ಪಾರ್ಕಿಂಗ್ ಸೌಲಭ್ಯವಿಲ್ಲದ ಕಟ್ಟಡ ಗುರುತಿಸಿ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಫೆ. 21
ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಅವಳಿ ನಗರದ ವಾಣಿಜ್ಯ ಕಟ್ಟಡಗಳ ಪಟ್ಟಿ ಮಾಡುವಂತೆ ಮಹಾನಗರ ಪಾಲಿಕೆ ಆಯುಕ್ತ ರಮಣದೀಪ ಚೌಧರಿ ಸಹಾಯಕ ಆಯುಕ್ತರಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.
ಪಾಲಿಕೆ ಮುಖ್ಯಕಚೇರಿಯಲ್ಲಿ ಶುಕ್ರವಾರ ನಡೆದ ಸಹಾಯಕ ಆಯುಕ್ತರು ಹಾಗೂ ಮತ್ತಿತರ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಈ ಕುರಿತು ಕಟ್ಟುನಿಟ್ಟಿನ ಸೂಚನೆ ನೀಡಿದ ಆಯುಕ್ತ ಚೌಧರಿ, ಒಂದು ವಾರದೊಳಗೆ ಪಟ್ಟಿ ಸಿದ್ಧಪಡಿಸುವಂತೆ ನಿರ್ದೇಶನ ನೀಡಿದರು.
ಕಳೆದ ವಾರ ಮಹಾನಗರ ಪಾಲಿಕೆಗೆ ಭೇಟಿ ನೀಡಿದ್ದ ಉಪ ಲೋಕಾಯುಕ್ತ ಸುಭಾಷ ಆದಿ ಅವರು ವಾಣಿಜ್ಯ ಕಟ್ಟಡಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡುವ ಕುರಿತು ನೀಡಿದ್ದ ಸೂಚನೆ ಹಿನ್ನಲೆಯಲ್ಲಿ ಆಯುಕ್ತ ರಮಣದೀಪ ಚೌಧರಿ ಸಹಾಯಕ ಆಯುಕ್ತರ ಸಭೆ ನಡೆಸಿದರು.
ಈ ಹಿಂದೆ ತ್ರಿಲೋಕಚಂದ್ರ ಅವರು ಪಾಲಿಕೆ ಆಯುಕ್ತರಾಗಿದ್ದಾಗ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ವಾಣಿಜ್ಯ ಕಟ್ಟಡಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದರು. ಪಾರ್ಕಿಂಗ್ಗೆ ಮೀಸಲಿಟ್ಟಿದ್ದ ಅವಳಿ ನಗರದ ಬಹುತೇಕ ಕಟ್ಟಡಗಳು ಮಳಿಗೆಗಳನ್ನು ನಿರ್ಮಿಸಿದ್ದವು. ಆ ಸಂದರ್ಭದಲ್ಲಿ ತ್ರಿಲೋಕಚಂದ್ರ ಅವರು ಪಾರ್ಕಿಂಗ್ ಅತಿಕ್ರಮಿಸಿದ್ದ ಕಟ್ಟಡಗಳ ವಿರುದ್ಧ ಕ್ರಮಕ್ಕೆ ಮುಂದಾಗಿದ್ದರು. ಹೆಚ್ಚಿನ ಕಟ್ಟಡಗಳಲ್ಲಿ ಅತಿಕ್ರಮಣ ತೆರವುಗೊಳಿಸಿ, ವಾಹನಗಳ ಪಾರ್ಕಿಗ್ಗೆ ಜಾಗವನ್ನೂ ಮೀಸಲಿರಿಸಲಾಗಿತ್ತು.
ಆದರೆ ತ್ರಿಲೋಕಚಂದ್ರ ಅವರು ವರ್ಗಾವಣೆಗೊಂಡ ಅನಂತರ ಪಾರ್ಕಿಂಗ್ಗೆ ಮೀಸಲಿಟ್ಟಿದ್ದ ಜಾಗವನ್ನು ಬಹುತೇಕ ವಾಣಿಜ್ಯ ಕಟ್ಟಡಗಳ ಮಾಲೀಕರು ಮತ್ತೆ ಅತಿಕ್ರಮಿಸಿದರು. ಇದರಿಂದಾಗಿ ಪಾರ್ಕಿಂಗ್ ಸಮಸ್ಯೆ ಮತ್ತೆ ಉದ್ಭವಿಸಿತಲ್ಲದೇ, ರಸ್ತೆ ಇಕ್ಕೆಲಗಳಲ್ಲಿ ವಾಹನಗಳನ್ನು ಪಾರ್ಕ್ ಮಾಡುವುದರಿಂದ ವಾಹನಗಳ ಸುಗಮ ಸಂಚಾರಕ್ಕೂ ಅಡಚಣೆಯುಂಟಾಯಿತು.
