ದಾಂಪತ್ಯದ ಅಜರಾಮರ ಕವಿತೆ ಸಖಿಗೀತ
ಧಾರವಾಡ: ಕನ್ನಡ ಸಾಹಿತ್ಯದ ದೊಡ್ಡ ವಿಸ್ಮಯ ಎಂದರೆ ಕವಿ ದ.ರಾ. ಬೇಂದ್ರೆ. ಅವರ ಭಾವ ಪ್ರವಾಹದಿಂದ ಹರಿದು ಬಂದ ಸಖಿಗೀತ ದಾಂಪತ್ಯ ಜೀವನದ ಒಂದು ಅಜರಾಮರ ಜೀವನ ಸಂಗೀತವಾಗಿದೆ ಎಂದು ಪತ್ರಕರ್ತೆ ಡಾ. ಆರ್. ಪೂರ್ಣಿಮಾ ಅಭಿಪ್ರಾಯಿಸಿದರು.
ಬೇಂದ್ರೆ ಟ್ರಸ್ಟ್ನಿಂದ ಬೇಂದ್ರೆ ಭವನದಲ್ಲಿ ಹಮ್ಮಿಕೊಂಡಿದ್ದ ಕವಿ ಪತ್ನಿ ಲಕ್ಷ್ಮೀಬಾಯಿ ಬೇಂದ್ರೆ ಅವರ 109ನೇ ಜನ್ಮದಿನದ ಸಮಾರಂಭದಲ್ಲಿ ಮಾತನಾಡಿದ ಅವರು, ತನ್ನ ಹೆಂಡತಿಯನ್ನು ಸಖಿ ಎಂದು ಕರೆಯುವ ಬೇಂದ್ರೆ ಭಾವ ಕಲ್ಪನೆಯೇ ಅಪೂರ್ವವಾಗಿದ್ದು. ಹೆಣ್ಣಿಗೆ ಇಂತಹ ಅಪೂರ್ವ ಸ್ಥಾನವಿತ್ತ ವಿಭಿನ್ನ ಪ್ರೇಮಕಾವ್ಯ ಸಖಿ ಗೀತ, ದಿವ್ಯವಾದೊಂದು ಸಾಮಾಜಿಕ ಮೌಲ್ಯ ಹೊತ್ತ ಕೃತಿಯೂ ಹೌದು. ಬದುಕಿನ ಬಗ್ಗೆ ಪ್ರೀತಿ-ನಂಬಿಕೆಯನ್ನು ಮತ್ತೆ ಮತ್ತೆ ದೃಢಪಡಿಸಿಕೊಳ್ಳಲೆಂದೇ ಸಖಿಗೀತ ಕಾವ್ಯವನ್ನು ಮತ್ತೆ ಮತ್ತೆ ಓದಬೇಕು ಎಂದೆನ್ನಿಸುತ್ತದೆ ಎಂದು ಹೇಳಿದರು.
ಮಾನವೀಯ ಸಂಬಂಧಗಳನ್ನು ಪರಿಷ್ಕೃತ ದೃಷ್ಟಿಯಿಂದ ಬೇಂದ್ರೆ ಚಿತ್ರಿಸುವ ಪರಿ, ಪತ್ನಿಯನ್ನು ಸಖಿ ಎಂದು ಕರೆದು ಹೆಣ್ಣಿಗೆ ಕೊಟ್ಟ ಅಸ್ಮಿತೆಗಳು ವರಕವಿ ಜಾಗತಿಕ ಸಾಹಿತ್ಯಕ್ಕೆ ಕೊಟ್ಟ ಅಮೂಲ್ಯ ಕಾಣಿಕೆಯೆಂದರೆ ಅತಿಶಯೋಕ್ತಿಯಾಗಲಾರದು ಎಂದು ಡಾ. ಪೂರ್ಣಿಮಾ ಸಖಿಗೀತ ಖಂಡಕಾವ್ಯದ ರಸಗಟ್ಟಿಗಳನ್ನು ಪರಿಚಯಿಸಿದರು. ಇದೇ ಸಂದರ್ಭದಲ್ಲಿ ಜಾನಪದ ಕಲಾವಿದ ಬಸವಲಿಂಗಯ್ಯ ಹಿರೇಮಠ ಮತ್ತು ವಿಶ್ವೇಶ್ವರಿ ಹಿರೇಮಠ ದಂಪತಿಗಳನ್ನು ಸತ್ಕರಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಡಾ. ಶ್ಯಾಮಸುಂದರ ಬಿದರಕುಂದಿ, ಪರಿಷ್ಕೃತ ಬೇಂದ್ರೆ ವೆಬ್ಸೈಟ್ ಬಿಡುಗಡೆಗೊಳಿಸಿದರು. ವೆಬ್ಸೈಟ್ ನಿರ್ಮಿಸಿದ ರೆಡಿಟೆಕ್ ಸಾಫ್ಟ್ವೇರ್ ಸಂಸ್ಥೆಯ ಸಂಜಯ ನರೇಂದ್ರ ಮತ್ತು ಪ್ರಾಣೇಶ ಕೌತಾಳ ವೆಬ್ಸೈಟ್ ಬಗ್ಗೆ ವಿವರಣೆ ನೀಡಿದರು.
ಗೀತಾ ಬೋಗಾರಂ ಬೇಂದ್ರೆಯವರ ಆಯ್ದ ಭಾವಗೀತೆಗಳನ್ನು ಪ್ರಸ್ತುತಪಡಿಸಿದರು.ನಾಡೋಜ ಚೆನ್ನವೀರ ಕಣವಿ, ಪ್ರೊ. ಎ.ಜಿ. ಸಬರದ, ಡಾ. ಶಾಲಿನಿ ರಘುನಾಥ ಭಟ್ಟ, ರಾಮಚಂದ್ರ ಧೋಂಗಡೆ, ಚೆನ್ನಪ್ಪ ಅಂಗಡಿ, ಹ.ಶಿ. ಭೈರನಟ್ಟಿ, ಡಾ. ಮಂದಾಕಿನಿ ಪುರೋಹಿತ, ಡಾ. ವಿಜಯಲಕ್ಷ್ಮೀ ಭೋಸಲೆ, ಡಾ. ಹೇಮಾ ಪಟ್ಟಣಶೆಟ್ಟಿ, ಸರ್ವಮಂಗಳಾ ಆಚಾರ, ಇಂದಿರಾ ಪ್ರಸಾದ, ಭಾಗ್ಯಜ್ಯೋತಿ ಹಿರೇಮಠ ಇದ್ದರು. ಆನಂದ ಜಕ್ಕಣ್ಣವರ ಪರಿಚಯಿಸಿದರು. ಡಾ.ಪ್ರಜ್ಞಾ ಮತ್ತಿಹಳ್ಳಿ ನಿರೂಪಿಸಿದರು. ನರಸಿಂಹ ಪರಾಂಜಪೆ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

