ಶಿಕ್ಷಕರು ಸಾಮರ್ಥ್ಯ ಬೆಳೆಸಿಕೊಳ್ಳಿ
ಕನ್ನಡಪ್ರಭ ವಾರ್ತೆ, ಧಾರವಾಡ, ಫೆ. 15
ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಕಾಲಕ್ಕೆ ಬೇಕಾದ ಶಿಕ್ಷಣ ಹಾಗೂ ಸೌಲಭ್ಯ ನೀಡುವ ಮೂಲಕ ಮಕ್ಕಳನ್ನು ಸನ್ನದ್ಧಗೊಳಿಸಬೇಕಿದೆ ಎಂದು ಆಳ್ವಾಸ್ ಶಿಕ್ಷಣ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ. ಮೋಹನ ಆಳ್ವ ಹೇಳಿದರು.
ರಾಮಕೃಷ್ಣ ವಿವೇಕಾನಂದ ಆಶ್ರಮದ 9ನೇ ವಾರ್ಷಿಕೋತ್ಸವ ಅಂಗವಾಗಿ ನಡೆದ ಶಿಕ್ಷಕರ ಕಾರ್ಯಾಗಾರ ಶನಿವಾರ ಉದ್ಘಾಟಿಸಿದ ಅವರು, ಮಕ್ಕಳ ಬುದ್ಧಿಮತ್ತೆ ಮುಂಚಿನಂತಿಲ್ಲ. ಈಗಿನ ಹೆಚ್ಚಿನ ಮಕ್ಕಳು ಶೇ. 90ಕ್ಕಿಂತ ಅಧಿಕ ಅಂಕಗಳಿಸುವ ಸಾಮರ್ಥ್ಯ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಶಿಕ್ಷಕರು ಮಕ್ಕಳ ಬುದ್ಧಿಮತ್ತೆಗೆ ತಕ್ಕ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ರಾಜ್ಯದ ಹೆಚ್ಚಿನ ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಸರಿಯಾಗಿ ಬೋಧಿಸದ ಕಾರಣ ಟ್ಯೂಷನ್ ಹಾವಳಿ ಶುರುವಾಗಿದೆ. ಶಿಕ್ಷಣ ಸಂಸ್ಥೆಗಳು ತಮ್ಮ ಶಿಕ್ಷಕರಿಗೆ ಉತ್ತಮ ತರಬೇತಿ ನೀಡಿ ಅತ್ಯುನ್ನತ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡುವಂತೆ ಯತ್ನಿಸಿದಾಗ ಅವರು ಟ್ಯೂಷನ್ನದತ್ತ ಪಲಾಯನ ಮಾಡುವ ಅಗತ್ಯವಿಲ್ಲ ಎಂದರು.
ಮೌಲ್ಯಾಧಾರಿತ ಶಿಕ್ಷಣ ನೀಡಲಿ: ಐಐಟಿ ಅಂತಹ ಅತ್ಯುನ್ನತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ರಾಜ್ಯದ ವಿದ್ಯಾರ್ಥಿಗಳು ತೀರಾ ಹಿಂದೆ ಬೀಳುತ್ತಿದ್ದು, ಆಂಧ್ರ ಪ್ರದೇಶ, ರಾಜಕೋಟ, ದೆಹಲಿ, ಮುಂಬೈ ವಿದ್ಯಾರ್ಥಿಗಳು ಮೇಲುಗೈ ಸಾಧಿಸುತ್ತಿದ್ದಾರೆ. ಕನ್ನಡದ ಮಕ್ಕಳಿಗೆ ಪ್ರಾಥಮಿಕ ಹಂತದಿಂದಲೇ ಗುಣಮಟ್ಟದ ಶಿಕ್ಷಣ ದೊರೆಯದಿರುವುದು ಇದಕ್ಕೆ ಪ್ರಮುಖ ಕಾರಣ ಎಂದರು. ವಿದ್ಯಾಸಂಸ್ಥೆಗಳಿಗೆ, ಶಿಕ್ಷಕರಿಗೆ ಹಾಗೂ ಪಾಲಕರಿಗೂ ಗಂಭೀರತೆ ಇಲ್ಲದ್ದರಿಂದ ಅವರಿಗೆ ಮೊಬೈಲ್, ಇಂಟರ್ನೆಟ್ ನೀಡಿ ಮಕ್ಕಳನ್ನು ಹಾದಿ ತಪ್ಪಿಸಲಾಗುತ್ತಿದೆ. ಮಕ್ಕಳು ಭವಿಷ್ಯದಲ್ಲಿ ಜಾಗತಿಕ ಸ್ಪರ್ಧೆ ಎದುರಿಸಲು ವಿದ್ಯಾ ಸಂಸ್ಥೆಗಳು ಮೌಲ್ಯಾಧಾರಿತ ಶಿಕ್ಷಣ ನೀಡುವಲ್ಲಿ ಮುಂದಾಗಬೇಕು. ಕನ್ನಡ, ಇಂಗ್ಲಿಷ್ ಭಾಷಾ ಮಾಧ್ಯಮದ ಭೇದ ಮಾಡದೆ ಮಕ್ಕಳಿಗೆ ಶಿಕ್ಷಣ ಒದಗಿಸಬೇಕಿದೆ. ಕನ್ನಡದಲ್ಲಿ ಕಲಿಸಿದರೂ ಅದು ವ್ಯವಸ್ಥಿತವಾಗಿದ್ದರೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ಭಾಷಿಕ ವಿದ್ಯಾರ್ಥಿಯೇ ಮೇಲುಗೈ ಸಾಧಿಸುತ್ತಾನೆ ಎಂದರು.
ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಮೂಲ ಶಿಕ್ಷಣವನ್ನು ನಾವು ಮರೆತ ಕಾರಣ ಶಿಕ್ಷಣದಲ್ಲಿ ಮತ್ತೂ ಹಿಂದೆ ಬೀಳುತ್ತಿದ್ದೇವೆ. ರಾಜ್ಯ ಸರ್ಕಾರವೂ ಶಿಕ್ಷಣ ಹಾಗೂ ಅದರ ಪೂರಕ ಕ್ಷೇತ್ರ ಕಡೆಗಣಿಸಿದೆ. ಬಜೆಟ್ನಲ್ಲಿ ಬರೀ ಸಾವಿರಾರು ಕೋಟಿ ಅನುದಾನ ಒದಗಿಸಿದರೆ ಸಾಲದು. ಅನುದಾನದ ಬಳಕೆ ಹೇಗೆ ಮಾಡಬೇಕೆಂಬುದನ್ನು ಪ್ರತಿ ರಾಜ್ಯ ಸರ್ಕಾರಗಳು ಅರಿಯಬೇಕು ಎಂದರು.
ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ವಿಜಯಾನಂದ ಸ್ವಾಮೀಜಿ, ಸಮಾಜ ಬಲಿಷ್ಠಗೊಳಿಸಲು ಬೇಕಾದ ಕ್ಷೇತ್ರಗಳನ್ನು ಸದೃಢಗೊಳಿಸುವುದೇ ನಮ್ಮ ಗುರಿ. ಈ ಹಿನ್ನೆಲೆಯಲ್ಲಿ ಮೂರು ದಿನಗಳ ವಿವಿಧ ಸಮಾವೇಶಗಳ ಪೈಕಿ ಮೊದಲು ಶಿಕ್ಷಕರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಪ್ರತಿ ವ್ಯಕ್ತಿ ಯಶಸ್ವಿ ಜೀವನ ನಡೆಸಲು ಆತನಲ್ಲಿನ ಶಕ್ತಿಯನ್ನು ಜಾಗ್ರತಗೊಳಿಸಬೇಕು. ಹೊಟ್ಟೆಕಿಚ್ಚು, ಸಂಶಯ ಭಾವನೆ ಕಿತ್ತೊಗೆದು ಧನಾತ್ಮಕವಾಗಿ ಚಿಂತನೆ ಮಾಡಬೇಕು ಎಂದರು.
ಸಮಾರಂಭದಲ್ಲಿ ತುಮಕೂರು ರಾಮಕೃಷ್ಣ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತಿ, ಮಂಗಳೂರಿನ ಶಿಕಾರಿಪುರ ಕೃಷ್ಣಮೂರ್ತಿ, ಶಂಕರನಾರಾಯಣಶಾಸ್ತ್ರಿ ಹಾಗೂ ಸೀತಾರಾಮ ಶೆಟ್ಟಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

