ಮತದಾನ ಹೆಚ್ಚಳಕ್ಕೆ ಭಗೀರಥ ಪ್ರಯತ್ನ
ಧಾರವಾಡ: ಯುವ ಜನರೇ ಮೊದಲು ಮತದಾರರಾಗಿ, ಹದಿನೆಂಟರ ಹರೆಯ ಮತ ಚಲಾಯಿಸುವ ಸಮಯ, ಮತದಾನವನ್ನು ಕಡ್ಡಾಯವಾಗಿ ಮಾಡಿ, ಮತ ನೀಡಿ ಆಡಳಿತ ವ್ಯವಸ್ಥೆಯಲ್ಲಿ ಭಾಗಿಯಾಗಿ, ನಿಮ್ಮ ಮತ ನಿರ್ಣಾಯಕ, ಅದನ್ನು ಚಲಾಯಿಸಿ, ಮತದಾನ ಕೂಡ ದೇಶ ಭಕ್ತಿಯ ಪ್ರತೀಕ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಬೇಕೆಂಬ ಉದ್ದೇಶದಿಂದ ಧಾರವಾಡ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಈ ರೀತಿಯ ಘೋಷಣೆಗಳು ಇದೀಗ ಸಾಮಾನ್ಯ.
2009ರಲ್ಲಿ ದೇಶದ 543 ಲೋಕಸಭೆ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಕಡಿಮೆ ಮತದಾನವಾದ 100 ಕ್ಷೇತ್ರಗಳನ್ನು ಚುನಾವಣಾ ಆಯೋಗ ಗುರುತಿಸಿದ್ದು, ಈ ಪೈಕಿ ಧಾರವಾಡ ಲೋಕಸಭೆಯೂ ಒಂದು. ಕಳೆದ ಬಾರಿ ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ 56.74 ಮತದಾನವಾಗಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ಮತದಾನ ಫಲಿತಾಂಶವನ್ನು ಶೇ. 70-75 ಹೆಚ್ಚಿಸುವುದಕ್ಕೆ ವಾರ್ತಾ ಇಲಾಖೆ, ಇತರ ಇಲಾಖೆಗಳ ಮುಖಾಂತರ ಭಗೀರಥ ಪ್ರಯತ್ನ ಮಾಡಲಾಗುತ್ತಿದೆ.
ಚುನಾವಣೆಗಳಲ್ಲಿ ಕಣಕ್ಕೆ ಇಳಿಯುವ ಅಭ್ಯರ್ಥಿಗಳು ಮತದಾನ ಪ್ರಮಾಣ ಹೆಚ್ಚಿಸುವುದಕ್ಕೆ ಏನೆಲ್ಲ ಕಸರತ್ತು ಮಾಡಿದರೂ ಅಪೇಕ್ಷಿತ ಪ್ರಮಾಣದಲ್ಲಿ ಮತದಾನವಾಗುತ್ತಿರಲಿಲ್ಲ. ಇಳಿಮುಖವಾಗುತ್ತಿದ್ದ ಮತದಾನ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನೇರವಾಗಿ ಮತದಾರರ ಬಾಗಿಲು ಬಡಿದು ಮತ ಚಲಾಯಿಸಿ ಎಂದು ಕೇಳಿಕೊಳ್ಳುತ್ತಿದೆ.
40 ಸಾವಿರ ಹೆಚ್ಚಳ: ಚುನಾವಣೆ ಘೋಷಣೆ ಬಳಿಕ 1ನೇ ಹಂತದಲ್ಲಿ ಮತದಾರರ ನೋಂದಣಿ ಕಾರ್ಯಕ್ಕೆ ಚಾಲನೆ ನೀಡಿದರ ಫಲವಾಗಿ 40,888 ನೂತನ ಮತದಾರರು ಸೇರ್ಪಡೆಗೊಂಡರು. 2ನೇ ಹಂತದಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮ ಮಾ. 18ರಂದು ಆರಂಭವಾಯಿತು. ಜಿಪಂ ಸಿಇಒ ಸ್ವೀಪ್ ಸಮಿತಿ ಅಧ್ಯಕ್ಷರಾಗಿದ್ದು, ವಾರ್ತಾ ಮತ್ತು ಪ್ರಚಾರ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸಿ.ಪಿ. ಮಾಯಾಚಾರಿ ಜಿಲ್ಲಾ ನೋಡಲ್ ಅಧಿಕಾರಿಯಾಗಿ ಮತದಾನ ಪ್ರಮಾಣ ಹೆಚ್ಚಿಸುವುದಕ್ಕೆ ಬೀದಿ ನಾಟಕ, ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ.
ಮತ್ತಷ್ಟು ಕಾರ್ಯಕ್ರಮಗಳು: ಕನಿಷ್ಠ ಮತದಾನವಾಗಿರುವ ಪ್ರದೇಶಗಳನ್ನು ಗುರುತಿಸಿ ಗರಿಷ್ಠ ಪ್ರಮಾಣದಲ್ಲಿ ಮತದಾನ ಆಗುವಂತೆ ಸ್ವ-ಸಹಾಯ ಸಂಘಗಳು, ಅಂಗನವಾಡಿ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕರ್ತರು ಕೈ ಜೋಡಿಸಿದ್ದಾರೆ. ಶಾಲಾ-ಕಾಲೇಜು ಹಾಗೂ ವಿಶ್ವವಿದ್ಯಾಲಯಗಳ ಮುಖ್ಯಸ್ಥರನ್ನು ಚುನಾವಣಾ ರಾಯಭಾರಿಗಳನ್ನಾಗಿ ಮಾಡಿ ಮತ ಜಾಗೃತಿ ಮೂಡಿಸಲಾಗುತ್ತಿದೆ.
- ಬಸವರಾಜ ಹಿರೇಮಠ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

