ಧಾರವಾಡ

ಶೇ.60 ಬೈಕ್ ಸವಾರರಿಗೆ ಹೆಲ್ಮೆಟ್ ಅಲರ್ಜಿ

Published On :

ಧಾರವಾಡ: ಜಾಗೃತಿ ಮೂಡಿಸಿದರೂ, ಎಚ್ಚರಿಕೆ ನೀಡಿದರೂ, ದಂಡ ಹಾಕಿದ್ರೂ ಬೈಕ್ ಸವಾರರಿಗೆ ಬೇಡವಾಗಿದೆ ಹೆಲ್ಮೆಟ್ ಧರಿಸುವುದು.
ಅವಳಿ ನಗರದ ವ್ಯಾಪ್ತಿಯಲ್ಲಿ ಶೇ. 60ಕ್ಕೂ ಹೆಚ್ಚು ಬೈಕ್ ಸವಾರರಿಗೆ ಹೆಲ್ಮೆಟ್ ಬೇಡ. ಪೊಲೀಸ್ ನಿತ್ಯ ದಂಡ ಹಾಕುತ್ತಿದ್ದರೂ ಬೈಕ್ ಸವಾರರು ದಂಡ ಪಾವತಿಸುತ್ತಿದ್ದಾರೆ ವಿನಃ ಹೆಲ್ಮೆಟ್ ಧರಿಸುತ್ತಿಲ್ಲ.
ನವೆಂಬರ್ 2012ರಿಂದ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಹೆಲ್ಮೆಟ್ ಕಡ್ಡಾಯವಾಗಿದೆ. ಹೆಲ್ಮೆಟ್ ಕಡ್ಡಾಯ ಜಾರಿಯಾಗಿ ಒಂದು ವರ್ಷ ಸಂದರೂ ಶೇ. 60ರಷ್ಟು ಬೈಕ್ ಸವಾರರು ಇನ್ನೂ ಹೆಲ್ಮೆಟ್ ಧರಿಸಲು ಮುಂದಾಗುತ್ತಿಲ್ಲ ಎನ್ನುವುದು ಸಂಚಾರಿ ಪೊಲೀಸರ ಬೇಸರದ ಮಾತು.  
ಹೆಲ್ಮೆಟ್ ಕಡ್ಡಾಯದ ಆಜ್ಞೆ ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರ ಮಧ್ಯೆ  ಆರಂಭದಿಂದಲೂ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ. ಎಷ್ಟೇ ತಿಳಿವಳಿಕೆ, ಎಚ್ಚರಿಕೆ ಹಾಗೂ ದಂಡ ವಿಧಿಸಿದರೂ ಸಾರ್ವಜನಿಕರು ಮಾತ್ರ ಮೀನಾಮೇಷ ಎನಿಸುತ್ತಿದ್ದಾರೆ.
40 ಸಾವಿರ ದಾಟಿದ ಪ್ರಕರಣ: ಹೆಲ್ಮೆಟ್ ಕಡ್ಡಾಯಗೊಳಿಸಿದ ದಿನದಿಂದ ಇಲ್ಲಿಯವರೆಗೆ ಕೇವಲ ಧಾರವಾಡ ನಗರದಲ್ಲಿ 41,319 ಪ್ರಕರಣಗಳು ದಾಖಲಾಗಿದ್ದು ರು. 4,13,1900 ದಂಡ ವಸೂಲಿ ಮಾಡಲಾಗಿದೆ. ಹಾಗೆಯೇ, ಧಾರವಾಡ ನಗರಕ್ಕಿಂತ ವಿಸ್ತೀರ್ಣ ದೊಡ್ಡದಾಗಿರುವ ಹುಬ್ಬಳ್ಳಿಯಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ 50 ಸಾವಿರದ ಗಡಿ ದಾಟಿರುವ ಸಾಧ್ಯತೆ ಇದೆ. ಸಿಬ್ಬಂದಿ ಕೊರತೆ ಮಧ್ಯೆಯೂ ಸುಗಮ ಸಂಚಾರಕ್ಕೆ ಸಂಚಾರಿ ಪೊಲೀಸರು ಹೆಣಗುತ್ತಿದ್ದಾರೆ. ಇದೀಗ ಹೆಲ್ಮೆಟ್ ಧರಿಸದ ಬೈಕ್ ಸವಾರರೊಂದಿಗೆ ನಿತ್ಯ ಹೆಣಗುವ ಸ್ಥಿತಿ ಬಂದಿದೆ.
ಸಿಸಿ ಮೂಲಕ ದಂಡ: ಸಂಚಾರಿ ಪೊಲೀಸರು ಅವಳಿ ನಗರಗಳ ಪ್ರಮುಖ ಸ್ಥಳಗಳಲ್ಲಿ ನಿಂತು ನಿತ್ಯ ನೂರಾರು ಪ್ರಕರಣಗಳನ್ನು ದಾಖಲಿಸುವುದು ದೊಡ್ಡ ಸಾಧನೆಯಾಗಿದೆಯೇ ಹೊರತು ನೂರಕ್ಕೆ ನೂರರಷ್ಟು ಹೆಲ್ಮೆಟ್ ಕಡ್ಡಾಯಗೊಳಿಸಲಾಗುತ್ತಿಲ್ಲ.  ಇದರ ಅವಳಿ ನಗರದ ಪ್ರಮುಖ ವೃತ್ತಗಳ ಸಿಗ್ನಲ್‌ಗಳಲ್ಲಿ ಅಳವಡಿಸಿದ ಸಿಸಿ ಕ್ಯಾಮೆರಾ ನೆರವು ಪಡೆದು ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಈ ವ್ಯವಸ್ಥೆ ಅಳವಡಿಸಿದ ನಂತರ ಧಾರವಾಡ ನಗರದ ವ್ಯಾಪ್ತಿಯಲ್ಲ್ಲಿ ಸಿಸಿ ಕ್ಯಾಮೆರಾ ಮುಖಾಂತರ 4,230 ಪ್ರಕರಣಗಳು ದಾಖಲಾಗಿವೆ. ದಂಡದ ಭಯದಿಂದ ಕೆಲವರು ನಿಯಮಿತವಾಗಿ ಹೆಲ್ಮೆಟ್ ಧರಿಸುತ್ತಿದ್ದರೆ, ಇನ್ನೂ ಕೆಲವರು ಪೊಲೀಸರು ನಿಲ್ಲುವ ಸ್ಥಳ ಮತ್ತು ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಮಾತ್ರ ಧರಿಸಿ ಪೊಲೀಸರ ಕಣ್ತಪ್ಪಿಸುತ್ತಿದ್ದಾರೆ.
ಕಿರಿಕಿರಿ...: ಅವಳಿ ನಗರದ ಒಳಭಾಗದಲ್ಲಿ ಸಂಚಾರ ದಟ್ಟಣೆ ಇದ್ದರೂ ಅಪಘಾತದ ಪ್ರಮಾಣ ಕಡಿಮೆ. ಹೀಗಾಗಿ ನಗರದ ಹೊರ ವಲಯದಲ್ಲಿ ಹೆಲ್ಮೆಟ್ ಕಡ್ಡಾಯಗೊಳಿಸಿದರೆ ಉತ್ತಮ. ಒಂದೆರೆಡು ಕಿ.ಮೀ. ಸಂಚಾರಕ್ಕೆ ಹೆಲ್ಮೆಟ್ ಧರಿಸುವುದು ಕಿರಿಕಿರಿಯಾಗುತ್ತದೆ. ಬೇಸಿಗೆಯಲ್ಲಂತೂ ತೀವ್ರ ತೊಂದರೆ ಎನ್ನುತ್ತಾರೆ ಖಾಸಗಿ ಕಂಪನಿ ಉದ್ಯೋಗಿ ಮೃತ್ಯುಂಜಯ. ಏತನ್ಮಧ್ಯೆ ನೂತನ ಪೊಲೀಸ್ ಆಯುಕ್ತ ರವೀಂದ್ರ ಪ್ರಸಾದ ಅವರು  ಹೆಲ್ಮೆಟ್ ಕಡ್ಡಾಯ ಕಾಯ್ದೆಯನ್ನು ಎಷ್ಟರ ಮಟ್ಟಿಗೆ ಗಂಭೀರವಾಗಿ ಪರಿಗಣಿಸುತ್ತಾರೆ ಎನ್ನುವುದನ್ನು ಕಾಯ್ದು ನೋಡಬೇಕಿದೆ.

