ಜಿಮಖಾನಾ ಕ್ಲಬ್ ಸದಸ್ಯನ ವಿರುದ್ಧ ದಾವೆ
ಹುಬ್ಬಳ್ಳಿ: ಜಿಮಖಾನಾ ಆಡಳಿತ ಮಂಡಳಿಯ ವಿರುದ್ಧ ಹಾಕಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಉಚ್ಚ ನ್ಯಾಯಾಲಯ ತಿರಸ್ಕರಿಸಿದೆ ಎಂದು ಆಡಳಿತ ಮಂಡಳಿಯ ಸದಸ್ಯರು ಸುಳ್ಳು ಹೇಳಿಕೆ ನೀಡುವ ಮೂಲಕ ನ್ಯಾಯಾಂಗ ನಿಂದನೆ ಮಾಡಿದ್ದಲ್ಲದೇ, ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಇವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಪೀಪಲ್ ಆ್ಯಕ್ಷನ್ ಕಮಿಟಿಯ ಅರವಿಂದ ಮೇಟಿ ತಿಳಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯ ನ್ಯಾಯಮೂರ್ತಿ ಡಿ. ಎಚ್. ವಘೇಲಾ ಹಾಗೂ ಎಸ್. ಎನ್. ಸತ್ಯನಾರಾಯಣ ಅವರನ್ನು ಒಳಗೊಂಡು ಪೀಠವು ಸಾರ್ವಜನಿಕ ಹಿತಾಸಕ್ತಿಗೆ ಮಾನ್ಯತೆ ನೀಡಿದೆ. ಈ ವಿಷಯವಾಗಿ ವಿಚಾರಣೆ ಕೈಗೊಂಡ ನ್ಯಾಯಾಲಯ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಧಾರವಾಡ ಜಿಲ್ಲಾಧಿಕಾರಿಗೆ ಸೂಚಿಸಿದೆಯಲ್ಲದೇ, ಜಿಲ್ಲಾಧಿಕಾರಿ ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿರುವುದಾಗಿ ತಿಳಿಸಿದೆ. ಇದರ ನಂತರ ಸರ್ಕಾರಕ್ಕೆ ಯೋಗ್ಯ ನಿರ್ಧಾರ ಕೈಗೊಳ್ಳಲು ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾಗಿ ಹೇಳಿದರು.
ಒಂದು ವೇಳೆ ಕನಿಷ್ಠ ಅವಧಿಯಲ್ಲಿ ಸರ್ಕಾರ ನಿರ್ಧಾರಕ್ಕೆ ಬರದಿದ್ದರೆ ಮುಖ್ಯ ನ್ಯಾಯಾಧೀಶರ ಹೇಳಿಕೆ ಪ್ರಕಾರ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪುನರ್ ವಿಚಾರಣೆಗೆ ತೆಗೆದುಕೊಳ್ಳಲು ಉಚ್ಚ ನ್ಯಾಯಾಲಯದಲ್ಲಿ ಅವಕಾಶವಿರುವುದಾಗಿ ನ್ಯಾಯಾಧೀಶರು ತಮ್ಮ ಆದೇಶದಲ್ಲಿ ತಿಳಿಸಿರುವುದಾಗಿ ಮೇಟಿ ಸ್ಪಷ್ಟ ಪಡಿಸಿದರು.
ಆದರೆ ಆಡಳಿತ ಮಂಡಳಿಯ ಸದಸ್ಯರೋರ್ವರು ವಾಸ್ತವಾಂಶವನ್ನು ಮರೆ ಮಾಚಿ, ನ್ಯಾಯಾಲಯದ ಆದೇಶ ಓದದೇ ತಮ್ಮ ಮೂರ್ಖತನ ಪ್ರದರ್ಶಿಸಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದ್ದಾಗಿ ಹೇಳಿಕೆ ನೀಡಿದ್ದಾರೆ. ಇವರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದರು.
