ಧಾರವಾಡ

ವರ್ಗಾವಣೆಗೆ ಪೊಲೀಸ್ ಅಧಿಕಾರಿಗಳ ಲಾಬಿ

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಸೆ. 20
ಗಣೇಶೋತ್ಸವ ಮುಗಿದಿದ್ದೇ ತಡ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆಯ ಪ್ರಕ್ರಿಯೆ ಶುರುವಾಗಿದೆ. ಮಹಾನಗರ ಪೊಲೀಸ್ ವ್ಯಾಪ್ತಿಯಲ್ಲಿ ಪಿಎಸ್‌ಐಗಳಿಂದ ಹಿಡಿದು ಸಿಪಿಐ, ಎಸಿಪಿ, ಡಿಸಿಪಿ ಹಾಗೂ ಕಮೀಷನರ್ ವರೆಗಿನ ಹುದ್ದೆಗಳಲ್ಲಿ ಅದಲು-ಬದಲಾಗಲಿದೆ.
ಈ ಹಿಂದೆಯೇ ತೀವ್ರತೆ ಪಡೆದುಕೊಂಡಿದ್ದ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಗಣೇಶೋತ್ಸವದ ಹಿನ್ನೆಲೆಯಲ್ಲಿ ಕೆಲ ದಿನ ತಟಸ್ಥಗೊಂಡಿತ್ತು. ಗಣೇಶೋತ್ಸವ ಮುಂದಿಟ್ಟುಕೊಂಡು ಅಧಿಕಾರಿಗಳ ವರ್ಗಾವಣೆ ಮಾಡಿದ್ದೇ ಆದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಲು ಕಷ್ಟವಾಗುತ್ತಿತ್ತು. ಹೊಸದಾಗಿ ವರ್ಗವಾಗಿ ಬಂದ ಅಧಿಕಾರಿಗಳಿಗೆ ಸ್ಥಳೀಯ ಸಂಗತಿ ಅರಿಯಲು ಹಾಗೂ ಹಿಡಿತ ಸಾಧಿಸಲು ಸಮಯಾವಕಾಶ ಬೇಕಾಗುತ್ತದೆ. ಹೀಗಿರುವಾಗ ಗಣೇಶೋತ್ಸವ ಸುಸೂತ್ರವಾಗಿ ನಡೆಸುವ ಉದ್ದೇಶದಿಂದ ಅಧಿಕಾರಿಗಳ ವರ್ಗಾವಣೆಗೆ ಕೆಲ ಕಾಲ ಬ್ರೇಕ್ ಹಾಕಲಾಗಿತ್ತು. ಆದರೀಗ ಗಣೇಶೋತ್ಸವ ಮುಗಿದಿದ್ದೇ ತಡ ವರ್ಗಾವರ್ಗಿ ಪ್ರಕ್ರಿಯೆ ಜೋರಾಗಿ ಬಿಟ್ಟಿದೆ.
ಬೆಂಗಳೂರು ಮಟ್ಟದಲ್ಲಿ ಲಾಬಿ: ಗಣೇಶೋತ್ಸವ ಮುಗಿದಿದ್ದೇ ತಡ ಅವಳಿ ನಗರದ ಕೆಲ ಅಧಿಕಾರಿಗಳು ರಜೆಯ ಮೇರೆಗೆ ಬೆಂಗಳೂರಿಗೆ ಜಿಗಿದು ಬಿಟ್ಟಿದ್ದಾರೆ. ಅಲ್ಲಿ ಠಿಕಾಣಿ ಹೊಡೆದು ತಮಗೆ ಬೇಕಾದ ಶಾಸಕ, ಸಚಿವರ ಪ್ರಭಾವ ಬಳಸಿಕೊಂಡು ಆಯಕಟ್ಟಿನ ಸ್ಥಳ ಗಿಟ್ಟಿಸಿಕೊಳ್ಳಲು ಇನ್ನಿಲ್ಲದ ಹರಸಾಹಸ ಮಾಡುತ್ತಿದ್ದಾರೆ. "ತಾವು ನಿಮಗೆ ನಿಷ್ಠರಾಗಿ ನಡೆದುಕೊಳ್ಳುತ್ತೇವೆ ಹೇಗಾದರೂ ಮಾಡಿ ತಮಗೆ ಬೇಕಾದ ಠಾಣೆಗೆ ವರ್ಗಾವಣೆ ಮಾಡಿಸಿಕೊಡಿ" ಎಂದು ದುಂಬಾಲು ಬೀಳುತ್ತಿದ್ದಾರೆ.
ಪ್ರಮುಖವಾಗಿ ಕಮೀಷನರ್, ಡಿಸಿಪಿ, ಎಸಿಪಿ, ಸಿಪಿಐ ಹುದ್ದೆಗೆ ಇನ್ನಿಲ್ಲದ ಪೈಪೋಟಿ ನಡೆದಿದೆ. ಯಾರ್ಯಾರು ಯಾವ ಯಾವ ಸ್ಥಾನಗಳಿಗೆ ವರ್ಗವಾಗಬೇಕೆಂದು ಈ ಹಿಂದೆಯೇ ನಿರ್ಧರಿಸಿಯಾಗಿದ್ದರೂ ಇದೀಗ ಪುನಃ ವರ್ಗಾವಣೆ ಪಟ್ಟಿಯಲ್ಲಿ ಬದಲಾವಣೆಗಳಾಗುತ್ತಿವೆ. ಕೊನೆ ಘಳಿಗೆಯಲ್ಲಿ ಭರ್ಜರಿ ಲಾಬಿ ನಡೆಸಿದರಿಗೆ ಅಗತ್ಯವಿರುವ ಠಾಣೆಯಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ.
ಪೊಗದಸ್ತಾದ ಠಾಣೆಗಳಿಗೆ ಬೇಡಿಕೆ: ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ವ್ಯಾಪ್ತಿಗೆ ಬರಲು ಅಧಿಕಾರಿಗಳು ತುದಿಗಾಲ ಮೇಲೆ ನಿಂತಿದ್ದಾರೆ. ಪೋಗದಸ್ತಾದ ಠಾಣೆಗಳಿಗೆ ಒಮ್ಮೆ ಸೇರಿಕೊಂಡರೆ ಸಾಕು ಎನ್ನುತ್ತಿದ್ದಾರೆ. ಹುಬ್ಬಳ್ಳಿ ಹಾಗೂ ಧಾರವಾಡ ಕೆಲ ಠಾಣೆಗಳನ್ನು ಸೇರಿಕೊಳ್ಳಲಂತೂ ಹಿಂದೆಂದೂ ಕಂಡರಿಯದಷ್ಟರ ಮಟ್ಟಿಗೆ ಪೈಪೋಟಿ ನಡೆದಿದೆ.
ಹುಬ್ಬಳ್ಳಿ ನಗರ ಠಾಣೆ, ಉಪನಗರ ಠಾಣೆ, ವಿದ್ಯಾನಗರ, ಕೇಶ್ವಾಪುರ, ಗೋಕುಲ ಪೊಲೀಸ್ ಠಾಣೆಗೆ ಬಹುಬೇಡಿಕೆಯದ್ದು. ಇನ್ನು ಉತ್ತರ ಸಂಚಾರಿ, ಪೂರ್ವ ಸಂಚಾರಿ ಹಾಗೂ ದಕ್ಷಿಣ ಸಂಚಾರಿ ಠಾಣೆಗೂ ಇನ್ನಿಲ್ಲದ ಬೇಡಿಕೆ. ಇನ್ನು ಧಾರವಾಡ ನಗರ ಹಾಗೂ ಉಪನಗರ ಪೊಲೀಸ್ ಠಾಣೆಗಾಗಿಯೂ ಭಾರಿ ಪೈಪೋಟಿ ನಡೆದಿದೆ. ಇವೆಲ್ಲದರ ನಡುವೆ ಹುಬ್ಬಳ್ಳಿ ನಗರ ಠಾಣೆ, ಉಪನಗರ ಠಾಣೆಯಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲಂತೂ ಸಿಪಿಐಗಳು ಗಂಟೇ ಬಿದ್ದಿದ್ದಾರೆ.
ಅದಲು-ಬದಲು: ಇದೀಗ ವಿವಿಧ ಠಾಣೆಯಲ್ಲಿ ಬೀಡುಬಿಟ್ಟಿರುವ ಸಿಪಿಐಗಳು ಹು-ಧಾ ಬಿಟ್ಟು ಹೋಗಲು ಮನಸ್ಸು ಮಾಡುತ್ತಿಲ್ಲ. ಇದೀಗ ತಾವು ಕಾರ್ಯ ನಿರ್ವಹಿಸುತ್ತಿರುವ ಠಾಣೆಯಲ್ಲಿಯೇ ಮುಂದುವರಿಯಲು ಪ್ರಯತ್ನಿಸುತ್ತಿದ್ದಾರೆ. ಅಲ್ಲದೆ, ಹುಬ್ಬಳ್ಳಿಯ ಪೊಗದಸ್ತಾದ ಠಾಣೆ ವರ್ಗ ಮಾಡಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಈ ನಡುವೆ ಯಾವುದೇ ಕಾರಣಕ್ಕೂ ಹು-ಧಾ ಬಿಟ್ಟು ಹೋಗಲು ಮನಸ್ಸು ಮಾಡುತ್ತಿಲ್ಲ.
ಬರಲಿದೆ ಆದೇಶ: ವರ್ಗಾವಣೆ ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು ವರ್ಗಾವಣೆಯ ಪಟ್ಟಿ ಇಷ್ಟರಲ್ಲಿಯೇ ಹೊರಬೀಳಲಿದೆ. ಅಂತಿಮ ಹಂತದಲ್ಲಿ ಕೆಲವೊಂದು ಹೆಸರು ಬದಲಾವಣೆಯಂತಹ ಪ್ರಕ್ರಿಯೆ ನಡೆಯುತ್ತಿದೆ. ಇನ್ನುಳಿದಂತೆ ಎಲ್ಲ ಪ್ರಕ್ರಿಯೆಗಳು ಮುಗಿದಿದ್ದು ಗೃಹ ಇಲಾಖೆಯಿಂದ ಆದೇಶ ಪ್ರತಿ ಹೊರಬೀಳುವುದೊಂದೆ ಬಾಕಿ ಉಳಿದಿದೆ.
-ಪ್ರಕಾಶ ಎಸ್. ಶೇಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.