ಅನುದಾನಿತ ಶಿಕ್ಷಕರ ಭರ್ತಿಗೆ ಕೊಕ್ಕೆ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಫೆ. 17
'ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ' ಎನ್ನುವಂತಾಗಿದೆ ರಾಜ್ಯ ಅನುದಾನಿತ ಪದವಿಪೂರ್ವ ಕಾಲೇಜು ಉಪನ್ಯಾಸಕರ ಹುದ್ದೆಗಾಗಿ ಕಾಯುತ್ತಿರುವವರ ಸ್ಥಿತಿ. ಕಳೆದ ಮೂರು ವರ್ಷಗಳಿಂದ ಒಂದೇ ಒಂದು ಉಪನ್ಯಾಸಕರ ಹುದ್ದೆ ಭರ್ತಿ ಮಾಡದ ಸರ್ಕಾರ ಇನ್ನೇನು ಹುದ್ದೆ ಭರ್ತಿಗೆ ಮನಸ್ಸು ಮಾಡಿದೆ ಎನ್ನುತ್ತಿರುವಾಗಲೇ ಪದವಿಪೂರ್ವ ಶಿಕ್ಷಣ ಇಲಾಖೆ ಕೊಕ್ಕೆ ಹಾಕಿ ಕುಳಿತಿದೆ.
ರಾಜ್ಯದ ವಿವಿಧ ಅನುದಾನಿತ ಪಪೂ ಕಾಲೇಜಿನಲ್ಲಿ ಬರೋಬ್ಬರಿ 292 ಉಪನ್ಯಾಸಕರ ಹುದ್ದೆ ಖಾಲಿ ಇವೆ. 2010 ಜುಲೈ ತಿಂಗಳಿನಲ್ಲಿ ಖಾಲಿ ಹುದ್ದೆ ಭರ್ತಿ ಮಾಡಲು ಅನುಮತಿ ಕೊಟ್ಟಿದ್ದೇ ಅಂತಿಮ. ಇದಾದ ಬಳಿಕ ಈ ವರೆಗೆ ಸರಿಸುಮಾರು ಮೂರು ವರ್ಷ ಕಳೆದರೂ ಒಂದೇ ಒಂದು ಹುದ್ದೆ ಭರ್ತಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಮುಂದಾಗಿರಲಿಲ್ಲ. ಈ ಹಿಂದೆ ಸೇವೆ ಸಲ್ಲಿಸುತ್ತಿದ್ದ ಉಪನ್ಯಾಸಕರ ಪೈಕಿ ಕೆಲವರು ನಿವೃತ್ತಿ ಹೊಂದಿದರೆ ಮತ್ತೆ ಕೆಲವರು ಅಕಾಲಿಕ ನಿಧನರಾಗಿದ್ದರಿಂದ ಖಾಲಿ ಹುದ್ದೆಗಳ ಸಂಖ್ಯೆ ಏರುತ್ತಾ ಇದೀಗ 292ಕ್ಕೆ ಬಂದು ತಲುಪಿದೆ.
ಭವಿಷ್ಯ ಮಂಕು: ಉಪನ್ಯಾಸಕರ ಹುದ್ದೆ ಭರ್ತಿಗೆ ಅನುಮತಿ ನೀಡದಿರುವ ಪರಿಣಾಮ ವಿದ್ಯಾರ್ಥಿಗಳ ಭವಿಷ್ಯ ಮಂಕಾಗಿದೆ. ಪಾಠ ಮಾಡುವ ಉಪನ್ಯಾಸಕರಿಲ್ಲದಿರುವ ಪರಿಣಾಮ ಅರೆಬರೆ ಶಿಕ್ಷಣ ಪಡೆಯುತ್ತಿದ್ದಾರೆ. ಇದೇ ವೇಳೆ ಸರ್ಕಾರದ ವಿಳಂಬ ನೀತಿ ಉಪನ್ಯಾಸಕ ಹುದ್ದೆಗಾಗಿ ಕಾದು ಕುಳಿತ ಅಭ್ಯರ್ಥಿಗಳನ್ನೂ ಸಂಕಷ್ಟಕ್ಕೆ ನೂಕಿದೆ. ಅನುದಾನಿತ ಪದವಿಪೂರ್ವ ಕಾಲೇಜು ಉಪನ್ಯಾಸಕರಾಗಲು ಸರ್ಕಾರ ಸಾಮಾನ್ಯ ವರ್ಗಕ್ಕೆ 40 ವರ್ಷ ವಯೋವುತಿ ನಿಗದಿ ಪಡಿಸಿದರೆ, ಹಿಂದುಳಿದ ವರ್ಗಕ್ಕೆ 43 ವರ್ಷ ಹಾಗೂ ಪ.ಜಾತಿ- ಪ.ಪಂಗಡಕ್ಕೆ 45 ವರ್ಷ ನಿಗದಿ ಮಾಡಿದೆ. ಆದರೆ, ಮೂರು ವರ್ಷಗಳಿಂದ ಒಂದೇ ಒಂದು ಹುದ್ದೆ ಭರ್ತಿ ಮಾಡದ ಪರಿಣಾಮ ಹುದ್ದೆ ಆಕಾಂಕ್ಷಿಯಾಗಿರುವ ಅಭ್ಯರ್ಥಿಗಳು ಸುಖಾಸುಮ್ಮನೇ ಮೂರು ವರ್ಷ ಕಳೆದು ಬಿಟ್ಟಿದ್ದಾರೆ. ಕೆಲವೊಬ್ಬರ ವಯೋವುತಿ ಮೀರಿ ಬಿಟ್ಟಿದ್ದರೆ ಮತ್ತೊಂದಿಷ್ಟು ಅಭ್ಯರ್ಥಿಗಳು ವಯೋವುತಿ ಮೀರುವ ಆತಂಕ ಎದುರಿಸುತ್ತಿದ್ದಾರೆ.
