21ಕ್ಕೂ ಹೆಚ್ಚು ಅಭ್ಯರ್ಥಿ ಆಯ್ಕೆಗೆ ಪಣ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಫೆ. 13
ಹುಬ್ಬಳ್ಳಿಯಲ್ಲಿ ಫೆ. 28ರಂದು ಹಮ್ಮಿಕೊಳ್ಳಲಾಗಿರುವ 'ಭಾರತ ಗೆಲ್ಲಿಸಿ' ರ್ಯಾಲಿ ಮೂಲಕ ಬಿಜೆಪಿಯ ಶಕ್ತಿ ಅನಾವರಣಗೊಳಿಸಿ ಕಾಂಗ್ರೆಸ್ನಲ್ಲಿ ನಡುಕು ಹುಟ್ಟಿಸಬೇಕಲ್ಲದೆ, ಲೋಕಸಭೆ ಚುನಾವಣೆಯಲ್ಲಿ ರಾಜ್ಯದಿಂದ 21ಕ್ಕೂ ಹೆಚ್ಚು ಅಭ್ಯರ್ಥಿಗಳ ಆಯ್ಕೆಗೆ ಪಣತೊಡೋಣ'.
ಗುರುವಾರ ಸಂಜೆ ಗೋಕುಲ ರಸ್ತೆಯ ಚವ್ಹಾಣ ಗ್ರೀನ್ ಗಾರ್ಡನ್ನಲ್ಲಿ ಭಾರತೀಯ ಜನತಾ ಪಾರ್ಟಿ ಧಾರವಾಡ ಲೋಕಸಭೆ ಮತಕ್ಷೇತ್ರದಿಂದ ಹಮ್ಮಿಕೊಳ್ಳಲಾಗಿದ್ದ ಭಾರತ ಗೆಲ್ಲಿಸಿ ರ್ಯಾಲಿ ಸಿದ್ಧತಾ ಸಭೆ ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ಕಾರ್ಯಕರ್ತರಿಗೆ ಪಕ್ಷದ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಬಹುತೇಕ ಮುಖಂಡರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರಲ್ಲದೆ ದೇಶಾದ್ಯಂತ ಮೋದಿ ಅಲೆ ಕಳೆಕಟ್ಟಿದೆ ಎಂಬುದನ್ನು ಸಾರಿ ಹೇಳುವ ಮೂಲಕ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದರು.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಸಂಸದ ಅನಂತಕುಮಾರ ಮಾತನಾಡಿ, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ ಲೋಕಸಭೆ ಚುನಾವಣೆ ಮುಂಚೆಯೇ ಸೋಲನ್ನುಪ್ಪಿಕೊಂಡಿದ್ದಾರೆ. ದೇಶಾದ್ಯಂತ ಕಂಡು ಬರುತ್ತಿರುವ ಮೋದಿ ಅಲೆಯಿಂದ ಪ್ರತಿಪಕ್ಷಗಳಲ್ಲಿ ನಡುಕು ಹುಟ್ಟಿಸಿದೆ ಎಂದರು.
ಕಮ್ಯುನಿಸ್ಟ್ವಾದಿಗಳು ಲೋಕಸಭೆ ಚುನಾವಣೆ ನಂತರ ಕೇಂದ್ರದಲ್ಲಿ ತೃತೀಯ ರಂಗ ಆಡಳಿತ ಚುಕ್ಕಾಣಿ ಹಿಡಿಯಲಿವೆ ಎಂಬ ಭ್ರಮೆಯಲ್ಲಿವೆ. ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ, ದೇಶ-ರಾಜ್ಯದ ಸಚಿವರಾಗುವುದಿರಲಿ, ತಾವು ಪ್ರತಿನಿಧಿಸುತ್ತಿರುವ ಗುಲ್ಬರ್ಗಾಕ್ಕೂ ಅನುಕೂಲವಾಗುವಂತಹ ಯೋಜನೆಗಳನ್ನು ಬಜೆಟ್ನಲ್ಲಿ ಮಂಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ಖರ್ಗೆ ಮಂಡಿಸಿರುವ ಬಜೆಟ್ ಬೀಳ್ಕೊಡುಗೆ ಆಯವ್ಯಯ ಎಂದು ಟೀಕಿಸಿದ ಅನಂತಕುಮಾರ, ಬಿದಗ-ಗುಲ್ಬರ್ಗ ರೈಲು ಮಾರ್ಗ ಜೋಡಣೆಯಾಗಲಿ, ಗುಲ್ಬರ್ಗ ವಲಯ ಕೇಂದ್ರವನ್ನಾಗಿಸುವ ನಿಟ್ಟಿನಲ್ಲೂ ಯಾವುದೇ ಕ್ರಮಕೈಗೊಳ್ಳಲಾಗಿಲ್ಲ. ಇದೊಂದು ಕೇವಲ ಚುನಾವಣಾ ಬಜೆಟ್ ಆಗಿದೆ ಎಂದು ದೂಷಿಸಿದರು. ಮಾಜಿ ಪ್ರಧಾನಿ ವಾಜಪೇಯಿ ಅವರು ಕಂಡ ಕನಸುಗಳನ್ನು ನನಸು ಮಾಡುವ ಶಕ್ತಿ ನರೇಂದ್ರ ಮೋದಿ ಅವರಲ್ಲಿದ್ದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಧಾರವಾಡ ಮತಕ್ಷೇತ್ರದಿಂದ ಪ್ರಹ್ಲಾದ ಜೋಶಿ ಅವರನ್ನು ಅತ್ಯಂತ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಲು ಕಾರ್ಯಕರ್ತರು ಶ್ರಮಿಸಬೇಕೆಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಫೆ. 28ರಂದು ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿರುವ ಭಾರತ ಗೆಲ್ಲಿಸಿ ರ್ಯಾಲಿ ಬಿಜೆಪಿಗೆ ಅಗ್ನಿಪರೀಕ್ಷೆಯಾಗಿದೆ. ಪ್ರತಿಪಕ್ಷಗಳಿಗೆ ಈ ಭಾಗದಲ್ಲಿ ಭವಿಷ್ಯ ಇಲ್ಲ ಎಂಬುದನ್ನು ಕಾರ್ಯಕ್ರಮದಿಂದ ಸಾಬೀತುಪಡಿಸಬೇಕಿದೆ ಎಂದರು. ಸ್ವಾರ್ಥ ರಾಜಕಾರಣಕ್ಕಾಗಿ ಕಾಂಗ್ರೆಸ್ ಜಾತಿ-ಜಾತಿಗಳ ಮಧ್ಯೆ ವಿಷ ಬೀಜ ಬಿತ್ತಲು ಯತ್ನಿಸುತ್ತಿದೆ. ಮೋದಿ ಪ್ರಧಾನಿಯಾದರೆ ಅಲ್ಪಸಂಖ್ಯಾತರಿಗೆ ಭವಿಷ್ಯವಿಲ್ಲ ಎಂಬಂತೆ ಕಾಂಗ್ರೆಸ್ ಬಿಂಬಿಸಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಆದ್ದರಿಂದ ಮೋದಿ ಅವರನ್ನು ಪ್ರಧಾನಿಯನ್ನಾಗಿಸಲು ನಾವೆಲ್ಲರೂ ಒಗ್ಗಟ್ಟಾಗಿ ಹೋರಾಡೋಣ ಎಂದರು.
ರ್ಯಾಲಿ ಹಿನ್ನೆಲೆಯಲ್ಲಿ ಫೆ. 21ರಂದು ತಾವು ಹುಬ್ಬಳ್ಳಿಗೆ ಆಗಮಿಸಿ ಇಡೀ ದಿನ 7-8 ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಭಾರತ ಗೆಲ್ಲಿಸಿ ಕಾರ್ಯಕ್ರಮ ಅಭೂತಪೂರ್ವ ಯಶಸ್ವಿಗೊಳಿಸುವುದಕ್ಕೆ ಸಂಬಂಧಿಸಿದಂತೆ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸುವುದಾಗಿ ತಿಳಿಸಿದರು. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಸಿದ್ದರಾಮಯ್ಯ ಲಾಟರಿ ಸಿಎಂ ಆಗಿದ್ದಾರೆ ಎಂದು ಲೇವಡಿ ಮಾಡಿದ ಅವರು, ಬಿಜೆಪಿಯಲ್ಲಿ ಗೊಂದಲಗಳಿಂದಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ವಿನಃ ಸ್ವಂತ ಶಕ್ತಿಯಿಂದ ಅಲ್ಲ. ಅಧಿಕಾರದ ಚುಕ್ಕಾಣಿ ಹಿಡಿದ ನಂತರ ಸಿದ್ದರಾಮಯ್ಯ, ಅಭಿವೃದ್ಧಿ ಕಾರ್ಯಗಳಿಗೆ ಶೇ. 57ರಷ್ಟು ಮಾತ್ರ ಅನುದಾನ ಈ ವರೆಗೂ ವ್ಯಯಿಸಿದ್ದಾರೆ. ಮಿಕ್ಕ ಶೇ. 47ರಷ್ಟು ಅನುದಾನ 2 ತಿಂಗಳ ಅವಧಿಯಲ್ಲಿ ಯಾವ ರೀತಿಯಲ್ಲಿ ವ್ಯಯಿಸುತ್ತಾರೆ ಎಂದೂ ಶೆಟ್ಟರ್ ಪ್ರಶ್ನಿಸಿದರು.
