ಧಾರವಾಡ

ಪರಿಷತ್ಗೆ ಮತ್ತೆ ಶ್ರೀನಾಥ್ ಹೆಸರು

Published On :

ಗಂಗಾವತಿ: ವಿಧಾನಸಭೆಯಿಂದ ವಿಧಾನಪರಿಷತ್ಗೆ ನಡೆಯುವ ಆಯ್ಕೆ ಚುನಾವಣೆಗೆ ವಿಧಾನಪರಿಷತ್ನ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ್ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ನಾಯಕರು ತೆರೆಮರೆ ಕಸರತ್ತು ನಡೆಸಿದ್ದಾರೆಂದು ಹೇಳಲಾಗುತ್ತಿದೆ.
ಲೋಕಸಭೆ ಚುನಾವಣೆ ಫಲಿತಾಂಶದ ನಂತರ ವಿಧಾನಸಭೆಯಿಂದ ವಿಧಾನಪರಿಷತ್ನ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಶ್ರೀನಾಥ್ ಅವರ ಹೆಸರು ಪ್ರಸ್ತಾಪಿಸಲಾಗಿದ್ದು, ಅವರಿಗೆ ಅವಕಾಶ ನೀಡುವಂತೆ ಕೊಪ್ಪಳ ಜಿಲ್ಲೆಯ ಕೆಲ ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಿದ್ದಾರೆಂದು ಎನ್ನಲಾಗುತ್ತಿದೆ.
ಚಿಂತನೆ ನಡೆದಿದೆ: ಈಚೆಗೆ ಜರುಗಿದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಹಿಟ್ನಾಳ ಅವರನ್ನು ಗೆಲ್ಲಿಸುವ ಜವಾಬ್ದಾರಿಯನ್ನು ಶ್ರೀನಾಥ್ ಮತ್ತು ಕಾಂಗ್ರೆಸ್ನ ಜಿಲ್ಲಾ ನಾಯಕರಿಗೆ ನೀಡಿದ್ದ  ಹಿನ್ನೆಲೆಯಲ್ಲಿ ಶ್ರೀನಾಥ್ ಅವರನ್ನು ಮತ್ತೇ ವಿಧಾನಪರಿಷತ್ಗೆ ಆಯ್ಕೆ ಮಾಡಬೇಕೆಂಬದು ಕಾಂಗ್ರೆಸ್ ನಾಯಕರ ಆಶಯ. ಅಲ್ಲದೆ ರಾಜ್ಯದ ಹಿರಿಯ ನಾಯಕರಾಗಿರುವ ಎಚ್.ಜಿ. ರಾಮುಲು ಕುಟುಂಬಕ್ಕೆ ಕಾಂಗ್ರೆಸ್ನಲ್ಲಿ ಯೋಗ್ಯ ಸ್ಥಾನಮಾನ ನೀಡಬೇಕೆಂಬ ಉದ್ದೇಶದಿಂದ ಶ್ರೀನಾಥ್ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡುವ ಚಿಂತನೆ ನಡೆದಿದೆ.
ಒಗ್ಗಟ್ಟಿಗೆ ಮುಂದಾದರು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶ್ರೀನಾಥ್ ಅವರ ಸೋಲಿಗೆ ಕಾಂಗ್ರೆಸ್ ಒಳ ಜಗಳವೇ ಕಾರಣ ಎಂಬುದು ಪಕ್ಷದ ವರಿಷ್ಠರಿಗೆ ಮನವರಿಕೆಯಾಗಿದ್ದು, ಈಗ ಮತ್ತೆ ಕೊಪ್ಪಳ ಜಿಲ್ಲೆಯಲ್ಲಿ ಕಾಂಗ್ರೆಸ್ ಪ್ರಬಲಗೊಳಿಸಲು ವರಿಷ್ಠರು ಮುಂದಾಗಿದ್ದಾರೆ. ಈಗಾಗಲೇ ಕೊಪ್ಪಳ ಜಿಪಂ ಮತ್ತು ಜಿಲ್ಲೆಯ ಎಲ್ಲಾ ತಾಪಂ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಘೋಷಣೆಯಾಗಿದ್ದು, ಈ ಸಂದರ್ಭದಲ್ಲಿ ಹುದ್ದೆಗಳು ಕಾಂಗ್ರೆಸ್ ಕೈ ಬಿಡಬಾರದೆಂಬ ಕಾರಣಕ್ಕೆ ಜಿಲ್ಲಾ ನಾಯಕರನ್ನು ಒಗ್ಗೂಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆನ್ನಲಾಗಿದೆ. ಮಾಜಿ ಸಂಸದ ಎಚ್.ಜಿ. ರಾಮುಲು ರಾಜಕೀಯ ನಿವೃತ್ತಿ ಹೊಂದಿದ್ದರೂ ಕೇಂದ್ರ ಮತ್ತು ರಾಜ್ಯ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಈ ಹಿಂದೆ ಇವರೇ ತಮ್ಮ ಪುತ್ರ ಶ್ರೀನಾಥ್ರನ್ನು ವಿಧಾನಪರಿಷತ್ ಚುನಾವಣೆಗೆ ನಿಲ್ಲಿಸಿ ರಾಜಕೀಯ ಚದುರಂಗ ಆಟದಿಂದ ಗೆಲ್ಲಿಸಿ ಯಶಸ್ವಿಯಾಗಿದ್ದರು. ಎಚ್.ಆರ್. ಶ್ರೀನಾಥ್ ತುಂಗಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷರಾಗಿ, ಎರಡು ಬಾರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವ ಇರುವುದರಿಂದ ಜಿಲ್ಲಾ ಕಾಂಗ್ರೆಸ್ ಮುಖಂಡರು ವಿಧಾನಪರಿಷತ್ಗೆ ಶ್ರೀನಾಥ್ ಹೆಸರು ಶಿಫಾರಸು ಮಾಡಿದ್ದಾರೆ ಎನ್ನಲಾಗಿದೆ.
ಶ್ರೀನಾಥ್ಗೆ ಬೆಂಬಲ: ಹಿಟ್ನಾಳ
ವಿಧಾನಸಭೆಯಿಂದ ವಿಧಾನಪರಿಷತ್ಗೆ ನಡೆಯುವ ಚುನಾವಣಿಗೆ ಎಚ್.ಆರ್. ಶ್ರೀನಾಥ್ ಹೆಸರನ್ನು ಪ್ರಸ್ತಾಪ ಮಾಡಿದ್ದು, ಅವರಿಗೆ ಸಂಪೂರ್ಣ ಬೆಂಬಲ ಇದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸವರಾಜ ಹಿಟ್ನಾಳ ತಿಳಿಸಿದ್ದಾರೆ. ಅವರು ಉತ್ತಮ ವ್ಯಕ್ತಿಯಾಗಿದ್ದು, ಪಕ್ಷ ಸಂಘಟನೆಯಲ್ಲಿ ಮುಂದೆ ಇದ್ದಾರೆ. ಅವರಿಗೆ ಅವಕಾಶ ನೀಡುವಂತೆ ತಾವು ಸಹ ಕೋರುವುದಾಗಿ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.