ಜಲ್ಲಿಕಲ್ಲು ಕೊರತೆ: ಕಾಮಗಾರಿಗೆ ಅಡ್ಡಿ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಫೆ. 18
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿಳಂಬ ಧೋರಣೆಯಿಂದಾಗಿ ರಾಜ್ಯದಲ್ಲಿ ಜಲ್ಲಿಕಲ್ಲು ಕೊರತೆ ಉಂಟಾಗಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ.
ಜಲ್ಲಿಕಲ್ಲು ಉತ್ಪಾದನೆಗೆ ಸಮ್ಮತಿ ನೀಡಬೇಕಿದ್ದ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸಮಿತಿ ಆರು ತಿಂಗಳ ಹಿಂದೆಯೇ ವಿಸರ್ಜನೆಗೊಂಡಿದೆ. ನೂತನ ಸಮಿತಿ ರಚನೆಗೆ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಇನ್ನೂ ಅನುಮತಿ ನೀಡದಿರುವ ಕಾರಣ ತೊಂದರೆಯಾಗಿದೆ.
ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸಮಿತಿ ಅನುಮತಿ ನೀಡದ ಹೊರತು ಜಲ್ಲಿಕಲ್ಲು ಉತ್ಪಾದನೆ ಸಾಧ್ಯವಿಲ್ಲ. ಜಲ್ಲಿಕಲ್ಲು ಕೊರತೆಯಿಂದಾಗಿ ರಸ್ತೆ, ಸೇತುವೆ, ಕಟ್ಟಡ, ಅಣೆಕಟ್ಟು ನಿರ್ಮಾಣದಂಥ ಅಭಿವೃದ್ಧಿ ಕಾಮಗಾರಿಗಳು ಬಹುತೇಕ ಸ್ಥಗಿತಗೊಂಡಿವೆ. ಸಂಗ್ರಹ ಇದ್ದ ಜಲ್ಲಿಕಲ್ಲು ಮುಗಿಯುವ ಹಂತ ತಲುಪಿದ್ದು, ಗುತ್ತಿಗೆದಾರರಲ್ಲಿ ಆತಂಕ ಮೂಡಿದೆ. ಸಾಗಾಣಿಕೆ, ಕಾಂಕ್ರಿಟ್ ಮಿಶ್ರಣ ಘಟಕಗಳು, ಹೋಲೋಬ್ಲಾಕ್ ತಯಾರಿಕಾ ಘಟಕಗಳ ವ್ಯವಹಾರಕ್ಕೂ ಇದರ ಬಿಸಿ ತಟ್ಟಿದೆ.
ಜಲ್ಲಿಕಲ್ಲು, ಗಣಿಗಾರಿಕೆ ಸೇರಿದಂತೆ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ 200ಕ್ಕೂ ಹೆಚ್ಚು ಅರ್ಜಿಗಳು ಒಪ್ಪಿಗೆಗಾಗಿ ಕಾಯುತ್ತಿವೆ. ಜಲ್ಲಿಕಲ್ಲು ಕೊರತೆಯಿಂದಾಗಿ ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನಡೆಯಾಗಿರುವ ಜತೆಗೆ ಜಲ್ಲಿಕಲ್ಲಿಗಾಗಿ ಭೂಮಿ ಅಗೆಯುವ ಗುತ್ತಿಗೆದಾರರಿಂದ ಭೂವಿಜ್ಞಾನ ಮತ್ತು ಗಣಿಗಾರಿಕೆ ಇಲಾಖೆ ಶುಲ್ಕ ಪಡೆಯಲಾಗದೆ ರಾಜ್ಯ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದೆ.
ರಾಜ್ಯದ ವಿವಿಧೆಡೆ ರಸ್ತೆ ನಿರ್ಮಾಣ ಮತ್ತಿತರ ಕಾಮಗಾರಿಗಳಿಗೆ ಲೋಕೋಪಯೋಗಿ ಇಲಾಖೆ ಹಾಗೂ ರಾಜ್ಯ ಹೆದ್ದಾರಿ ಅಭಿವೃದ್ಧಿ ಇಲಾಖೆ ಟೆಂಡರ್ ಕರೆದು, ಕಾಮಗಾರಿಯ ಆದೇಶವನ್ನೂ ಗುತ್ತಿಗೆದಾರರಿಗೆ ನೀಡಿವೆ. ರಸ್ತೆ, ಸೇತುವೆ, ಅಣೆಕಟ್ಟು, ಕಟ್ಟಡಗಳಂಥ ಕಾಮಗಾರಿಗೆ ಜಲ್ಲಿಕಲ್ಲು ಅತ್ಯಗತ್ಯ. ಜಲ್ಲಿಕಲ್ಲಿಗಾಗಿ ಗುತ್ತಿಗೆದಾರರು ಭೂವಿಜ್ಞಾನ ಮತ್ತು ಗಣಿಗಾರಿಕೆ ಇಲಾಖೆಗೆ ಅರ್ಜಿ ಸಲ್ಲಿಸಿದ ಮೇಲೆ ಇಲಾಖೆಯ ಅಧಿಕಾರಿಗಳು ಆಯಾ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ, ಜಲ್ಲಿಕಲ್ಲು ಇರುವ ಸೂಕ್ತ ಜಾಗವನ್ನು ಮಂಜೂರು ಮಾಡುತ್ತಾರೆ.
