ಧಾರವಾಡ

ಜೀವಕ್ಕೆರವಾದ ಅವೈಜ್ಞಾನಿಕ ರೋಡ್ ಹಂಪ್ಸ್

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಫೆ. 21
ರೋಡ್ ಹಂಪ್ಸ್ (ಸ್ಪೀಡ್ ಬ್ರೇಕರ್)ಗಳು ಮತ್ತು ರಸ್ತೆ ವಿಭಜಕಗಳು 'ಇಂಡಿಯನ್ ರೋಡ್ ಕಾಂಗ್ರೆಸ್'ದಲ್ಲಿ ವಿವರಿಸಿದಂತೆ ಕಾನೂನು ಬದ್ಧವಾಗಿರಬೇಕೆಂದಿದೆ. ಆದರೆ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ನಿಯಮಾವಳಿ ಉಲ್ಲಂಘಿಸಿದ ರೋಡ್ ಹಂಪ್ಸ್ಗಳೇ ಹೆಚ್ಚಾಗಿ ತಲೆ ಎತ್ತಿ ನಿಂತಿವೆ.
ಹೌದು, ಅವಳಿ ನಗರದಲ್ಲಿ ರೋಡ್ ಹಂಪ್ಸ್ಗಳನ್ನು ನಿರ್ಮಿಸಲು ಕಾನೂನು ಲೆಕ್ಕಕ್ಕೇ ಇಲ್ಲ. ಪಾಲಿಕೆಯಾಗಲಿ, ಲೋಕೋಪಯೋಗಿ ಇಲಾಖೆಯಾಗಲಿ ಬೇಕಾಬಿಟ್ಟಿಯಾಗಿ ರೋಡ್ ಹಂಪ್ಸ್ಗಳನ್ನು ನಿರ್ಮಿಸುತ್ತಿವೆ. ಇದರಿಂದಾಗಿ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ.
36 ನಿಯಮಬದ್ಧ: ಸಂಚಾರಿ ಪೊಲೀಸರು ಗುರುತಿಸಿರುವ ಹಾಗೆ ಅವಳಿ ನಗರದ ವಿದ್ಯಾನಗರ ಗುರುದತ್ತ ಭವನ ಜೈನ್ ನಗರ ಕ್ರಾಸ್, ಕಾಡಸಿದ್ದೇಶ್ವರ ಕಾಲೇಜು, ಬಿವಿಬಿ ಕಾಲೇಜು ಎದುರಿಗೆ, ಎಂ. ಆರ್. ಸಾಕ್ರೆ ಶಾಲೆ ಎದುರು, ಉಣಕಲ್ ಸಿದ್ದಪ್ಪಜ್ಜನ ಮಠ ಎದುರು, ಶ್ರೀನಗರ ಕ್ರಾಸ್ ರಸ್ತೆ, ಬೈರಿದೇವರಕೊಪ್ಪ ಶಿವಾನಂದ ಮಠದ ಎದುರು,   ಕೌಲಪೇಟೆ ಕ್ರಾಸ್ ಹತ್ತಿರ ಸೇರಿದಂತೆ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ 36 ರೋಡ್ ಹಂಪ್ಸ್ಗಳು ಮಾತ್ರ ಕ್ರಮಬದ್ಧವಾಗಿವೆ.
20ಕ್ಕೂ ಹೆಚ್ಚು ಅವೈಜ್ಞಾನಿಕ: ಇನ್ನು ಸಂಚಾರಿ ಪೊಲೀಸರೇ ಗುರುತಿಸಿರುವ ಹಾಗೆ ಅವಳಿ ನಗರದಲ್ಲಿ ಸುಮಾರು 20ಕ್ಕೂ ಹೆಚ್ಚು ಅವೈಜ್ಞಾನಿಕ ರೋಡ್ ಹಂಪ್ಸ್ಗಳಿವೆ. ರಮೇಶ ಭವನ ಪಕ್ಕದ ರಸ್ತೆಯಿಂದ ಅಶೋಕ ನಗರ ರೇಲ್ವೆ ಅಂಡರ್ ಬ್ರಿಜ್ವರೆಗೆ 11 ಅವೈಜ್ಞಾನಿಕ ರೋಡ್ಸ್ ಹಂಪ್ಸ್ಗಳಿವೆ. ಅಶೋಕ ನಗರ ಪೊಲೀಸ್ ಠಾಣೆಯಿಂದ ನೃಪತುಂಗ ಬೆಟ್ಟ ಹಾಗೂ ರಾಜನಗರ ಕ್ರಿಕೆಟ್ ಮೈದಾನದವರೆಗೆ 7ಕ್ಕೂ ಹೆಚ್ಚು ಅವೈಜ್ಞಾನಿಕ ಹಂಪ್ಸ್ ಇದೆ. ಗೋಪನಕೊಪ್ಪ ಬಸ್ ನಿಲ್ದಾಣದಿಂದ ಶ್ರೀನಗರ ಚರ್ಚ ಕ್ರಾಸ್ವರೆಗೆ 6 ನಿಯಮ ಬಾಹಿರವಾಗಿ ನಿರ್ಮಿಸಿದ ರೋಡ್ ಹಂಪ್ಸ್ ಇದೆ.