ರಸ್ತೆ ಇಕ್ಕೆಲಗಳಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುವ ಮೂಲಕ ಸುಗಮ ವಾಹನ ಸಂಚಾರಕ್ಕೆ ಆಗುತ್ತಿರುವ ತೊಂದರೆ ಗಮನಿಸಿದ ಉಪ ಲೋಕಾಯುಕ್ತ ಸುಭಾಷ ಆದಿ, ಪಾರ್ಕಿಂಗ್ ಅತಿಕ್ರಮದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ವಾಣಿಜ್ಯ ಕಟ್ಟಡಗಳಲ್ಲಿನ ಪಾರ್ಕಿಂಗ್ ಜಾಗ ಅತಿಕ್ರಮಣ ತೆರವುಗೊಳಿಸುವಂತೆ ಸೂಚಿಸಿದ್ದರು.
ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಆಯುಕ್ತ ರಮಣದೀಪ ಚೌಧರಿ, ಪಾರ್ಕಿಂಗ್ ಅತಿಕ್ರಮಣಗೊಳಿಸಿರುವ ಕಟ್ಟಡಗಳ ಪಟ್ಟಿಯನ್ನು ಮುಂದಿನ ಒಂದು ವಾರದೊಳಗೆ ಸಿದ್ಧಪಡಿಸುವಂತೆ ಸೂಚಿಸಿದರು.
ಪಾರ್ಕಿಂಗ್ ಅತಿಕ್ರಮಣಗೊಂಡಿರುವ ಕಟ್ಟಡಗಳ ಪಟ್ಟಿ ಸಿದ್ಧಗೊಂಡ ನಂತರ ಅಂಥ ಕಟ್ಟಡಗಳಿಗೆ ಪಾಲಿಕೆ ಅಧಿಕಾರಿಗಳು ಮೂರು ನೋಟಿಸ್ಗಳನ್ನು ನೀಡುವರು. ಮೂರೂ ನೋಟಿಸ್ನ ಅವಧಿ ಪೂರ್ಣಗೊಳ್ಳುವುದರೊಳಗೆ ಕಟ್ಟಡಗಳ ಮಾಲೀಕರು ಸ್ವಯಂ ಪ್ರೇರಿತವಾಗಿ ಅತಿಕ್ರಮಣ ತೆರವುಗೊಳಿಸದೇ ಹೋದಲ್ಲಿ ಪಾಲಿಕೆ ವತಿಯಿಂದ ಅತಿಕ್ರಮಣ ತೆರವುಗೊಳಿಸಲಾಗುವುದು.
ಈ ಮಧ್ಯೆ ಕಳೆದ ವಾರ ವರ್ಗಾವಣೆಗೊಂಡಿರುವ ಸಹಾಯಕ ಆಯುಕ್ತರು ಹಾಗೂ ಮತ್ತಿತರ ಅಧಿಕಾರಿಗಳು ಶುಕ್ರವಾರ ಕರ್ತವ್ಯಕ್ಕೆ ಹಾಜರಾದರು.
ಕರ ವಸೂಲಾತಿ ಮಾಸಾಚರಣೆ
ಅವಳಿ ನಗರದಲ್ಲಿ ಮಹಾನಗರ ಪಾಲಿಕೆ ವತಿಯಿಂದ ಹಮ್ಮಿಕೊಂಡಿರುವ ಕರ ವಸೂಲಾತಿ ಮಾಸಾಚರಣೆಗೆ ಆಯುಕ್ತ ರಮಣದೀಪ ಚೌಧರಿ ಶುಕ್ರವಾರ ಬೆಳಗ್ಗೆ ತಮಟೆ ಬಾರಿಸುವ ಮೂಲಕ ಚಾಲನೆ ನೀಡಿದರು. ಕರ ವಸೂಲಾತಿಗಾಗಿ ವಿಶೇಷ ತಂಡ ರಚಿಸಲಾಗಿದೆ. ಈಗಾಗಲೇ ವಿಶೇಷ ಕರ ವಸೂಲಾತಿ ಕಾರ್ಯಾಚರಣೆ ಅನ್ವಯ ಪ್ರತಿ ವಲಯ ಕಚೇರಿಗೆ ನೋಡಲ್ ಅಧಿಕಾರಿಗಳನ್ನ್ನು ನಿಯೋಜಿಸಲಾಗಿದೆ. ವಲಯ ಕಚೇರಿ ವ್ಯಾಪ್ತಿಯಲ್ಲಿ ವಲಯ ಕಚೇರಿ ಸಹಾಯಕ ಆಯುಕ್ತರು ಹಾಗೂ ಕರ ವಸೂಲಾತಿ ಸಿಬ್ಬಂದಿ ತಮ್ಮದೇ ಆದ ವಿಶೇಷ ಕಾರ್ಯಾನೀತಿಯೊಂದಿಗೆ ಕರ ವಸೂಲ್ನಿ ಮಾಡಲು ಆಯುಕ್ತರು ಸೂಚಿಸಿದ್ದಾರೆ. ವಿಶೇಷ ತಮಟೆ ಬಾರಿಸುವ ತಂಡ ಮತ್ತು ಪೌರಕಾರ್ಮಿಕರು ಹಾಗೂ ವಲಯ ಕಚೇರಿ ಸಿಬ್ಬಂದಿ ಕರ ವಸೂಲಿಗೆ ಶುಕ್ರವಾರದಿಂದ ಅವಳಿ ನಗರದಾದ್ಯಂತ ತೆರಳಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

