ಅತ್ಯಾಚಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ
ಕನ್ನಡಪ್ರಭ ವಾರ್ತೆ, ಕುಂದಗೋಳ, ಜ. 3
ಬುಡರಸಿಂಗಿ ಗ್ರಾಮದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗಳನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸುವಂತೆ ಆಗ್ರಹಿಸಿ ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡ್ರ ನೇತೃತ್ವದಲ್ಲಿ ತಾಲೂಕಿನ ಮುಖಂಡರು ಶುಕ್ರವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಗಾಳಿ ಮರೆಮ್ಮ ದೇವಿ ದೇವಸ್ಥಾನದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಹಸೀಲ್ದಾರ್ ಎಚ್.ಎಂ. ಓಲೇಕಾರ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಿತು.
ಬಾಲಕಿ ಮೇಲೆ ಅತ್ಯಾಚಾರ ನಡೆದು ನಾಲ್ಕು ದಿನಗಳೇ ಗತಿಸಿದ್ದರೂ ಈವರೆಗೂ ಆರೋಪಿತರನ್ನು ಬಂಧಿಸಲಾಗಿಲ್ಲ. ಈ ಕೃತ್ಯವನ್ನು ಮುಚ್ಚಿ ಹಾಕಲು ಕೆಲ ಪ್ರಭಾವಿಗಳು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಲಾಗಿದ್ದ ಮನವಿಯನ್ನು ಸಲ್ಲಿಸಲಾಯಿತು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಶಾಸಕ ಚಿಕ್ಕನಗೌಡ್ರ, ಬಾಲಕಿ ಮೇಲೆ ಅತ್ಯಾಚಾರ ನಡೆಸಿರುವ ಆರೋಪಿಗಳು ಶಾಸಕ ಎಸ್.ಐ. ಶಿವಳ್ಳಿಯವರ ಬೆಂಬಲಿಗರಾಗಿದ್ದಾರೆ ಎಂದು ದೂರಿದರಲ್ಲದೆ, ಕೃತ್ಯದಿಂದ ಅವರನ್ನು ಬಚಾವ್ ಮಾಡಲು ಯತ್ನಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಒತ್ತಡ ಹೇರುವ ಮೂಲಕ ಇಂತಹ ಅಮಾನವೀಯ ಘಟನೆಗಳು ಮರುಕಳಿಸದಂತೆ ನಿಗಾವಹಿಸಬೇಕಾದ ಶಾಸಕರೇ, ಆರೋಪಿತರನ್ನು ಪಾರು ಮಾಡಲು ಯತ್ನಿಸುತ್ತಿರುವುದು ವಿಷಾದನೀಯ.
ಆದ್ದರಿಂದ ಶಾಸಕ ಶಿವಳ್ಳಿ, ಘಟನೆಗೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಸಿಎಂ ಸಿದ್ದರಾಮಯ್ಯ, ಘಟನೆಯ ಕೂಲಂಕಷ ತನಿಖೆಗೆ ಮುಂದಾಗಬೇಕಲ್ಲದೆ ತಪ್ಪತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶ ನೀಡಬೇಕು ಎಂದೂ ಚಿಕ್ಕನಗೌಡ್ರ ಆಗ್ರಹಿಸಿದರು.
ಕಿಡ್ಸ್ ಸಂಸ್ಥೆ ಸಂಯೋಜಕಿ ಸುಜಾತಾ ಬಣಕಾರ, ಅತ್ಯಾಚಾರವೆಸಗಿದ ಆರೋಪಿಗಳನ್ನು 24 ಗಂಟೆಯೊಳಗಾಗಿ ಬಂಧಿಸದಿದ್ದಲ್ಲಿ ಜಿಲ್ಲಾ ಮಹಿಳಾ ಸಂಘಟನೆಯೊಂದಿಗೆ ಕೂಡಿಕೊಂಡು ಜಿಲ್ಲಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದೂ ಎಚ್ಚರಿಸಿದರು.
ಮುಖಂಡರಾದ ರಂಗನಗೌಡ ಪಾಟೀಲ, ಗಂಗಾಧರ ಧರೆಣ್ಣವರ, ಈಶ್ವರಪ್ಪ ಗಂಗಾಯಿ, ಶಿವಾನಂದ ಕಟಗಿ, ಮಲ್ಲನಗೌಡ ಪಾಟೀಲ, ರಾಜು ಶಿವಳ್ಳಿ, ಸಿ.ವೈ.ಹಿರೇಗೌಡ್ರ, ರುದ್ರಪ್ಪ ಕಿರೇಸೂರ, ಅಜ್ಜು ಬಂಡಿವಾಡ, ಮಲ್ಲಪ್ಪ ಮಾರಡಗಿ, ಶೇಖಣ್ಣ ಬಂಡಿವಾಡ, ಡಾ. ಎಂ.ಎಂ.ಕಿಲ್ಲೇದಾರ, ನಿಂಗಪ್ಪ ಕಲ್ಬಾರ, ಪ್ರಕಾಶ ಕೂಬಿಹಾಳ, ಹನುಮಂತಗೌಡ ತಿಮ್ಮನಗೌಡ್ರ, ನಾಗರಾಜ ಬೂದಿಹಾಳ, ಅಶೋಕ ತಿರ್ಲಾಪೂರ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

