ಸಂಹಿತೆ ಭಯ: ಅಬ್ಬರ ಮಾಯ
ಧಾರವಾಡ: ನೀತಿ ಸಂಹಿತೆ ಕಟ್ಟು ನಿಟ್ಟಾಗಿ ಜಾರಿಯಲ್ಲಿರುವುದರಿಂದ ಚುನಾವಣೆಗಳಲ್ಲಿ ಕಾಣುತ್ತಿದ್ದ ಹುಮ್ಮಸ್ಸು, ಆರ್ಭಟದ ಪ್ರಚಾರ ಈ ಬಾರಿ ಮಾಯವಾಗಿದೆ.
ಮತದಾನಕ್ಕೆ ಏಳೆಂಟು ದಿನ ಮಾತ್ರ ಬಾಕಿ ಉಳಿದಿದ್ದು, ಮೊದಲಾಗಿದ್ದರೆ ಬಿರುಸಿನ ಪ್ರಚಾರ ನಡೆಯುತ್ತಿತ್ತು. ಆದರೆ, ಕಳೆದ ವಿಧಾನ ಸಭೆ ಚುನಾವಣೆಯಿಂದ ನೀತಿ ಸಂಹಿತೆಯ ಪ್ರಭಾವ ರಂಗು-ರಂಗಿನ ಚುನಾವಣೆ ವಾತಾವರಣಕ್ಕೆ ಮೂಗುದಾರ ಹಾಕಿದೆ. ಚುನಾವಣೆಯ ಪ್ರತಿ ಪ್ರಕ್ರಿಯೆ, ಪ್ರಚಾರ ಎಲ್ಲವೂ ಶಾಂತಿಯುತವಾಗಿದೆ.
ತೆಪ್ಪಗೆ ಕುಳಿತರು: ಈ ಮೊದಲು ಬೃಹತ್ ಬಹಿರಂಗ ಸಭೆ, ಸಮಾರಂಭಗಳಲ್ಲಿ ಸಾವಿರಾರು ಜನರನ್ನು ಸೇರಿಸಿ, ಮುಖಂಡರು ವಾಕ್ಚಾತುರ್ಯ ಮೆರೆಯುತ್ತಿದ್ದರು. ಆಯಾ ಪಕ್ಷಗಳ ಕೇಂದ್ರ ಹಾಗೂ ರಾಜ್ಯದ ನಾಯಕರು ನಿತ್ಯ ಬಹಿರಂಗ ಸಭೆಗಳಲ್ಲಿ ಭಾಗವಹಿಸಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದ್ದರು. ಆದರೆ, ನೀತಿ ಸಂಹಿತೆಯ ಕಠಿಣ ನಿಯಮಗಳಿಂದಾಗಿ ನಿರಸವಾಗಿರುವ ಲೋಕಸಭೆ ಚುನಾವಣೆ ಈಗ ಪಾದಯಾತ್ರೆ, ಮನೆ-ಮನೆಗೆ ಭೇಟಿ ಹಾಗೂ ರೋಡ್ ಶೋಗಳಿಗೆ ಸೀಮಿತವಾಗಿದೆ.
ಕೆಲವು ಕಡೆ ಬಹಿರಂಗ ಸಭೆ ಮಾಡಿದರೂ ಅದ್ಧೂರಿ ಎನಿಸದಂತೆ, ಕಡಿಮೆ ಶಕ್ತಿಯ ಧ್ವನಿವರ್ಧಕ ಬಳಸಿ, ಆಸೆ-ಆಮಿಷ ಒಡ್ಡದಂತೆ ಸಾಮಾನ್ಯ ಸಭೆಯಂತೆ ರಾಜಕೀಯ ಚುನಾವಣಾ ಪ್ರಚಾರ ಸಭೆಗಳು ನಡೆಸುತ್ತಿದ್ದು, ಚುನಾವಣೆ ಮುಂಚಿನ ರಂಗು ಕಳೆದುಕೊಂಡಿದೆ ಎನ್ನುವುದಕ್ಕೆ ಸಾಕ್ಷಿ.
ಮತದಾನಕ್ಕೆ ದಿನಗಣನೆ ಆರಂಭಗೊಂಡರೂ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಹೇಳಿಕೊಳ್ಳುವ ಬಹಿರಂಗ ಪ್ರಚಾರದ ಸಭೆ-ಸಮಾರಂಭಗಳು ನಡೆದಿಲ್ಲ. ನಡೆದಿದ್ದರೂ ರಾಷ್ಟ್ರಮಟ್ಟದ ನಾಯಕರು ಭಾಗವಹಿಸಿದ್ದು ವಿರಳ. ಬಿಜೆಪಿಯಿಂದ ಬಿ.ಎಸ್. ಯಡಿಯೂರಪ್ಪ, ಕೆ.ಎಸ್. ಈಶ್ವರಪ್ಪ, ಕಾಂಗ್ರೆಸ್ಸಿನಿಂದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ, ಸಚಿವ ದಿನೇಶ ಗುಂಡೂರಾವ್ ಬಂದಿದ್ದರಷ್ಟೇ. ಚಿತ್ರನಟ-ನಟಿಯರು ಬಂದರೂ ತೆರೆದ ವಾಹನ ಬಿಟ್ಟು ಇಳಿದಿಲ್ಲ. ರೋಡ್ ಶೋಗೆ ಸೀಮಿತರಾಗಿದ್ದಾರೆ.
ಲೆಕ್ಕ ಇಡ್ತಾರೆ...
