ಸುದ್ದಿ ಸಂಕ್ಷೇಪ
ಹುಬ್ಬಳ್ಳಿ: ಇಂದು ಉಚಿತ ನೇತ್ರ ತಪಾಸಣೆ ಶಿಬಿರ
ಹುಬ್ಬಳ್ಳಿ: ಹುಬ್ಬಳ್ಳಿಯ ಜರ್ನಲಿಸ್ಟ್ ಕೋ ಆಪರೇಟಿವ್ ಹೌಸಿಂಗ್ ಸೊಸೈಟಿ ಮತ್ತು ಉಣಕಲ್ ಕ್ರಾಸ್ನ ದಿವ್ಯಜ್ಯೋತಿ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಫೆ. 4ರಂದು ಬೆಳಗ್ಗೆ 10ಕ್ಕೆ ದಿವ್ಯಜ್ಯೋತಿ ಕಣ್ಣಿನ ಆಸ್ಪತ್ರೆಯಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಸಲಹಾ ಶಿಬಿರ ಆಯೋಜಿಸಲಾಗಿದೆ. ಕಾರ್ಮಿಕ ಮುಖಂಡ ಪ್ರೊ. ಕೆ.ಎಸ್. ಶರ್ಮಾ ಶಿಬಿರ ಉದ್ಘಾಟಿಸುವರು. ದಿವ್ಯಜ್ಯೋತಿ ಆಸ್ಪತ್ರೆಯ ನೇತ್ರ ತಜ್ಞ ಡಾ. ಶ್ರೀಧರ ಅಮೀನ್ ನೇತ್ರ ತಪಾಸಣೆ ಮಾಡುವರು.
ಅಂಬರೀಷ್ ವಿರುದ್ಧ ಸ್ಲಂ ಜನಾಂದೋಲನ ಮನವಿ
ಧಾರವಾಡ: ರಾಜ್ಯದ ವಸತಿ ರಹಿತರ ಅಳಲು ಕೇಳದ ವಸತಿ ಸಚಿವ ಅಂಬರೀಷ ಅವರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕೆಂದು ಇಲ್ಲಿಯ ಸ್ಲಂ ಜನಾಂದೋಲನ ಸಂಘಟನೆ ಆಗ್ರಹಿಸಿದೆ. ಈ ಕುರಿತು ಸಂಘಟನೆಯು ರಾಜ್ಯಪಾಲರಿಗೆ ಹಾಗೂ ಮುಖ್ಯಮಂತ್ರಿಗೆ ಜಿಲ್ಲಾಧಿಕಾರಿ ಮೂಲಕ ಪತ್ರ ಬರೆದಿದ್ದು, ಇತ್ತೀಚೆಗೆ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ವಸತಿ ಕ್ಷೇತ್ರದಲ್ಲಾದ ಸಾಧನೆಗಾಗಿ ಅಂಬರೀಷ ಅವರಿಗೆ ಪ್ರಶಸ್ತಿ ನೀಡಿದೆ. ರಾಜ್ಯದಲ್ಲಿ ಇನ್ನೂ 3.5 ಲಕ್ಷ ಮೇಲ್ಪಟ್ಟು ಜನರು ಬೀದಿಯಲ್ಲಿ ವಾಸಿಸುತ್ತಿದ್ದಾರೆ. ಇದು ಸಾಧನೆಯೇ ಎಂದು ಸಂಘಟನೆ ಪ್ರಶ್ನಿಸಿದೆ. ವಸತಿ ರಹಿತರ ಮನವಿ ಸ್ವೀಕರಿಸದೇ ಜನರೊಂದಿಗೆ ಸರಿಯಾಗಿ ವರ್ತಿಸದ ಅಂಬರೀಷ ಅವರನ್ನು ಸಂಪುಟದಿಂದ ಕೈ ಬಿಡಬೇಕೆಂದು ಸ್ಲಂ ಜನಾಂದೋಲನದ ರಸೂಲ ನದಾಫ, ಮಾರುತಿ ಶಿರೋಳದವರ, ಮಹೇಶ ಪಾಟೀಲ, ವೆಂಕಟೇಶ ಲಮಾಣಿ, ಹುಲಗೆಮ್ಮ ಹೂಗಾರ ಆಗ್ರಹಿಸಿದ್ದಾರೆ.
