ಬಿಜೆಪಿ ಕನ್ನಡ ಪ್ರಣಾಳಿಕೆ ಬಿಡುಗಡೆ
ಹುಬ್ಬಳ್ಳಿ: ಭಾರತೀಯ ಜನತಾ ಪಾರ್ಟಿಯ ಲೋಕಸಭೆ ಚುನಾವಣೆಯ ಕನ್ನಡ ಅನುವಾದಿತ 'ಚುನಾವಣಾ ಪ್ರಣಾಳಿಕೆ'ಯನ್ನು ಸೋಮವಾರ ಸಂಜೆ ಹು-ಧಾ ಮಹಾನಗರ ಜಿಲ್ಲಾಧ್ಯಕ್ಷ ಲಿಂಗರಾಜ ಪಾಟೀಲ ಬಿಡುಗಡೆಗೊಳಿಸಿದರು.
ದೇಶಪಾಂಡೆ ನಗರದ ಪಕ್ಷದ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಚುನಾವಣಾ ಪ್ರಣಾಳಿಕೆಯ ಮುಖ್ಯಾಂಶಗಳುಳ್ಳ ಕಿರುಹೊತ್ತಿಗೆ ಬಿಡುಗಡೆಗೊಳಿಸಿ ಮಾತನಾಡಿದ ಪಾಟೀಲ, ಸಮಾಜದ ಎಲ್ಲ ವರ್ಗಗಳ ಏಳ್ಗೆಗೆ ಅನುಕೂಲವಾಗುವ ರೀತಿಯಲ್ಲಿ ಪ್ರಣಾಳಿಕೆ ತಯಾರಿಸಲಾಗಿದೆ ಎಂದರು.
'ಏಕ ಭಾರತ ಶ್ರೇಷ್ಠ ಭಾರತ' ಎಂಬ ಧ್ಯೇಯ ವಾಕ್ಯದೊಂದಿಗೆ ಈ ಪ್ರಣಾಳಿಕೆ ಹೊರತರಲಾಗಿದೆ. ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ ಸತತ ಎರಡು ಬಾರಿ ಆಯ್ಕೆಗೊಂಡು ಸಾಕಷ್ಟು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿರುವ ಧಾರವಾಡ ಲೋಕಸಭೆ ಅಭ್ಯರ್ಥಿ ಪ್ರಹ್ಲಾದ ಜೋಶಿ ಈ ಬಾರಿ ಹ್ಯಾಟ್ರಿಕ್ ಗೆಲುವು ಸಾಧಿಸುವುದು ನಿಸ್ಸಂಶ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚುನಾವಣೆ ಬಹಿರಂಗ ಪ್ರಚಾರಕ್ಕೆ ಒಂದು ದಿನ ಬಾಕಿ ಉಳಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಜೋಶಿ ಅವರ ಗೆಲುವಿಗೆ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಜಿಲ್ಲೆಯಾದ್ಯಂತ ಬಿಜೆಪಿಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸಭೆ ನೇತೃತ್ವ ವಹಿಸಲಿದ್ದು, ಪ್ರತಿಪಕ್ಷ ನಾಯಕ, ಮಾಜಿ ಸಿಎಂ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಪ್ರಹ್ಲಾದ ಜೋಶಿ ಉಪಸ್ಥಿತರಿರುವರು. ಕಾರ್ಯಕರ್ತರ ಬೃಹತ್ ರ್ಯಾಲಿ ಮೂರುಸಾವಿರ ಮಠದಿಂದ ನಗರದಲ್ಲಿ ಸಂಚರಿಸಿ ಬಿಜೆಪಿ ಅಭ್ಯರ್ಥಿಗೆ ಮತ ನೀಡುವಂತೆ ವಿನಂತಿಸಲಿದೆ. ಮೂರುಸಾವಿರ ಮಠದ ಆವರಣದಲ್ಲೇ ರ್ಯಾಲಿ ಮುಕ್ತಾಯಗೊಳ್ಳಲಿದೆ ಎಂದೂ ಪಾಟೀಲ ವಿವರಿಸಿದರು.
ಹೈಟೆಕ್ ಬಸ್: ಬಿಜೆಪಿ ಅಭ್ಯರ್ಥಿಗಳ ಪ್ರಚಾರಕ್ಕೆ ಅನುಕೂಲವಾಗಲೆಂಬ ಉದ್ದೇಶದಿಂದ ಮಾಜಿ ಸಚಿವ ಮುರುಗೇಶ ನಿರಾಣಿ ಹೈಟೆಕ್ ಬಸ್ನ್ನು ಪಕ್ಷಕ್ಕೆ ಕಾಣಿಕೆ ನೀಡಿದ್ದು, ಮಂಗಳವಾರವೂ ಈ ವಾಹನದ ಮೂಲಕ ಪ್ರಚಾರ ಕೈಗೊಳ್ಳಲಾಗುವುದೆಂದರು. ಪ್ರಧಾನ ಕಾರ್ಯದರ್ಶಿ ರಂಗಾ ಬದ್ದಿ, ಹು-ಧಾ ಮಹಾನಗರ ಜಿಲ್ಲಾ ವಕ್ತಾರ ವೀರೇಶ ಸಂಗಳದ, ಮಲ್ಲಿಕಾರ್ಜುನ ಸಾವಕಾರ, ಶಂಕರ ಛಬ್ಬಿ, ಸತೀಶ ಶೇಜವಾಡಕರ, ನಾಗೋಸಾ ಕಲಬುರ್ಗಿ, ಹನುಮಂತಪ್ಪ ದೊಡಮನಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