ಮೈದಾನ ಬಚಾವೋ ಹೋರಾಟ ಹತ್ತಿಕ್ಕಲು ನಾನಾ ಷಡ್ಯಂತ್ರಗಳು ನಡೆಯುತ್ತಿವೆ. ಹೋರಾಟಗಾರರ ಮೇಲೆ ಸುಳ್ಳು ಕೇಸ್ ದಾಖಲಿಸಲಾಗುತ್ತಿದೆ. ಆದರೆ ಹೋರಾಟಗಾರರು ಯಾವುದೇ ಕಾರಣಕ್ಕೂ ಇಂಥ ಬೆದರಿಕೆಗೆ ಬಗ್ಗುವುದಿಲ್ಲ ಎಂದು ತಿಳಿಸಿದರು.
ಇದೇ ವೇಳೆ ಮಾತನಾಡಿದ ಪ್ರೊ. ನರಸಿಂಹ ನಾಡಿಗೇರ, ರಿಕ್ರಿಯೇಶನ್ ಕ್ಲಬ್ ಕೆಟಿಸಿಪಿ ಕಾಯ್ದೆ 1963ನ್ನು ಸಂಪೂರ್ಣವಾಗಿ ಉಲ್ಲಂಘಿಸಿದೆ. ಮೈದಾನದ ಆಸುಪಾಸಿನಲ್ಲಿ ಯಾವುದೇ ಬೃಹತ್ ಕಟ್ಟಡಗಳಿರಬಾರದು, ಕ್ರೀಡಾ ಚಟುವಟಿಕೆಯ ಹೊರತಾಗಿ ಮತ್ತಾವುದೇ ಚಟುವಟಿಕೆ ನಡೆಯಬಾರದು ಎಂದು ಸ್ಪಷ್ಟ ಪಡಿಸಲಾಗಿದೆ. ಆದಾಗಿಯ್ಯೂ ಕಾನೂನು ಸ್ಪಷ್ಟವಾಗಿ ಉಲ್ಲಂಘಿಸಲಾಗುತ್ತಿದೆ. ಈ ವಿಷಯವನ್ನು ಸರ್ಕಾರದ ಗಮನಕ್ಕೆ ತಂದರೂ ಸರ್ಕಾರ ತಟಸ್ಥ ಧೋರಣೆ ಅನುಸರಿಸಿದೆ. ಕಾಯ್ದೆಗೆ ಬೆಲೆ ಇಲ್ಲ ಎಂದ ಮೇಲೆ ಸರ್ಕಾರ ಕೆಟಿಸಿಪಿ ಕಾಯ್ದೆಯನ್ನು ಕಿತ್ತುಹಾಕಲಿ ಎಂದರು.
ಮೈದಾನದಲ್ಲಿ ಕಟ್ಟಡ ನಿರ್ಮಿಸಲು ಪಾಲಿಕೆ ಕೇವಲ ಒಂದೇ ದಿನದಲ್ಲಿ ಅನುಮತಿ ನೀಡಿರುವುದೂ ಆಶ್ಚರ್ಯಕರ. ಸಾರ್ವಜನಿಕರು ಇದೇ ಅನುಮತಿಗಾಗಿ ಪಾಲಿಕೆಯ ಕಚೇರಿಗೆ ತಿಂಗಾಳಾನುಗಟ್ಟಲೆ ಎಡತಾಕಬೇಕಿದೆ. ಕ್ಲಬ್ ಸದಸ್ಯರ ಅಕ್ರಮಕ್ಕೆ ಪಾಲಿಕೆಯ ಅಧಿಕಾರಿಗಳೂ ಕೈಜೋಡಿಸಿರುವುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ನಾಡಿಗೇರಿ ಆರೋಪಿಸಿದರು. ವಿನಾಯಕ ಶಿರಾಳಕರ ಗೋಷ್ಠಿಯಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

