ಧಾರವಾಡ

ಸರ್ಕಾರದ ಅನೀತಿ: ರೈತರಿಗೆ ಕಣ್ಣೀರುಳ್ಳಿ

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಸೆ. 20
ಕಳೆದೊಂದು ತಿಂಗಳಿನಿಂದ ಗ್ರಾಹಕರ ಕಣ್ಣಲ್ಲಿ ನೀರು ತರಿಸಿದ್ದ ಈರುಳ್ಳಿ, ಶುಕ್ರವಾರದಿಂದ ರೈತರ ಕಣ್ಣಲ್ಲಿ ನೀರು ತರಿಸುತ್ತಿದೆ. ರೈತರ ಈ ಕಣ್ಣೀರಿಗೆ ಮತ್ತಾರು ಕಾರಣ ಅಲ್ಲ, ಕೇಂದ್ರ ಸರ್ಕಾರ ನೀತಿ ಮತ್ತು ಈರುಳ್ಳಿ ಖರೀದಿದಾರರ ಲಾಲಸೆ.
ಹುಬ್ಬಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆಯೊಂದಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆಯಾಗಿರುವ ಕಾರಣ ರೈತರು ಬೆಳೆದ ಈರುಳ್ಳಿಗೂ ಉತ್ತಮ ಬೆಲೆ ಸಿಗುತ್ತಿದೆ. ಹಂಗಾಮು ಆರಂಭಗೊಂಡ ದಿನದಿಂದ ಕ್ವಿಂಟಲ್‌ಗೆ ಐದರಿಂದ ನಾಲ್ಕು ಸಾವಿರ ಬೆಲೆ ಪಡೆಯುತ್ತಿದ್ದ ಈರುಳ್ಳಿ, ಶುಕ್ರವಾರ ಹುಬ್ಬಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ಎರಡೂವರೆಯಿಂದ ಎಂಟನೂರು ರು.ಗೆ ತಲುಪಿದೆ. ಅಮರಗೋಳದ ಎಪಿಎಂಸಿ ಮಾರುಕಟ್ಟೆಗೆ ಈರುಳ್ಳಿ ಹಂಗಾಮು ಆರಂಭಗೊಂಡ ದಿನದಿಂದ ಪ್ರತಿದಿನ ಸರಾಸರಿ 6 ಸಾವಿರ ಕ್ವಿಂಟಲ್ ಈರುಳ್ಳಿ ಆವಕವಾಗುತ್ತಿದೆ.
ಆಕ್ರೋಶ: ಒಂದೇ ದಿನ ಅವಧಿಯಲ್ಲಿ ಹುಬ್ಬಳ್ಳಿಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಭಾರಿ ಪ್ರಮಾಣದಲ್ಲಿ ಈರುಳ್ಳಿ ದರ ಇಳಿಕೆಯಾಗಿದ್ದರೆ, ಬೆಳಗಾವಿ, ಗದಗ ಹತ್ತಿರದ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಕ್ವಿಂಟಲ್ ಈರುಳ್ಳಿ ದರ ಮೂರರಿಂದ ಮೂರುವರೆ ಸಾವಿರ ಇದೆ. ಏಕಾಏಕಿ ದರ ಕುಸಿತದಿಂದ ಕಂಗೆಟ್ಟ ರೈತರು ದಲ್ಲಾಳಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸುಮಾರು ನಾಲ್ಕು ಗಂಟೆಗಳ ಕಾಲ ರಸ್ತೆ ತಡೆ ನಡೆಸಿ ವ್ಯಾಪಾರಿಗಳ ವಿರುದ್ಧ ಕಿಡಿ ಕಾರಿದ್ದಾರೆ.
