ತಣ್ಣಗಾದ ಚುನಾವಣೆ; ಲೆಕ್ಕಾಚಾರ ಶುರು
ಧಾರವಾಡ: ಕಳೆದ ಒಂದು ತಿಂಗಳಿಂದ ಕಾವೇರಿದ್ದ ಲೋಕಸಭೆ ಚುನಾವಣೆ ಕಾವು ಇದೀಗ ಇಳಿದಿದೆ. ಈಗ ಏನಿದ್ದರೂ ಸೋಲು ಗೆಲವಿನ ಲೆಕ್ಕಾಚಾರ.
ಮಳೆ ನಿಂತರೂ ಮಳೆ ಹನಿ ನಿಲ್ಲೋದಿಲ್ಲ ಎನ್ನುವಂತೆ ಮತದಾನದ ನಂತರವೂ ಸಹ ಸೋಲು-ಗೆಲುವಿನ ಲೆಕ್ಕಾಚಾರ ನಿಂತಿಲ್ಲ. ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳ ಹಣೆಬರಹ ಇವಿಎಂ ಯಂತ್ರಗಳಲ್ಲಿ ಭದ್ರವಾಗಿದ್ದು, ಕಾಂಗ್ರೆಸ್ನ ಅಭ್ಯರ್ಥಿ ವಿನಯ ಕುಲಕರ್ಣಿ ಜಾತಿ ಲೆಕ್ಕಾಚಾರ ಹಾಕಿದರೆ, ಬಿಜೆಪಿ ಪ್ರಹ್ಲಾದ ಜೋಶಿ ಕಡೆಯವರು ಮೋದಿ ಅಲೆ ಸೇರಿದಂತೆ 10 ವರ್ಷಗಳ ಆಡಳಿತಾವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳು ಕೈ ಹಿಡಿಯುತ್ತವೆ ಎಂಬ ಭರವಸೆಯ ಮೇಲೆ ಗೆಲವಿನ ಲೆಕ್ಕ ಹಾಕುತ್ತಿದ್ದಾರೆ.
ಭವಿಷ್ಯ ಭದ್ರ: ಧಾರವಾಡ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಎಂಟೂ ವಿಧಾನಸಭಾ ಕ್ಷೇತ್ರಗಳಿಂದ ಗುರುವಾರ ರಾತ್ರಿ ಇವಿಎಂ ಯಂತ್ರಗಳನ್ನು ಕೃಷಿ ವಿಶ್ವವಿದ್ಯಾಲಯದ ಸ್ಟ್ರಾಂಗ್ ರೂಂಗಳಲ್ಲಿ ಭದ್ರಪಡಿಸಲಾಗಿದ್ದು, ಸಿಐಎಸ್ಎಫ್ ಯೋಧರ ಭದ್ರತೆ ನೀಡಿದ್ದು, ಭದ್ರತೆಗೆ ಸ್ಥಳೀಯ ಪೊಲೀಸರು ನಿಯೋಜನೆಗೊಂಡಿದ್ದಾರೆ. ಶುಕ್ರವಾರ ಬೆಳಗ್ಗೆ ಜಿಲ್ಲಾ ಚುನಾವಣಾಧಿಕಾರಿ ಸಮೀರ ಶುಕ್ಲ, ಸಹಾಯಕ ಚುನಾವಣಾಧಿಕಾರಿ ರಮಣದೀಪ ಚೌಧರಿ, ಮಹೇಶ ಕರ್ಜಗಿ ಸ್ಥಳಕ್ಕೆ ಭೇಟಿ ನೀಡಿ ಭದ್ರತಾ ವ್ಯವಸ್ಥೆ ಪರಿಶೀಲಿಸಿದ್ದಾರೆ.
ಮತ ಎಣಿಕೆ ದಿನ ಮೇ 16ರವರೆಗೆ ಮತ ಪೆಟ್ಟಿಗೆಗಳನ್ನು ಸುರಕ್ಷಿತವಾಗಿ ನೋಡಿಕೊಳ್ಳಲಾಗುತ್ತಿದ್ದು, ಮತ ಎಣಿಕೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಮತ ಏಣಿಕೆ ವಿಧಾನಸಭಾ ಕ್ಷೇತ್ರವಾರು ಮತ ಎಣಿಕೆ ನಡೆಯಲಿದೆ. ಪ್ರತಿ ಕೋಣೆಯಲ್ಲಿ 14 ಟೇಬಲ್ ಹಾಕಲಾಗುವುದು. ಪ್ರತಿ ಟೇಬಲ್ ಗೆ ಮೂರು ಸಿಬ್ಬಂದಿಯಂತೆ ಒಟ್ಟು 300ಕ್ಕೂ ಹೆಚ್ಚು ಸಿಬ್ಬಂದಿ ಮತ ಎಣಿಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿ ಸಮೀರ ಶುಕ್ಲ 'ಕನ್ನಡಪ್ರಭ'ಕ್ಕೆ ಮಾಹಿತಿ ನೀಡಿದ್ದಾರೆ.
ಮತದಾನ ಮುಗಿದಿದೆ. ಕಣದಲ್ಲಿದ್ದ ಅಭ್ಯರ್ಥಿಗಳಲ್ಲೀಗ ನಿರಾಳ ಭಾವ ಮನೆ ಮಾಡಿದೆ. ಹೆಸರಿಗೆ ಕಣದಲ್ಲಿ 17 ಅಭ್ಯರ್ಥಿಗಳಿದ್ದರೂ ಸ್ಪರ್ಧೆ ಇರುವುದು ಮಾತ್ರ ಪ್ರಹ್ಲಾದ ಜೋಶಿ ಮತ್ತು ವಿನಯ ಕುಲಕರ್ಣಿ ಮಧ್ಯೆ ಧಾರವಾಡದ ಮತದಾರ ಈ ಬಾರಿ ತೋರಿರುವ ಒಲವು ಯಾರಿಗೆ ಎಂದು ತಿಳಿಯಬೇಕಾದರೆ ಮೇ 16ರವರೆಗೆ ಕಾಯಬೇಕು. ಅಲ್ಲಿಯವರೆಗೆ ಲೆಕ್ಕಾಚಾರದಲ್ಲಿ ದಿನ ದೂಡಬೇಕಿದೆ.
ಇಲ್ಲಿಯವರೆಗೆ 16 ಲೋಕಸಭೆ ಚುನಾವಣೆಗಳ ಪೈಕಿ 1977ರ ಲೋಕಸಭೆ ಚುನಾವಣೆಯ ಆಗಿದ್ದ ಶೇ. 68.74 ಮತದಾನ ಪ್ರಮಾಣವೇ ಇಂದಿಗೂ ಪ್ರಥಮ ಸ್ಥಾನದಲ್ಲಿದೆ. ಬಳಿಕ 1999ರಲ್ಲಿ ಶೇ. 67.07ರಷ್ಟು ಮತದಾನವಾಗಿತ್ತು. ಈ ಬಾರಿ ಚುನಾವಣಾ ಆಯೋಗ ಮತಜಾಗೃತಿಯಂತಹ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಪರಿಣಾಮ ಶೇ. 66.10ರಷ್ಟು ಮತದಾನವಾಗಿದ್ದು ಕ್ಷೇತ್ರದಲ್ಲಿ ಚುನಾವಣಾ ಇತಿಹಾಸದಲ್ಲಿ 3ನೇ ಸ್ಥಾನ ಪಡೆದಿದೆ.
- ಬಸವರಾಜ ಹಿರೇಮಠ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