ಆಗ ಸರ್ಕಾರ ಕಾಡಿತ್ತು: 2012ರಲ್ಲಿಯೇ ಖಾಲಿ ಇರುವ 292 ಉಪನ್ಯಾಸಕ ಹುದ್ದೆ ಭರ್ತಿಗೆ ಸರ್ಕಾರ ಮುಂದಾಗಿತ್ತು. ಹಣಕಾಸು ಇಲಾಖೆಗೂ ಪ್ರಸ್ತಾವನೆ ಹೋಗಿತ್ತು. ಈ ಕಡತ ಪರಿಶೀಲಿಸಿದ ಹಣಕಾಸು ಇಲಾಖೆ ಹುದ್ದೆ ಭರ್ತಿಗೆ ಅನುಮತಿ ನೀಡಿ ಮುಂದಿನ ಪ್ರಕ್ರಿಯೆಗೆ ಕಡತವನ್ನು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಗೆ ಕಳುಹಿಸಿತ್ತು. ಆದರೆ, ಶಿಕ್ಷಣ ಇಲಾಖೆ ಈ ಕಡತವನ್ನು ವಿಲೇವಾರಿ ಮಾಡದೇ ಹಾಗೇ ಉಳಿಸಿಕೊಂಡಿತ್ತು.
ಇದೀಗ ಪಪೂ ಇಲಾಖೆ ಕಾಟ: ಕಳೆದ 30 ಅಕ್ಟೋಬರ್ 2013ರಂದು ಸರ್ಕಾರ, ಉಪನ್ಯಾಸಕರನ್ನು ನೇಮಕ ಮಾಡುವಂತೆ ಸೂಚಿಸಿ ಪದವಿಪೂರ್ವ ಶಿಕ್ಷಣ ಇಲಾಖೆಗೆ ಕಡತ ಕಳಿಸಿಕೊಟ್ಟಿತು. ಇದೇ ವೇಳೆ ಪಪೂ ಇಲಾಖೆಗೆ ಪತ್ರವೊಂದನ್ನು ಬರೆದ ಪ್ರೌಢ ಶಿಕ್ಷಣ ಇಲಾಖೆ, ಹೈದರಾಬಾದ್ ಕರ್ನಾಟಕಕ್ಕೆ ನೇಮಕಾತಿಯಲ್ಲಿ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಪ್ರಾತಿನಿಧ್ಯ ನೀಡಬೇಕೆಂದು ಸ್ಪಷ್ಟಪಡಿಸಿದೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಹೈದರಾಬಾದ್ ಕರ್ನಾಟಕದಲ್ಲಿನ ಅಭ್ಯರ್ಥಿಗಳಿಗೆ ಆ ಭಾಗಕ್ಕೆ ಶೇ. 80ರಷ್ಟು ಆದ್ಯತೆ ಹಾಗೂ ಹೊರ ಜಿಲ್ಲೆಗಳಲ್ಲಿ ಶೇ. 20ರಷ್ಟು ಆದ್ಯತೆ ನೀಡಬೇಕೆಂದು ಸೂಚಿಸಿದೆ. ಹೀಗಿದ್ದಾಗಿಯೂ ಪಪೂ ಶಿಕ್ಷಣ ಇಲಾಖೆ ಉಪನ್ಯಾಸಕ ನೇಮಕಾತಿಯ ಬಗ್ಗೆ ಶೇಕಡಾವಾರು ಎಷ್ಟು ಆದ್ಯತೆ ನೀಡಬೇಕೆಂದು ಸ್ಪಷ್ಟವಾಗಿ ಪತ್ರ ಬರೆದು ಕಳುಹಿಸಿಕೊಡಬೇಕೆಂದು ಸಬೂಬು ಹೇಳಿ ಕಡತವನ್ನು ಪುನಃ ಸರ್ಕಾರಕ್ಕೆ ಕಳುಹಿಸಿಕೊಟ್ಟಿದೆ.
ಸರ್ಕಾರದಿಂದ ಪುನಃ ಸ್ಪಷ್ಟಿಕರಣ ಪಪೂ ಇಲಾಖೆಗೆ ಬಂದು ಪ್ರಕ್ರಿಯೆ ಶುರುವಾಗುವುದರೊಳಗಾಗಿ ಲೋಕಸಭೆ ಚುನಾವಣೆ ಎದುರಾಗಲಿದೆ. ಆ ಬಳಿಕ ನೀತಿ ಸಂಹಿತೆ ಕಾಡಲಿದೆ. ಹೀಗಾಗಿ ಹುದ್ದೆ ಗಿಟ್ಟಿಸಿಕೊಳ್ಳಲು ಚಾತಕ ಪಕ್ಷಿಯಂತೆ ಕಾಯುತ್ತ ಕುಳಿತಿರುವ ಅಭ್ಯರ್ಥಿಗಳ ವನವಾಸ ಮತ್ತೆ ಮುಂದುವರಿಯಲಿದೆಯಷ್ಟೇ.
ಪ್ರಕಾಶ ಎಸ್. ಶೇಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

