ಧಾರವಾಡ

ಉದ್ದೇಶಿತ ಬಿಆರ್‌ಟಿಎಸ್‌ಗೆ ವಿರೋಧವಿಲ್ಲ: ಶಾಸಕ ಬೆಲ್ಲದ

Published On :

ಕನ್ನಡಪ್ರಭ ವಾರ್ತೆ, ಧಾರವಾಡ, ಜ. 2
ಹು-ಧಾ ಅವಳಿ ನಗರದ ಮಧ್ಯೆ ಉದ್ದೇಶಿತ ತ್ವರಿತ ಬಸ್ ಸಂಚಾರ ವ್ಯವಸ್ಥೆ (ಬಿಆರ್‌ಟಿಎಸ್)ಗೆ ಸಂಪೂರ್ಣ ಬೆಂಬಲವಿದೆ ಎಂದು ಶಾಸಕ ಅರವಿಂದ ಬೆಲ್ಲದ ಸ್ಪಷ್ಟಪಡಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆ ಅವಳಿ ನಗರದ ಜನತೆಗೆ ಅನುಕೂಲಕರ. ನೂರಾರು ಕೋಟಿ ವೆಚ್ಚದ ಈ ಯೋಜನೆಗೆ ನಮ್ಮ ವಿರೋಧವಿಲ್ಲ. ಯೋಜನೆಗೆ ಸ್ವಾಧೀನವಾಗುವ ಜಾಗವನ್ನು ಖುಷಿಯಿಂದ ಕೊಡುತ್ತೇವೆ. ಆದರೆ, ಕೆಲ ಬದಲಾವಣೆಗಳೊಂದಿಗೆ ಯೋಜನೆ ಅನುಷ್ಠಾನವಾದರೆ ಮಾತ್ರ ಇದು ಯಶಸ್ವಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಕೆಲ ಪ್ರಮುಖ ಪ್ರಸ್ತಾವನೆಗಳನ್ನು ಯೋಜನಾಧಿಕಾರಿಗಳ ಮುಂದಿಟ್ಟಿದ್ದೇನೆ. ಕೆಲವರು ಅದನ್ನು ತಪ್ಪು ತಿಳಿದುಕೊಂಡಿದ್ದಾರೆ ಎಂದು ಹೇಳಿದರು.
ಸುಗಮ ಸಂಚಾರಕ್ಕೆಂದು ಯೋಜನೆ ಜಾರಿ ಮಾಡುತ್ತಿದ್ದು, 32 ಬಸ್ ನಿಲ್ದಾಣಗಳು ಬರುತ್ತವೆ. ರಸ್ತೆ ಎರಡು ಬದಿಗೆ ಜನರ ಓಡಾಡಕ್ಕೆ ಮೇಲು ಸೇತುವೆ ಮಾಡಲಾಗುತ್ತಿದ್ದು, ಇದರಲ್ಲಿ ಜನರು ಓಡಾಡುವುದಿಲ್ಲ ಎಂಬುದು ಗೊತ್ತಿದ್ದ ಮಾತು. ಆದ್ದರಿಂದ ಇದರ ಬದಲಾಗಿ ಎಸ್ಕಲೇಟರ್ ಅಥವಾ ಲಿಫ್ಟ್ ಮಾದರಿಯಲ್ಲಿ ಯೋಜನೆ ರೂಪಿಸಿ ಎಂದು ಸಲಹೆ ನೀಡಿದ್ದೇನೆ. ಸಂಚಾರಕ್ಕೆ ಅಡೆತಡೆಯಾಗದೆ ಕೆಳಸೇತುವೆ ನಿರ್ಮಾಣ ಮಾಡಬೇಕು. ಅಲ್ಲದೇ, ಧಾರವಾಡದ ಟೋಲನಾಕಾದಿಂದ ಕಲಾಭವನದವರೆಗೆ ವಿನಾಕಾರಣ ರಸ್ತೆ ಅಗಲೀಕರಣದಿಂದ ಇಡೀ ನಗರ ಹಾಳಾಗುತ್ತದೆ. ಬದಲಾಗಿ ಫ್ಲೈ ಓವರ್ ಮಾಡಬೇಕು ಎಂದು ಸಲಹೆ ನೀಡಿದ್ದೇನೆ ಎಂದರು.