ಈರುಳ್ಳಿ ಕುಸಿತಕ್ಕೆ ಕಾರಣ ಏನು?: ಈರುಳ್ಳಿ ಖರೀದಿದಾರರು ಮತ್ತು ದಲ್ಲಾಳಿಗಳ ಪ್ರಕಾರ ಕೇಂದ್ರ ಸರ್ಕಾರ ಈರುಳ್ಳಿ ರಫ್ತು ನಿಷೇಧಿಸಿ ಆದೇಶ ಹೊರಡಿಸಿದೆ. ಕೇಂದ್ರ ಸರ್ಕಾರದ ಈ ನಿಷೇಧ ಮಹಾರಾಷ್ಟ್ರದ ವ್ಯಾಪಾರಿ ಮತ್ತು ರೈತರನ್ನು ಕಂಗೆಡಿಸಿದ್ದು, ಗುಣಮಟ್ಟದ ಈರುಳ್ಳಿ ಸಂಗ್ರಹಿಸಿಟ್ಟುಕೊಂಡಿರುವ ವ್ಯಾಪಾರಿಗಳು ಏಕಾಏಕಿ ಮುಂಬೈ ಮಾರುಕಟ್ಟೆಗೆ ನೂರಾರು ಲಾರಿಗಳ ಲೆಕ್ಕದಲ್ಲಿ ಈರುಳ್ಳಿ ಬಿಡುಗಡೆ ಮಾಡುತ್ತಿದ್ದಾರೆ. ಈರುಳ್ಳಿ ಪೂರೈಕೆಯಲ್ಲಿ ಹೆಚ್ಚಳವಾಗಿರುವುದು ಮತ್ತು ರಫ್ತು ನಿಷೇಧದಿಂದಾಗಿ ರಾಜ್ಯದ ಈರುಳ್ಳಿ ಉತ್ಪನ್ನಕ್ಕೆ ಮುಂಬೈ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲ.
ಕಳೆದ ಒಂದು ವಾರ ಕರ್ನಾಟಕದಲ್ಲೂ ಕೂಡ ಈರುಳ್ಳಿಗೆ ಉತ್ತಮ ಬೆಲೆ ನೀಡಲಾಗಿತ್ತು. ಏಕೆಂದರೆ ಆಗ ಮಾರುಕಟ್ಟೆಗೆ ಬಂದಿದ್ದು, ರಫ್ತು ಗುಣಮಟ್ಟದ ಈರುಳ್ಳಿ ಈಗ ಒಂದೆರಡು ದಿನಗಳಿಂದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಬರುತ್ತಿರುವ ಈರುಳ್ಳಿ ಮೋಡದ ವಾತಾವರಣದ ಕಾರಣ ಸರಿಯಾಗಿ ಒಣಗಿಲ್ಲ. ಹೀಗಾಗಿ ಕೆಲವೇ ದಿನಗಳಲ್ಲಿ ಮೊಳಕೆ ಬಂದು ಕೆಡುತ್ತದೆ. ಗುಣಮಟ್ಟ ಕೂಡ ಅಷ್ಟೊಂದು ಉತ್ತಮವಾಗಿಲ್ಲ, ಆದ್ದರಿಂದ ಬೆಲೆಯಲ್ಲೂ ಇಳಿಕೆಯಾಗುತ್ತಿದೆ ಎನ್ನುವ ಅನಿಸಿಕೆ ವ್ಯಾಪಾರಿಗಳದ್ದು. ಕರ್ನಾಟಕದಲ್ಲಿ ಈರುಳ್ಳಿ ಹಂಗಾಮು ಆರಂಭಕ್ಕೆ ಮೊದಲು ಮಹಾರಾಷ್ಟ್ರದ ನಾಸಿಕ ರೈತರು ಮುಂಬೈ, ದೆಹಲಿ, ದೇಶದ ಪ್ರಮುಖ ಮಾರುಕಟ್ಟೆಗಳಿಗೆ ದಿನಕ್ಕೆ 30-50 ಲಾರಿಗಳನ್ನು ಕಳಿಸುತ್ತಿದ್ದರು. ಕರ್ನಾಟಕದಲ್ಲಿ ಹಂಗಾಮು ಆರಂಭವಾಗುತ್ತಿದ್ದಂತೆಯೇ ನಾಸಿಕ್ ರೈತರು ಮುಂಬೈ ಮಾರುಕಟ್ಟೆಯೊಂದಕ್ಕೆ ಪ್ರತಿದಿನ ನೂರೈವತ್ತು ಲಾರಿಗಳನ್ನು ಕಳಿಸುತ್ತಿರುವುದರಿಂದ ಮುಂಬೈನಲ್ಲೂ ಭಾರಿ ಪ್ರಮಾಣದಲ್ಲಿ ಈರುಳ್ಳಿ ಪೂರೈಕೆಯಾಗುತ್ತಿರುವುದೆ ದರ ಕುಸಿತ ಎನ್ನುವ ಮಾತುಗಳನ್ನು ವ್ಯಾಪಾರಿಗಳು ಆಡುತ್ತಿದ್ದಾರೆ.