ಸವಾರರ ಪರದಾಟ: ಅವೈಜ್ಞಾನಿಕ ರೋಡ್ ಹಂಪ್ಸ್ಗಳಿಂದಾಗಿ ವಾಹನ ಸವಾರರು ಅನುಭವಿಸುವ ತೊಂದರೆ ಅಷ್ಟಿಷ್ಟಲ್ಲ. ವಿಶೇಷವಾಗಿ ಬೈಕ್ ಸವಾರರಂತೂ ರೋಡ್ ಹಂಪ್ಸ್ನಿಂದಾಗಿ ತೀರಾ ತೊಂದರೆ ಅನುಭವಿಸುತ್ತಿದ್ದಾರೆ. ನಿಯಮಾನುಸಾರ ರೋಡ್ ಹಂಪ್ಸ್ ನಿರ್ಮಿಸದೇ ಗುಡ್ಡೆ ರೂಪದಲ್ಲಿ ಹಂಪ್ಸ್ ಕಾಟಾಚಾರಕ್ಕೆ ನಿರ್ಮಿಸಲಾಗುತ್ತಿದೆ. ಅತಿ ಎತ್ತರವಾಗಿರುವ ಈ ಹಂಪ್ಸ್ಗಳಿಗೆ ಮುಖ್ಯವಾಗಿ ಬಣ್ಣ ಬಳಿದಿರುವುದಿಲ್ಲ, ಹೀಗಾಗಿ ಹಂಪ್ಸ್ ವಾಹನ ಸವಾರರಿಗೆ ಕಾಣುವುದಿಲ್ಲ. ವೇಗವಾಗಿ ಬರುವ ಬೈಕ್ ಸವಾರರು ಎಡವಿ ಬೀಳುತ್ತಿದ್ದಾರೆ. ಇನ್ನು ಕಾರಗಳಂತೂ ರೋಡ್ ಹಂಪ್ಸ್ನಿಂದಾಗಿ ಜಖಂಗೊಳ್ಳುತ್ತಿದೆ. ಅವೈಜ್ಞಾನಿಕ ರೋಡ್ ಹಂಪ್ಸ್ನಿಂದ ಬೆನ್ನು ನೋವು, ನರ ಸೆಳೆತ, ನರ ದೌರ್ಬಲ್ಯದ ಜತೆಗೆ ಕೈಕಾಲು ಮುರಿದುಕೊಂಡ ಪ್ರಸಂಗಗಳೂ ಹೆಚ್ಚಿವೆ.
ಅವಳಿ ನಗರದಲ್ಲಿ 2013ನೇ ಸಾಲಿನಲ್ಲಿ 535 ರಸ್ತೆ ಅಪಘಾತ ಪ್ರಕರಣಗಳು ದಾಖಲಾಗಿದ್ದು, ಈ ಪ್ರಕರಣದಲ್ಲಿ 97 ಮಂದಿ ಮೃತಪಟ್ಟಿದ್ದು, 753 ಜನ ಗಾಯಗೊಂಡಿದ್ದಾರೆ. ಇದಕ್ಕೆ ಪ್ರಕರಣಗಳಲ್ಲಿ ಅವೈಜ್ಞಾನಿಕ ರೋಡ್ ಹಂಪ್ಸ್ ಕೂಡ ಕಾರಣವಾಗಿರುವುದನ್ನು ತಳ್ಳಿ ಹಾಕುವಂತಿಲ್ಲ.