ಬರೀ ದಂಡವಷ್ಟೆ ಅಲ್ಲ...
ಹೆಲ್ಮೆಟ್ ಧರಿಸಲಿಲ್ಲ ಎಂದು ಕೇವಲ ದಂಡ ಹಾಕುವ ಕೆಲಸ ಪೊಲೀಸ್ ಇಲಾಖೆಯಿಂದ ಆಗುತ್ತಿಲ್ಲ. ಪ್ರತಿ ಶನಿವಾರ ಒಂದೊಂದು ಶಾಲೆಗಳಿಗೆ ಹೋಗಿ ಮಕ್ಕಳ ಮುಖಾಂತರ ಪಾಲಕರಿಗೆ ತಿಳಿ ಹೇಳುವ ಕೆಲಸ ಸಿಬ್ಬಂದಿಯಿಂದ ಆಗುತ್ತಿದೆ. ಆದರೂ ಯುವಕರು ತಲೆ ಕೆಡಿಸಿಕೊಳ್ಳುತ್ತಿಲ್ಲ. ಪರವಾನಗಿ ಇಲ್ಲದೇ, ಹೆಲ್ಮೆಟ್ ಧರಿಸದೇ ಒಂದೇ ಬೈಕಿನಲ್ಲಿ ಮೂರು ಜನ ಓಡಾಡುತ್ತಾರೆ. ಹೀಗಾಗಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಕರೇ ಬೈಕ್ ಅಪಘಾತದಲ್ಲಿ ಹೆಚ್ಚು ಸಾವನ್ನಪ್ಪುತ್ತಿದ್ದು, ಪಾಲಕರು ತಮ್ಮ ಮಕ್ಕಳ ಬಗ್ಗೆ ತುಸು ಕಾಳಜಿ ವಹಿಸಬೇಕಿದೆ ಎನ್ನುವುದು ಸಂಚಾರಿ ಪೊಲೀಸ್ ಅಧಿಕಾರಿಯೊಬ್ಬರ ಕಳಕಳಿಯ ಮನವಿ.
-ಬಸವರಾಜ ಹಿರೇಮಠ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.