ಬಿರ್‌ಟಿಎಸ್ ಬಸ್ ಟರ್ಮಿನಲ್‌ಗೆ ನಗರದ ಶಿಕ್ಷಕಿಯರ ಸರ್ಕಾರಿ ತರಬೇತಿ ಸಂಸ್ಥೆಯ ಜಾಗೆ ಬಳಸುವ ವಿಚಾರದಲ್ಲಿ ಯೋಜನೆಯ ಪರವಾಗಿದ್ದೇನೆ. ಜೊತೆಗೆ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಸಂಸ್ಥೆಯ ಘನತೆಗೆ ಧಕ್ಕೆಯಾಗದಂತೆ ಜಾಗೆ ಪಡೆಯಬೇಕು. ಪಡೆದ ಜಾಗೆಯ ಮೇಲ್ಭಾಗದಲ್ಲಿ ಗ್ರಂಥಾಲಯ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಟರ್ಮಿನಲ್ ಮತ್ತು ಸಂಸ್ಥೆಯ ಉದ್ದೇಶಗಳೆರಡನ್ನೂ ಸಾಧಿಸಬಹುದು. ಈ ಜಾಗೆ ಹೊರತಾಗಿ ಬೇರೆ ಜಾಗಗಳ ಬಗ್ಗೆಯೂ ಚಿಂತಿಸಲಾಗುತ್ತಿದೆ. ಇದನ್ನೇ ಗುರುರಾಜ ಹುಣಸೀಮರದ ತಪ್ಪು ತಿಳಿವಳಿಕೆಯಿಂದ ಯೋಜನೆಗೆ ವಿರೋಧವಿದೆ ಎಂದು ಹೇಳಿಕೆ ನೀಡುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದರು.
ಧಾರವಾಡ ನಗರದ ರಸ್ತೆಗಳ ಸುಧಾರಣೆ ಕುರಿತು ಮಾತನಾಡಿದ ಅವರು, ಹಳೇ ಎಸ್ಪಿ ಕಚೇರಿಯಿಂದ ಶಿವಾಜಿ ವೃತ್ತದವರೆಗೆ 2.2 ಕಿ.ಮೀ. ಹಾಗೂ ಜ್ಯುಬಿಲಿ ವೃತ್ತದಿಂದ ಶಿವಾಜಿ ರಸ್ತೆ, ಗಾಂಧಿಚೌಕನಿಂದ ಶಿವಸಾಗರ ಹೋಟೆಲ್ ವರೆಗೂ ಕಾಂಕ್ರೀಟ್ ರಸ್ತೆ ಮಾಡಿಸಲು ಸದ್ಯದಲ್ಲಿಯೇ ಟೆಂಡರ್ ಕರೆಯಲಾಗುವುದು.  ಸೂಪರ್ ಮಾರುಕಟ್ಟೆಯಲ್ಲಿಯೂ ಸೌಕರ್ಯಗಳನ್ನು ನೀಡಲು ಯೋಜನೆ ಹಾಕಲಾಗಿದೆ. ಅಲ್ಲದೇ, ನಗರದ ಈಜುಗೊಳ ಸುಧಾರಣೆ ಹಾಗೂ ಕೆಲಗೇರಿ ಕೆರೆ ಉದ್ಯಾನವನದ ಅಭಿವೃದ್ಧಿಗೂ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಸದಸ್ಯರಾದ ಶಿವು ಹಿರೇಮಠ, ವಿಜಯಾನಂದ ಶೆಟ್ಟಿ, ಸಂಜಯ ಕಪಟಕರ, ಪೂರ್ಣಾ ಪಾಟೀಲ, ಬಸವರಾಜ ಮುತ್ತಳ್ಳಿ, ಪ್ರಕಾಶ ಗೋಡಬೊಲೆ, ಮೋಹನ ರಾಮದುರ್ಗ, ರಾಜೇಶ ಕೋಟೆಣ್ಣವರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.