ಕೃಷಿ ಉತ್ಪನ್ನ ಬೆಲೆ ನಿಗದಿ ಆಯೋಗ ರಚನೆ: ಸಿಎಂ
ಧಾರವಾಡ: ರೈತರು, ಕೃಷಿ ಹಾಗೂ ಮಾರುಕಟ್ಟೆ ತಜ್ಞರನ್ನು ಒಳಗೊಂಡ ಕೃಷಿ ಉತ್ಪನ್ನ ಬೆಲೆ ನಿಗದಿ ಆಯೋಗ ರಚಿಸಲಾಗುತ್ತಿದ್ದು, ಆ ಮೂಲಕ ಕೃಷಿ ಉತ್ಪನ್ನಗಳಿಗೆ ಬೆಲೆ ನಿಗದಿ ಮಾಡಲು ಸರ್ಕಾರ ಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇಲ್ಲಿನ ಕೃಷಿ ವಿವಿಯಲ್ಲಿ ನಡೆಯುತ್ತಿರುವ ನಾಲ್ಕು ದಿನಗಳ ಕೃಷಿ ಮೇಳವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿ, ವರ್ಷಗಟ್ಟಲೇ ಕಷ್ಟಪಟ್ಟು ಬೆಳೆ ಬೆಳೆದ ರೈತನಿಗೆ ಬೆಳೆ ಮಾರುವಾಗ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ಆದ್ದರಿಂದ ರೈತರಿಗೆ ಕೃಷಿಯನ್ನು ಲಾಭದಾಯಕವಾಗಿ ಮಾಡಿಕೊಳ್ಳಲು ಸರ್ಕಾರ ಬದ್ಧವಾಗಿದ್ದು, ಬೆಲೆ ನಿಗದಿಗೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಲ್ಲದೇ, ಗರಿಷ್ಠ ಐದು ಎಕರೆಯಲ್ಲಿ ಹನಿ ನೀರಾವರಿ ಮಾಡುವ ರಾಜ್ಯದ ದೊಡ್ಡ ಹಾಗೂ ಸಣ್ಣ ರೈತರಿಗೆ ಶೇ.90ರಷ್ಟು ರಿಯಾಯ್ತಿ ನೀಡಲಾಗುವುದು ಮತ್ತು ಉನ್ನತ ಶಿಕ್ಷಣ ಪಡೆಯುತ್ತಿರುವ ರೈತರ ಮಕ್ಕಳ ಶಿಕ್ಷಣದ ಶುಲ್ಕವನ್ನು ಬರಗಾಲದ ಸಂದರ್ಭದಲ್ಲಿ ಸರ್ಕಾರವೇ ಸಂಪೂರ್ಣ ಮನ್ನಾ ಮಾಡಲಿದೆ ಎಂದು ಪ್ರಕಟಿಸಿದರು.
ಕೃಷಿಗೆ ಬೆನ್ನು ತೋರುತ್ತಿರುವ ರೈತರು: ಭಾರತ ಕೃಷಿ ಪ್ರಧಾನ ದೇಶವಾದರೂ ಇತ್ತೀಚೆಗೆ ಕೃಷಿ ಲಾಭದಾಯಕವಲ್ಲದ ಹಾಗೂ ಸಣ್ಣ ಹಿಡುವಳಿದಾರರ ಸಂಖ್ಯೆ ಹೆಚ್ಚಾದ ಕಾರಣ ರೈತರು ಹಾಗೂ ಅವರ ಮಕ್ಕಳು ನಗರಗಳತ್ತ ವಲಸೆ ಹೋಗುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ವಾಸಿಸುವವರ ಸಂಖ್ಯೆ ಶೇ.75 ರಿಂದ 62ಕ್ಕೆ ಇಳಿದಿದೆ. ಇದೇ ರೀತಿ ಪರಿಸ್ಥಿತಿ ಮುಂದುವರಿದರೆ ಇನ್ನೂ ಹೆಚ್ಚಿನ ರೈತರು ಕೃಷಿಯನ್ನು ಕೈ ಬಿಡುತ್ತಾರೆ. ಆದ್ದರಿಂದ ಕೃಷಿ ವಿವಿಗಳು, ಕೃಷಿ ವಿಜ್ಞಾನಿಗಳು ಹಾಗೂ ಸರ್ಕಾರಗಳು ಗಂಭೀರವಾಗಿ ಚಿಂತಿಸಬೇಕಿದೆ. ಕೃಷಿ ಲಾಭದಾಯಕವಾಗಬೇಕಾದರೆ ಕೃಷಿ ಉತ್ಪನ್ನ ಹೆಚ್ಚಾಗಬೇಕು ಹಾಗೂ ಹೊಸ ತಳಿಗಳ ಸಂಶೋಧನೆಯಾಗಬೇಕು ಎಂದರು.
ಬರಗಾಲಕ್ಕೆ ಶಾಶ್ವತ ಪರಿಹಾರ ಕಂಡು ಹಿಡಿಯಬೇಕು. ಒಣ ಭೂಮಿ ಬಗ್ಗೆ ಸ್ಪಷ್ಟ ನೀತಿ ಜಾರಿಯಾಗಿ ಒಣ ಭೂಮಿಯಲ್ಲಿ ಯಾವ ಬೆಳೆ ಬೆಳೆಯಬಹುದು ಎಂಬುದರ ಕುರಿತು ಸಂಶೋಧನೆಗಳು ನಡೆಯಬೇಕು. ಈ ಸಂಶೋಧನೆಗಳು ರೈತನ ಹೊಲಗಳಿಗೆ ನೇರವಾಗಿ ತಲುಪಬೇಕು. ಕೃಷಿ ವಿವಿಗಳು ಸಂಶೋಧನೆಯತ್ತ ಹೆಚ್ಚಿನ ಒತ್ತು ನೀಡಿದರೆ ರಾಜ್ಯ ಸರ್ಕಾರ ವಿಶ್ವವಿದ್ಯಾಲಯಗಳಿಗೆ ಬೇಕಾದ ಆರ್ಥಿಕ ಸಂಪತ್ತನ್ನು ಒದಗಿಸಲು ಸಿದ್ಧವಾಗಿದೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

