ಧಾರವಾಡ

ಕೊಂಚ ಕಿರಿಕಿರಿ; ಹೊಂಟಿತ್ತು ಮತ ಸವಾರಿ

Published On :

ಹುಬ್ಬಳ್ಳಿ: ಮೊದಲ ಬಾರಿಯ ಮತದಾನದ ಉತ್ಸಾಹದಲ್ಲಿ ಯುವಕರು...ಕೆಟ್ಟ ವಿದ್ಯುನ್ಮಾನ ಮತಯಂತ್ರ....ತಡವಾಗಿ ಪ್ರಾರಂಭಗೊಂಡ ಮತದಾನ...ಮತದಾನದ ಮೇಲೆ ಪರಿಣಾಮ ಬೀರಿದ ಬಿಸಿಲು...
ಧಾರವಾಡ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಹುಬ್ಬಳ್ಳಿಯಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ ಕಂಡುಬಂದ ದೃಶ್ಯಗಳಿವು. ಕೆಲವೆಡೆ ವಿದ್ಯುನ್ಮಾನ ಮತಯಂತ್ರಗಳು ಕೈಕೊಟ್ಟಿದ್ದರಿಂದ ಮತದಾನ ತುಸು ತಡವಾಗಿ ಪ್ರಾರಂಭಗೊಂಡಿತು.
ರಾಜನಗರದ ಕೇಂದ್ರೀಯ ವಿದ್ಯಾಲಯ, ಭವಾನಿ ನಗರದ ಕಿವುಡ ಮತ್ತು ಮೂಕ ಮಕ್ಕಳ ಶಾಲೆ ಮತ್ತಿತರ ಕೆಲ ಮತಗಟ್ಟೆಗಳಲ್ಲಿ ಸುಮಾರು 20 ನಿಮಿಷ ತಡವಾಗಿ ಮತದಾನ ಪ್ರಾರಂಭಗೊಂಡರೆ ಹಳೇ ಹುಬ್ಬಳ್ಳಿಯ ಮಸ್ತಾನಸೋಫಾದ ಮತಗಟ್ಟೆಯಲ್ಲಿ ಸುಮಾರು ಒಂದು ತಾಸು ತಡವಾಗಿ ಮತದಾನ ಪ್ರಾರಂಭಗೊಂಡಿತು.
ಮಧ್ಯಾಹ್ನ 1 ಗಂಟೆಗೆ ಸುಮಾರು ಶೇ. 35ಕ್ಕೂ ಹೆಚ್ಚು ಮತದಾನವಾಗಿತ್ತು. ಬೆಳಗ್ಗೆಯಿಂದ ಮಧಾಹ್ನ ಸುಮಾರು 12ರವರೆಗೆ ಮತಗಟ್ಟೆ ಬಳಿ ಉದ್ದದ ಸಾಲುಗಳಲ್ಲಿ ನಿಂತು ಮತ ಚಲಾಯಿಸಿದ್ದ ಮತದಾರರ ಸಂಖ್ಯೆ, ಮಧ್ಯಾಹ್ನದ ನಂತರ ಕುಗ್ಗಿತು. ಮಧ್ಯಾಹ್ನ 12 ರಿಂದ 4 ಗಂಟೆಯವರೆಗೂ ಹೆಚ್ಚಿನ ಮತದಾರರು ಮತಗಟ್ಟೆಯತ್ತ ಸುಳಿಯಲಿಲ್ಲ.
ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ಧಾರವಾಡ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಪ್ರಹ್ಲಾದ ಜೋಶಿ ಇಲ್ಲಿಯ ಭವಾನಿ ನಗರದ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯಲ್ಲಿ ಬೆಳಗ್ಗೆ ಸುಮಾರು 7.30ಕ್ಕೆ ಪತ್ನಿ ಜ್ಯೋತಿ ಹಾಗೂ ಹಿರಿಯ ಪುತ್ರಿ ಸಮೇತ ತೆರಳಿ ಮತ ಚಲಾಯಿಸಿದರು. ಮಾಜಿ ಸಚಿವ ಜಗದೀಶ ಶೆಟ್ಟರ ಅವರು ಪತ್ನಿ ಶಿಲ್ಪಾ ಶೆಟ್ಟರ, ಹಿರಿಯ ಪುತ್ರ ಪ್ರಶಾಂತ ಹಾಗೂ ಬೆಂಬಲಿಗರೊಂದಿಗೆ ಕೇಶ್ವಾಪೂರದ ಎಸ್‌ಬಿಐ ಅಧಿಕಾರಿಗಳ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಜೆಡಿಎಸ್ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರು ಪತ್ನಿ ಹೇಮಲತಾ, ಪುತ್ರರಾದ ಭರತ, ವಸಂತ, ಸೊಸೆ ಮಧು ವಸಂತ ಹೊರಟ್ಟಿ, ಪುತ್ರಿ ಡಾ. ಲಕ್ಷ್ಮೀ ಹೊರಟ್ಟಿ ಸ್ಟೇಶನ್ ರಸ್ತೆಯ ಲ್ಯಾಮಿಂಗಟನ್ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ನವ ವಿವಾಹಿತರಿಂದ ಮತದಾನ: ಚುನಾವಣೆ ಮುನ್ನಾದಿನವಾದ ಬುಧವಾರ ಸಂಜೆ ವಿವಾಹವಾಗಿದ್ದ ಪ್ರಶಾಂತ ಸಿಂಗ್, ಚೇತನಾ ಸಿಂಗ್ ಕೇಶ್ವಾಪುರ ಎಸ್‌ಬಿಐ ಅಧಿಕಾರಿಗಳ ಶಾಲೆಯಲ್ಲಿ ಮತದಾನ ಮಾಡಿದರೆ, ಇದೇ ಮೊದಲ ಬಾರಿಗೆ ಮತದಾನ ಮಾಡುತ್ತಿದ್ದ ಉದಯ, ಪೂಜಾ ಜಡಿ ದಂಪತಿ ಹಳೇಹುಬ್ಬಳ್ಳಿ ಚೆನ್ನಪೇಟದ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಪ್ರತಿಭಟನೆ ಬಿಸಿ: ಈ ಮಧ್ಯೆ ಹಳೇ ಹುಬ್ಬಳ್ಳಿ ಕಾರವಾರ ರಸ್ತೆ ಸಿದ್ಧಾರೂಢ ಹೈಸ್ಕೂಲ್‌ನಲ್ಲಿ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ನಡೆದ ವಾದ ವಿಕೋಪಕ್ಕೆ ತಿರುಗಿದ್ದರಿಂದ ಪೊಲೀಸರು ಲಾಠಿ ಪ್ರಹಾರ ನಡೆಸಿದರಾದೂ, ಹಿರಿಯ ಪೊಲೀಸ್ ಅಧಿಕಾರಿಗಳು ಲಾಠಿ ಪ್ರಹಾರ ನಿರಾಕರಿಸಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ತಮ್ಮ ಬೆಂಬಲಿಗರೊಂದಿಗೆ ಕೆಲ ಸಮಯ ಧರಣಿ ನಡೆಸಿದರು.  
ಇನ್ನುಳಿದಂತೆ ನಗರದಲ್ಲಿ ಶಾಂತಿಯುತ ಮತದಾನ ನಡೆದಿದ್ದು, ಮತದಾರರು ಕುಟುಂಬ ಸಮೇತರಾಗಿ ಮತಗಟ್ಟೆಗೆ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಗಣೇಶಪೇಟ ಹಾಗೂ ಮತ್ತಿತರೆಡೆ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ಕಾರಣ ಅನೇಕರು ಪರದಾಡುತ್ತಿದ್ದರು.
ಮತದಾನದ ನಿಗದಿತ ಸಮಯ ಸಂಜೆ 6ಕ್ಕೆ ಮುಕ್ತಾಯವಾಗುತ್ತದಾದರೂ ಬಂಕಾಪುರ ಚೌಕ ಬಳಿಯ ಇಂದಿರಾನಗರ ಮತಗಟ್ಟೆಯ ಸಂಖ್ಯೆ 150ರಲ್ಲಿ 6 ಗಂಟೆಯ ನಂತರವೂ ಮತದಾನ ಮುಂದುವರೆದಿತ್ತು. ಸುಮಾರು 30 ಜನರಿದ್ದ ಮತದಾರರು ಸಂಜೆ 6 ಗಂಟೆಯೊಳಗೆ ಮತಗಟ್ಟೆ ಇರುವ ಶಾಲೆಯ ಆವರಣದೊಳಗೆ ಇದ್ದಿದ್ದರಿಂದ ಎಲ್ಲ ಮತದಾರರಿಗೆ ಚುನಾವಣಾಧಿಕಾರಿ ಮತದಾನ ಮಾಡಲು ಅವಕಾಶ ಮಾಡಿಕೊಟ್ಟರು. ಸಂಜೆ 6 ಗಂಟೆ ನಂತರ ಮತಗಟ್ಟೆ ಇರುವ ಶಾಲಾ-ಕಾಲೇಜುಗಳ ಕಟ್ಟಡದ ದ್ವಾರಬಾಗಿಲು ಮುಚ್ಚಿದ್ದರಿಂದ ಮತದಾರರನೇಕರು ನಿರಾಶರಾಗಿ ಮರಳಬೇಕಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.