ಆಲಿಸದ ಇಲಾಖೆ: ಮೃತ್ಯು ಕೂಪಗಳಾಗಿರುವ ರೋಡ್ ಹಂಪ್ಸ್ಗಳನ್ನು ತೆಗೆಯುವಂತೆ ಪಾಲಿಕೆಗೆ ಹಾಗೂ ಲೋಕೋಪಯೋಗಿ ಇಲಾಖೆಗೆ ಸಂಘ-ಸಂಸ್ಥೆಗಳು ಸಾಕಷ್ಟು ಮನವಿಗಳನ್ನು ಅರ್ಪಿಸಿವೆ. ಅಷ್ಟೇ ಅಲ್ಲ ಪೊಲೀಸ್ ಇಲಾಖೆಯೂ ಅನೇಕ ಬಾರಿ ಮನವಿ ಮಾಡಿಕೊಂಡಿದೆ. ಇನ್ನಾದರೂ ಇಲಾಖೆ ಎಚ್ಚೆತ್ತುಕೊಳ್ಳದಿದ್ದರೆ ರೋಡ್ ಹಂಪ್ಸ್ ತೆಗೆಸಲು ಜನ ರಸ್ತೆಗಿಳಿಯುವ ಕಾಲ ದೂರವಿಲ್ಲ.
ವಾರದಲ್ಲಿ ತೆರವು
ಅವೈಜ್ಞಾನಿಕ ರೋಡ್ ಹಂಪ್ಸ್ಗಳನ್ನು ತೆಗೆಯಲು ಈ ಹಿಂದೆಯೇ ಪಾಲಿಕೆ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಮೌಖಿಕವಾಗಿ ತಿಳಿಸಲಾಗಿತ್ತು. ಇದೀಗ ಪೂರ್ವ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿಯೇ ಹೆಚ್ಚಾಗಿ ಅವೈಜ್ಞಾನಿಕ ರೋಡ್ ಹಂಪ್ಸ್ಗಳಿರುವುದರಿಂದ ಅದನ್ನು ತೆರವುಗೊಳಿಸಲು ಸಂಬಂಧಿಸಿದ ಇಲಾಖೆಯೊಂದಿಗೆ ಸಂಪರ್ಕ ಸಾಧಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಒಂದು ವಾರದೊಳಗಾಗಿ ಅವೈಜ್ಞಾನಿಕ ರೋಡ್ ಹಂಪ್ಸ್ ತೆರವುಗೊಳಿಸಲಾಗುವುದು.
- ಎ. ಆರ್. ಬಡಿಗೇರ,
ಎಸಿಪಿ ಸಂಚಾರಿ ಉಪ ವಿಭಾಗ, ಹುಬ್ಬಳ್ಳಿ
ಕಾನೂನು ಮೊರೆ
ಅವೈಜ್ಞಾನಿಕ ರೋಡ್ ಹಂಪ್ಸ್ಗಳನ್ನು ತೆರವುಗೊಳಿಸುವಂತೆ ಅನೇಕ ಮನವಿ ಸಲ್ಲಿಸಲಾಗಿದೆ. ಮಾಹಿತಿ ಹಕ್ಕಿನಲ್ಲಿ ಪ್ರಶ್ನಿಸಿದಾಗ ಪೊಲೀಸ್ ಇಲಾಖೆಯೇ ಅವೈಜ್ಞಾನಿಕ ರೋಡ್ ಹಂಪ್ಸ್ಗಳನ್ನು ಗುರುತು ಮಾಡಿದೆ. ಆದರೆ ಪೊಲೀಸ್ ಇಲಾಖೆಯಾಗಲಿ, ಪಾಲಿಕೆ, ಲೋಕೋಪಯೋಗಿ ಇಲಾಖೆಯಾಗಲಿ ಕ್ರಮಕ್ಕೆ ಮುಂದಾಗಿಲ್ಲ. ವಾರದೊಳಗಾಗಿ ರೋಡ್ ಹಂಪ್ಸ್ ತೆರವುಗೊಳಿಸದಿದ್ದರೆ ಕಾನೂನು ಮೊರೆ ಹೋಗುತ್ತೇನೆ.
- ಮೋಹನ ಮಾಳಿಗೇರ, ಮಾಹಿತಿ ಹಕ್ಕು ಹೋರಾಟಗಾರ  


-ವಿಶೇಷ ವರದಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.