ಈ ಬಾರಿ ಚುನಾವಣೆಯಲ್ಲಿ ಸ್ಟಾರ್ ಪ್ರಚಾರಕರು ಸ್ಪರ್ಧಿಸಿದ್ದು ಒಂದೆಡೆಯಾದರೆ ನೀತಿ ಸಂಹಿತೆಯ ಗುಮ್ಮವೂ ಅಭ್ಯರ್ಥಿಗಳನ್ನು ಕಾಡುತ್ತಿದೆ. ಅಭ್ಯರ್ಥಿ ಪೈಸಾ ಟು ಪೈಸಾ ಲೆಕ್ಕವನ್ನು ಚುನಾವಣಾ ಆಯೋಗಕ್ಕೆ ಒಪ್ಪಿಸಬೇಕು. ಇಲ್ಲದಿದ್ದರೆ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ದೂರು ದಾಖಲು ಗ್ಯಾರಂಟಿ. ಬಹಿರಂಗ ಸಭೆ ನಡೆಸಲು ಜಿಲ್ಲಾ ಚುನಾವಣಾಧಿಕಾರಿಗಳ ಬಳಿ ಸ್ಟಾರ್ ಪ್ರಚಾರಕರು ಬರುತ್ತಿದ್ದಾರೆಂದು ತಿಳಿಸಿ ಪರವಾನಗಿ ಪಡೆಯಬೇಕು. ಅದರ ಜತೆಗೆ ಪೊಲೀಸ್ ಆಯುಕ್ತರಿಂದ ಧ್ವನಿವರ್ಧಕದ ಪರವಾನಗಿಯೂ ಕಡ್ಡಾಯ.
ಸಭೆಗೆ ಅಭ್ಯರ್ಥಿ ಮಾಡಿದ ಸಂಪೂರ್ಣ ಖರ್ಚಿನ ಲೆಕ್ಕವನ್ನು ಆಯೋಗಕ್ಕೆ ಸಲ್ಲಿಸಬೇಕು. ತಪ್ಪು ಮಾಹಿತಿ ಅಥವಾ ಲೆಕ್ಕ ತೋರಿಸಿದರೆ, ಆಯೋಗ ಅದಕ್ಕೂ ಉಪಾಯ ಹೂಡಿದೆ. ಇಂತಹ ಬಹಿರಂಗ ಸಭೆಗಳಿಗೆ ತನಿಖಾ ತಂಡಗಳನ್ನು ಕಳುಹಿಸಿ ಕುರ್ಚಿ, ಶಾಮಿಯಾನಾ, ನೀರಿನ ಬಾಟಲ್ ಹೀಗೆ ಎಲ್ಲವನ್ನು ಎಣಿಸುತ್ತಿದೆ. ಇಷ್ಟೆಲ್ಲ ಕಿರಿಕಿರಿ ಮಧ್ಯೆ ಸಭೆ ಏಕೆಂದು ಅಭ್ಯರ್ಥಿಗಳು ಪಾದಯಾತ್ರೆ, ರೋಡ್ ಶೋಗೆ ಮೊರೆ ಹೋಗುತ್ತಿದ್ದಾರೆ.
ಈ ಮುಂಚೆ ನಮಗೆ ಮತ ಹಾಕಿ ಎಂದು ಪ್ರಚಾರ ಮಾಡುವುದಲ್ಲದೆ ಮತದಾನ ಬಗ್ಗೆಯೂ ಜಾಗೃತಿ ಮೂಡಿಸುತ್ತಿದ್ದರು. ಆದರೆ, ಮತದಾರರ ಜಾಗೃತಿಗೆ ಚುನಾವಣೆ ಆಯೋಗ ಈಗ ತೊಡೆತಟ್ಟಿ ನಿಂತಿದೆ.
ಅಭ್ಯರ್ಥಿಗಳ ಪ್ರಚಾರಕ್ಕಿಂತ ಆಯೋಗದ ಮತಜಾಗೃತಿ ಕಾರ್ಯಕ್ರಮಗಳೇ ಜಾಸ್ತಿ ಎಂದರೂ ತಪ್ಪಾಗದು. ಈ ಮುಂಚೆ ಅಭ್ಯರ್ಥಿಗಳು ಮಾಡುತ್ತಿದ್ದ ಪ್ರಚಾರದಿಂದ ಜನರಿಗೆ ಕಿರಿಕಿರಿಯಾಗುತ್ತಿತ್ತು. ಹಗಲು-ರಾತ್ರಿ ಎನ್ನದೆ ಮತದಾರರನ್ನು ಕಾಡುತ್ತಿದ್ದರು. ಬೆಳಗ್ಗೆಯಿಂದ ರಾತ್ರಿ ವರೆಗೂ ಎಡಬಿಡದೆ ಧ್ವನಿವರ್ಧಕ ಅಬ್ಬರಿಸಿ, ಬೇಸರ ಮೂಡಿಸುತ್ತಿತ್ತು. ಎಲ್ಲೆಡೆ ಪೋಸ್ಟರ್, ಬ್ಯಾನರ್ಗಳಿಂದ ನಗರದ ಸೌಂದರ್ಯವೂ ಹಾಳಾಗುತ್ತಿತ್ತು. ಆದರೆ, ಈಗ ಚುನಾವಣೆ ನಡೆಯುತ್ತಿದೆ ಎಂದರೂ ನಂಬುವ ವಾತಾವರಣವಿಲ್ಲ.
ಬಸವರಾಜ ಹಿರೇಮಠ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