ಶೋಷಣೆ ತಡೆಯುವ ಕೆಲಸವಾಗಲಿ: ರಾಜ್ಯದಲ್ಲಿ ಬೆಳಗಾವಿ, ಗದಗ, ಹುಬ್ಬಳ್ಳಿ, ಧಾರವಾಡ ಹಾವೇರಿ, ಬಾಗಲಕೋಟೆ, ಬಿಜಾಪುರ, ರಾಯಚೂರು, ಬಳ್ಳಾರಿ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಅಂದಾಜು 99 ಸಾವಿರ ಹೆಕ್ಟೇರ್‌ನಲ್ಲಿ ಈರುಳ್ಳಿಯನ್ನು ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಲಾಗಿದೆ. ಈ ವರ್ಷ ರಾಜ್ಯದಲ್ಲಿ ಉತ್ತಮ ಮಳೆಯಾಗಿರುವುದರಿಂದ ಇಳುವರಿ ಕೂಡ ಹೆಚ್ಚಾಗಿದೆ. ಒಂದು ಅಂದಾಜಿನ ಪ್ರಕಾರ 29.70 ಲಕ್ಷ ಟನ್ ಈರುಳ್ಳಿ ರಾಜ್ಯದಲ್ಲಿ ಉತ್ಪಾದನೆಯಾಗಲಿದೆ. ಆದರೆ, ರಾಜ್ಯದಲ್ಲಿ ಹಂಗಾಮು ಆರಂಭವಾಗುವ ಹೊತ್ತಿಗೆ ಮಹಾರಾಷ್ಟ್ರದಲ್ಲಿ ಬೆಳೆಯಲಾಗಿರುವ ಈರುಳ್ಳಿ ಪ್ರವಾಹ ರೂಪದಲ್ಲಿ ದೇಶದ ಪ್ರಮುಖ ಮಾರುಕಟ್ಟೆಗೆ ಅಪ್ಪಳಿಸುತ್ತಿರುವುದರಿಂದ ರಾಜ್ಯದ ಈರುಳ್ಳಿಗೆ ಬೇಡಿಕೆ ಕುಸಿದಿದೆ.
ಮೂರು ವರ್ಷಗಳ ಬರದಿಂದ ಕಂಗೆಟ್ಟು ಈ ಬಾರಿ ಉತ್ತಮ ಮಳೆ ಕಂಡು ಇಳುವರಿಯನ್ನು ಪಡೆದ ರಾಜ್ಯದ ರೈತಾಪಿ ವರ್ಗಕ್ಕೆ ಕೇಂದ್ರ ಸರ್ಕಾರದ ಈರುಳ್ಳಿ ರಫ್ತು ನಿಷೇಧ ಮತ್ತು ಮಹಾರಾಷ್ಟ್ರದ ಈರುಳ್ಳಿ ಸರಿಯಾದ ಸಮಯಕ್ಕೆ ಮಾರುಕಟ್ಟೆಗೆ ಲಗ್ಗೆ ಹಾಕಿ ದೊರೆಯಬೇಕಿದ್ದ ಉತ್ತಮ ಬೆಲೆಯನ್ನು ಕಸಿದುಕೊಂಡಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವೇ ಕ್ರಮ ತೆಗೆದುಕೊಂಡು ಈರುಳ್ಳಿ ಬೆಳೆದ ರೈತನ ಕಣ್ಣಲ್ಲಿ ಕಣ್ಣೀರು ಬಾರದಂತೆ ಕನಿಷ್ಠ ಬೆಂಬಲ ಬೆಲೆಯನ್ನಾದರೂ ಹೆಚ್ಚಿಸುವ ಮೂಲಕ ರೈತರ ಶೋಷಣೆ ತಡೆಯುವ ಕೆಲಸ ಮಾಡಬೇಕಿದೆ.
-ಸತೀಶ ಪಾಗಾದ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.