ಇಂದಿನಿಂದ ಮಾಧ್ವ ನವಮಿ: ವಿವಿಧ ಕಾರ್ಯಕ್ರಮ
ಧಾರವಾಡ: ಇಲ್ಲಿಯ ಕೆಲಗೇರಿ ರಸ್ತೆಯ ಮಾಧ್ವ ವಿದ್ಯಾಪೀಠದ ವತಿಯಿಂದ ಶ್ರೀಮಠದಲ್ಲಿ ಫೆ. 4ರಿಂದ 7ರ ಮಾಧ್ವ ನವಮಿ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮ ಮತ್ತು ಪ್ರವಚನ ಹಮ್ಮಿಕೊಳ್ಳಲಾಗಿದೆ. ಫೆ. 4ರಿಂದ ನಿತ್ಯ ಸಂಜೆ 6:30ರಿಂದ 8ರ ವರೆಗೆ ಮಧ್ವಾಗವತ ತಾತ್ಪರ್ಯ ನಿರ್ಣಯ ವಿಷಯ ಕುರಿತು ಪಂ. ಪುರಂದರಾಚಾರ್ಯ ಹಯಗ್ರೀವ ಅವರು ಪ್ರವಚನ ನೀಡುವರು.
ಧಾರವಾಡ: ಅರ್ಜಿ ಆಹ್ವಾನ
ಧಾರವಾಡ: ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಖಾಲಿ ಇರುವ ರಾಷ್ಟ್ರೀಯ ಯುವ ದಳದ ಸ್ವಯಂಸೇವಕರ ಹುದ್ದೆಗಳಿಗೆ ನೆಹರು ಯುವ ಕೇಂದ್ರದಿಂದ ಅರ್ಜಿ ಆಹ್ವಾನಿಸಲಾಗಿದೆ. ನೆಹರು ಯುವಕೇಂದ್ರ ಜಿಲ್ಲಾ ಘಟಕದಲ್ಲಿ ಖಾಲಿ ಕಂಪ್ಯೂಟರ್ ಆಪರೇಟರ್ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವುದಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ತಾಲೂಕಿಗೆ ಇಬ್ಬರಂತೆ ರಾಷ್ಟ್ರೀಯ ಯುವದಳಕ್ಕೆ ಸ್ವಯಂ ಸೇವಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಫೆ. 15ರೊಳಗೆ ಸಲ್ಲಿಸಬೇಕು. ಪರಿಶಿಷ್ಟ ಪಂಗಡ, ಜಾತಿಯ ಅಭ್ಯರ್ಥಿಗಳಿಗೆ ಆದ್ಯತೆ ಇದೆ. ಹೆಚ್ಚಿನ ಮಾಹಿತಿಗೆ ದೂ: 0836 2444676 ಸಂಪರ್ಕಿಸಬಹುದು ಎಂದು ಜಿಲ್ಲಾ ಯುವ ಸಮನ್ವಯ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಲಬಾರ್ ಗೋಲ್ಡ್ನಿಂದ ಶಿಷ್ಯವೇತನ ವಿತರಣೆ
ಹುಬ್ಬಳ್ಳಿ: ಹುಬ್ಬಳ್ಳಿಯ ಮಲಬಾರ್ ಗೋಲ್ಡ್ನಿಂದ ಈಚೆಗೆ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯಡಿ ಮಲಬಾರ್ ಚಾರಿಟೇಬಲ್ ಟ್ರಸ್ಟ್ ಮುಖಾಂತರ ಪ್ರತಿಭಾವಂತ ಪಿಯುಸಿ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲಾಯಿತು.