ಆದರೆ ಜಲ್ಲಿಕಲ್ಲುಗಾಗಿ ಭೂಮಿ ಅಗೆಯಲು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಕಡ್ಡಾಯ. ಈ ಅನುಮತಿ ನೀಡಬೇಕಿರುವ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸಮಿತಿ ಆರು ತಿಂಗಳಿಂದ ಅಸ್ತಿತ್ವದಲ್ಲೇ ಇರದ ಕಾರಣ ಗುತ್ತಿಗೆದಾರರ ಸ್ಥಿತಿ ಅಡ್ಡಕತ್ತರಿಯಲ್ಲಿ ಸಿಕ್ಕಂತಾಗಿದೆ.
ಈ ಕುರಿತು ರಾಜ್ಯ ಸಚಿವ ಸಂಪುಟದಲ್ಲಿ ಚರ್ಚೆಯೂ ಆಗಿದೆ. ಆದರೆ ಕರ್ನಾಟಕದವರೇ ಆಗಿರುವ ವೀರಪ್ಪ ಮೋಯ್ಲಿ ಜವಾಬ್ದಾರಿ ಹೊತ್ತಿರುವ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸಮಿತಿ ರಚನೆಗೆ ಇದುವರೆಗೂ ಸಮ್ಮತಿ ನೀಡಿಲ್ಲ.
ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸಮಿತಿ ರಚನೆಯಾಗದ ಕಾರಣ ಜಲ್ಲಿಕಲ್ಲು ಉತ್ಪಾದನೆಗೆ ಸಾಕಷ್ಟು ವಿಳಂಬವಾಗಿದೆ. ಈ ಮಧ್ಯೆ ಲೋಕಸಭೆ ಚುನಾವಣೆ ಘೋಷಣೆಯಾದಲ್ಲಿ ನೂತನ ಸಮಿತಿ ರಚನೆಗೆ ನೀತಿ ಸಂಹಿತೆ ಅಡ್ಡಿಯಾಗುತ್ತದೆ. ಹೀಗಾದಲ್ಲಿ ಇನ್ನೂ ಕನಿಷ್ಠ 3-4 ತಿಂಗಳು ತೊಂದರೆ ತಪ್ಪಿದ್ದಲ್ಲ.
ಕಾರ್ಮಿಕರು ಬೀದಿಗೆ: ಜಲ್ಲಿಕಲ್ಲಿನ ಕೊರತೆ ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿಯಾಗಿರುವ ಜತೆಗೆ, ಜಲ್ಲಿಕಲ್ಲನ್ನೇ ನಂಬಿದವರ ಬದುಕು ದುಸ್ತರವಾಗಿದೆ. ಜಲ್ಲಿಕಲ್ಲಿನ ಪ್ರತಿ ಕ್ರಷರ್ಗಳಲ್ಲಿ ಸಾವಿರಾರು ಕಾರ್ಮಿಕರು ಕೆಲಸ ಮಾಡುತ್ತಾರೆ. ಈಗ ಕೆಲಸವಿಲ್ಲದೆ ಆ ಎಲ್ಲ ಕುಟುಂಬಗಳೂ ಅಕ್ಷರಶಃ ಬೀದಿಗೆ ಬೀಳುವ ಆತಂಕ ಎದುರಿಸುತ್ತಿವೆ. ಅಭಿವೃದ್ಧಿ ಕಾಮಗಾರಿಗಳು ಸುಗಮವಾಗಿ ಸಾಗುವ ಜೊತೆಗೆ ಕಾರ್ಮಿಕರ ಬದುಕು ಸಂರಕ್ಷಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಲ್ಲಿಕಲ್ಲು ಸಮಸ್ಯೆ ನಿವಾರಿಸಬೇಕಿದೆ.
-ಆನಂದ ಅಂಗಡಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

