ಗ್ಯಾಸ್ ದರ ಏರಿಕೆ: ಬಿಜೆಪಿ ಪ್ರತಿಭಟನೆ
ಹುಬ್ಬಳ್ಳಿ: ಕೇಂದ್ರ ಸರ್ಕಾರ ಆಟೋ ಎಲ್ಪಿಜಿ ಗ್ಯಾಸ್ ದರ ಏರಿಸಿರುವುದನ್ನು ಖಂಡಿಸಿ ಮಹಾನಗರ ಜಿಲ್ಲಾ ಬಿಜೆಪಿ ಪ್ರತಿಭಟನೆ ನಡೆಸಿತು.
ನಗರದ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ತಹಸೀಲ್ದಾರ ಮುಖಾಂತರ ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ರವಾನಿಸಿದರು. ಕೇಂದ್ರ ಸರ್ಕಾರ ಆಟೋ ಗ್ಯಾಸ್ ದಿಢೀರನೆ ಏರಿಕೆ ಮಾಡಿರುವುದರಿಂದ ಬಡ ಆಟೋ ಚಾಲಕರು ಹಾಗೂ ಅವರನ್ನು ನಂಬಿಕೊಂಡಿರುವ ಲಕ್ಷಾಂತರ ಕುಟುಂಬಗಳು ಸಮಸ್ಯೆಗೆ ಸಿಲುಕಲಿವೆ. ಇದೇ ವೇಳೆ ಆಟೋ ಗ್ರಾಹಕರೂ ಸಹ ತೊಂದರೆಗೆ ಸಿಲುಕಲಿದ್ದಾರೆ. ಈಗಾಗಲೇ ಹತ್ತಾರು ಬಾರಿ ಎಲ್ಪಿಜಿ ಗ್ಯಾಸ್ ದರ ಏರಿಸಿರುವ ಸರ್ಕಾರ ಇದೀಗ ಏಕಾಏಕಿ ರು. 11.50 ದರ ಏರಿಕೆ ಮಾಡಿರುವುದು ಖಂಡನೀಯ. ಯಾವುದೇ ಸುಳಿವು, ಸೂಚನೆ ನೀಡದೇ ಕೇಂದ್ರ ಸರ್ಕಾರ ಏಕಮುಖಿ ನಿರ್ಧಾರ ತೆಗೆದುಕೊಂಡಿರುವುದು ಸರಿಯಲ್ಲ. ಬೆಲೆ ಏರಿಕೆಗೆ ಮುನ್ನ ಕನಿಷ್ಠ ಸಲಹೆ ಸೂಚನೆ ಪಡೆಯಬೇಕಿತ್ತು ಎಂದು ಹೇಳಿದ ಬಿಜೆಪಿ ಕಾರ್ಯಕರ್ತರು ಕೇಂದ್ರ ಸರ್ಕಾರ ಈ ಕೂಡಲೇ ಬೆಲೆ ಏರಿಕೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಹೇಶ ಟೆಂಗಿನಕಾಯಿ, ಲಿಂಗರಾಜ ಪಾಟೀಲ, ರಂಗಾ ಬದ್ದಿ, ಶಂಕ್ರಪ್ಪಾ ಛಬ್ಬಿ, ನಾಗೋಸಾ ಕಲ್ಬುರ್ಗಿ, ಸಂತೋಷ ವೆರ್ಣೇಕರ, ಮಲ್ಲಿಕಾರ್ಜುನ ಮರಿಗೌಡರ, ಹನಮಂತ ಬೈಚವಾಳ, ಪ್ರವೀಣ ಪವಾರ ಮತ್ತಿತರರು ಇದ್ದರು. ಆಟೋ ಎಲ್ಪಿಜಿ ದರ ಏರಿಕೆಗೆ ವಿರೋಧ
ಹುಬ್ಬಳ್ಳಿ: ಆಟೋ ಎಲ್ಪಿಜಿ ದರ ಏರಿಕೆ ವಿರೋಧಿಸಿ ದಿ. ಲಕ್ಷ್ಮಣ ಹಿರೇಕೆರೂರ ಆಟೋ ಚಾಲಕರ ಸಂಘದ ನೇತೃತ್ವದಲ್ಲಿ ನೂರಾರು ಆಟೋ ಚಾಲಕರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಆಟೋ ಎಲ್ಪಿಜಿ ದರ ಏರಿಕೆಯಿಂದಾಗಿ ಬಡ ಚಾಲಕರಿಗೆ ತೀವ್ರ ತೊಂದರೆಯಾಗಿದೆ. ಕೇಂದ್ರ ಸರ್ಕಾರ ರಾತ್ರೋರಾತ್ರಿ ಎಲ್ಪಿಜಿ ದರ ಏರಿಸಿ ಬಡ ಚಾಲಕರ ನಿತ್ಯೋಪಯೋಗಿ ಜೀವನಕ್ಕೆ ಬರೆ ಎಳೆದಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು. ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಆಟೋ ಚಾಲಕರು, ಎಲ್ಪಿಜಿ ದರ ಇಳಿಕೆಗೆ ಆಗ್ರಹಿಸಿ ಪ್ರಧಾನಿಗೆ ತಹಸೀಲ್ದಾರ ಕಚೇರಿ ಅಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು. ಸಂಘದ ಅಧ್ಯಕ್ಷ ಹನಮಂತಪ್ಪ ಪವಾಡಿ, ಪ್ರಕಾಶ ಗುರವ, ಗೋಪಾಲ ಗಾಯಕವಾಡ, ಸಂತೋಷ ಭೋಜಗಾರ, ಮಂಜುನಾಥ ಉಳ್ಳಾಗಡ್ಡಿ ಮತ್ತಿತರರು ಹಾಜರಿದ್ದರು.
ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ
ಧಾರವಾಡ: ಆಟೋ ಎಲ್ಪಿಜಿ ದರ ಏರಿಕೆ ಖಂಡಿಸಿ ಬಿಜೆಪಿ ಗ್ರಾಮಾಂತರ ಜಿಲ್ಲಾ ಯುವಮೋರ್ಚಾದಿಂದ ಶುಕ್ರವಾರ ಡಿಸಿ ಕಚೇರಿ ಎದುರು ಪ್ರತಿಭಟಿಸಿ ಮನವಿ ಸಲ್ಲಿಸಲಾಯಿತು. ಕೇಂದ್ರ ಯುಪಿಎ ಸರ್ಕಾರದ ಆಡಳಿತಾವಧಿಯಲ್ಲಿ ಜನರ ಅಗತ್ಯ ವಸ್ತುಗಳ ಬೆಲೆ ಹೆಚ್ಚುತ್ತಿದ್ದು, 1 ತಿಂಗಳಲ್ಲಿ 3 ಬಾರಿ ಎಲ್ಪಿಜಿ ದರ ಏರಿಸಲಾಗಿದೆ. ಇದೀಗ ಆಟೋ ಎಲ್ಪಿಜಿ ದರ ಹೆಚ್ಚಿಸಿರುವುದರಿಂದ ಆಟೋಚಾಲಕರ ಜೊತೆ ಜನಸಾಮಾನ್ಯರು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಪ್ರತಿಭಟನಾಕಾರರು ದೂರಿದರು. ರಾಷ್ಟ್ರಪತಿ ಮಧ್ಯಪ್ರವೇಶಿಸಿ ಸರ್ಕಾರಕ್ಕೆ ಸೂಕ್ತ ಸೂಚನೆ ನೀಡಬೇಕು. ಆಟೋ ಎಲ್ಪಿಜಿ ದರ ಕಡಿತಗೊಳಿಸುವಂತೆ ಗ್ರಾಮಾಂತರ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಮಲ್ಲನಗೌಡ ಪಾಟೀಲ, ಶಂಕರ ಕುಮಾರದೇಸಾಯಿ, ಟಿ.ಬಿ. ಸಬರದ, ಸಂಭಾಜಿ ಜಾಧವ, ಚನ್ನಪ್ಪ ಜಗದಪ್ಪನವರ, ಶಿವಪ್ಪ ಮಡಿವಾಳರ, ಬಸವರಾಜ ವೆಂಕಟಾಪೂರ, ಲಕ್ಷ್ಮಣ ರಾಜಾಪುರ, ಶಿವಾನಂದ ನಂದಿಹಳ್ಳಿ, ಬಸವರಾಜ ಮುದಕವಿ, ಮಡಿವಾಳಪ್ಪ ಪಾಗೋಜಿ, ಶರಣಬಸವ ವಿ.ಬಿ., ತರುಣಕುಮಾರ ಎಸ್.ಜಿ., ಪ್ರಕಾಶ ಪೇತೂನವರ, ಬಾಸು ಕುಲಕರ್ಣಿ, ಚಂದ್ರು ಅಥಣಿಮಠ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