ರಾಜ್ಯಾದ್ಯಂತ 5 ಸಾವಿರ ವಿದ್ಯಾರ್ಥಿಗಳಿಗೆ ಶಿಷ್ಯವೇತನವನ್ನು ಚಾರಿಟೇಬಲ್ ಟ್ರಸ್ಟ್ನಿಂದ ವಿತರಿಸಲಾಗುತ್ತಿದ್ದು, ಹುಬ್ಬಳ್ಳಿ ಶಾಖೆ ವತಿಯಿಂದ 230 ವಿದ್ಯಾರ್ಥಿನಿಯರಿಗೆ ಶಿಷ್ಯವೇತನ ವಿತರಿಸಲಾಗಿದೆ.
ಅತಿಥಿಯಾಗಿದ್ದ ಹುಬ್ಬಳ್ಳಿ ಉತ್ತರ ವಲಯ ಎಸಿಪಿ ಯಶೋದಾ ಒಂಟಗೋಡಿ, ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯಡಿ ತನ್ನ ಲಾಭದಲ್ಲಿ ಶೇ. 10ರಷ್ಟನ್ನು ಸಮಾಜ ಸೇವೆಗೆ ಮೀಸಲು ಇಡುತ್ತಿರುವುದು ಶ್ಲಾಘನೀಯ. ಗ್ರಾಮೀಣ ಹಿನ್ನೆಲೆ ಮತ್ತು ಕನ್ನಡ ಮಾಧ್ಯಮದಿಂದ ಬಂದಿರುವ ತಾವು ಕೂಡ ಕೆಎಎಸ್ನಲ್ಲಿ ತೇರ್ಗಡೆಯಾಗಿದ್ದು, ಇಂದು ಗ್ರಾಮೀಣ ಭಾಗದ ವಿದ್ಯಾರ್ಥಿನಿಯರು ಕೂಡ ಸಾಕಷ್ಟು ಕ್ಷೇತ್ರಗಳಲ್ಲಿ ಮುಂದಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕಂಪನಿಯ ನಿರ್ದೇಶಕ ಅಸೀಮ್ ಎಂ.ಕೆ., ಮಹಾಪ್ರಬಂಧಕ ಶಶಾಂಕ ಏಕಬೋಟೆ, ಆನಂದ ನಗರ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಚಾರ್ಯೆ ಸಾವಿತ್ರಿ ನಾಯಕ್, ತಡಸ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಸಿ.ಎನ್. ನಾಯಕ ಸೇರಿದಂತೆ ವಿವಿಧ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲರು ಮತ್ತು ಮಲಬಾರ್ ಗೋಲ್ಡ್ನ ಸಿಬ್ಬಂದಿ ಇದ್ದರು.
ಮಹಿಳೆಯರಿಗೆ ಉಚಿತ ಕಂಪ್ಯೂಟರ್ ತರಬೇತಿ
ಧಾರವಾಡ: ಸಮರ್ಥನಂ ಅಂಗವಿಕಲರ ಸಂಸ್ಥೆಯಿಂದ ನಿರುದ್ಯೋಗಿ ಅಂಗವಿಕಲ ಮಹಿಳೆಯರಿಗೆ ಹಾಗೂ ಬಡ ಮಹಿಳೆಯರಿಗೆ ಕಂಪ್ಯೂಟರ್, ಸ್ಪೋಕನ್ ಇಂಗ್ಲಿಷ್ನಲ್ಲಿ ಎರಡು ತಿಂಗಳ ಉಚಿತ ತರಬೇತಿ ನೀಡಲಾಗುವುದು. ಆಸಕ್ತರು ಫೆ. 4ರಂದು ಗಾಂಧಿನಗರದಲ್ಲಿರುವ ಸಮರ್ಥನಂ ಅಂಗವಿಕಲರ ಸಂಸ್ಥೆ, ಮೊ: 94808 12123 ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