ಹಣಕಾಸು ನಿರ್ವಹಣೆಯಲ್ಲಿ ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿದೆ ಎಂದು ದೂರಿದ ಅವರು, ಯುಪಿಎಗೆ ಪರ್ಯಾಯವಾಗಿ ಬಿಜೆಪಿ ನಿಲ್ಲುವುದರಲ್ಲಿ ನಿಸ್ಸಂಶ. ಮೋದಿ ಅವರನ್ನು ಪ್ರಧಾನಿಯಾಗಿಸಲು ನಾವೆಲ್ಲರೂ ಒಗ್ಗಟ್ಟಾಗಿ ಪ್ರಯತ್ನಿಸಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸದ ಪ್ರಹ್ಲಾದ ಜೋಶಿ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಯುಪಿಎ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ರಾಜ್ಯದ ಒಂದು ಬೇಡಿಕೆ ಈಡೇರಿಲ್ಲ. ಬಿಎಸ್ವೈ ಬಿಜೆಪಿಗೆ ಸೇರ್ಪಡೆಯಿಂದಾಗಿ ಪಕ್ಷಕ್ಕೆ ಆನೆ ಬಲ ಬಂದಿದೆಯಲ್ಲದೆ, ಕಾರ್ಯಕರ್ತರಲ್ಲಿ ಸಂಚಲನ ಉಂಟು ಮಾಡಿದೆ ಎಂದರು.
ಕೆಜೆಪಿ-ಬಿಜೆಪಿ ಕಾರ್ಯಕರ್ತರೆಲ್ಲರೂ ಅಣ್ಣತಮ್ಮಂದಿರಂತೆ ಕಾರ್ಯ ನಿರ್ವಹಿಸುವಂತೆ ಈಗಾಗಲೇ ರಾಜ್ಯದ ಎಲ್ಲ ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ಕೆಜೆಪಿ ಕಾರ್ಯಕರ್ತರೊಂದಿಗೆ ತಾರತಮ್ಯವಾಗದಂತೆ ಎಚ್ಚರಿಕೆವಹಿಸಲಾಗುವುದು ಎಂದು ಭರವಸೆ ನೀಡಿದರು.
ಶಾಸಕ ಬಸವರಾಜ ಬೊಮ್ಮಾಯಿ ಪ್ರಾಸ್ತಾವಿಕ ಮಾತನಾಡಿದರು. ಶಾಸಕ ಅರವಿಂದ ಬೆಲ್ಲದ, ಸೋಮಣ್ಣ ಬೇವಿನಮರದ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾ. ನಾಗರಾಜ, ಮಾಜಿ ಶಾಸಕರಾದ ಎಸ್.ಐ. ಚಿಕ್ಕನಗೌಡ್ರ, ಶಂಕರಪಾಟೀಲ ಮುನೇನಕೊಪ್ಪ, ವೀರಭದ್ರಪ್ಪ ಹಾಲಹರವಿ, ಮೋಹನ ಲಿಂಬಿಕಾಯಿ, ರಂಗಾ ಬದ್ದಿ, ಸಿ.ಎಂ. ನಿಂಬಣ್ಣವರ, ಎಂ.ಆರ್. ಪಾಟೀಲ, ವೀರೇಶ ಅಂಚಟಗೇರಿ ಉಪಸ್ಥಿತರಿದ್ದರು. ಕೆಜೆಪಿ ಕಾರ್ಯಕರ್ತರು ಅನಂತಕುಮಾರ ಹಾಗೂ ಬಿಎಸ್ವೈ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು.
ಬೇರೆಯಾಗಿದ್ದಲ್ಲೇ ಒಂದಾಗಿದ್ದೇವೆ: ಬಿಎಸ್ವೈ
ಹುಬ್ಬಳ್ಳಿ: ಬೇರೆಯಾಗಿದ್ದ (ಹಾವೇರಿ) ಸ್ಥಳದಲ್ಲೇ ಒಂದಾಗಿದ್ದೇವೆ ಎಂಬ ಸಂದೇಶ ಸಾರಿದ್ದೇವೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಿಂದ 21ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ನರೇಂದ್ರ ಮೋದಿ ಪ್ರಧಾನಿಯಾಗಲು ಶ್ರಮಿಸೋಣ... ಹೀಗೆಂದು ವಿನಮ್ರವಾಗಿ ಹೇಳಿದವರು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ. ಗೋಕುಲ ರಸ್ತೆಯ ಚವ್ಹಾಣ ಗ್ರೀನ್ ಗಾರ್ಡ್ನಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಭಾರತ ಗೆಲ್ಲಿಸಿ ರ್ಯಾಲಿ ಪೂರ್ವ ಸಿದ್ದತಾ ಸಭೆ ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೆಜೆಪಿ ಒಂದು ಕೆಟ್ಟ ಕನಸು. ನಮ್ಮ ಮನೆಗೆ ನಾವು ಹೋಗಲು ಯಾರ ಆಮಂತ್ರಣದ ಅಗತ್ಯವಿಲ್ಲ. ಆದ್ದರಿಂದ ಕಾರ್ಯಕರ್ತರು, ತಮಗೆ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ ಎಂಬ ಮನೋಭಾವನೆ ಬಿಟ್ಟು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

