತಿ ಶಿಬಿರ
ಧಾರವಾಡ: ರಾಷ್ಟ್ರೀಯ ಹಾಗೂ ಕರ್ನಾಟಕ ರಾಜ್ಯ ಬೀಜ ನಿಗಮಗಳು ಕೃಷಿ ತಂತ್ರಜ್ಞರ ಹಾಗೂ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆಗಳ ಸಹಯೋಗದಲ್ಲಿ ಪ್ರಮಾಣಿತ ಬೀಜೋತ್ಪಾದನೆ ಹಾಗೂ ಬೀಜಗ್ರಾಮ ತರಬೇತಿ ಶಿಬಿರ ಆಯೋಜಿಸಿವೆ. ಧಾರವಾಡದ ಬೆಳಗಾವಿ ರಸ್ತೆಯಲ್ಲಿನ ಜಿಲ್ಲಾ ಕೃಷಿ ತರಬೇತಿ ಕೇಂದ್ರ (ಜಿಟಿಸಿ) ಸಭಾಂಗಣದಲ್ಲಿ ಸೆ. 20ರಂದು ಬೆಳಗ್ಗೆ 11ಕ್ಕೆ ಕೃಷಿ ತಂತ್ರಜ್ಞರ ಸಂಸ್ಥೆ ಉಪಾಧ್ಯಕ್ಷ ಡಾ. ಡಿ. ರಾಜಗೋಪಾಲ ಉದ್ಘಾಟಿಸುವರು. ಜಂಟಿ ಕೃಷಿ ನಿರ್ದೇಶಕ ಎಸ್.ಎಂ. ಗಡಾದ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
ಧಾರವಾಡ: ನಾಳೆ ಉದ್ಘಾಟನೆ
ಧಾರವಾಡ: ಹೈಕೋರ್ಟ್ನ ಧಾರವಾಡ ಪೀಠದ ಕಾನೂನು ಸೇವೆಗಳ ಸಮಿತಿ ಕಾನೂನು ಸಲಹಾ ಕೇಂದ್ರದ ಉದ್ಘಾಟನೆ ಸೆ. 21ರ ಬೆಳಗ್ಗೆ 10.30ಕ್ಕೆ ಜರುಗಲಿದೆ. ಧಾರವಾಡದ ಬೇಲೂರಿನ ಹೈಕೋರ್ಟ್ ಪೀಠ ಕಟ್ಟಡದ ನೆಲಮಹಡಿಯಲ್ಲಿ ನಡೆಯುವ ಸಮಾರಂಭದಲ್ಲಿ ಸಲಹಾ ಕೇಂದ್ರವನ್ನು ಸರ್ವೊಚ್ಚ ನ್ಯಾಯಾಲಯದ ನ್ಯಾ. ವಿ. ಗೋಪಾಲಗೌಡ ಉದ್ಘಾಟಿಸುವರು. ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿಗಳಾದ ಕೆ.ಎಲ್. ಮಂಜುನಾಥ, ಮೋಹನ ಶಾಂತನಗೌಡರ, ಎಚ್.ಎನ್. ನಾಗಮೋಹನ್ದಾಸ್, ಆನಂದ ಭೈರಾರೆಡ್ಡಿ, ರಾಜ್ಯ ಸರ್ಕಾರದ ಅಡ್ವೋಕೇಟ್ ಜನರಲ್ ರವಿವರ್ಮಕುಮಾರ್, ಬಿ.ಡಿ. ಹಿರೇಮಠ ಪಾಲ್ಗೊಳ್ಳುವರು ಎಂದು ಧಾರವಾಡ ಪೀಠದ ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಎ.ವಿ. ಶ್ರೀನಾಥ ತಿಳಿಸಿದ್ದಾರೆ.
ಸಿತಾರ್ ನುಡಿಸುವ ಕಾರ್ಯಕ್ರಮ
ಧಾರವಾಡ: ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದ ಕಲಾ ಮಂಟಪದ ವತಿಯಿಂದ ಸೆ. 20ರಂದು ಸಂಜೆ 6ಕ್ಕೆ ಸಂಘದ ರಾ. ಹ. ದೇಶಪಾಂಡೆ ಸಭಾಭವನದಲ್ಲಿ ನಟರಾಜ ಮಹಾಜನ ಸಮೀರವಾಡಿ ಇವರ ಕಂಠದಿಂದ (ವಾದ್ಯರಹಿತ) ಶಹನಾಯಿ ಹಾಗೂ ಸಿತಾರ್ ನುಡಿಸುವ ಕಾರ್ಯಕ್ರಮ ಆಯೋಜಿಸಿದೆ. ಸಂಘದ ಉಪಾಧ್ಯಕ್ಷ ಶಿವಣ್ಣ ಬೆಲ್ಲದ ಅಧ್ಯಕ್ಷತೆ ವಹಿಸುವರು. ಜಿಪಂ ಮಾಜಿ ಅಧ್ಯಕ್ಷ ವಿ.ಎಸ್. ಪಾಟೀಲ ಅತಿಥಿಯಾಗಿ ಪಾಲ್ಗೊಳ್ಳುವರು. ಸಾಹಿತಿಗಳು, ಕಲಾವಿದರು, ಸಂಗೀತಾಸಕ್ತರು, ಸಂಘದ ಆಜೀವ ಸದಸ್ಯರು, ಅಭಿಮಾನಿಗಳು ಆಸಕ್ತ ಸಾರ್ವಜನಿಕರು ಪಾಲ್ಗೊಳ್ಳುವಂತೆ ಕಲಾ ಮಂಟಪದ ಸಂಚಾಲಕರಾದ ಸಿದ್ದಲಿಂಗ ದೇಸಾಯಿ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

